ಬೆಂಗಳೂರು-ಕರಾವಳಿ ರೈಲು ಪ್ರಯಾಣಿಕರು ಗಮನಿಸಿ, ಟರ್ಮಿನಲ್ ಬದಲು
ಬೆಂಗಳೂರು, ಆಗಸ್ಟ್ 11: ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಪ್ರಮುಖವಾದ ಮಾಹಿತಿಯೊಂದಿದೆ. ನೈಋತ್ಯ ರೈಲ್ವೆ ಟರ್ಮಿನಲ್ ಅನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಿದೆ, ಅಲ್ಲದೇ ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಿದೆ. ರೈಲು ಸಂಚಾರ ನಡೆಸುವ ಜನರು ಬದಲಾವಣೆಯನ್ನು ಗಮನಿಸಿ ಪ್ರಯಾಣದ ಯೋಜನೆ ರೂಪಿಸಿ.
ನೈಋತ್ಯ ರೈಲ್ವೆ ಈ ಎರಡು ಬದಲಾವಣೆ ಬಗ್ಗೆ ಮಾಹಿತಿ ನೀಡಿದೆ. ಈ ಬದಲಾವಣೆಗಳು ನವೆಂಬರ್ 1ರಿಂದ ಜಾರಿಗೆ ಬರುವಂತೆ ಅನ್ವಯವಾಗುತ್ತದೆ. ಕೆಎಸ್ಆರ್ ಬೆಂಗಳೂರು-ಕಣ್ಣೂರು ವಯಾ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಕೆಎಸ್ಆರ್ ಬೆಂಗಳೂರಿನಿಂದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ಇಲ್ಲಿಗೆ ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ.

ಟರ್ಮಿನಲ್, ವೇಳಾಪಟ್ಟಿ ಬದಲು: ನೈಋತ್ಯ ರೈಲ್ವೆ ಮಾಹಿತಿಯಂತೆ ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಕೆಎಸ್ಆರ್ ಬೆಂಗಳೂರು ಬದಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ನವೆಂಬರ್ 1ರಿಂದ ಮಾರ್ಚ್ 31ರ ತನಕ ಸಂಚಾರವನ್ನು ನಡೆಸಲಿದೆ. 151 ದಿನಗಳ ಕಾಲ ಈ ಟರ್ಮಿನಲ್ ಬದಲಾವಣೆ ಆದೇಶ ಜಾರಿಯಲ್ಲಿರುತ್ತದೆ.
ಯಶವಂತಪುರ ನಿಲ್ದಾಣದಲ್ಲಿ ಕೆಲವು ಕಾಮಗಾರಿ ಕೈಗೊಳ್ಳಬೇಕಾದ ಕಾರಣ ಈ ಬದಲಾವಣೆ ಮಾಡಲಾಗಿದೆ. ರೈಲು ನಂಬರ್ 16511 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಅನ್ನು ಸಂಜೆ 8 ಗಂಟೆಗೆ ಬಿಡಲಿದೆ. ಯಶವಂತಪುರಕ್ಕೆ 9.25ಕ್ಕೆ ಆಗಮಿಸಲಿದೆ. 9.45ಕ್ಕೆ ಹೊರಡಲಿದೆ. ಬಳಿಕ ಯಾವುದೇ ನಿಲ್ದಾಣ, ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ವಾಪಸ್ ಬರುವಾಗ ರೈಲು ನಂಬರ್ 16512 ಕಣ್ಣೂರನ್ನು ಸಂಜೆ 5.05ಕ್ಕೆ ಬಿಡಲಿದೆ. ಮಂಗಳೂರು ಸೆಂಟ್ರಲ್‌ಗೆ 8.10ಕ್ಕೆ ಆಗಮಿಸಲಿದೆ. ಯಶವಂತಪುರಕ್ಕೆ ಬೆಳಗ್ಗೆ 6.10ಕ್ಕೆ ಆಗಮಿಸಲಿದೆ. 6.30ಕ್ಕೆ ಯಶವಂತಪುರದಿಂದ ಹೊರಟು, 7.30ಕ್ಕೆ ಎಸ್‌ಎಂವಿಟಿಬಿ ತಲುಪಲಿದೆ ಎಂದು ಮಾಹಿತಿ ನೀಡಲಾಗಿದೆ.
ವೇಳಾಪಟ್ಟಿ ಬದಲು: ನೈಋತ್ಯ ರೈಲ್ವೆ ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ವಾರಕ್ಕೆ 3 ಬಾರಿ ಮಂಗಳೂರು ಜಂಕ್ಷನ್‌ನಿಂದ ಬೆಂಗಳೂರಿನ ಯಶವಂತಪುರದವರೆಗೆ ಸಂಚರಿಸುವ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16576) ವೇಳಾಪಟ್ಟಿಯನ್ನು ನವೆಂಬರ್ 1 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.
ಪರಿಷ್ಕೃತ ಸಮಯ ಪ್ರಕಾರ ಈ ರೈಲು (16576) ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 11:30ರ ಬದಲು ಬೆಳಗ್ಗೆ 7 ಗಂಟೆಗೆ ಹೊರಟು, ಅದೇ ದಿನ ರಾತ್ರಿ 8:45ರ ಬದಲು ಸಂಜೆ 4:30ಕ್ಕೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.
ಈ ರೈಲುಗಳ ಪರಿಷ್ಕೃತ ಸಮಯಕ್ಕಾಗಿ, ಯಾವುದೇ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ ಅಥವಾ ವೆಬ್‌ಸೈಟ್ Www.enquiry.indianrail.gov.in ಭೇಟಿ ನೀಡಿ ಎಂದು ಮನವಿ ಮಾಡಲಾಗಿದೆ.
ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸಲು ಹೊಸ ರೈಲು ಬೇಕು ಎಂಬ ಬೇಡಿಕೆ ಇದೆ. ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಈ ಬಾರಿಯ ಮಳೆಗಾಲದಲ್ಲಿ ಗುಡ್ಡ ಕುಸಿತದ ಕಾರಣ ಪದೇ ಪದೇ ಬೆಂಗಳೂರು ಕರಾವಳಿ ನಡುವಿನ ರೈಲು ಸಂಪರ್ಕ ಸ್ಥಗಿತವಾಗುತ್ತಿದೆ.











Click it and Unblock the Notifications