Rishabh Pant: ದಯವಿಟ್ಟು ಕ್ಷಮಿಸಿಬಿಡಿ.. ಅಭಿಮಾನಿಗಳಿಗೆ ಕೈಮುಗಿದು ಬೇಡಿಕೊಂಡ ರಿಷಭ್ ಪಂತ್
Rishabh Pant: ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ (ಮೇ 23) ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಜಯ ದಾಖಲಿಸಿತು. ಈ ಪಂದ್ಯದ ಟಾಸ್ ವೇಳೆ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಅವರು ಅಭಿಮಾನಿಗಳಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಅತ್ಯಂತ ಕಳಪೆ ಪ್ರದರ್ಶನ ತೋರುತ್ತಾ ಬಂದಿತು. ಸ್ಟಾರ್ ಆಟಗಾರರಿದ್ದರೂ ಸಹ ತಂಡವು ಆಡಿದ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಮಾತ್ರ ಜಯಗಳಿಸಿ 10 ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಮೂಲಕ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದ ಮೊದಲ ತಂಡವಾಗಿ ಲಕ್ನೋ ಹೊರಹೊಮ್ಮಿದ್ದು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ.

'ವೈಯಕ್ತಿಕವಾಗಿ ಸಾಕಷ್ಟು ಕಲಿತಿದ್ದೇವೆ'
ಲೀಗ್ ಹಂತದ ತನ್ನ ಕೊನೆಯ 14 ಪಂದ್ಯದ ಟಾಸ್ ಸಮಯದಲ್ಲಿ ಮಾತನಾಡಿದ ರಿಷಭ್ ಪಂತ್, 'ಇದು ನಮಗೆ ತುಂಬಾ ಕಠಿಣವಾದ ಸೀಸನ್ ಆಗಿದೆ. ಆದರೆ ಒಂದು ತಂಡವಾಗಿ ಮತ್ತು ವೈಯಕ್ತಿಕವಾಗಿ ನಾವು ಇದರಿಂದ ಸಾಕಷ್ಟು ಕಲಿತಿದ್ದೇವೆ. ಉತ್ತರ ಪ್ರದೇಶದ ಮೂಲೆ ಮೂಲೆಗಳಿಂದ ಮತ್ತು ದೇಶದ ವಿವಿಧ ಭಾಗಗಳಿಂದ ಬಂದು ನಮಗೆ ಬೆಂಬಲ ನೀಡಿದ ಅಭಿಮಾನಿಗಳಿಗೆ ನಾನು ಕ್ಷಮೆ ಕೇಳಲು ಬಯಸುತ್ತೇನೆ. ನಮ್ಮ ಸೋಲಿನ ನಡುವೆಯೂ ಅವರು ನಮಗೆ ಬೆಂಬಲ ನೀಡುವುದನ್ನು ನಿಲ್ಲಿಸಲಿಲ್ಲ,' ಎಂದು ಭಾವುಕರಾಗಿ ಹೇಳಿದರು.
ಮುಂದಿನ ಬಾರಿ ಬಲಿಷ್ಠವಾಗಿ ಕಣಕ್ಕಿಳಿಯುವ ಭರವಸೆ
ತಮ್ಮ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ ಪಂತ್, ಮುಂದಿನ ವರ್ಷ ತಂಡವು ಇನ್ನಷ್ಟು ಬಲವಾಗಿ ಮರಳಲಿದೆ ಎಂದು ಭರವಸೆ ನೀಡಿದರು. 'ನಾವು ಇಂದು ನಮ್ಮ 100% ಪ್ರಯತ್ನವನ್ನು ಹಾಕಲಿದ್ದೇವೆ ಮತ್ತು ಮುಂದಿನ ಸೀಸನ್‌ನಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡು ಬಲಿಷ್ಠವಾಗಿ ಕಣಕ್ಕಿಳಿಯಲಿದ್ದೇವೆ,' ಎಂದು ಅವರು ಭರವಸೆ ನೀಡಿದರು. ಇನ್ನೂ ಇದೇ ಪಂದ್ಯದಲ್ಲಿ ಲಕ್ನೋ ತಂಡವು ಅರ್ಜುನ್ ತೆಂಡೂಲ್ಕರ್ ಅವರಿಗೆ ಪದಾರ್ಪಣೆ ಮಾಡುವ ಅವಕಾಶ ನೀಡಿತು. ತಂಡವು ಈಗಾಗಲೇ ಪ್ಲೇಆಫ್‌ನಿಂದ ಹೊರಬಿದ್ದ ಕಾರಣ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಅರ್ಜುನ್ ಅವರನ್ನು ಕಣಕ್ಕಿಳಿಸಲಾಯಿತು. ಈ ಅವಕಾಶವನ್ನು ಉತ್ತಮವಾಗಿ ಬಳಿಸಿಕೊಂಡ ಅರ್ಜುನ್ ಉತ್ತಮ ಬೌಲಿಂಗ್ ದಾಳಿ ಮಾಡಿ ಮಿಂಚಿದರು.












Click it and Unblock the Notifications