ಕಾವೇರಿ ತವರಲ್ಲಿ ಸೌಂದರ್ಯ ಶಿಕಾರಿ! ಪ್ರಯಾಣಕ್ಕೆ ಅಣಿಯಾಗಿ


ಕೊಡಗಿನ ಪ್ರವಾಸ ಬರಿಯ ಸೌಂದರ್ಯ ಶಿಕಾರಿಯಲ್ಲ, ತೀರ್ಥಯಾತ್ರೆಯೂ ಹೌದು. ಕಾವೇರಿ ಇದ್ದಲ್ಲಿ ಸೊಂಪಿಗೆ, ಸಮೃದ್ಧಿಗೇನು ಕೊರೆ? ಬರುತ್ತೀರಾ, ಮಡಿಕೇರಿಗೆ ಹೋಗೋಣ.

Madikeri : Cauvery comfort zoneಕೆಲವು ಊರುಗಳ ಜಾಯಮಾನವೇ ಹೀಗೆ ; ಋತುಮಾನದೊಂದಿಗೆ ಬೆಸೆದುಕೊಂಡ ಅವುಗಳಿಗೆ ಆ ನಂಟಿನ ಚೌಕಟ್ಟಿನಿಂದ ಹೊರಬರಲು ಸಾಧ್ಯವಾಗುವುದೇ ಇಲ್ಲ. ಬೇಸಗೆ ಬಂತೆಂದರೆ ಪ್ರವಾಸಿಗರ ಸಂದಣಿಯಿಂದ ಗಿಜಿಗುಡುವ ಗಿರಿಧಾಮಗಳು, ಮಳೆಗಾಲ ಮೊಗ ತೋರಿಸುತ್ತಿದ್ದಂತೆ ಮೋಡದ ಮರೆಯ ಚಂದ್ರಮನಂತೆ ಮಂಕಾಗುತ್ತವೆ. ಮಳೆ- ಚಳಿಗಾಲಕ್ಕೆ ಸೊಗಸೆನ್ನಿಸುವ ಊರುಗಳು ಬೇಸಗೆಗೆ ಬೇಡಪ್ಪಾ ಬೇಡ!

ಋತು ಸಂಬಂಧದ ಅಪವಾದಕ್ಕೆ ಹೊರತಾದ ಊರು ಯಾವುದಾದರೂ ಇದ್ದೀತಾ,- ಕರ್ನಾಟಕದಲ್ಲಿ? ಇಂಥದೊಂದು ಪ್ರಶ್ನೆಗೆ ಮುಖಾಮುಖಿಯಾಗಿ ಹೊರಟಾಗ ಎದುರಾಗುವುದು ಕೊಡಗು! ಕಾಫಿಯ ಘಮ, ತನ್ನದೇ ವಿಶಿಷ್ಟ ಭಾಷೆ- ಸಂಸ್ಕೃತಿಯಾಂದಿಗೆ ಕರ್ನಾಟಕದಲ್ಲಿದ್ದೂ ಅನನ್ಯತೆ ಉಳಿಸಿಕೊಂಡ ಪ್ರದೇಶ ಕೊಡವರ ಕೊಡಗು.

ಅನೇಕರ ಪಾಲಿಗೆ ಕೊಡಗು ನೆನಪಾಗುವುದೇ ಭಗಭಗ ಎನ್ನುವ ಬೇಸಿಗೆಯಲ್ಲಿ . ಬಂತಲ್ಲ ಬೇಸಿಗೆ. ಹಾದಿಯುದ್ದಕ್ಕೂ ಮಡಿಕೆ ಮಡಿಕೆಯಾಗಿ ಬಿಚ್ಚಿಕೊಳ್ಳುವ ಕೊಡಗಿನ ಸೌಂದರ್ಯ ಬೇಸಗೆಯಲ್ಲಿ ಕಣ್ಣಿಗೆ ಅಪ್ಯಾಯಮಾನವಾಗಿ ಕಾಣುತ್ತದೆ. ದಟ್ಟ ಕಾಡು, ಬೆಂಕಿ ಹೊತ್ತಿ ಉರಿಯುವಂತೆ ಕಾಣುವ ಹೂಗಳನ್ನು ಮುಡಿದು ನಿಂತ ಮರ ಬಳ್ಳಿ. ಬೆಟ್ಟದ ಗರ್ಭದಿಂದ ತೇಲಿಬರುವ ಗಂಧವತಿ ಗಾಳಿ. ದೇಹದೊಳಗಣ ಕಣಕಣಕ್ಕೂ ಅಡರುವ ತಂಪು. ಒಂದೆಡೆ ಕಣ್ಣು ಹಾಯಿಸಿದಷ್ಟೂ ಉದ್ದನೆಯ ಭತ್ತದ ಬಯಲು, ಇನ್ನೊಂದೆಡೆ ಕಾಫಿಯ ತೋಟ- ಈ ಪರಿಯ ಕೊಡಗು ಬೇಸಿಗೆಗೆ ಹೇಳಿ ಮಾಡಿಸಿದ ಜಾಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇಹದ ಕಣಕಣದ ಸಾರ ಸತ್ವವೂ ಬಸಿದುಹೋಗಿದೆ ಅನ್ನಿಸಿದರೆ- ವಾರದ ಮಟ್ಟಿಗೆ ಕೊಡಗಿಗೆ ಹೋಗಿ ; ವಾಪಸ್ಸಾಗುವಷ್ಟರಲ್ಲಿ ಮದಲಿಂಗ/ಮದುವಣಗಿತ್ತಿಯ ಹುರುಪು ಹೊಳಪು ನಿಮ್ಮೊಳಗೆ ಪುಟಿಯುವುದನ್ನು ನೋಡಿ ನೀವೇ ಅಚ್ಚರಿಯಿಂದ ಬೆಚ್ಚಿಬೀಳಬೇಕು!

ಇದು ಕೊಡಗಿನ ಬೇಸಗೆಯ ಮುಖ. ಕೊಡಗಿಗೆ ಇನ್ನೊಂದು ಮುಖವೂ ಇದೆ- ಅದು ಮಳೆಯ ಮುಖ. ಕೊಡಗಿನ ವಿಶೇಷವೇ ಅದು ; ಬೇಸಗೆ- ಮಳೆ, ಎರಡೂ ಋತುಗಳಲ್ಲೂ ಮನ ಸೆಳೆವ ಮೋಹಕತೆ ಕೊಡಗಿನದು. ಮಳೆಗಾಲದಲ್ಲಿ ಕೊಡಗಿನ ಬಣ್ಣವೇ ಬೇರೆ. ವರುಣ ಕೃಪೆಯಿಂದ ಕಡು ಹಸಿರು ಹಾಳೆ ಹೊದ್ದ ಪಶ್ಚಿಮಘಟ್ಟದ ಸೀಮಂತಿನಿಯ ಮುಖಮುದ್ರೆ, ಭಾವಭಂಗಿಯನ್ನು ನೋಡಿಯೇ ಸವಿಯಬೇಕು. ತೊರೆಗಳೆಲ್ಲ ಭೋರ್ಗರೆತದ ಸಂಗೀತ ತಾರಕಕ್ಕೇರುವುದು ಆಗಲೇ. ಆದರೆ, ಮಳೆಗಾಲದ ಕೊಡಗಿನ ದರ್ಶನ ಸಾಹಸಿಗಳಿಗೆ ಮಾತ್ರ ಮೀಸಲು.

ಅವರಸಕ್ಕೆ ದಕ್ಕುವಂಥದ್ದಲ್ಲ ಕೊಡಗಿನ ಸೊಬಗು. ಕೊಡಗಿನ ಸಿರಿಯ ನಡೆದೇ ನೋಡಬೇಕು. ಪುರಾಣದ ಪಾವಿತ್ರ್ಯದ ಪ್ರದೇಶಗಳು, ಇತಿಹಾಸ ಪ್ರಸಿದ್ಧ ಸ್ಥಳಗಳು ಕೊಡಗಿನಲ್ಲಿ ಸಾಕಷ್ಟಿವೆ. ಚಾರಣಪ್ರಿಯರ ಪಾಲಿಗಂತೂ ದುರ್ಗಮ ಬೆಟ್ಟ, ಕಡಿದಾದ ಕಣಿವೆ ಒಳಗೊಂಡ ಕೊಡಗು ಹಿಮವಿಲ್ಲದ ಹಿಮಾಲಯ!

ಕನ್ನಡಿಗರಿಗೆ ಕೊಡಗೆಂದರೆ ಇಷ್ಟವಾಗಲಿಕ್ಕೆ ಇನ್ನೊಂದು ಕಾರಣ- ಕಾವೇರಿ. ಕನ್ನಡ ಸಂಸ್ಕೃತಿಯ ಒಂದಂಗವೇ ಆಗಿರುವ ಕಾವೇರಿಯ ತವರು ‘ತಲ ಕಾವೇರಿ’ ಇರುವುದು ಕೊಡಗಿನಲ್ಲೇ. ಬ್ರಹ್ಮಗಿರಿ ಬೆಟ್ಟದ ತಪ್ಪಲಲ್ಲಿರುವ ತಲ ಕಾವೇರಿಯಲ್ಲಿ ಪ್ರತಿವರ್ಷದ ಅಕ್ಟೋಬರ್‌ನಲ್ಲಿ ಜಾತ್ರೆ. ತುಲಾ ಸಂಕ್ರಮಣದಂದು ಸಾವಿರ ಭಕ್ತರ ಹಾಜರಿಯಲ್ಲಿ ‘ಅಮ್ಮಾ ಕಾವೇರಿ’ಗೆ ವಿಶೇಷ ಪೂಜೆ. ತಿಂಗಳ ಕಾಲ ನಡೆಯುವ ‘ಕಾವೇರಿ ಜಾತ್ರೆ’ ಯಾತ್ರಾರ್ಥಿಗಳ ಪಾಲಿನ ಕಾಶೀಯಾತ್ರೆ!

ಬ್ರಿಟೀಷರು ಮನ ಸೋತದ್ದು ಕೊಡಗಿನ ಇದೇ ತಂಪಿಗೆ, ಹಸಿರ ಸೊಂಪಿಗೆ. ಹೆಚ್ಚೂ ಕಡಿಮೆ ಶತಮಾನದಷ್ಟು ದೀರ್ಘ ಕಾಲ ಬ್ರಿಟೀಷರು ಕೊಡಗಿನಲ್ಲಿದ್ದರು. ಕೊಡಗನ್ನು ‘ಪೂರ್ವದ ಸ್ಕಾಟ್‌ಲ್ಯಾಂಡ್‌’ ಎಂದು ಕರೆದದ್ದು ಬ್ರಿಟೀಷರೇ. ಕೊಡಗಿನಲ್ಲಿ ಎದ್ದು ನಿಂತಿರುವ ಕಾಫಿ ಎಸ್ಟೇಟ್‌ಗಳ ಹಿಂದೆಯೂ ಬ್ರಿಟೀಷರ ಕೈವಾಡವಿದೆ. ಇವತ್ತು ಕಾಫಿ ಕೃಷಿಯಲ್ಲಿ ಕೊಡಗು ಭಾರತದಲ್ಲೇ ಮೊದಲು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+