ಅರ್ಧಾಂಗಿನಿ ಅಂದ್ರೆ ಸುಮ್ನೆಯಲ್ಲ: ಅನಾರೋಗ್ಯ ಪೀಡಿತ ಗಂಡನ ಬ್ಯಾಂಕ್ ಅಕೌಂಟ್ ಬಳಸಲು ಪತ್ನಿಗೆ ಅವಕಾಶ ಕೊಟ್ಟ High court
ಅಮರಾವತಿ: ಹಿಂದೂ ಸಂಪ್ರದಾಯದಲ್ಲಿ ಪತ್ನಿಯನ್ನು 'ಅರ್ಧಾಂಗಿನಿ' ಅಂದರೆ ಪತಿಯ ಅರ್ಧಭಾಗ ಎಂದು ಕರೆಯಲಾಗುತ್ತದೆ. ಆದರೆ ಈ ಪದ ಕೇವಲ ಧಾರ್ಮಿಕ ನಂಬಿಕೆಯಲ್ಲ, ಅದಕ್ಕೊಂದು ಬಲವಾದ ಕಾನೂನು ಮತ್ತು ನೈತಿಕ ಮಹತ್ವವೂ ಇದೆ ಎಂಬುದನ್ನು ಆಂಧ್ರಪ್ರದೇಶ ಹೈಕೋರ್ಟ್ ಸಾಬೀತುಪಡಿಸಿದೆ. ತೀವ್ರ ಅನಾರೋಗ್ಯದಿಂದ ಕೋಮಾ ಸ್ಥಿತಿಗೆ ತಲುಪಿರುವ ಪತಿಯನ್ನು ರಕ್ಷಿಸಲು ಹೋರಾಡುತ್ತಿದ್ದ ಮಹಿಳೆಯೊಬ್ಬರ ಪರವಾಗಿ ಮಹತ್ವದ ತೀರ್ಪು ನೀಡಿರುವ ನ್ಯಾಯಾಲಯ, ಸಂಕಷ್ಟದ ಸಮಯದಲ್ಲಿ ಹೆಂಡತಿಗಿಂತ ದೊಡ್ಡ ರಕ್ಷಕರು ಬೇರೆ ಯಾರೂ ಇರಲು ಸಾಧ್ಯವಿಲ್ಲ ಎಂದು ಸಾರಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪತಿಯ ವೈದ್ಯಕೀಯ ಚಿಕಿತ್ಸೆ ಮತ್ತು ಕುಟುಂಬದ ನಿರ್ವಹಣೆಗಾಗಿ ಆತನ ಬ್ಯಾಂಕ್ ಖಾತೆಯನ್ನು ಬಳಸಲು 59 ವರ್ಷದ ಪತ್ನಿಗೆ ನ್ಯಾಯಾಲಯವು ಗ್ರೀನ್ ಸಿಗ್ನಲ್ ನೀಡಿದೆ.
ಪ್ರಕರಣದ ಹಿನ್ನೆಲೆ ಏನು?
ವೈ.ಎಸ್.ಆರ್. ಕಡಪ ಜಿಲ್ಲೆಯ ನಿವಾಸಿಯಾದ ಶ್ರೀಮತಿ ನಾಗಮ್ಮ ಅವರ ಪತಿ ತೀವ್ರ ಮಿದುಳಿನ ರಕ್ತಸ್ರಾವದ ಸಮಸ್ಯೆಯಿಂದಾಗಿ ಹೈದರಾಬಾದ್‌ನ ಕೇರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆಯ ನಂತರವೂ ಅವರ ಸ್ಥಿತಿ ಸುಧಾರಿಸದೆ ಅವರು ಸಂಪೂರ್ಣವಾಗಿ ಕೋಮಾ ಸ್ಥಿತಿಗೆ ತಲುಪಿದ್ದಾರೆ. ಪ್ರಸ್ತುತ ಅವರು ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಆಹಾರಕ್ಕಾಗಿ ರೈಲ್ಸ್ ಟ್ಯೂಬ್ ನೆರವಿನೊಂದಿಗೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಅವರ ಚಿಕಿತ್ಸೆ ಮತ್ತು ಇಬ್ಬರು ಮಕ್ಕಳ ವಿದ್ಯಾಭ್ಯಾಸದ ಖರ್ಚುಗಳಿಗಾಗಿ ನಾಗಮ್ಮ ಅವರ ಬಳಿ ಇದ್ದ ಹಣವೆಲ್ಲವೂ ಖಾಲಿಯಾಗಿತ್ತು. ಪತಿಯ ಹೆಸರಿನಲ್ಲಿ ಆಕ್ಸಿಸ್ ಬ್ಯಾಂಕ್ ಖಾತೆಯಲ್ಲಿ ₹14.38 ಲಕ್ಷ ಹಣ ಹಾಗೂ ಕೆಲವು ಆಸ್ತಿಗಳಿದ್ದರೂ, ಅದನ್ನು ಬಳಸಲು ನಾಗಮ್ಮ ಅವರಿಗೆ ಕಾನೂನಾತ್ಮಕವಾಗಿ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ತಮಗೆ ಪತಿಯ ರಕ್ಷಕಿಯಾಗಿ ಹಕ್ಕು ನೀಡಬೇಕೆಂದು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಸರ್ಕಾರದ ವಾದ ತಳ್ಳಿಹಾಕಿದ ಹೈಕೋರ್ಟ್
ಹೈಕೋರ್ಟ್ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ಆಂಧ್ರಪ್ರದೇಶ ಸರ್ಕಾರವು, "ಇದು ಸಿವಿಲ್ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಅರ್ಜಿದಾರರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಬರಲ್ಲ" ಎಂದು ವಾದಿಸಿತ್ತು. ಆದರೆ, ಸರ್ಕಾರದ ಈ ತಾಂತ್ರಿಕ ವಾದವನ್ನು ಹೈಕೋರ್ಟ್ ಸಂಪೂರ್ಣವಾಗಿ ತಿರಸ್ಕರಿಸಿತು. ಕೋಮಾ ಸ್ಥಿತಿಯಲ್ಲಿರುವ ವ್ಯಕ್ತಿಯ ರಕ್ಷಣೆಗಾಗಿ ಸಂವಿಧಾನದ 226ನೇ ವಿಧಿಯಡಿ ಹೈಕೋರ್ಟ್ ಅನ್ನು ನೇರವಾಗಿ ಸಂಪರ್ಕಿಸಲು ಪತ್ನಿಗೆ ಸಂಪೂರ್ಣ ಹಕ್ಕಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಮೆಡಿಕಲ್ ಸೂಪರಿಂಟೆಂಡೆಂಟ್ ಮತ್ತು ಪುನರ್ವಸತಿ ಆಸ್ಪತ್ರೆಗಳು ನೀಡಿದ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ನ್ಯಾಯಾಲಯವು, ನಾಗಮ್ಮ ಅವರನ್ನು ಪತಿಯ ಸಂಪೂರ್ಣ ರಕ್ಷಕಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿತು. ಪತಿಯ ಆಕ್ಸಿಸ್ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆತನ ಚಿಕಿತ್ಸೆ ಮತ್ತು ಕುಟುಂಬದ ಅಗತ್ಯಗಳಿಗಾಗಿ ಬಳಸಲು ನಾಗಮ್ಮ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಹಣದ ದುರುಪಯೋಗ ತಡೆಯಲು ನ್ಯಾಯಾಲಯವು ಒಂದು ಷರತ್ತು ವಿಧಿಸಿದೆ.
ನಾಗಮ್ಮ ಅವರು ಬ್ಯಾಂಕ್ ಖಾತೆಯ ಅಪ್‌ಡೇಟ್ ಆದ ಪಾಸ್‌ಬುಕ್ ಅಥವಾ ಸ್ಟೇಟ್‌ಮೆಂಟ್ ಅನ್ನು ಪ್ರತಿ ಮೂರು ತಿಂಗಳಿಗೊಮ್ಮೆ, ಒಂದು ವರ್ಷದ ಅವಧಿಗೆ ನ್ಯಾಯಾಲಯಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು. ಮಾನವೀಯ ನೆಲೆಯ ಮತ್ತು 'ಅರ್ಧಾಂಗಿನಿ' ಎಂಬ ಸಾಂಪ್ರದಾಯಿಕ ನಂಬಿಕೆಗೆ ಕಾನೂನಿನ ಬಲ ತುಂಬಿದ ಹೈಕೋರ್ಟ್‌ನ ಈ ಆದೇಶವು ಈಗ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ದೊಡ್ಡ ಆಸರೆಯಾಗಿದೆ.













Click it and Unblock the Notifications