ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಉತ್ತರ ಭಾರತದ ಪ್ರವಾಸ ಕಥನ

By Staff
|
Google Oneindia Kannada News

ಈ ಕಥನವನ್ನು ಬರೆಯಲು ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದ ಕನ್ನಡಆಡಿಯೋ.ಕಾಂನ ಪ್ರವೀಣ್‌, ತ್ರಿವೇಣಿ, ಮೀರಾ, ವಸಂತ ಹಾಗೂ ಮನ ಇವರುಗಳಿಗೆ ನನ್ನ ಕೃತಜ್ಞತೆಗಳು.

ಭಾಗ 1: ಬೆಂಗಳೂರಿನಿಂದ ದೆಹಲಿಗೆ.

ಫೆಬ್ರವರಿ 1998

ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೆ. ಓದು ಮುಗಿದಿತ್ತು. ದೇಶ ಸುತ್ತುವ ಆಸೆ. ಮನೆಯವರನ್ನು ಕೇಳಿದೆ. ಅಮ್ಮ ಮಗನಿಗಾಗಿ ‘ಹೂಂ’ ಅಂದರೂ ಅಣ್ಣ (ನಮ್ಮ ತಂದೆ) ಸುತಾರಾಂ ಒಲ್ಲೆ ಅಂದುಬಿಟ್ಟರು. ಸ್ನೇಹಿತರನ್ನು, ಬಂಧು ಬಾಂಧವರನ್ನು ಕೇಳಿದೆ. ಎಲ್ಲರೂ ಈಗ ಬೇಡ, ಮುಂದಿನ ವರ್ಷ ಹೋಗು ಎಂದು ತೇಲಿಸಿದರೇ ಹೊರತು, ಯಾರೂ ನನ್ನೊಡನೆ ಬರಲು ಒಪ್ಪಲಿಲ್ಲ. ನಾನೋ, ಮುಂದಿನ ವರ್ಷ ಎಲ್ಲಿ ಇರುವೆನೋ ಎಂದುಕೊಂಡು ಭಂಡತನ ಮಾಡಿ ಏಷಿಯನ್‌ ಟ್ರಾವಲ್ಸ್‌ನಲ್ಲಿ ಒಂದು ಉತ್ತರ ಭಾರತದ ಪ್ರವಾಸ ಕಾದಿರಿಸಿದೆ. ಕೆಲಸದಿಂದ ಒಂದು ತಿಂಗಳು ರಜ ಪಡೆದೆ. ಅಣ್ಣ ಅಂತು ನಾನು ಕೊನೆ ಘಳಿಗೆಯಲ್ಲಿ ಹಿಂಜರಿಯುತ್ತೇನೆ ಅಂದುಕೊಂಡಿದ್ದರು. ಅಂತೂ ಹೊರಡೊ ದಿನ ಬಂದೇಬಿಟ್ಟಿತು.

29 ಏಪ್ರಿಲ್‌ 1998

ಅಮ್ಮ ಅಣ್ಣ ಹಾಗು ನಾನು ಸಂಜೆ ಸುಮಾರು 5:00 ಘಂಟೆಗೆ ಮನೆಯಿಂದ ಹೊರಟೆವು. ಸುಮಾರು 5:30ಕ್ಕೆ ರೈಲು ನಿಲ್ದಾಣ ತಲುಪಿದೆವು. ನಾನೇ ಎಲ್ಲರಿಗಿಂತ ಕೊನೆಗೆ ಬಂದವನು. ಉಳಿದ ಗುಂಪು ಆಗಲೇ ಬಂದಿತ್ತು. ಅಣ್ಣ (ನನ್ನ ಬಳಿ ಇದ್ದರೂ) ನನಗೆ ಒಂದಿಷ್ಟು ದುಡ್ಡು ಕೊಟ್ಟರು. ಒಂದು 2 ಲೀಟರ್‌ ಸೀಸೆ ಬಿಸ್ಲೇರಿ ನೀರೂ ತಂದು ಕೊಟ್ಟರು.

ಬೆಂಗಳೂರಿನಿಂದ ನಿಶ್ಚಿತ ಸಮಯವಾದ ಸಂಜೆ 6:25ಕ್ಕೆ ಹೊರಟೆವು. ರೈಲುಗಾಡಿ - ಕರ್ನಾಟಕ ಎಕ್ಸ್‌ಪ್ರೆಸ್ಸ್‌. ಶುರುವಲ್ಲಿ ಲೆವೆಲ್‌ ಕ್ರಾಸಿಂಗ್‌ಗಳ ಕಾರಣ ನಿಧಾನವಾದರೂ, ರಾತ್ರಿ 8:00 ಘಂಟೆ ಹೊತ್ತಿಗೆ ಸಾಕಷ್ಟು ವೇಗವಾಗಿ ಓಡಲು ಶುರು ಮಾಡಿತ್ತು. ಪಕೋಡ, ಚಹಾ, ಇತ್ಯಾದಿ ಕೂಗಿಕೊಂಡು ಮಾರುವವರು ಆಗಲೇ ಓಡಾಡುತ್ತಿದ್ದರು.

ಪ್ರವಾಸ ಕರ್ತ (ಟ್ರಾವಲ್‌ ಏಜೆಂಟ್‌) ಪ್ರವಾಸದಲ್ಲಿ ಊಟದ ಭಾರ ಹೊತ್ತಿದ್ದರೂ, ರೈಲು ಪ್ರವಾಸದ ಸಮಯಕ್ಕೆ ಯಾವ ಭರವಸೆಯನ್ನೂ ಕೊಟ್ಟಿರಲಿಲ್ಲ. ಆದರೂ ಎಲ್ಲರಿಗೂ ವಾಂಗಿಭಾತ್‌ ಮತ್ತು ಮೊಸರನ್ನದ ಪೊಟ್ಟಣಗಳನ್ನು ಕೊಟ್ಟ. ಜೊತೆಗೆ ಒಂದು ಅಚ್ಚು ಮೈಸೂರು ಪಾಕ್‌ ಸಹ. ಚೆನ್ನಾಗಿಯೇ ಇತ್ತು ಊಟ. ಇನ್ನೇನು ಪ್ರವಾಸಾದ್ಯಂತ ತೊಂದರೆಯಿಲ್ಲವೆಂದುಕೊಂಡು ಮಲಗಿದೆ. ಆದರೆ ಬರುವ ಎರಡು ದಿನಗಳ ಊಹೆ ನನಗಾಗಿರಲಿಲ್ಲ.

30 ಏಪ್ರಿಲ್‌ 1998

ಮಾರನೆ ದಿನ ಬೆಳಗ್ಗೆ 5:30ಕ್ಕೆ (ಎಲ್ಲರಿಗಿಂತ ಮುಂಚೆ) ಎದ್ದು ಬಾತ್‌ರೂಂ ಕೆಲಸಗಳನ್ನು ಮುಗಿಸಿಕೊಂಡೆ. ಆಮೇಲೆ ಒಂದಿಷ್ಟು ಹೊತ್ತು (ಎಲ್ಲರೂ ಏಳುವವರೆಗೆ) ಬಾಗಿಲ ಬಳಿ ನಿಂತಿದ್ದೆ. ನಂತರ ಕೂತು ಪ್ರವಾಸ ಮಾರ್ಗದರ್ಶಕ ಹರಿಯಪ್ಪನ ಜೊತೆ ಕೊಂಚ ಮಾತನಾಡಿದೆ. ಇಷ್ಟು ಹೊತ್ತಿಗೆ ಗುಲ್ಬರ್ಗ ದಾಟಿದ್ದೆವು. ರೈಲು 20 ನಿಮಿಷ ತಡವಾಗಿ ಓಡುತ್ತಿದ್ದರೂ ಬರುವ ರಾತ್ರಿ ಸರಿಪಡಿಸಲಾಗಬಹುದೆಂದು ತಿಳಿಯಿತು. ಸುಮಾರು 7:00 ಘಂಟೆಗೆ ಗುಡ್‌ಗಾಂ ಅನ್ನುವ ಒಂದು ಊರು ಹಾಯ್ದು ಹೋದೆವು. ಇದು ಕರ್ನಾಟಕದ ಕೊನೆಯ ಊರು. 7:10ಕ್ಕೆ ದುಧಾನಿ ಅನ್ನುವ ಊರಿಗೆ ಹೋದೆವು. ದುಧಾನಿ ಮಹಾರಾಷ್ಟ್ರದಲ್ಲಿದೆ.

ಸ್ವಲ್ಪ ಹೊತ್ತಿನ ನಂತರ ಸೋಲಾಪುರ ತಲುಪಿದೆವು. ಇದೊಂದು ಭಾರೀ ಗಲೀಜು ನಿಲ್ದಾಣ. ಬಲು ರೇಗಿಸುವ ಪ್ರಯಾಣಿಕರು ಹತ್ತಿದರು ಇಲ್ಲಿ. ನಿಲ್ದಾಣದ ತುಂಬ ದುರ್ವಾಸನೆ. ಸೆಕೆ ಬೇರೆ. ಜನರು ತಮ್ಮ ಕುಡಿಯುವ ನೀರಿನ ಪಾತ್ರೆಗಳನ್ನು ಇಲ್ಲಿ ತುಂಬಿಸಿಕೊಳ್ಳುವುದು ನೋಡಿದರೆ ಅಸಹ್ಯವಾಯಿತು. ನಾನು ಕ್ಯಾಂಟೀನ್‌ ಹುಡುಕಿದೆ. ತಿನ್ನಲು ಲಾಯಕ್ಕಾದ ಜಾಗ ಯಾವುದೂ ಕಾಣಲಿಲ್ಲ. ಅಷ್ಟರಲ್ಲಿ ರೈಲು ಹೊರಟಿತು, ಸದ್ಯ ಸೋಲಾಪುರದಿಂದ ಬಿಡುಗಡೆಯಾಯಿತು ಎಂದುಕೊಂಡೆ.

ಸೋಲಾಪುರ ಬಿಟ್ಟ ನಂತರ ಇಂಡಿಯನ್‌ ರೈಲ್ವೇಸ್‌ನ ತಿಂಡಿ ಮಾರುವವ ಒಬ್ಬ ಬ್ರೆಡ್‌ ಆಂಲೆಟ್‌, ಉಪ್ಮ-ವಡ ಮಾರುತ್ತಾ ಬಂದ. ನಾನು ಉಪ್ಮ-ವಡ ತಗೊಂಡೆ. ರುಚಿಹೀನವಾದರೂ ಬಿಸಿಯಾಗಿತ್ತು. ತಿಂದು ನೀರು ಕುಡಿದ ನಂತರ ಹಸಿವು ಇಂಗಿತು. ಆದರೆ ಇನ್ನೆರಡು ದಿನ ಈ ರೈಲಿನಲ್ಲಿ ಹೇಗೆ ಕಳೆಯುವುದೆಂದು ಯೋಚಿಸ ತೊಡಗಿದೆ.

ಸಮಯ 9:00 ಘಂಟೆಯಾಗಿತ್ತು. ಕಿಟಕಿಯಿಂದ ಬಿಸಿಲು ಹೊಡೆಯುತ್ತಿತ್ತು. ಒಳಗೆ ಹಲವಾರು ಫ್ಯಾನುಗಳು ಓಡುತ್ತಿದ್ದರೂ ಸಿಕ್ಕಾಪಟ್ಟೆ ಸೆಕೆಯಾಗುತ್ತಿತ್ತು. ರೈಲು ಮಧ್ಯೆ ಲೆವೆಲ್‌ ಕ್ರಾಸಿಂಗ್‌, ಇತ್ಯಾದಿ ಎಂದು ಒಂದೆರಡು ಬಾರಿ ಬಿಕ್ಕಳಿಸಿದರೂ ಅಷ್ಟು ಹೊತ್ತಿಗೆ ವೇಗವಾಗಿ ಸಾಗುತ್ತಿತ್ತು. ಸುತ್ತ ಎಲ್ಲಿ ನೋಡಿದರೂ ಕರೀ ನೆಲ. ಮೈಲಿಗತ್ತಲೆ ಹಸಿರೇ ಕಾಣಿಸುತ್ತಿರಲಿಲ್ಲ. ಅಲ್ಲೊಬ್ಬ ಇಲ್ಲೊಬ್ಬ ರೈತರುಗಳು ಕಾಣಿಸುತ್ತಿದ್ದರು - ಮಳೆಯ ಮುನ್ನ ನೆಲ ಊಳುತ್ತ. ಅಲ್ಲೊಂದು ಇಲ್ಲೊಂದು ಪ್ರಾಣಿಗಳು ಮೇಯುತ್ತಿದ್ದವು. ಏನನ್ನು ಮೇಯುತ್ತಿರಬಹುದೆಂದು ಅಚ್ಚರಿ ಪಟ್ಟೆ - ಹುಲ್ಲಿನ ಒಂದು ದಳವೂ ಕಾಣಿಸುತ್ತಿರಲಿಲ್ಲ.

ರೈಲು ಹಳಿಯ ಎರಡೂ ಕಡೆ ಗೂಡ್ಸ್‌ ಬೋಗಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅವುಗಳಿಗೇನಾಗಿರಬಹುದೆಂದು ಯೋಚಿಸ ತೊಡಗಿದೆ. ಹಾಗೆಯೇ ಎಣ್ಣೆಯ ಟ್ಯಾಂಕರ್‌ಗಳೂ ಬಿದ್ದಿದ್ದವು. ಆ ಅಪಘಾತವು ಹೇಗಾಗಿರಬಹುದೆಂದು ಯೋಚಿಸಿ ಸ್ವಲ್ಪ ನಡುಕ ಹುಟ್ಟಿತು. ಬಹಳ ಬಾಯಾರಿಕೆಯಾಯಿತು, ನೀರು ಕುಡಿದೆ. ಸೂರ್ಯ ನೆತ್ತಿಗೇರಿದಂತೆ ಕಿಟಕಿಯಿಂದ ಬರುವ ಬಿಸಿಲು ಕಡಿಮೆಯಾಗುತ್ತಿತ್ತು. ಸದ್ಯ!

10:20. ಇಳಿದು ನಡೆದು ಹೋಗುವದಕ್ಕಿಂತ ನಿಧಾನವಾಗಿ ರೈಲು ಓಡುತ್ತಿತ್ತು. ಹಳಿಯ ಮೇಲೆ ಏನೋ ರಿಪೇರಿ ಕೆಲಸ ನಡೆಸುತ್ತಿರುವಂತಿತ್ತು. ಒಂದು ದೊಡ್ಡ ನದಿಯ ಸೇತುವೆಯ ಮೇಲೆ ಹಾಯ್ದು ಬಂದೆವು. ಈ ದಟ್ಟ ಬೇಸಿಗೆಯಲ್ಲೂ ಸಾಕಷ್ಟು ನೀರಿರುವ ನದಿ. ತಂಗಾಳಿ ಬೀಸುತ್ತಿತ್ತು - ಆ ನದಿಯು ನನ್ನನ್ನು ಈಜಲು ಆಹ್ವಾನಿಸಿದಂತೆ ಭಾಸವಾಯಿತು. ನೆಲದ ಮೇಲೆ ಸ್ವಲ್ಪ ಹಸಿರು ಕಾಣಿಸತೊಡಗಿತ್ತು. ಇದು ಗೋದಾವರಿ ನದಿಯೆಂದು ನಂತರ ತಿಳಿಯಿತು. ಇಂತಹ ಮಹಾನದಿಯನ್ನು ವೇದಮಂತ್ರಗಳಲ್ಲಿ ಹೇಳುವುದರಲ್ಲಿ ಆಶ್ಚರ್ಯವೇ ಇಲ್ಲವೆಂದುಕೊಂಡೆ.

ರೈಲು ಮತ್ತೆ ವಿನಃ ಕಾರಣ ನಿಂತಿತು. ತಂಗಾಳಿ ಇನ್ನೂ ಬೀಸುತ್ತಿತ್ತು, ಆದರೆ ಇಲ್ಲೊಬ್ಬ ಯಾತ್ರಿ ರೈಲಿನ ಒಳಗೇ ಮತ್ತೊಮ್ಮೆ ಸಿಗರೇಟ್‌ ಸೇದಲು ಹೊರಟ. ಕೋಪದಿಂದ ಅವನ ಮೇಲೆ ಕೂಗಿದೆ. ಜೊತೆಗೆ ನಮ್ಮ ಸಹ-ಪ್ರಯಾಣಿಕರೂ ಸೇರಿಕೊಂಡರು. ‘ಟಿಸಿ’ಯನ್ನು ಕರೆದು ದೂರು ಕೊಡುವುದಾಗಿ ಹೇಳಿದೆ. ಅದರಿಂದಲೋ ಅಥವಾ ರೈಲಿನಲ್ಲಿ ನನ್ನ ಹಿರಿಯತನದ ಕಾರಣದಿಂದಲೋ, ಬೈದುಕೊಂಡಾದರೂ ಸರಿ, ಅವನು ಆ ಸಿಗರೇಟ್‌ ಎಸೆದ. ಇಷ್ಟು ಹೊತ್ತಿಗೆ ಮತ್ತೆ ರೈಲು ಹೊರಟಿತು - ಏನು ಸಾಧಿಸಿಕೊಂಡೋ ಆ ಪರಮಾತ್ಮನಿಗೇ ಗೊತ್ತು!

11:10ಕ್ಕೆ ದೌಂಡ್‌ ಜಂಕ್ಷನ್‌ ತಲುಪಿದೆವು. ಮಹಾರಾಷ್ಟ್ರ ರಾಜ್ಯದ ಮಧ್ಯದಲ್ಲಿ. ಇಲ್ಲಿ ಭೇದದರ್ಶಕ ಜನರು ಪಾನ್‌ ತಿಂದುಕೊಂಡು ಅಲ್ಲೇ ಉಗಿದುಕೊಂಡು ಓಡಾಡುತ್ತಿದ್ದರು. ಇಡಿ ನಿಲ್ದಾಣವೆ ದುರ್ವಾಸನೆಯಿಂದ ತುಂಬಿತ್ತು. 20 ನಿಮಿಷಗಳ ನಿಲುವಿನ ನಂತರ ರೈಲು ಮತ್ತೆ ಹೊರಟಿತು. ಹೀಗೆ ಒಂದಾದ ಮೇಲೊಂದು ಊರುಗಳು ಉರುಳಿದವು. ಅಹ್ಮದ್‌ನಗರ, ಪರಗಾಂವ್‌, ಇತ್ಯಾದಿ.

ಮಧ್ಯಾಹ್ನದ ಹೊತ್ತಿಗೆ ಬಿಸಿಲು ಹೆಚ್ಚಾಗಿ ಕಿಟಕಿಯಿಂದ ಬರುವ ಗಾಳಿ, ಕುಲುಮೆಯಿಂದ ಬರುವ ಗಾಳಿಯಷ್ಟು ಬಿಸಿಯಾಗಿತ್ತು. ಆಚೆ, ತಗ್ಗು ದಿಣ್ಣೆಗಳಿಂದ ಕೂಡಿದ ಒಣ ನೆಲ. ಒಂದು ಪರ್ವತ ಶ್ರೇಣಿಯಾಳಗಿಂದ ರೈಲು ಹಾಯ್ದು ಹೋಯಿತು. ಇದು ವಿಂಧ್ಯಾ ಪರ್ವತಗಳಿರಬಹುದೇ ಎಂದುಕೊಂಡೆ. ಆದರೆ ವಿಂಧ್ಯಾ ಇಷ್ಟು ಬೇಗನೆ ಬರಲಾರದೆಂದು ಅರಿತೆ. ಮಧ್ಯಾಹ್ನವಿಡಿ ರೈಲು ಹೆಚ್ಚು ವೇಗದಿಂದ ಹೋಗಲಿಲ್ಲ. ಶುಚಿಯ ಕೊರತೆಯಿಂದ ಊಟಮಾಡಲು ಭಯವಾಗಿ ಉಪವಾಸವೇ ಇದ್ದೆ. ಹೊತ್ತು ಕಳೆಯಲು ಒಂದು ನಿದ್ದೆ ತೆಗೆದೆ.

15:45ಕ್ಕೆ ಮನ್‌ಮಾಡ್‌ ಅನ್ನುವ ಊರಿನಲ್ಲಿ ಬಂದು ನಿಂತೆವು. ಇದೊಂದು ಸುಮಾರು ದೊಡ್ಡ ಊರೆಂದು ಭಾವಿಸಿದೆ. ಆದರೆ ಅದೇ ಗಬ್ಬು ವಾಸನೆ, ಅದೇ ಗಲೀಜು. ಹೊಟ್ಟೆ ಹಸಿವಾದ್ದರಿಂದ ನಾನು ಆಚೆ ಹೋಗಿ ಒಂದು ಕೋಕ್‌ ಕುಡಿದು ಬಂದೆ. ಬಂದು ನೋಡಿದರೆ ನನ್ನ ಜಾಗದಲ್ಲಿ ಯಾರೋ ಕೂತುಬಿಟ್ಟಿದ್ದಾರೆ! ನಮ್ಮ ಗುಂಪಿನ ಉಳಿದವರಿಗೂ ಹಾಗೇ ಆಗಿತ್ತು. ಜಗಳವಾಡಿ ಎಬ್ಬಿಸಿದೆ. ಅವರಿಗೆ ಇವು ಕಾದಿರಿಸಿದ ಜಾಗಗಳೆಂದು ವಿವರಿಸಿದೆವು. ಅಷ್ಟರಲ್ಲಿ ನಮ್ಮ ಹರಿಯಪ್ಪ ಬಂದರು. ಅರಚಿ-ಕಿರುಚಿ ಅವರನ್ನು ಓಡಿಸಿದರು. ರೈಲು ಮನ್‌ಮಾಡ್‌ ಬಿಟ್ಟಿತು, ನಾವೆಲ್ಲ ನಿಟ್ಟುಸಿರು ಬಿಟ್ಟೆವು.

ಮತ್ತೆ ಊರುಗಳು ಮಿಂಚತೊಡಗಿದವು. ಪಿಂಪರ್‌ಖೇಡ್‌, ನಾಯ್ದಾಂಗಿ, ಜಲಗಾಂವ್‌, ಭಾಡ್ಲಿ, ಇತ್ಯಾದಿ. ಸಂಜೆಯಾದರೂ ಶೆಕೆ ತಡೆಯಲಾಗದು! ನನ್ನ (ಬೆಂಗಳೂರಿನ ಬಿಸ್ಲೇರಿ) ನೀರು ಸಹ 40 ಡಿಗ್ರಿ ಬಿಸಿಯಾಗಿತ್ತು, ಮುಗಿಯುತ್ತಲೂ ಇತ್ತು. ಸಂಜೆ 6:30ಕ್ಕೆ ರೈಲು ಭೂಸಾವಲ್‌ ಅನ್ನುವ ಊರಿಗೆ ಬಂದು ನಿಂತಿತು. ದೊಡ್ಡ ನಿಲ್ಡಾಣ, ಆಧುನಿಕ ಸವಲತ್ತು ಕಾಣಿಸುತ್ತಿದ್ದವು. ಹೊಟ್ಟೆ ಹಸಿವಾಗಿದ್ದರೂ ಏನನ್ನೂ ತಿನ್ನದೆ, ಕುಡಿಯದೆ ಮುಖ ಕೈಕಾಲು ತೊಳೆದು ಬಂದೆ. ತೊಳೆದ ನೀರಿನಲ್ಲಂತೂ ಮಸಿ, ಕೊಳೆ. ಇಡೀ ದಿನ ರೈಲಿನಲ್ಲಿ ಕಳೆದ ಲಕ್ಷಣಗಳು. ತಣ್ಣದಾದ ಮಿನರಲ್‌ವಾಟರ್‌ ಹುಡುಕಿದೆ, ಸಿಗಲಿಲ್ಲ. ರೈಲಿಗೆ ನೀರು ತುಂಬುತ್ತಿದಾರೆಂದು ಹಾಗು ಎಂಜಿನ್‌ ಬದಲಿಸುತ್ತಿದ್ದಾರೆಂದೂ ತಿಳಿಯಿತು.

ಸಂಜೆ 7:00 ಘಂಟೆಯಾದರೂ ಇನ್ನು ಕತ್ತಲಾಗಿರಲ್ಲ. ಮತ್ತೆ ಊರುಗಳ ಶ್ರೇಣಿ - ರಾವರ್‌, ಬುರ್‌ಹಾನ್‌ಪುರ್‌, ಇತ್ಯಾದಿ. ಸುಮಾರು 7:30 ಗೆ ಕತ್ತಲೆಯಾಯಿತು. ಮಹಾರಾಷ್ಟ್ರವನ್ನು ಬಿಟ್ಟು ಮಧ್ಯ ಪ್ರದೇಶ ಪ್ರವೇಶಿಸಿದೆವು. ಮಧ್ಯಾಹ್ನ ಏನನ್ನೂ ತಿಂದಿಲ್ಲವೆಂದು ಕೇಳಿ ನನ್ನ ಸಹಪ್ರಯಾಣಿಕರು ಕಣ್ಣು ಕಣ್ಣು ಬಿಟ್ಟರು. ರಾತ್ರಿ ಊಟವನ್ನೂ ಹಾರಿಸುವ ಯೋಚನೆಯಲ್ಲಿದೆ. ಖಾಣ್ಡ್‌ವಾ ಅನ್ನುವ ಊರಿನಲ್ಲಿ ಕೊಳ್ಳಲು ನೀರು (ಮಿನರಲ್‌ ವಾಟರ್‌) ಹುಡುಕಿಕೊಂಡು ಹೋದೆ. ನೀರು ಸಿಗದಿದ್ದರೂ ಮಧ್ಯ ಪ್ರದೇಶ್‌ ದುಗ್ಧ್‌ ಮಹಾಸಂಘ್‌ದ ಒಂದು ಅಂಗಡಿ ಸಿಕ್ಕಿತು. ‘ಠಂಡಾ ಮೀಠಾ ಸುಗಂಧಿತ್‌ ದುಗ್ಧ್‌’ ಅನ್ನುವ ಪೊಟ್ನದಲ್ಲಿದ್ದ ಹಾಲು ಅಲ್ಲಿತ್ತು. ನಮ್ಮ ನಂದಿನಿ ಹಾಲಿನ ತರಹ ಎಂದು ಪೊಟ್ನದಲ್ಲಿದ್ದರಿಂದ ಕ್ಷೇಮವೆಂದು ಎರಡು ಪೊಟ್ನ ಕುಡಿದೆ. ರೈಲಿಗೆ ಹಿಂತಿರುಗಿದ ಮೇಲೆ ನಮ್ಮ ಗುಂಪಿನ ಒಬ್ಬರು ( ಕೆ.ಇ.ಬಿ ಮಾಧವೇಶ್ವರ್‌, ಅವರ ಪತ್ನಿ ಹಾಗು ಅತ್ತೆ) ಎರಡು ಚಪಾತಿ ಕೊಟ್ಟರು. ಖುಷಿಯಾಗಿ ತಿಂದೆ. ನಂತರ ನೀರು ಕೊಳ್ಳಲು ರೈಲಿನ ಕ್ಯಾಂಟೀನ್‌ಗೆ ಹೋದೆ. ಅಲ್ಲಿ ರಾತ್ರಿಯ ಊಟ ತಿನ್ನದಿದ್ದದ್ದು ಪುಣ್ಯವೆಂದುಕೊಂಡು ಬಂದು ಮಲಗಿದೆ.

1 ಮೇ 1998

ಎರಡನೇ ದಿನ ಸ್ವಲ್ಪ ತಡವಾಗಿ ಎದ್ದೆ. ಹಿಂದಿನ ರಾತ್ರಿಗಿಂತ ಸುಖಕರವಾಗಿ ಕಳೆದಿತ್ತು ಅಂದು - ಮಧ್ಯರಾತ್ರಿ ಬರಿ 3-4 ಬಾರಿ ಎದ್ದಿದ್ದೆ. ಹಾಗೆ ಒಮ್ಮೆ ಎದ್ದಾಗ ಜೇಬು ನೋಡಿಕೊಂಡರೆ ನನ್ನ ಹಣದ ಸಂಚಿಯೇ ಇಲ್ಲ. ಬಲು ಉದ್ವೇಗವಾಯಿತು. ನನ್ನ ಹಣವೆಲ್ಲ ಅದರಲ್ಲಿತ್ತು. ಯಾರೋ ಹೊಡೆದಿರಬೇಕೆಂದುಕೊಂಡೆ. ಶಾಂತವಾಗಲು ನೀರು ಕುಡಿದು ಸುತ್ತ ಮುತ್ತ ನೋಡಿದೆ. ಕೆಳಗಿನ ಬರ್ತ್‌ ಮೇಲೆ ಬಿದ್ದಿತ್ತು. ಕೆಳಗಿಳಿದು ತೆಗೆದುಕೊಂಡು ಸದ್ಯ ಭಗವಂತ! ಎಂದು ಜೇಬಿಗೆ ಇಟ್ಟುಕೊಂಡು ಬಾಗಿಲ ಬಳಿ ಹೋಗಿ ನಿಂತೆ - ತಣ್ಣಗಾಗಲು. ಹೊತ್ತು ನೋಡಿಕೊಂಡರೆ ನನ್ನ ಕೈ ಗಡಿಯಾರವಿಲ್ಲ! ಹಿಂತಿರುಗಿ ನನ್ನ ಸ್ಥಳಕ್ಕೆ ಓಡಿದೆ. ಸದ್ಯ ಅದು ನನ್ನ ದಿಂಬಿನ ಕೆಳಗೆ ಬಿದ್ದಿತ್ತು. ತೆಗೆದುಕೊಂಡು ಎರಡನ್ನೂ ಜೋಪಾನ ಮಾಡಿ, ತಕ್ಷಣ ಬರ್ತ್‌ ಹತ್ತಿ ಮಲಗಿದೆ.

06:25ಕ್ಕೆ ಇನ್ನೂ ಮಧ್ಯ ಪ್ರದೇಶದಲ್ಲಿದ್ದೆವು. ನಿನ್ನೆಗಿಂತ ಹಸಿರಾದ ನೆಲ ಸುತ್ತಲು. ಅಲ್ಲಲ್ಲಿ ನೀರು ಸಹ ಕಾಣಿಸುತ್ತಿತ್ತು - ಈಗಷ್ಟೇ ಮಳೆ ಬಂದಂತೆ. ಸುತ್ತಲೂ ನೆಲ ಬಹಳ ಸಮವಾಗಿತ್ತು - ಮೈಲಿಗಟ್ಟಲೆ ತಗ್ಗಿಲ್ಲ ದಿಣ್ಣೆಯಿಲ್ಲ. ಚಪ್ಪಟ್ಟೆಯಾಗಿಯೇ ಕ್ಷಿತಿಜದಲ್ಲಿ ಕುಂದುತ್ತಿತ್ತು. ಸ್ವಲ್ಪ ಹೊತ್ತಿಗೆ ಒಂದು ಕ್ರಿಕೆಟ್‌ ಸ್ಟೇಡಿಯಂ ಇರುವ ಊರಿಗೆ ಬಂದೆವು. ಇದು ಗ್ವಾಲಿಯರ್‌ ಆಗಿತ್ತು. ಮರಾಠ ಪೇಶ್ವಾ ಸಿಂಧಿಯಾರ ಊರು. ನಿಲ್ದಾಣವೇನು ಅದ್ಭುತವಾಗಿ ಕಾಣಿಸಲಿಲ್ಲ. ಊರು ಬಿಟ್ಟ ನಂತರ ಒಂದೆರಡು ಇಟ್ಟಿಗೆ ಗೂಡುಗಳು ಕಂಡವು. ನಮ್ಮ ಕಡೆಯ ಇಟ್ಟಿಗೆ ಹೂಡುಗಳ ತರಹ ಇಲ್ಲದೆ, ಇವು ಕೋನಾಕಾರವಾಗಿದ್ದವು. ಸುತ್ತಲೂ ಬೆಂಕಿಗೆ ಒಲೆಗಳು.

ಸ್ವಲ್ಪ ಹೊತ್ತಿನಲ್ಲಿ ಒಂದು ಬೆಟ್ಟಗುಡ್ಡದ ಭೂಭಾಗವನ್ನು ಹಾಯ್ದು ಬಂದೆವು. ಬಹಳ ಆಳವಿಲ್ಲದಿದ್ದರೂ ಆ ಜಾಗವು ನನಗೆ ನಾನು ನೋಡಿದ್ದ ‘ಗ್ರ್ಯಾಂಡ್‌ ಕ್ಯಾನ್ಯನ್‌’ದ ಚಿತ್ರಗಳನ್ನು ನೆನಪಿಗೆ ತಂದಿತು. ಹರಿಯಪ್ಪ ಬಂದು ಇದು ಚಂಬಲ್‌ ಕಣಿವೆ ಎಂದು ಹೇಳಿದರು. ಡಕಾಯಿತೆ ಫೂಲನ್‌ ದೇವಿ ಆಳುತ್ತಿದ್ದ ಜಾಗ! ಡಕಾಯಿತರಿಗೆ ಹೇಳಿ ಮಾಡಿಸಿದಂತಹ ಪ್ರದೇಶವೆಂದುಕೊಂಡೆ. ಒಂದು ಕಾಲದಲ್ಲಿ ಈ ಕಣಿವೆಯು ಡಕಾಯಿತರಿಗೆ ಅವಿತುಕೊಳ್ಳುವ ಜಾಗವಾಗಿತ್ತು. ಅಂದಹಾಗೆ ಇಷ್ಟು ಹೊತ್ತಿಗೆ ಉತ್ತರ ಪ್ರದೇಶದಲ್ಲಿದ್ದೆವು.

08:15ಕ್ಕೆ ಆಗ್ರಾ ತಲುಪಿದೆವು. ರೈಲ್ವೆ ನಿಲ್ದಾಣವಂತೂ ಎಲ್ಲಿಲ್ಲದ ಗಲೀಜಿನ ಜಾಗ. ಇಲ್ಲಿನ ನೀರೂ ಸಹ ದುರ್ಗಂಧದಿಂದ ಕೂಡಿದಹಾಗಿತ್ತು. ಯಮುನೆ(ನದಿ) ಅಷ್ಟು ಮಲಿನಳೇ ಎಂದು ಯೋಚಿಸ ತೊಡಗಿದೆ. ಆಚೆ ಗಲೀಜು ಎಲ್ಲೆಡೆ ತುಂಬಿತ್ತು. ಇದೇ ಗಲೀಜಿನಲ್ಲಿ ಪೂರಿಗಳನ್ನು ಮಾರುತ್ತಿದ್ದರು. ಜನರು ಇದನ್ನು ತಿನ್ನುತ್ತಲೂ ಇದ್ದರು. ಕ್ಷಿಪ್ತ ಉಕ್ಕಿನ ಹೊಟ್ಟೆ ಇವರದು ಎಂದುಕೊಂಡೆ. ಬಿಸಿಲು ಹೆಚ್ಚಾದ ಹಾಗೆ ಶೆಕೆ ತಡೆಯಲಾಗುತ್ತಿರಲಿಲ್ಲ. ಪ್ರವಾಸ ಮುಂದುವರಿದಂತೆ ಇಲ್ಲಿಗೆ ಮತ್ತೆ ಬರುತ್ತೇವೆ ಎಂದುಕೊಳ್ಳುತ್ತಿದ್ದಂತೆ ರೈಲು ಹೊರಟಿತು. ನಮ್ಮ ಜೊತೆ ಇದೇ ರೈಲಿನಲ್ಲಿ ಬೆಂಗಳೂರಿನಿಂದ ಬಂದ ಬೇರೆ ಗುಂಪುಗಳು ಇಲ್ಲೇ ಇಳಿಯುವುದೆಂದು ತಿಳಿಯಿತು. ಅವರುಗಳು ಅವರ ಪ್ರವಾಸವನ್ನು ಆಗ್ರಾದಿಂದ ಶುರು ಮಾಡಲಿದ್ದರು.

ಹೊತ್ತು ಕಳೆದಂತೆ ಊರುಗಳು ಹೋಗುತ್ತಿದ್ದವು - ಮಥುರಾ, ಫರೀದಾಬಾದ್‌, ನಿಜಾಮುದ್ದೀನ್‌ ಮುಗಿದವು. ಮುಂದಿನ ನಿಲುಗಡೆ ದೆಹಲಿಯಾಗಿತ್ತು.


ಪೂರಕ ಓದಿಗೆ :ಕರ್ನಾಟಕದ ಕನ್ನಡಿ : ನೋಡು ಬಾ ನಮ್ಮೂರ


ಮುಖಪುಟ / ನೋಡು ಬಾ ನಮ್ಮೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X