ಗಂಡನೊಡನೆ ಜಾಸ್ತಿ ಜಗಳವಾಡೋ ಹೆಂಡತಿಯರ ಜನ್ಮರಾಶಿ ಇದು
Astrology: ಜ್ಯೋತಿಷ್ಯದಲ್ಲಿ ಪ್ರತಿಯೊಂದು ರಾಶಿಗೂ ತನ್ನದೇ ಆದ ಸ್ವಭಾವ, ಗುಣ ಮತ್ತು ದೌರ್ಬಲ್ಯಗಳಿವೆ. ಕುಟುಂಬ ಜೀವನದಲ್ಲಿ ಹೊಂದಾಣಿಕೆ, ಭಿನ್ನಾಭಿಪ್ರಾಯಗಳು ಮತ್ತು ಜಗಳಗಳು ಕೂಡ ಕೆಲವೊಮ್ಮೆ ರಾಶಿಗಳ ಪ್ರಭಾವದಿಂದ ಉಂಟಾಗುತ್ತವೆ ಎಂಬ ನಂಬಿಕೆ ಇದೆ. ರಾಶಿ ಕೂಟ, ಗಣ ಕೂಟ, ರಾಹು ಸ್ಥಾನ, ಗುಳಿಕ ಸ್ಥಾನ ಇವುಗಳನ್ನು ಲೆಕ್ಕ ಹಾಕಿ ಗಂಡ- ಹೆಂಡತಿ ಜಗಳವಾಡುತ್ತಾರೋ ಇಲ್ಲವೋ, ಯಾರು ಹೆಚ್ಚು ಜಗಳಗಂಟರು, ಯಾವ ಕಾರಣಗಳಿಗಾಗಿ ಜಗಳ ಆಗುತ್ತದೆ ಎಂಬುದನ್ನೆಲ್ಲ ಹೇಳಿ ಬಿಡಬಹುದು. ಜ್ಯೋತಿಷ್ಯ ಮಾಹಿತಿ ಪ್ರಕಾರ, ಕೆಲವು ರಾಶಿಯ ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ಬಲವಾಗಿ ವ್ಯಕ್ತಪಡಿಸುವ ಕಾರಣದಿಂದಾಗಿ ದಾಂಪತ್ಯ ಜೀವನದಲ್ಲಿ ಹೆಚ್ಚು ಚರ್ಚೆ ಮತ್ತು ವಾದಗಳಿಗೆ ಕಾರಣರಾಗುತ್ತಾರೆ. ಅಂಥವರು ಯಾರು ನೋಡೋಣ.
ಜಗಳ ಶುರುವಾದರೆ ಮುಗಿಯೋದು ಕಷ್ಟ
ಈ ಪಟ್ಟಿಯಲ್ಲಿ ವೃಶ್ಚಿಕ, ಕರ್ಕಾಟಕ ಮತ್ತು ವೃಷಭ ರಾಶಿಯ ಮಹಿಳೆಯರು ಬರುತ್ತಾರೆ. ವೃಶ್ಚಿಕ ರಾಶಿಯ ಮಹಿಳೆಯರು ಭಾವನಾತ್ಮಕವಾಗಿ ತುಂಬಾ ಗಾಢವಾಗಿರುತ್ತಾರೆ. ಅವರು ಪ್ರೀತಿ ಮಾಡಿದರೆ ಸಂಪೂರ್ಣ ಮನಸ್ಸಿನಿಂದ ಮಾಡುತ್ತಾರೆ. ಆದರೆ ಮೋಸ ಅಥವಾ ನಿರ್ಲಕ್ಷ್ಯವನ್ನು ಸಹಿಸಿಕೊಳ್ಳುವುದಿಲ್ಲ. ಕರ್ಕಾಟಕ ರಾಶಿಯವರು ಕುಟುಂಬಕ್ಕೆ ಹೆಚ್ಚು ಮಹತ್ವ ಕೊಡುವವರಾದರೂ, ಭಾವನೆಗಳಿಗೆ ಹೆಚ್ಚು ಒತ್ತು ನೀಡುವ ಕಾರಣ ಕೆಲವೊಮ್ಮೆ ಸಣ್ಣ ವಿಷಯಗಳೂ ದೊಡ್ಡ ಚರ್ಚೆಯಾಗಬಹುದು. ವೃಷಭ ರಾಶಿಯ ಮಹಿಳೆಯರು ನೇರವಾಗಿ ಮಾತನಾಡುವ ಸ್ವಭಾವ ಹೊಂದಿರುವುದರಿಂದ ತಮ್ಮ ಅಭಿಪ್ರಾಯವನ್ನು ಮುಚ್ಚಿಡುವುದಿಲ್ಲ.

ಗಂಡ ಬಾಯಿ ಬಿಟ್ಟರೆ ಸಾಕು, ಜಗಳವೇ!
ಈ ಕೆಟಗರಿಯಲ್ಲಿ ಸಿಂಹ, ಮಕರ ಅಥವಾ ಮೇಷ ರಾಶಿಯ ಸ್ತ್ರೀಯರು ಬರುತ್ತಾರೆ. ಈ ರಾಶಿಯ ಸ್ತ್ರೀಯರು ನಾಯಕತ್ವದ ಗುಣ ಹೊಂದಿರುತ್ತಾರೆ. ತಮ್ಮ ನಿರ್ಧಾರವೇ ಅಂತಿಮ ಎಂದು ಭಾವಿಸುವ ಪ್ರವೃತ್ತಿಯೂ ಇವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ಗಂಡ ಭಿನ್ನಾಭಿಪ್ರಾಯ ಎತ್ತಿದರೆ ಅದು ತನ್ನ ಲೀಡರ್‌ಶಿಪ್‌ಗೆ ಎತ್ತಿದ ಪ್ರಶ್ನೆ ಎಂದು ಹೆಂಡತಿ ಭಾವಿಸುತ್ತಾಳೆ. ಗಂಡನನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಳ್ಳಲು ಇವರು ಹಿಂಜರಿಯುವುದಿಲ್ಲ. ಗಂಡನೂ ತನ್ನ ಅಭಿಪ್ರಾಾಯದಲ್ಲಿ ಗಟ್ಟಿಯಾಗಿದ್ದರೆ ಸಣ್ಣ ಭಿನ್ನಾಭಿಪ್ರಾಯವೂ ಮಾರಾಮಾರಿ ಜಗಳಕ್ಕೆ ತಿರುಗುವ ಸಾಧ್ಯತೆ ಇರುತ್ತದೆ.
ಜಗಳ ಮಾಡೊಲ್ಲ, ಶುರುವಾದ್ರೆ ಮುಗಿಯಲ್ಲ
ಧನುಸ್ಸು, ಕುಂಭ ಮತ್ತು ಕನ್ಯಾ ರಾಶಿಯ ಮಹಿಳೆಯರಲ್ಲಿ ಈ ಗುಣಗಳನ್ನು ಕಾಣಬಹುದು. ಇವರು ಸಮಾಧಾನಿಗಳು. ಇವರ ದಾಂಪತ್ಯದಲ್ಲಿ ಜಗಳಗಳು ಹೆಚ್ಚು ಇರಲಾರದು. ಸಮತೋಲನ ಕಾಪಾಡಿಕೊಳ್ತಾರೆ. ಗಂಡನಿಗೆ ಎಲ್ಲದರಲ್ಲೂ ಧೈರ, ಬೆಂಬಲ ನೀಡ್ತಾರೆ. ಇನ್ನೊಬ್ಬರ ಮುಂದೆ ಗಂಡನನ್ನು ವಹಿಸಿಕೊಂಡು ಮಾತನಾಡ್ತಾರೆ. ಆದರೆ ಏನಾದರೂ ಗಂಡನಿಗೆ ಏನಾದರೂ ಮೋಸ, ವಂಚನೆ ನಡೆದರೆ, ತಮ್ಮ ಅಭಿಮಾನಕ್ಕೆ ಅವರಿಂದ ಪೆಟ್ಟಾದರೆ ಭಯಂಕರ ಜಗಳ ಆಗುವುದು ಖಾತ್ರಿ. ಈ ಮಹಿಳೆಯರು ನೆಲಕಚ್ಚಿ ನಿಂತರೆ ಜಗಳ ಮುಗಿಯುವುದು ಕಷ್ಟವಾದೀತು.
ತಪ್ಪು ಅಂತ ತಿಳಿದರೆ ಮಾತ್ರ ಜಗಳ
ಈ ಸ್ವಭಾವದ ಮಹಿಳೆಯರು ತುಲಾ, ಮಿಥುನ ಮತ್ತು ಮೀನದವರು. ಸಾಮಾನ್ಯವಾಗಿ ಗಂಡನನ್ನು ತಪ್ಪು ತಿಳಿಯೊಲ್ಲ. ತಪ್ಪು ತಿಳಿದರೆ ಮಾತ್ರ ಜಗಳ ಮಾಡದೇ ಬಿಡಲ್ಲ. ಈ ಮಹಿಳೆಯರು ತಮ್ಮ ಗಂಡಂದಿರ ಕಷ್ಟದ ಸಮಯದಲ್ಲಿ ಒಳ್ಳೆಯ ಗುಣಗಳನ್ನು ತೋರಿಸುತ್ತಾರೆ. ಅಂದರೆ, ಅವರು ಧೈರ್ಯವಾಗಿ ಬೆಂಬಲ ನೀಡುತ್ತಾರೆ, ಸಮಸ್ಯೆಗಳಿಗೆ ಪರಿಹಾರ ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಕುಟುಂಬವನ್ನು ಒಗ್ಗೂಡಿಸಲು ಶ್ರಮಿಸುತ್ತಾರೆ. ಆದರೆ ಗಂಡ ಖಂಡಿತವಾಗಿಯೂ ತಪ್ಪು ಮಾಡಿದ್ದಾನೆ ಎಂದು ತಿಳಿದರೆ, ಸಾರ್ವಜನಿಕವಾಗಿ ಗಂಡನ ಜುಟ್ಟು ಹಿಡಿದು ಜಗ್ಗಿಸಿ ಕೇಳಲೂ ಹೇಸುವುದಿಲ್ಲ.
ಜಗಳದ ವಿಷಯದಲ್ಲಿ ರಾಶಿಯ ಆಧಾರದ ಮೇಲೆ ಯಾರನ್ನೂ ಒಳ್ಳೆಯವರು ಅಥವಾ ಕೆಟ್ಟವರು ಎಂದು ನಿರ್ಧರಿಸುವುದು ಸರಿಯಲ್ಲ. ಜ್ಯೋತಿಷ್ಯವು ಕೇವಲ ವ್ಯಕ್ತಿತ್ವದ ಕೆಲವು ಪ್ರವೃತ್ತಿಗಳನ್ನು ಸೂಚಿಸುತ್ತದೆ. ದಾಂಪತ್ಯ ಜೀವನದಲ್ಲಿ ಯಶಸ್ಸು ದೊರಕುವುದು ರಾಶಿಗಿಂತ ಹೆಚ್ಚಾಗಿ ಪರಸ್ಪರ ಗೌರವ, ಸಂವಹನ, ನಂಬಿಕೆ ಮತ್ತು ಹೊಂದಾಣಿಕೆಯಿಂದ. ದಾಂಪತ್ಯದಲ್ಲಿ ಜಗಳ ಉಂಟಾಗಲು ಹೆಂಡತಿಯಂತೆ ಗಂಡನೂ ಕಾರಣ ಇರಬಹುದು. ಗಂಡನ ರಾಶಿಗಳನ್ನೂ ಗಮನಿಸಬೇಕು. ಗಂಡನ ಸ್ವಭಾವ, ಅವನ ಕಿರಿಕ್ ಗುಣವೂ ಹೆಂಡತಿ ಸಿಟ್ಟಾಗಲು ಕಾರಣವಾಗಬಹುದು. ಜ್ಯೋತಿಷ್ಯವನ್ನು ಮಾರ್ಗದರ್ಶಕವಾಗಿ ನೋಡಬಹುದು. ಆದರೆ ಸಂತೋಷದ ಕುಟುಂಬ ಜೀವನಕ್ಕೆ ಮುಖ್ಯವಾದದ್ದು ರಾಶಿಯಲ್ಲ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಮನೋಭಾವ ಎಂಬುದನ್ನು ಮರೆಯಬಾರದು.
ಬರಹ: ಭವಾನಿ ಭಟ್












Click it and Unblock the Notifications