ರಾಜಸ್ಥಾನದ ಗಡಿಯಲ್ಲಿ ಮೀರಿ ಮೆರೆದ ದೇಶಭಕ್ತಿ

***
ಆ ದಿನ ನಮ್ಮ ತಾತ ಮಹಾತ್ಮ ಗಾಂಧಿಯ ಜನ್ಮ ದಿನ. ನಾನಿದ್ದದ್ದು ರಾಜಾಸ್ಥನದ ಜೈಸಲ್‌ಮೇರ್‌ನಲ್ಲಿ. ವಿಶೇಷ ಇತ್ತು, ಕಾರಣ ನಾನಿದ್ದ ಜಾಗ ನಮ್ಮ ದೇಶದ ಅಂಚಿನಿಂದ just 200 ಕಿಲೋಮೀಟರ್‌ಗಳಷ್ಟೇ. ಬೆಳಗಿನಿಂದ ನನ್ನಲ್ಲಿ ದೇಶಭಕ್ತಿ ಮರುಭೂಮಿಯ ಓಯಸಿಸ್‌ನಂತೆ ಚಿಮ್ಮಿ ಚಿಮ್ಮಿ ಚಿಮ್ಮುತ್ತಿತ್ತು! ಕಾಲೇಜು ದಿನಗಳಲ್ಲಿ ಎನ್.ಸಿ.ಸಿ ಜಲಸೇನೆ ವಿಭಾಗದಲ್ಲಿದ್ದೆ. ಹಿಂದೂ ಮಹಾಸಾಗರವನ್ನು ಉದ್ದಗಲಕ್ಕೂ ಈಜಿ ವರಾಹವತಾರವೆತ್ತಿ ಭಾರತ ಮಾತೆಯನ್ನು ರಕ್ಷಿಸಿಕೊಂಡು ಬಂದ್ಹಾಗೆ ಕಂಡಿದ್ದ ಕನಸು ನೆನಪಾಗುತ್ತಲೇಯಿತ್ತು. ಪ್ರೀತಿ, ಪ್ರೇಮ, ಪ್ರಣಯ ಭಾವದಲ್ಲಿ ವ್ಯತ್ಯಯ ಕಂಡಿರುವ ನಾನು, ತಾಯ್ತನ-ಮಗಳುತನದಲ್ಲೂ ಏರು ಪೇರು ಅನುಭವಿಸಿದ್ದೇನೆ. ಗೆಳೆತನವೆನ್ನೋ ಭಾವದ ಬಗ್ಗೆ ಎಷ್ಟು ಕಡಿಮೆ ಹೇಳಿದರೂ ಅಷ್ಟು ಮರ್ಯಾದೆ ಉಳಿಯುತ್ತೆ! ದೇಶ ಭಕ್ತಿಯೊಂದೇ ಸ್ಥಾಯಿ ಭಾವ ಅಂದುಕೊಂಡು. . . . .
ಪಯಣಿಸಿದ್ದೆ ಗಡಿಯೆಡೆಗೆ. ಸುಮರು 170 ಕಿಲೋಮೀಟರ್‌ಗಳ ಹಾದಿಯಂತರದಲ್ಲಿ ದರ್ಶನ ಕೊಟ್ಟಳು ದುರ್ಗೆ ತನ್ನೋಟಿ ಮಾತ ಎನ್ನುವ ವೇಷ ಮತ್ತು ಹೆಸರಿನಲ್ಲಿ! ಹೀಗಿದ್ದಾಳೆ ನೋಡಿ ಆಕೆ. . . .ಫೋಟೊ-1
ಈಗ ಮತ್ತೊಮ್ಮೆ ಹರಿದು ಮತ್ತೆಷ್ಟೋ ಜನರ ಪುನರುಜ್ಜೀವನ ಮಾಡಲು ತಯಾರಿ ನಡೆಸುತ್ತಿರುವ ಸರಸ್ವತಿ ನದಿ ಈ ದೇವಸ್ಥಾನದ ಕೆಳಗೆ ಈಗಲೂ ಇದೆಯಂತೆ, ಭೂಮಿಗೆ ಕಿವಿಯೊತ್ತಿ ಆಲಿಸಿದರೆ ಝುಳು ಝುಳು ನಾದ ಕೇಳಿಸುತ್ತಂತೆ. ನಾನು ಪ್ರಯತ್ನ ಮಾಡಲಿಲ್ಲ, ಯಾಕೋ ಗೊತ್ತಿಲ್ಲ! 1965ರಲ್ಲಿ ಪಾಕಿಸ್ತಾನದೊಡನೆ ಯುದ್ಧವಾದನಂತರ ಆ ಜಾಗ ಮಿಲಿಟರಿ ಆಡಳಿತಕ್ಕೊಳಪಟ್ಟಿದೆ. ಹಬ್ಬ ಹರಿದಿನಗಳಲ್ಲಿ ಭಕ್ತರಿಗೆ ಪ್ರವೇಶವುಂಟು, ಇಲ್ಲಿಂದ ಮುಂದಕ್ಕೆ ಉಹೂಂ, ಬಿಲ್‌ಕುಲ್ ಸಾಮಾನ್ಯ ನಾಗರೀಕರ್‍ಯಾರೂ ಹೋಗುವ ಹಾಗೇ ಇಲ್ಲ! ಅಂದಹಾಗೆ, ಆ ಯುದ್ಧದಲ್ಲಿ ಶತ್ರು ಸೇನೆ ಹಾಕಿದ್ದ ಒಂದಷ್ಟು ತೋಪುಗಳು ದೇವಸ್ಥಾನದಾವರಣದಲ್ಲಿ ಸ್ಫೋಟಗೊಳ್ಳದೆ ಹಾಗೇ ಉಳಿದುಬಿಟ್ಟವಂತೆ. ಅವುಗಳಿಗೆ ಅಂದವಾಗಿ ಬಣ್ಣಹಾಕಿ ಗಾಜಿನ ಪೆಟ್ಟಿಯಲ್ಲಿ ಇಡಲಾಗಿದೆ ಹೀಗೆ. . . . .ಫೋಟೊ-2
ಒಂದಷ್ಟು ಘಳಿಗೆ ಅದನ್ನೇ ನೋಡುತ್ತಾ ವೀರಾವೇಷ ತುಂಬಿಕೊಂಡಿದ್ದೆ ಅನ್ನಿಸುತ್ತೆ. ಅದಕ್ಕೇ ಇರಬೇಕು ಈ ಜಾಗವನ್ನು ಸೈನಿಕರ ತೀರ್ಥ ಸ್ಥಳ ಅಂತ ಗುರ್ತಿಸಿರುವುದು. ಯಾವಾಗ ಬಾರ್ಡರ್ ಕಂಡೆನೋ ಅಂತ ತುಡಿಯುತ್ತಿದ್ದವಳಿಗೆ ನಹೀ ನಹೀ ನಹೀ, ಕೋಯೀ ಭೀ ಉಧರ್ ನಹೀ ಜಾಸಕ್ತಾ ಎನ್ನುವ ಹುಕುಂ ವಿಪರೀತ ನಿರಾಸೆ ತಂದಿತು. ಏನಿದು ಅನ್ಯಾಯ ಭಾರತ ಮಾತೆಯ ಸ್ವಂತ ಮಗಳಾಗಿ, ಭಾರತೀಯತೆಯ ಕಟ್ಟಾಭಿಮಾನಿಯಾದ ನನಗೇ ಅವಳ ಗಡಿಯನ್ನು ನೋಡಲು ಅವಕಾಶವಿಲ್ಲವೇ ಅಂತ ಮನದಲ್ಲೇ ಹಲುಬುತ್ತಿದ್ದೆ. ಯಾವ ಜನ್ಮದ ಸುಕೃತ ಒದಗಿಬಂತೋ ಕರ್ನಲ್ ಸರಸ್ವತ್, ನನ್ನ ಪತಿರಾಯರ ಕೋರಿಕೆಗೆ ಅಥವಾ ವಿಸಿಟಿಂಗ್ ಕಾರ್ಡ್‌ಗೆ ಮನ್ನಣೆಯಿತ್ತರು. ಸೈನಿಕ ಆಶುತೋಷ್‌ನನ್ನು ನಮಗೆ ಗಡಿತೋರಿಸಲು ನಿಯೋಜಿಸಿಬಿಟ್ಟರು. ಇನ್ನು 30 ಕಿಲೋಮೀಟರ್‌ಗಳ ಪ್ರಯಾಣ .ಫೋಟೊ-3
ಆ ಸೈನಿಕ ತಾನು ಮಿಲಿಟರಿ ಸೇರಿದ್ದು, ಸಂಸಾರ, ಭಾರತದ ತಾಕತ್ತು, ಪಾಕಿಸ್ತಾನಿಯರ ಬೆನ್ನು ಹಿಂದಿನ ಮಸಲತ್ತು ಹೀಗೇ ಮತ್ತೂ ಏನೇನೋ ಹೇಳುತ್ತಾ, ಅನುಮಾನ ಬರಿಸುವಷ್ಟಿದ್ದ ನನ್ನ ಕುತೂಹಲಕ್ಕೆ ಉತ್ತರಿಸುತ್ತಿದ್ದ. ನಾವು ಹೋಗುತ್ತಿದ್ದ ಗಡಿಗೆ ರಾಮ್ ಘರ್ ಕ್ಷೇತ್ರ ಪೋಸ್ಟ್ 609 ಎನ್ನುತ್ತಾರೆಂಬ ವಿಷಯ ಕಿವಿಗೆ ಬೀಳುತ್ತಿತ್ತು. ಫೋಟೊ-4
ಈ ಮರಳು ದಿಬ್ಬದೆಡೆಗಿತ್ತು. ಆಹ್, ಸಿಕ್ಕೇ ಬಿಟ್ಟಿತು ಅಲ್ಲಿ.. . .ಅಲ್ಲಿ. . .ಗಡಿ!
ಮತ್ತಿಬ್ಬರು ಸೈನಿಕರು ಜೊತೆಗೂಡಿದರು. ನಾನು excitementನಿಂದ ಕೂಗಿದೆ, ಕಿರುಚಿದೆ. ಅವರುಗಳು ಅಷ್ಟೇ ಉತ್ಸುಕತೆಯಿಂದ ನನ್ನನ್ನೋಡಿ ಮುಗುಳ್ನಗುತ್ತಿದ್ದರು. ನನ್ನೊಳಗೆ ಭಗತ್‌ಸಿಂಗ್ ಆವಾಹಿಸಿಕೊಂಡಿದ್ದ. ಮೈಮೇಲಿದ್ದ ದುಪ್ಪಟ್ಟವನ್ನು ಕಿತ್ತೊಗೆದು 20 ಅಡಿಗಳಷ್ಟು ಎತ್ತರವಿದ್ದ ಅಟ್ಟಣಿಗೆಯ ಮೇಲೆ ಸರಸರನೆ ಹತ್ತಿ ಗಜಗಾತ್ರದ ಬೈನಾಕ್ಯುಲರ್‍ನಲ್ಲಿ ಪಾಕಿಸ್ತಾನವನ್ನು ನೋಡಿಯೇ ಬಿಟ್ಟೆ! ಆದ್ಯಾವ ಶಕ್ತಿ ಹೊಕ್ಕಿತ್ತೋ, ದೈತ್ಯಾಕಾರದ ದೇಹದಿಂದ ಭಯಾನಕವಾದ ಧ್ವನಿ ಹೊರಡಿಸುತ್ತಿದ್ದ ಒಂಟೆಯ ಡುಬ್ಬವನ್ನು ಯಾರ ಸಹಾಯವೂ ಪಡೆಯದೆ ನಿಮಿಷಮಾತ್ರದಲ್ಲಿ ಹತ್ತಿಬಿಟ್ಟೆ ಹೀಗೆ. . . . .ಫೋಟೊ-5
ಗಡಿಯನ್ನು ಮುಳ್ಳು ಬೇಲಿ ಆವರಿಸಿಕೊಂಡಿದೆ, ಆ ಕಡೆಯೂ ಹಾಗೆ. ಅವೆರಡರ ಮಧ್ಯದ್ದು 'No man"s Land'. ಸದೊಂಭತ್ತು ಕಾಲವೂ ಪಾಳಿಯಲ್ಲಿ ಇಬ್ಬರು ವೀರರು ಒಂಟೆಯ ಮೇಲೆ ಕುಳಿತು ಗಸ್ತು ತಿರುಗುತ್ತಾರೆ. ಆ ಒಂಟೆಯಮೇಲೆಯೇ ನಾನು ಸವಾರಿ ಮಾಡಿದ್ದು. ಬೇಲಿಯಿಂದೀಚೆಗೆ ಮೂರಡಿಗಳಷ್ಟು ಅಂತರದಲ್ಲಿ ಯಾರ ಹೆಜ್ಜೆ ಗುರುತು ಮೂಡಬಾರದು ಅದು ಕಾನೂನು. .ಫೋಟೊ-6
ನಾನು ಏರಿದೆ, ಇಳಿದೆ, ಅತ್ತೆ, ನಕ್ಕು ಕೂಗಿದೆ, ಕುಳಿತೆ, ಬರಿಗಾಲಲ್ಲಿ ಮರಳ ಮೇಲೆ ನಿಂತೆ, ಹೊರಳಿದೆ, ಮುತ್ತಿಟ್ಟೆ. ಯಾವುದೋ ಅಭೂತಪೂರ್ವ ಆನಂದಾನುಭವ ಪಡೆದಿದ್ದೆ. ಹೊರಡುವ ವೇಳೆ ಬರಲೇ ಬೇಕಲ್ಲ್ವೇ? ಬಂತು. . . ಒಲ್ಲದ ಮನಸ್ಸಿನಿಂದ ಅಲ್ಲಿಂದ್ಹೊರಡುವಾಗ ಮಹಾರಾಣಿಯಂತೆ ವೀರರಸದಲ್ಲಿ ತೋಯ್ದಿದ್ದ ನನಗೆ ಮೈಮೇಲಿದ್ದ ಒಡವೆಗಳನ್ನು ಆ ಸೈನಿಕರಿಗೆ ಕೊಟ್ಟುಬಿಡಬೇಕೆನ್ನಿಸಿತು, ಆದರೆ ಹಿಂದೆಯೇ, ಸೈನಿಕರಿಗೆ ಭೂಮಿಯ ಮೇಲೆ ಇರುವಂತೆ ಸಂಪೂರ್ಣ ಹಕ್ಕು ನನಗೆ ಒಡವೆಯ ಮೇಲಿಲ್ಲ ಅನ್ನಿಸಿ ಸುಮ್ಮನಾದೆ! ಕೊನೆಯ ಫೋಟೋ ಕ್ಲಿಕ್ಕಿಸುವುದನ್ನು ಮರೆಯಲಿಲ್ಲ. . . . . .ಫೋಟೊ-7 ಹೂಂ, ಜೇಬಿನಲ್ಲಿದ್ದ ಪ್ಲಾಸ್ಟಿಕ್ ಚೀಲದೊಳಗೆ ಒಂದಷ್ಟು ಮರಳು ತುಂಬಿಕೊಳ್ಳುವುದು ಮರೆಯಲಿಲ್ಲ!
ರಸ್ತೆಯುದ್ದಕ್ಕೂ ಸಂಸಾರದೊಂದಿಗೆ ಆದರ್ಶದ ಮಾತಾಡಿದ್ದೇ ಆಡಿದ್ದು. ನನ್ನಂತಹ ಯಕಃಶ್ಚಿತ್ ಹೆಣ್ಣಿಗೇ ಇಷ್ಟೊಂದು ಶಕ್ತಿ ದೇಶ ಭಕ್ತಿ ಬಂದಿರ್‍ಬೇಕಾದ್ರೆ ನಿತ್ಯವೂ ತರಬೇತಿ ಪಡೆದ ಮಹಿಳಾ ಸೈನಿಕರಿಗಿನ್ನೆಷ್ಟು ಪೌರುಷ ಉಕ್ಕಬೇಕು! ಯಾವುದೇ ಕಾರಣಕ್ಕೂ ಹೆಣ್ಣು ಇಂತಹದ್ದೇ ಪಾತ್ರ ನಿರ್ವಹಿಸಬೇಕು ಎನ್ನುವ ಚೌಕಟ್ಟು ಹಾಕಬಾರದು ತಾನೆ? ನಾವು ತಂಗಿದ್ದ ತಾಣಕ್ಕೆ ಬಂದಮೇಲೆ ಇಂಟರ್‌ನೆಟ್ ಮೂಲಕ ತಿಳಿಯಿತು ಮಹಿಳಾ ಸೈನಿಕರಿಗೂ ಇನ್ನು ಮುಂದೆ ಮೇಲಿನಧಿಕಾರಿಯಾಗಿ ಬಡ್ತಿ ಪಡೆಯುವ ಅವಕಾಶ ಕಾನೂನು ಒದಗಿಸಿದೆ ಅಂತ. ನನ್ನ ದೇಶ ಭಕ್ತಿಗೆ, ಸಮಾನತೆಯ ಭಾವಕ್ಕೆ ಗರಿ ಮೂಡಿದಂತಾಗಿತ್ತು.
ಕೋಟೆ ಕೊತ್ತಲಗಳನ್ನು ಸುತ್ತಿ, ಬಣ್ಣ ಬಣ್ಣದ ಬಟ್ಟೆ ಮತ್ತಿತರೆಗಳ ಶಾಪ್ಪಿಂಗ್ ಮುಗಿಸಿ ನನ್ನೂರು ಬೆಂಗಳೂರಿಗೆ ಸುಖವಾಗಿ ಹಿಂದಿರುಗಿದೆ. ದೇಶ ಮತ್ತು ಭಕ್ತಿಯ ಕಡೆ ಗಮನ ಹರಿಸಲು ಪುರುಸೊತ್ತಿಲ್ಲದಾಗಿತ್ತು. ಮನೆ ಕ್ಲೀನಿಂಗ್, ಮಕ್ಕಳ ಪಾಠ ಪ್ರವಚನ, ವೃತ್ತಿ-ಪ್ರವೃತ್ತಿಗಳಲ್ಲಿ ಮುಳುಗಿಹೋದೆ. ನಡುವೆ ಒಂದು ದಿನ ಎಲ್ಲರೂ ಅವರವರ ಕೆಲಸಕ್ಕೆ ಹೊರಟ ಮೇಲೆ ಟೀವಿ ನೋಡುತ್ತಿರುವಾಗ ಯಾವುದೋ ಗಲಾಟೆಗಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದುಬಿಟ್ಟರು. ನನ್ನೆದೆ ಒಡೆದೇ ಹೋಯಿತು. ಮಕ್ಕಳನ್ನು ಮನೆ ಸೇರಿಸಪ್ಪ ಪರಮಾತ್ಮ ಅಂತ ದೇವರ ಮನೆಯಲ್ಲಿ ಹೋ ಅಂತ ಅಳುತ್ತಾ ಕೂತ್ಬಿಟ್ಟೆ. ಆಗ ನನಗೆ ತಮ್ಮ ಮಕ್ಕಳಿಂದ ದೂರ ಬಲು ದೂರ ಮುಳ್ಳುತಂತಿಯ ಬೇಲಿಗೆ ಆತುಕೊಂಡು ನನ್ನ ಮಕ್ಕಳನ್ನು ಕಾಯುತ್ತಿರುವ ಸೈನಿಕರ ನೆನಪಾಗಲಿಲ್ಲ! ಮಾರನೆಯ ದಿನ ರಾತ್ರಿಯೆಲ್ಲ ಧೋ ಎಂದು ಸುರಿಯುತ್ತಿದ್ದ ಮಳೆ ಅದರ ಜೊತೆಗೆ ಟ್ರಾಫಿಕ್ ಜ್ಯಾಂ, ನನ್ನ ಮಕ್ಕಳ ಅಪ್ಪ ಇನ್ನೂ ಮನೆ ಸೇರಿರಲಿಲ್ಲ, ನನಗಾಗ ಸೈನಿಕನ ಹೆಂಡತಿಯ ನೆನಪಾಗಲಿಲ್ಲ! ಚಂದ್ರಯಾನದ ಯಶಸ್ಸಿನ ಬಗ್ಗೆ ಪತ್ರಿಕೆಗಳೆಲ್ಲಾ ಹಾಡಿ ಹೊಗಳುತ್ತಿರುವಾಗ ನನಗೆ ನನ್ನ ದೇಶದ ಬಗ್ಗೆ ಅಗಾಧವಾದ ಹೆಮ್ಮೆ ಎನ್ನಿಸಲಿಲ್ಲ. ಆರ್ಥಿಕ ಆಘಾತದಿಂದ ಹೊರ ದೇಶದಲ್ಲಿ ಕೆಲಸದೊಂದಿಗೆ ಪ್ರಾಣವನ್ನೂ ಕಳೆದುಕೊಳ್ಳುತ್ತಿರುವ ಭಾರತೀಯರ ಬಗ್ಗೆ ನನಗೆ ಹೇಳಿಕೊಳ್ಳುವಂತಹ ಕನಿಕರ ಹುಟ್ಟಲಿಲ್ಲ, ನಿಜ ಹೇಳಬೇಕೆಂದರೆ ಸದ್ಯ ನನ್ನ investmentಗೆ ತೊಂದರೆಯಾಗದಿದ್ದರೆ ಸಾಕು ಅನ್ನಿಸಿತು. ಇನ್ನೊಂದು ವಿಷಯ ಅಂದ್ರೆ, ಆ ಬೈನಾಕ್ಯುಲರನ್ನು ಹಿಡಿದು ಸರಿಪಡಿಸಿಕೊಂಡು ಅಲ್ಲಿನ ಸಮಸ್ತ ದೃಶ್ಯವನ್ನು ನೋಡಲು ನನ್ನ ಕತ್ತು, ಭುಜ ಬಳಸಿ ಹೇಳಿಕೊಟ್ಟಿದ್ದ ಸೈನಿಕನ ಒರಟು ಸ್ಪರ್ಶ ನೆನಪಾದೊಡನೆ ವಾಕರಿಕೆ ಬರುತ್ತಿದೆ. ಆ ಘಳಿಗೆಯಲ್ಲಿ ನಾನು ಹೆಣ್ಣು, ಆತ ಗಂಡು ಎನ್ನುವುದು ಗೊತ್ತೇ ಆಗಿರಲಿಲ್ಲವಲ್ಲ?! ಹೀಗೇ ಪೋಸ್ಟ್ 609ರಲ್ಲಿದ್ದ ದೇಶಭಕ್ತಿಯ ರಭಸ ನನ್ನಲ್ಲಿ ಆಮೇಲಿನ ದಿನಗಳಲ್ಲಿ ಉಂಟಾಗಲೇ ಇಲ್ಲ! ದೇಶಭಕ್ತಿಯೂ ಮತ್ತಿತರ ಭಾವ-ಭಾವನೆಗಳಂತೆ ಹಾರ್ಮೋನುಗಳ ಆಟವೇನೋ ಅನ್ನಿಸುತ್ತಿದೆ. ಅದೇನೇ ಇದ್ದರೂ ಗಡಿ ನೋಡಿದ್ದು, ಮುಟ್ಟಿ ಬಂದದ್ದು ಒಂದು ಅಪರೂಪದ ಅನುಭವವೇ ಸರಿ. ಹಾಂ, ಅಲ್ಲಿಂದ ಮರಳು ತಂದೆನಲ್ಲಾ ಅದನ್ನು ಒಂದು ಗಾಜಿನ ಕುಪ್ಪಿಯಲ್ಲಿ ಹಾಕಿ ಬಂದವರಿಗೆ ಕಾಣುವಂತೆ ಇಟ್ಟು ಮನೆಯ ಶೋಭೆ ಹೆಚ್ಚಿಸಿದ್ದೇನೆ. . . .ಆಹಾ, ನನ್ನ ದೇಶ ಭಕ್ತಿಯೇ!












Click it and Unblock the Notifications