ಬನ್ನಿಪ್ರಗತಿ ಎಂದರೆ ಇದು!

Truely work is worship for the labourers in China(ಹಿಂದಿನ ಪುಟದಿಂದ)

ನಾವು ಚೈನಾದಲ್ಲಿ ನಾಲ್ಕಾರು ಊರುಗಳನ್ನು ಸುತ್ತಿದೆವು. ಶಾಂಘೈ ಈಗಾಗಲೇ ಸಾಕಷ್ಟು ಪ್ರಸಿದ್ಧಿಪಡೆದ ನಗರ. ನಮ್ಮ ಬೆಂಗಳೂರಿನಂತೆ ಜನಾಕರ್ಷಣೆಯನ್ನು ಪಡೆದ ನಗರ. ಆದರೆ ಅಲ್ಲಿಯ ವಿಮಾನ ನಿಲ್ದಾಣ ಎಷ್ಟು ದೊಡ್ಡದೆಂದರೆ ಸಾವಿರಾರು ವಿಮಾನಗಳನ್ನು ನಿಲ್ಲಿಸಲು ಸಾಧ್ಯವಾಗುವಂಥಾದ್ದು. ನಮ್ಮ ಬೆಂಗಳೂರಲ್ಲಿ ಇನ್ನು ನೂರುವರ್ಷಕ್ಕೂ ಇಂಥಾದ್ದೊಂದು ನಿಲ್ದಾಣ ಸೃಷ್ಟಿಯಾಗುತ್ತದೋ ಇಲ್ಲವೋ! ತಮಾಷೆಯೆಂದರೆ ಈಗ ಅದನ್ನೂ ಕೆಡವಿ ಇನ್ನೂ ದೊಡ್ಡ ನಿಲ್ದಾಣ ಕಟ್ಟುವ ತಯಾರಿಯಲ್ಲಿದೆ ಅಲ್ಲಿಯ ಸರ್ಕಾರ! ನಾವಿ ಈನಮ್ಮ ಪ್ರಾಜೆಕ್ಟ್‍ಗಾಗಿ ಚೈನಾದ ನಾಲ್ಕಾರು ಊರುಗಳನ್ನು ಸುತ್ತಿದೆವು. ಶಾಂಘೈ, ಚಿಂಗ್‍ಡೋ, ಚಂಗ್‍ಡೂ ಜಿನಾನ್,ನ್ಯಾನ್‍ಚಿಂಗ್, ಇತ್ಯಾದಿ. ಚಿಂಗ್‍ಡೂ ಮತ್ತು ಚಂಗ್‍ಡೋ ನಮ್ಮ ಹರಪನಹಳ್ಳಿ ಮತ್ತು ಹರದನಹಳ್ಳಿಗಳಂತೆ ಒಂದೇ ಥರ ಹೆಸರು ಎನಿಸುತ್ತದೆ. ನಮಗೆ ಹೇಗೆ "ಅರಪ ಮತ್ತು ಹರದನ"ಗಳಲ್ಲಿ ಗೊಂದಲವಾಗುವುದಿಲ್ಲವೋ ಅವರಿಗೂ ಹಾಗೇ ಚಿಂಗ್‍ಡೋ, ಮತ್ತು ಚಂಗ್‍ಡೂಗಳಲ್ಲಿ ಗೊಂದಲವಾಗುವುದಿಲ್ಲ. ಈ ಎಲ್ಲ ಊರುಗಳ ವಿಮಾನನಿಲ್ದಾಣಗಳೂ ಅಂತಾರಾಷ್ಟ್ರೀಯ ಮಟ್ಟದಲ್ಲಿವೆ ಎನ್ನುವುದನ್ನು ಗಮನಿಸಬೇಕಾದ ಸಂಗತಿ. ಅದರಲ್ಲೂ "ಚಂಗ್‍ಡೂ ವಿಮಾನನಿಲ್ದಾಣದಲ್ಲಿ ತಾಜಾ ಹಣ್ಣಿನ ದೊಡ್ಡ ಮಳಿಗೆ ಇದ್ದದ್ದನ್ನು ಕಂಡು ನನಗಂತೂ ವಿಪರೀತ ವಿಸ್ಮಯ! ನಾನೂ ಇಷ್ಟೊಂದು ಊರುಗಳನ್ನು ಸುತ್ತಿದ್ದೇನಲ್ಲ, ಇಂಥಾ ಒಂದು ಮಳಿಗೆಯನ್ನು ಇಲ್ಲೇ ಕಂಡದ್ದು!!

"ತವರೂರ ದಾರಿಯಲಿ ಕಲ್ಲಿಲ್ಲ ಮುಳ್ಳಿಲ್ಲ" ಎಂದು ಚೈನಾದ ಪ್ರತಿಹಳ್ಳಿಯ ಗರತಿಯೂ ಹಾಡಬಹುದಾದಷ್ಟು ಸುಂದರವಾಗಿವೆ ಚೈನಾಹಳ್ಳಿಯ ರಸ್ತೆಗಳು! ಹಳ್ಳಿಗಳು ಹಳ್ಳಿಗಳಂತೇ ಕಾಣುವುದಿಲ್ಲ. ಬದಲಾಗಿ ನಗರದ ಬಡಾವಣೆಯ ಒಂದು ಪುಟ್ಟ ಭಾಗವನ್ನು ಕಿತ್ತು ಇಲ್ಲಿ ದೂರ ತಂದಿಟ್ಟಿದಾರೇನೋ ಎನಿಸುವಂತೆ "ನಗರ ಛಾಯೆಯೇ"ಇದೆ. ಅದಕ್ಕಿಂತಾ ಮೋಹಕವೆಂದರೆ ಹಳ್ಳಿಗಳ ದಾರಿಯಲ್ಲಿ ಕಂಡುಬರುವ ಫ್ಲೈಓವರ್ ಗಳು!! ಹಳ್ಳಿಯ ರಸ್ತೆಗಳನ್ನು ಒಂದುಚೂರೂ ಕಂಗೆಡಿಸದಂತೆ ದೊಡ್ಡ ವಾಹನಗಳು ಫ್ಲೈ ಓವರ್ ಮೇಲೆ ಸಾಗಿಬಿಡಬಹುದು. ಪ್ರಗತಿ ಎನ್ನುವುದನ್ನು ಏನಾದರೂ ಕಣ್ಣಾರೆ ಕಾಣಬೇಕಿದ್ದರೆ ಚೀನಾದ ಈ ಹಳ್ಳಿಗಳನ್ನು ಒಮ್ಮೆ ನೋಡಬೇಕು!

ಸರ್ಕಾರ ಮತ್ತದರ ನಿಯಮ!! : ನನ್ನ ದೃಷ್ಟಿಯಲ್ಲಿ ಒಂದು ದೇಶ ಉದ್ಧಾರವಾಗಬೇಕಾದರೆ ಎರಡು ಮೂಲಭೂತ ಅಂಶಗಳು ಮುಖ್ಯಕಾರಣಗಳು. ಒಂದು ಪ್ರತಿ ಪ್ರಜೆಯೂ ವಿದ್ಯಾವಂತನಾಗಿರುವುದು ಮತ್ತು ಅದಕ್ಕಿಂತಾ ಮುಖ್ಯವಾಗಿ ಕ್ರಮಬದ್ಧವಾದ ಕಾನೂನು ಮತ್ತು ಶಿಸ್ತನ್ನು ಅಂಗೀಕರಿಸಿಸುವುದು ಹಾಗೂ ಪಾಲಿಸುವುದು. ಉದಾಹರಣೆಗೆ ಪಾಶ್ಚಾತ್ಯ ರಾಷ್ಟ್ರಗಳು. ಅಲ್ಲಿ " ಈದಾರಿಯಲ್ಲಿ ಹೋಗಬೇಡಿ" ಎಂದು ಸಣ್ಣ ಬೋರ್ಡ್ ಇಟ್ಟರೆ ಸಾಕು ಯಾರೂ ಅತ್ತ ತಿರುಗಿಯೂ ನೋಡುವುದಿಲ್ಲ. "ಇಲ್ಲಿ ಕಸ ಹಾಕಬೇಡಿ, ಇಲ್ಲಿ ವಾಹನಗಳನ್ನು ನಿಲ್ಲಿಸಬೇಡಿ" ಎಂಬ ಸೂಚನೆಗಳನ್ನು ಮಧ್ಯರಾತ್ರಿಯಲ್ಲೂ ಜನ ಪಾಲಿಸುತ್ತಾರೆ. ಇನ್ನು ಪೌರಾತ್ಯ ರಾಷ್ಟ್ರಗಳಲ್ಲಿ (ಸಿಂಗಪುರ, ತೈವಾನ್, ಹಾಂಗಾಂಗ್, ಕೊರಿಯಾ, ಇತ್ಯಾದಿ) ಕಟ್ಟಿನಿಟ್ಟಿನ ಕಾನೂನುಗಳು ಮತ್ತು ಧಿಕ್ಕರಿಸಿದವರಿಗೆ ಉಗ್ರಶಿಕ್ಷೆ! ಇದೂ ಸಹ ವ್ಯಕ್ತಿಯನ್ನು ಭಯದಿಂದಲೇ ಆದರೂ ಶಿಸ್ತಿಗೆ ಒಳಪಡಿಸುತ್ತದೆ. ಎರಡು ಇಲ್ಲದ ಪಾಕೀಸ್ತಾನ, ಭಾರತ, ನೇಪಾಳ, ಬಾಂಗ್ಲಾದೇಶ ಇಂಥವು ಸಂಕಷ್ಟದಲ್ಲೇ ನೆರಳುತ್ತಿರುತ್ತದೆ.

ಇವೆಲ್ಲಕ್ಕಿಂತಾ ಭಿನ್ನವಾದ ಚೈನಾ ಅತ್ಯಂತ ಉಗ್ರ ಕಾನೂನಿನ ಆಧಾರದಿಂದ ದೇಶವನ್ನು ಪ್ರಗತಿಯಕಡೆಗೆ ಸಾಗಿಸುತ್ತಿದೆ. ನಾನೊಬ್ಬ ಇಂಜಿನಿಯರ್ ದಂಪತಿಗಳನ್ನು ಕೇಳಿದೆ "ಹಾಗೊಮ್ಮೆ ಅಕಸ್ಮಾತ್ ಎರಡನೇ ಮಗುವಾದರೆ ನಿಮಗೆ"? "ಹಾಗೆಲ್ಲಾ ಆಗುವುದಿಲ್ಲ" ಎಂದು ದೃಢವಾಗಿ ಹೇಳಿದರು. "ಆದರೂ ಅಕಸ್ಮಾತ್ತಾಗಿ ಆಯಿತೆನ್ನಿ ಆಗ"? ನನ್ನ ಒತ್ತಾಯದ ಪ್ರಶ್ನೆ! ತಲೆತಗ್ಗಿಸಿ ನಿಧಾನವಾಗಿ ಆಕೆ ಹೇಳಿದಳು " ಆಗ ನಾವು ಜೈಲಿಗೆ ತಳ್ಳಲ್ಪಡುತ್ತೇವೆ" ಇದು ಚೈನಾ ಜನಸಂಖ್ಯೆಯ ಸ್ಪೋಟವನ್ನು ತಡೆಯಲುಮಾಡಿರುವ ವ್ಯವಸ್ಥೆ!!

ಹೀಗೆ ದೇಶಗಳನ್ನು ಸುತ್ತುವಾಗ ನನ್ನನ್ನು ಕಾಡುವುದು "ಇಷ್ಟೊಂದು ವ್ಯಕ್ತಿಸ್ವಾತಂತ್ರ್ಯವಿರುವ ನಾವು ಸಾಧಿಸಿದ್ದೇನು? ಎನ್ನುವ ಒಂದೇ ಪ್ರಶ್ನೆ. ಚೈನಾ ಮೂಲಭೂತವಾಗಿ ಒಂದು ವ್ಯವಸ್ಥೆಯನ್ನು ಮಾಡಿಕೊಂಡಿದೆ. ಇಡೀ ಭೂಭಾಗ ಸರ್ಕಾರದ್ದು. ಅದರಲ್ಲಿ ಮನೆಯನ್ನು ಸರ್ಕಾರವೂ ನಿರ್ಮಿಸಬಹುದು, ಖಾಸಗಿಯವರೂ ಪರವಾನಗಿ ಪಡೆದು ನಿರ್ಮಿಸಬಹುದು. ಆದರೆ ಅಂತಿಮ ನಿರ್ಧಾರ ಸರ್ಕಾರದ್ದೇ! ಉದಾಹರಣೆಗೆ, ಒಂದು ಭವ್ಯ ಬಂಗಲೆ ಇರುವ ಜಾಗದಲ್ಲಿ, ಅಥವಾ ಒಂದು ದೊಡ್ಡ ಗಗನಚುಂಬಿಕಟ್ಟಡ ಇರುವ ಜಾಗದಲ್ಲಿ ಸರ್ಕಾರ ರಸ್ತೆಯನ್ನೋ ಫ್ಲೈಲೈಓವರ್ ಅನ್ನೋ ನಿರ್ಮಿಸಬೇಕೆಂದು ನಿಗದಿ ಪಡಿಸುತ್ತದೆ. ಅಲ್ಲಿಯ ಕಟ್ಟಡದ ಯಜಮಾನನಿಗೆ ಒಂದು ನೋಟೀಸ್ ಹೋಗುತ್ತದೆ. ಇಷ್ಟು ಸಮಯದಲ್ಲಿ ಅದನ್ನು ಖಾಲಿಮಾಡಬೇಕು. ಮತ್ತು ಆ ಕಟ್ಟಡಕ್ಕೆ ತಗುಲುವ ಅಂದಿನ ಮಾರುಕಟ್ಟೆಯ ದರವನ್ನು ಸರ್ಕಾರ ಕೊಡುತ್ತದೆ.

ಮುಗಿಯಿತು ವ್ಯವಹಾರ! ಮರುಮಾತಿಲ್ಲದೇ ಜಾಗ ಖಾಲಿ ಮಾಡಬೇಕು. ತಂಟೆ ತಕರಾರೆತ್ತುವ ಹಾಗಿಲ್ಲ, ಕೋರ್ಟಿನಲ್ಲಿ ಸ್ಟೇ ಆರ್ಡರ್ ತರುವ ಹಾಗಿಲ್ಲ. ಅದೆಲ್ಲ ಮಾಡಿದರೆ ಜೈಲೇಗತಿ!! ಸರ್ಕಾರ ಕೊಡಲಿರುವ ಹಣವೂ ಮುಟ್ಟುಗೋಲು!! ಆದ್ದರಿಂದ ಯಾರೂ ದುಸರಾ ಮಾತೇ ಆಡುವುದಿಲ್ಲ. ಸರ್ಕಾರವೂ ಬೇಕಾಬಿಟ್ಟಿ ನಿಯಮಗಳನ್ನು ಮಾಡುವುದಿಲ್ಲ. ಪ್ರಗತಿಗೆ ಅಗತ್ಯವಾಗಿರುವ ನಿಯಮಗಳೇ ಆದ್ದರಿಂದ ಚಾಚೂ ತಪ್ಪದೇ ಪಾಲಿಸುವುದು ಒಳ್ಳೆ ನಾಗರೀಕನ ಕರ್ತವ್ಯ. ಪ್ರತಿಪ್ರಜೆಗೂ ಹೊತ್ತಿಗೆ ಸರಿಯಾಗಿ ಊಟ, ತಲೆಯ ಮೇಲೊಂದು ತಂಪಿನ ನೆರಳು, ಹುಟ್ಟುವ ಒಂದೇ ಮಗುವಿನ ಪೂರ್ತಿ ವಿದ್ಯಾಭ್ಯಾಸ, ಇವೆಲ್ಲವೂ ಸರ್ಕಾರದ ಜವಾಬ್ದಾರಿ. "ಮೈ ಬಗ್ಗಿಸಿ ದುಡಿ, ಸರಕಾರದ ಸವಲತ್ತುಗಳನ್ನು ಪಡಿ" ಇದು ಅಲ್ಲಿಯ ತತ್ವ! ಹೊಲದ ಕೆಲಸ ಮಾಡುವ ರೈತನೂ ಬಣ್ಣ ಬಳಿದುಕೊಂಡು ನಟಿಸುವ ಸಿನಿಮಾ ಕಲಾವಿದನೂ ಸರಕಾರೀ ಉದ್ಯೋಗಿಗಳೇ!! ಇಬ್ಬರಿಗೂ ಅವರವರ ಯೋಗ್ಯತೆಗೆ ತಕ್ಕಂತೆ ತಿಂಗಳ ಸಂಬಳ!!

ನಮ್ಮಲ್ಲಿ? ಸ್ವಲ್ಪ ಒಂದೇ ಒಂದು ಕ್ಷಣ ಊಹಿಸಿಕೊಳ್ಳಿ. "ಇಡೀ ಭಾರದ ನೆಲವೆಲ್ಲಾ ಸರ್ಕಾರದ್ದು" ಎನ್ನುವ ನಿಯಮ ಬಂದರೆ? ಭೂ ಮಾಫಿಯಾಗಳು ದಿಕ್ಕೆಟ್ಟು ಹೋಗಬಹುದು!! ಜಮೀನಿನ ಒಡೆಯರು ಹೌಹಾರಿಬಿಡಬಹುದು, ಬಿಲ್ಡರ್ ಗಳು ಕಂಗಾಲಾಗಬಹುದು, ಅವೆಲ್ಲ ಇರಲಿ ಎಲ್ಲೆಂದರಲ್ಲಿ ಗುಡಿಸಲು ಕಟ್ಟಿಕೊಂಡು, ಅಕ್ರಮವನ್ನೇ ಮುಂದೆ ಸಕ್ರಮ ಮಾಡಿಸಿಕೊಳ್ಳುವ ಬಡತನದ ರೇಖೆಯ ಕೆಳಗೇ ಇರುವ ಅತೀ ಶ್ರೀ ಸಾಮಾನ್ಯನೂ ಇದರ ವಿರುದ್ಧವೇ ಧ್ವನಿಯೆತ್ತಿಯಾನು!! ನಮಗೆ ಸೂರು ಕೊಡಲಿ, ಹೊತ್ತೊತ್ತಿಗೆ ಉದರ ತುಂಬಲಿ ಅಥವಾ ಹಸಿವೇ ಇರಲಿ ಬೇಕಾಬಿಟ್ಟಿಯಾಗಿ ವರ್ತಿಸಬಹುದಾದ ವ್ಯಕ್ತಿಸ್ವಾತಂತ್ರ್ಯ ನಮಗೆ ಅತ್ಯಂತ ಪ್ರಿಯ!! ಆದ್ದರಿಂದ ಪ್ರಗತಿ ಎನ್ನುವುದು ನಮ್ಮಲ್ಲಿ "ಆಮೆಯ ಹೆಜ್ಜೆ"!!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+