Press Conference: ಪ್ರಧಾನಮಂತ್ರಿ ‘ಬ್ರ್ಯಾಂಡ್’ ಆಗಿದ್ದು ಯಾವಾಗಿನಿಂದ: ಮೋದಿ ಪತ್ರಿಕಾಗೋಷ್ಠಿ ವಿವಾದ - ರಾಜಾರಾಂ ತಲ್ಲೂರು ಬರಹ
Press Conference: ನನಗೆ ಬಂದ ಜ್ವರ ಲೋಕಕ್ಕೇ ಬಂದ ಜ್ವರವೇ. ಪ್ರಧಾನಮಂತ್ರಿ "ಬ್ರ್ಯಾಂಡ್" ಆಗತೊಡಗಿದ್ದು ಯಾವಾಗಿನಿಂದ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ನನಗೆ ಬಂದ ಜ್ವರ ಲೋಕಕ್ಕೇ ಬಂದ ಜ್ವರವೇ. ಪ್ರಧಾನಿ ಯಾರೇ ಇರಲಿ, ಪತ್ರಿಕಾಗೋಷ್ಠಿ ನಡೆಯೋದೇ ಹೀಗೆ - ಎಂಬ "ಸೀಕ್ವೆಲ್" ಜೊತೆ ಸೀಸನ್ಡ್ ಪತ್ರಕರ್ತರೊಬ್ಬರು ತಮ್ಮ ಮೊದಲ ಕಂತಿನ (ಪ್ರಧಾನಿ ನರೇಂದ್ರ ಮೋದಿಯವರು ಪತ್ರಿಕಾಗೋಷ್ಠಿ ಮಾಡದಿರುವುದರ ಪರ ವಕೀಲಿಕೆಯ) ಬರೆಹವನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಸಮರ್ಥನೆಗಳ ಹಿನ್ನೆಲೆಯಲ್ಲಿ ನಾವು ಪರಿಶೀಲಿಸಿಕೊಳ್ಳಬೇಕಾದದ್ದು ಇಷ್ಟು: ಪ್ರಧಾನಮಂತ್ರಿ "ಬ್ರ್ಯಾಂಡ್" ಆಗತೊಡಗಿದ್ದು ಯಾವಾಗದಿಂದ? ಇದಕ್ಕೆ ಸರಳ ಉತ್ತರ ಎಂದರೆ, ಉದಾರೀಕರಣದ ಬಳಿಕ. ಅದಕ್ಕಿಂತ ಮೊದಲು ಹೇಗಿತ್ತು? ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ, ಸಂಪೂರ್ಣ ಚಿತ್ರಣ ತಾನಾಗಿ ಹೊರಬರತೊಡಗುತ್ತದೆ.
ಉದಾರೀಕರಣದ ತನಕವೂ ಭಾರತದಲ್ಲಿದ್ದದ್ದು ಬಹಳ ಸೀಮಿತ ಸಂಖ್ಯೆಯ "ಪ್ರಿಂಟ್" ಪತ್ರಿಕೆಗಳು ಮತ್ತು ಆ ಸುದ್ದಿಮನೆಗಳು ಪ್ರಧಾನಿಯಂತಹ ಮಹತ್ವದ ವ್ಯಕ್ತಿಗಳ ಪತ್ರಿಕಾಗೋಷ್ಠಿ/ವಿದೇಶ ಪ್ರವಾಸ ತಂಡದ ಜೊತೆ ಕಳುಹಿಸುತ್ತಿದ್ದುದು ಸೀಮಿತ ಸಂಖ್ಯಾ ಗಾತ್ರದಲ್ಲಿದ್ದ ಹಿರಿಯ ಪತ್ರಕರ್ತರನ್ನು. ಟಿವಿ ಚಾನೆಲ್ ಅಂದರೆ ದೂರದರ್ಶನ! ಪ್ರಿಂಟ್ ಪತ್ರಕರ್ತರಲ್ಲಿ ಹೆಚ್ಚಿನವರು ಪ್ರಧಾನಿಯವರ/ಅವರ ಕಚೇರಿಯ ಜೊತೆ ನೇರ- ಆತ್ಮೀಯ ಸಂಪರ್ಕ ಇದ್ದಂತಹವರೇ. ಎಲ್ಲಕ್ಕಿಂತ ಮೇಲಾಗಿ, ತಾವೇನು ಮಾಡುತ್ತಿದ್ದೇವೆ ಎಂಬ ಖಬರಿದ್ದ ವೃತ್ತಿಪರರು.

ನೆಹರೂ, ಇಂದಿರಾ, ರಾಜೀವ್, ಮೊರಾರ್ಜಿ ದೇಸಾಯಿ, ವಾಜಪೇಯಿ - ಕನಿಷ್ಠಪಕ್ಷ ಈ ಐದು ಮಂದಿಗೆ, ಅವರ ಮಾಧ್ಯಮ ಸಂವಹನಗಳಿಗೆ ಈಗ ಬಿಂಬಿಸಲಾಗುತ್ತಿರುವ "ಫಿಲ್ಟರ್" ಇರಲಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲು ಭಾರತದ ಚರಿತ್ರೆ ಗಮನಿಸಿದರೆ ಸಾಕಾಗುತ್ತದೆ. ಅಬ್ಬಬ್ಬಾ ಎಂದರೆ, ತಮಗೇನು ಪ್ರಶ್ನೆ ಬರಬಹುದೆಂದು ಕೇಳಿದ್ದಕ್ಕೆ ಮಾಧ್ಯಮ ಸಲಹೆಗಾರರು ಇರುವ ಸಣ್ಣ ಸಂಖ್ಯೆಯ ಪತ್ರಕರ್ತರಲ್ಲಿ ಮಾಹಿತಿ ಪಡೆದು ಪ್ರಧಾನಿಯವರ ಜೊತೆ ಹಂಚಿಕೊಂಡಿರಬಹುದು.
ಪ್ರಧಾನಿ ತನ್ನ ಅಧಿಕಾರಿಗಳಿಂದ ಕೊಂಚ ಫೀಡ್‌ಬ್ಯಾಕ್ ಪಡೆದುಕೊಂಡು, ಪತ್ರಕರತರ ಜೊತೆ ಅಧಿಕೃತವಾಗಿ ಮಾತನಾಡಿರಬಹುದು. ಆದರೆ, ಇವರು ಐದೂ ಮಂದಿ ಚೌಕಟ್ಟು ದಾಟಿ ಪ್ರಶ್ನೆಗಳಿಗೆ ಉತ್ತರಿಸಿದ ಬಗ್ಗೆ ಚರಿತ್ರೆಯಲ್ಲಿ ಹಲವಾರು ನಿದರ್ಶನಗಳು ಸಿಗುತ್ತವೆ. (ಅದಕ್ಕೆ ಒಳ್ಳೆಯ ಉದಾಹರಣೆ, ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಯೋಜನೆಯನ್ನು ವಾಜಪೇಯಿ ಅವರು ಯಾವುದೇ ಹಿನ್ನೆಲೆ ಇಲ್ಲದೇ ಏಕಾಏಕಿ ಅಸೊಚಾಮ್ ಸಭೆಯಲ್ಲಿ ಪ್ರಕಟಿಸಿದ್ದು. ಈ ಬಗ್ಗೆ ನಾನು ಅನುವಾದಿಸಿದ M ಡಾಕ್ಯುಮೆಂಟ್ ನಲ್ಲಿ ವಿವರಗಳಿವೆ.) ಇನ್ನೂ ಹಲವು ಬಾರಿ, ಪತ್ರಕರ್ತರ ಜೊತೆ ಪ್ರಧಾನಿ ಹುದ್ದೆಯಲ್ಲಿದ್ದವರ ಅನೌಪಚಾರಿಕ ಮಾತು-ಕತೆಗಳು ಕೂಡ ಒಂದಿಲ್ಲೊಂದು ಹಂತದಲ್ಲಿ ಬಹಿರಂಗ ಸುದ್ದಿ ಆದದ್ದಿದೆ.
ಲಾಲ ಬಹಾದ್ದೂರ್ ಶಾಸ್ತ್ರಿ, ಚರಣ್ ಸಿಂಗ್ ಮಾಧ್ಯಮ ಫ್ರೆಂಡ್ಲೀ ಆಗಿರಲಿಲ್ಲ, ವಿ.ಪಿ.ಸಿಂಗ್, ಚಂದ್ರಶೇಖರ್, ಐಕೆ ಗುಜ್ರಾಲ್, ದೇವೇಗೌಡರಿಗೆ ತಮ್ಮನ್ನು ಎಸ್ಟಾಬ್ಲಿಷ್ ಮಾಡಿಕೊಳ್ಳುವಷ್ಟು ಸಮಯ ಸಿಗಲಿಲ್ಲ. ಆದರೂ ಈ ಕೊನೆಯ ನಾಲ್ಕು ಮಂದಿಯ ವ್ಯಕ್ತಿತ್ವಗಳೇ, ಬಾಯಿಪಾಠ ಹೊಡೆದು ಬಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ, ತಮ್ಮ ಛವಿ ಚೆನ್ನಾಗುಳಿಸಿಕೊಳ್ಳುವ ಜಾಯಮಾನದ್ದಾಗಿರಲಿಲ್ಲ ಎಂಬುದಕ್ಕೆ ದೇಶದ ಚರಿತ್ರೆಯೇ ಸಾಕ್ಷಿ.
ನರಸಿಂಹರಾವ್, ಡಾ|ಮನಮೋಹನ್ ಸಿಂಗ್ ಕಾಲಕ್ಕೆ ಬರುವಾಗ ದೇಶ ಉದಾರೀಕರಣಕ್ಕೆ ತೆರೆದುಕೊಂಡದ್ದರಿಂದ, "ಬ್ರ್ಯಾಂಡಿಂಗ್" ಶುರು ಆಗಿತ್ತು. ಜೊತೆಗೆ ಮಾಧ್ಯಮ ತನ್ನ ಗಾತ್ರದಲ್ಲಿ ಹಿಗ್ಗಿ, ಗುಣಮಟ್ಟದಲ್ಲಿ ತಗ್ಗತೊಡಗಿತ್ತು. ಹಾಗಾಗಿ, ಸಹಜವಾಗಿಯೇ ಪ್ರಶ್ನೆಗಳನ್ನು ಮುಂಚಿತವಾಗಿ ಪಡೆದು "ವೆಟ್" ಮಾಡುವ ಪದ್ಧತಿ ಬಂದಿರಬಹುದು. ಹಾಗಂತ ಅವರು ತಾವೇನು ಹೇಳುತ್ತಿದ್ದೇವೆ ಎಂಬ ಕುರಿತು "ವಿಷಯ ಜ್ಞಾನ" ಇಟ್ಟುಕೊಂಡೇ ಮಾತನಾಡಿದವರು. ಅದಕ್ಕೆ "ಮಾಧ್ಯಮ ಸಲಹೆಗಾರರ" ಊರುಗೋಲಿನ ಕಡೆ ನೋಡಿದವರಲ್ಲ. ಹಾಗಾದರೆ, ಸದ್ರಿ ಸೀಸನ್ಡ್ ಪತ್ರಕರ್ತರು, "ಯಾವ ಪತ್ರಕರ್ತ ಯಾವ ಪ್ರಶ್ನೆ ಕೇಳುತ್ತಾನೆ, ಅದಕ್ಕೆ ಯಾವ ಉತ್ತರ ನೀಡಬೇಕು, ಮುಂದಿನ ಪ್ರಶ್ನೆ ಸರದಿ ಯಾರದ್ದು... ಹೀಗೆ ಎಲ್ಲವೂ ಒಂದು ಶಿಸ್ತುಬದ್ಧ 'ರನ್ ಆರ್ಡರ್' ನಂತೆ ನಡೆಯುತ್ತದೆ. ಪತ್ರಿಕಾಗೋಷ್ಠಿಗಳು 'ಫಿಕ್ಸ್' ಆಗಿರುತ್ತವೆ ಎಂದರೆ ಅದು ಪ್ರಜಾಪ್ರಭುತ್ವದ ಅಣಕ ಎಂದು ಭಾವಿಸಬೇಕಿಲ್ಲ." ಎಂದು ಯಾಕೆ ಹೇಳುತ್ತಿದ್ದಾರೆ?
ನನ್ನ ಅರಿವಿನ ಮಿತಿಯಲ್ಲಿ, ಅದಕ್ಕೊಂದು ಕಾರಣ ಇದೆ! ದಿಲ್ಲಿಯ ಪತ್ರಕರ್ತರಲ್ಲದೇ, ಪ್ರಧಾನಿ ಎನ್‌ಟೂರೇಜ್ ಜೊತೆ ಕೆಲವು ವರ್ನಾಕ್ಯುಲರ್ ಪತ್ರಿಕೆಗಳ ಪತ್ರಕರ್ತರನ್ನೂ ಆಯ್ದು ಕಳುಹಿಸಿಕೊಡುವುದು ವಾಡಿಕೆ.
ಬೇರೆ ಬೇರೆ ರಾಜ್ಯಗಳಿಂದ ಸರ್ದಿಯ ಮೇಲೆ ಬರುವ ಈ ಪತ್ರಕರ್ತರು ಪ್ರಧಾನಿ ಕಚೇರಿಗೆ ಪರಿಚಿತರಲ್ಲ. ಹಾಗಾಗಿ, ಅವರ ಹಿನ್ನೆಲೆ-ಮುನ್ನೆಲೆ ಗೊತ್ತಿಲ್ಲದಿರುವುದರಿಂದ, ಅವರ ಬಳಿ ಅವರ ಪ್ರಶ್ನೆಗಳೇನು ಎಂದೆಲ್ಲ ಮುಂದಾಗಿ ಕೇಳಿರಬಹುದು. ಅದನ್ನೇ ಇವರು, ಅದೇ ವಾಡಿಕೆ ಎಂದು ಅಂದುಕೊಂಡಿರಬಹುದು - ತನಗೆ ಜ್ವರ ಬಂದರೆ ದೇಶಕ್ಕೇ ಜ್ವರ ಎಂದು ಭಾವಿಸುವ ನವ ಮಾಧ್ಯಮ ಪೀಳಿಗೆ ಅದು. ಇದು ಬಿಟ್ಟು ಹಳೆಯ ತಲೆಮಾರಿನ ಹಿರಿಯ ಪತ್ರಕರ್ತರಿಗೆ "ನೀವು ಏನು ಪ್ರಶ್ನೆ ಕೇಳಬಯಸುತ್ತೀರಿ" ಎಂದು ಮಾಧ್ಯಮ ಸಲಹೆಗಾರರು (ಅದು ಶಾರದಾ ಪ್ರಸಾದರೇ ಇರಲಿ ಬೇಕಿದ್ರೆ...) ಕೇಳುವುದನ್ನು- ಅದಕ್ಕೆ ಬರಬಹುದಾದ ಉತ್ತರವನ್ನು ಕಲ್ಪಿಸಿಕೊಳ್ಳಿ! ಅಕಸ್ಮಾತ್ ಆ ನಾಲ್ಕಾರು ಜನ ಇರುಸುಮುರುಸಿನ ಪ್ರಶ್ನೆ ಕೇಳಿದ್ದಕ್ಕೆ ಅವರನ್ನು ಬಿಟ್ಟು ಪ್ರಧಾನಿ ಎನ್‌ಟೂರೇಜ್ ಹೊರಡುವುದನ್ನೂ ಕಲ್ಪಿಸಿಕೊಳ್ಳಿ!
ವರ್ನಾಕ್ಯುಲರ್ ಪತ್ರಕರ್ತರನ್ನು ಪ್ರಧಾನಿ ಎನ್‌ಟೂರೇಜ್ ಜೊತೆ ಕಳುಹಿಸುತ್ತಾರೆ ಎಂದು ನನಗೆ ಗೊತ್ತಾದದ್ದು ನಾನು ಮುಂಗಾರು ಪತ್ರಿಕೆಯಲ್ಲಿದ್ದಾಗ. (1990 - ವಿ.ಪಿ. ಸಿಂಗ್ ಪ್ರಧಾನಿ ಇರಬೇಕು) ಪ್ರಧಾನಿ ರಷ್ಯಾ ಪ್ರವಾಸದ ಎನ್‌ಟುರೇಜ್‌ಗೆ ನಮ್ಮ ಪತ್ರಿಕೆಯಿಂದ ಪತ್ರಕರ್ತರನ್ನು ಕಳುಹಿಸಬಹುದೆಂದು ಆಹ್ವಾನ ಬಂದಿತ್ತು. ಆಗ ವಡ್ಡರ್ಸೆಯವರ ಕಾಲ ಮುಗಿದು, ವೈ ಎಂ ಹೆಗ್ಡೆ ಸಂಪಾದಕರು. ಆಸಕ್ತರು ಅವರ ಖರ್ಚಿನಲ್ಲಿ ಹೋಗುವುದಿದ್ದರೆ ರೆಕಮಂಡ್ ಮಾಡುತ್ತೇವೆ. ಕಂಪನಿ ಕಡೆಯಿಂದ ಹಣ ಕೊಡಲಾಗದು ಎಂದು ಸುದ್ದಿಮನೆಗೆ ಸಂದೇಶ ಬಂದಿತ್ತು.
ಕಚೇರಿಯಲ್ಲಿ ಯಾರೂ ಹೋಗುವ ಸ್ಥಿತಿಯಲ್ಲಿರಲಿಲ್ಲ. ಎಲ್ಲರದೂ ಸಂಸಾರ ತಾಪತ್ರಯ. ಆಗ ನನ್ನ ಸಂಬಳ 950ರೂ. ಆಗತಾನೇ ಟ್ರೇನಿ ದರ್ಜೆಯಿಂದ ಕಿರಿಯ ಸಬ್ ಎಡಿಟರ್ ಆಗಿದ್ದೆ. ಅಪ್ಪನ ದುಡ್ಡಿನಲ್ಲಾದರೂ ಹೋಗೋಣ ಎಂದುಕೊಂಡರೆ, ನನ್ನ ಬಳಿ ಪಾಸ್‌ಪೋರ್ಟೇ ಇಲ್ಲ! ಈ ಘಟನೆ ನಡೆದ ಮೂರು ತಿಂಗಳ ಒಳಗೆ ನಾನು ಮಾಡಿಕೊಂಡ ಮೊದಲ ಕೆಲಸ, ನನ್ನ ಪಾಸ್‌ಪೋರ್ಟ್! ಆದರೆ, ಆ ಬಳಿಕ ಹೆಚ್ಚು ಕಾಲ ನಾನು ರಾಜ್ಯ ಮಟ್ಟದ ದಿನಪತ್ರಿಕೆಯೊಂದರ ಸುದ್ದಿಮನೆಯಲ್ಲಿ ಇರಲಿಲ್ಲ; ಮುಂದೆ ಡಿಜಿಟಲ್‌ಗೆ ಹೊರಳಿಕೊಂಡೆ!
ಬರಹ: ರಾಜಾರಾಂ ತಲ್ಲೂರು












Click it and Unblock the Notifications