ಬೆಂಗಳೂರು ಬಿ ಖಾತಾ ಆಸ್ತಿದಾರರಿಗೆ ಡಿ.ಕೆ ಶಿವಕುಮಾರ್ ಗುಡ್‌ನ್ಯೂಸ್: ಖಾತಾ ಪರಿವರ್ತನೆಗೆ ವಿಶೇಷ ಅವಕಾಶ
DK Shivakumar: ಬೆಂಗಳೂರಿನ ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಇ ಖಾತಾಗೆ ಸಂಬಂಧಿಸಿದಂತೆ ನನ್ನ ಇ - ಖಾತಾ, ನನ್ನ ಹಕ್ಕು ಅಭಿಯಾನಕ್ಕೆ ಬೆಂಗಳೂರಲ್ಲಿ ಈಚೆಗೆ ಚಾಲನೆ ಕೊಡಲಾಗಿದೆ. ಇದರೊಂದಿಗೆ ಬಿ ಖಾತಾ ವಿಚಾರದಲ್ಲೂ ಕೆಲವೊಂದು ಪ್ರಮುಖ ಹಾಗೂ ವಿಶೇಷ ಸೌಲಭ್ಯಗಳನ್ನು ಕೊಡಲಾಗಿದೆ. ಬೆಂಗಳೂರು ನಗರದ ಭೂ ಮಾಲೀಕರಿಗೆ ಸುಲಭ, ಪಾರದರ್ಶಕ ಹಾಗೂ ನಾಗರಿಕ ಸ್ನೇಹಿ ಕಂದಾಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ವಿಶೇಷ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಹಾಗೂ ಮೆಚ್ಚುಗೆ ವ್ಯಕ್ತವಾಗಿದೆ.
ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ವಿಶೇಷ ಅವಕಾಶ
ಭೂ ಗ್ಯಾರಂಟಿ ಯೋಜನೆಯಡಿ ಬೆಂಗಳೂರಿನ ಅಂದಾಜು 7 ಲಕ್ಷಕ್ಕೂ ಹೆಚ್ಚು ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ.5ರ ಬದಲಿಗೆ ಕೇವಲ ಶೇ.2ರಷ್ಟು ಶುಲ್ಕ ಪಾವತಿಸಿ ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ಈ ವಿಶೇಷ ಸೌಲಭ್ಯವು 100 ದಿನಗಳವರೆಗೆ ಲಭ್ಯವಿರಲಿದೆ.
ಬಿ ಖಾತಾದಿಂದ ಎ ಖಾತಾ ಆಸ್ತಿ ಪರಿವರ್ತನೆ ಅಭಿಯಾನ ಕೇಂದ್ರಗಳಲ್ಲಿ ನಾಗರಿಕರಿಗೆ ಸಹಾಯ ಕೇಂದ್ರಗಳು, ವಿಶೇಷ ಕೌಂಟರ್‌ಗಳು, ಆಸನ ವ್ಯವಸ್ಥೆ, ಇಂಟರ್ನೆಟ್ ಸೌಲಭ್ಯ ಹೊಂದಿದ ಕಂಪ್ಯೂಟರ್‌ಗಳು, ಸ್ಕ್ಯಾನರ್, ಪ್ರಿಂಟರ್ ಹಾಗೂ ಪಾವತಿ ನೆರವು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಅರ್ಜಿದಾರರಿಗೆ ಸ್ಥಳದಲ್ಲಿಯೇ ಮಾರ್ಗದರ್ಶನ ಹಾಗೂ ದಾಖಲೆ ಪರಿಶೀಲನೆ ನಡೆಸಿ ತ್ವರಿತ ಸೇವೆ ಒದಗಿಸಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಹಾಯಕ ಕಂದಾಯ ಅಧಿಕಾರಿಗಳು (AROs), ಕಂದಾಯ ನಿರೀಕ್ಷಕರು (RIs), ತಾಂತ್ರಿಕ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ಒದಗಿಸುತ್ತಿದ್ದಾರೆ. ಇನ್ನು ಪ್ರತಿ ಶನಿವಾರವೂ ಈ ಅಭಿಯಾನ ಮುಂದುವರಿಯಲಿದ್ದು, ನಾಗರಿಕರು ತಮ್ಮ ಆಸ್ತಿ ದಾಖಲೆಗಳು, ಗುರುತಿನ ಚೀಟಿ ಹಾಗೂ ಸಂಬಂಧಿತ ದಾಖಲೆಗಳೊಂದಿಗೆ ಕೇಂದ್ರಗಳಿಗೆ ಭೇಟಿ ನೀಡಿ ಸೇವೆ ಪಡೆಯಬಹುದಾಗಿದೆ.
ಕೇಂದ್ರಗಳಲ್ಲಿ ದೊರೆಯುವ ಸೌಲಭ್ಯಗಳು
1. ಇ-ಖಾತಾ, ಹೊಸ ಇ-ಖಾತಾ ಹಾಗೂ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಸೇವೆ
2. ದೀರ್ಘಕಾಲದಿಂದ ಬಾಕಿ ಇರುವ ಅರ್ಜಿಗಳು, ತಿದ್ದುಪಡಿಗಳು ಹಾಗೂ ಅಹವಾಲುಗಳ ವಿಲೇವಾರಿ
3. ಹೊಸ ಅರ್ಜಿದಾರರು ಹಾಗೂ ವಾಕ್-ಇನ್ ನಾಗರಿಕರಿಗೆ ಸಂಪೂರ್ಣ ಸೇವಾ ಸೌಲಭ್ಯ
4. ಅಂತಿಮ ಇ-ಖಾತಾ ಸಿದ್ಧವಾಗಿರುವ ಆಸ್ತಿದಾರರಿಗೆ ದೂರವಾಣಿ ಹಾಗೂ ಎಸ್ಎಂಎಸ್ ಮೂಲಕ ಮಾಹಿತಿ ನೀಡಿ, ಮುದ್ರಿತ ಪ್ರತಿಯನ್ನು ಕೇಂದ್ರದಲ್ಲಿ ಪಡೆದುಕೊಳ್ಳಲು ಅವಕಾಶ
5. ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ಅರ್ಜಿ ಸಲ್ಲಿಸುವ ವಿಧಾನ ಕುರಿತು ಮಾರ್ಗದರ್ಶನ ಮತ್ತು ತರಬೇತಿ
6. ಇ-ಖಾತಾ ಸೇವೆಗಳ ಕುರಿತ ಅಹವಾಲುಗಳಿಗೆ ಸ್ಥಳದಲ್ಲಿಯೇ ತ್ವರಿತ ಪರಿಹಾರ














Click it and Unblock the Notifications