• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಣ ಬನ್ನಿ ಕಣ್ಮನ ತಣಿಸುವ ಕಾಕೋಳು ಕ್ಷೇತ್ರವ

By Prasad
|
ಶ್ರೀಪಾದರಾಜರು ಪ್ರತಿಷ್ಠಾಪಿಸಿದ ಕಾಕೋಳು ಶ್ರೀ ವೇಣುಗೋಪಾಲಕೃಷ್ಣ ದೇವರ ಬ್ರಹ್ಮರಥೋತ್ಸವ ಮಾರ್ಚ್ 18ರಿಂದ ಮಾರ್ಚ್ 21ರವರೆಗೆ ಪುಣ್ಯಕ್ಷೇತ್ರ ಕಾಕೋಳಿನಲ್ಲಿ ಜರುಗಲಿದೆ. ಉತ್ಸವದಲ್ಲಿ ನಡೆಯುವ ಅಂಕುರಾರ್ಪಣೆ ಮತ್ತು ಧ್ವಜಾರೋಹಣವನ್ನು ವೀಕ್ಷಿಸುವ ಸಂತಾನಾಪೇಕ್ಷಿಗಳಿಗೆ ಉತ್ಕೃಷ್ಟ ಸಂತಾನ ಲಭಿಸುವುದೆಂಬ ನಂಬುಗೆ ಇಂದಿಗೂ ಇದೆ. ಸಾಂದರ್ಭಿಕವಾಗಿ ದೇವಾಲಯದ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

* ಗುರುರಾಜ ಪೋಶೆಟ್ಟಿಹಳ್ಳಿ

ಬೆಂಗಳೂರಿನಿಂದ 30 ಕಿ.ಮೀ. ದೂರದ ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಧಾರ್ಮಿಕ ಸೊಗಡಿನ ಐತಿಹಾಸಿಕ ನೆಲೆಯ ಕಾಕೋಳಿನಲ್ಲಿ ಮೈದಳೆದಿರುವ ಅಪರೂಪದ ಶ್ರೀ ವೇಣುಗೋಪಾಲ ಕೃಷ್ಣ ದೇವಾಲಯ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇದೊಂದು ಪೌರಾಣಿಕ ಹಿನ್ನೆಲೆಯಿರುವ ಜಾಗೃತ ಸನ್ನಿಧಾನ. ಆಧುನಿಕತೆಯಲ್ಲೇ ಮಿಂಚಿದ್ದರೂ, ಗ್ರಾಮೀಣ ಸಂಸ್ಕೃತಿಯಿಂದ ಬೇರ್ಪಟ್ಟಿಲ್ಲ.

ಗ್ರಾಮದ ಮಧ್ಯಭಾಗದಲ್ಲಿರುವ ಬೃಂದಾವನಾಂರ್ಗತ ಚತುರ್ಭುಜ ವೇಣುಗೋಪಾಕೃಷ್ಣ ಇಲ್ಲಿನ ಪ್ರಮುಖ ಆಕರ್ಷಣೆ. ಕಾಕೋಳು ಪ್ರದೇಶವು ಪ್ರಾಚೀನ ಕಾಲದಲ್ಲಿ ಕುಕ್ಕರೆ ನಾಡು ಅಥವಾ ಕುಕ್ಕನೂರು ನಾಡಿಗೆ ಸೇರಿತ್ತೆಂದು ಕ್ರಿ.ಶ. 1033ರ ಅಯಿಗಂಡಪುರ (ಐವರು ಕಂಡಪುರ) ಶಾಸನದಿಂದ ತಿಳಿದುಬರುತ್ತದೆ. ಅಯಿಗಂಡಪುರದಲ್ಲಿ ಪಾಂಡವರ ಗುಡಿಗಳೆಂಬ ಐದು ಈಶ್ವರನ ಗುಡಿಗಳಿವೆ. ರಾಮಾಯಣದ ಕಾಕಾಸುರನು (ಇಂದ್ರನ ಮಗ ಜಯಂತ) ಶಾಪ ವಿಮೋಚನೆಗಾಗಿ ಸ್ನಾನ ಮಾಡಿದ ಕೊಳ ಇರುವ ಊರೇ ಕಾಕೋಳು ಎಂಬುದು ಸ್ಥಳ ಪುರಾಣ. ಅಲ್ಲಿಗೆ ಈ ಭಾಗ ರಾಮಾಯಣ ಮಹಾಭಾರತಗಳ ಸಂಬಂಧವನ್ನು ಹೊಂದಿದೆ.

ವೇಣುಗೋಪಾಲಕೃಷ್ಣನನ್ನು ಶ್ರೀ ಶ್ರೀಪಾದರಾಜರು ಅರ್ಕಾವತಿ ನದಿತೀರದ ಪಶ್ಚಿಮ ದಂಡೆಯಲ್ಲಿನ ಚಿಕ್ಕದಾಪುರ ಎಂಬಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಅರ್ಕಾವತಿ ನದಿಗೆ ಅಣೆಕಟ್ಟು ಕಟ್ಟಿ, ಕೆರೆ ನಿರ್ಮಾಣ ಮಾಡಿದ್ದರಿಂದ ದಂಡೆಯ ಎಡಬಲ ಭಾಗಗಳಲ್ಲಿನ ಊರುಗಳು ಮುಳುಗಡೆ ಆಗಿ ಜನ ಬೇರೆಡೆಗೆ ಹೋಗಿ ನೆಲೆಸಿದರು. ವೇಣುಗೋಪಾಲ ಕೃಷ್ಣ ಮಾತ್ರ ನೀರಿನಲ್ಲಿ ಮುಳುಗಿ ಅಗೋಚರನಾದ.

ದೈವಪ್ರೇರಣೆಯಂತೆ ಕಾಕೋಳು ಶ್ಯಾನುಭೋಗರಾಗಿದ್ದ ಪಾಷ್ಟಿಕ ವಂಶದ ಹರಿತಸ ಗೋತ್ರದ ನರಸಣ್ಣ ಮತ್ತು ಇವರ ಸಹೋದರ ಶೇಷಗಿರಿರಾಯರು, ಮಹಾರಾಜರ ಸರ್ಕಾರದ ಅಪ್ಪಣೆ ಪಡೆದು ಕಾಕೋಳು ಗ್ರಾಮಕ್ಕೆ ಬಿಜಯ ಮಾಡಿಸಿ ಆಂಜನೇಯ ದೇವಸ್ಥಾನವನ್ನು ವಿಸ್ತರಣೆ ಮಾಡಿ ದಕ್ಷಿಣ ಗರ್ಭಗುಡಿಯಲ್ಲಿ 1930ರ ಪ್ರಮೋದನಾಮ ಸಂವತ್ಸರ ಜೇಷ್ಠ ಶುದ್ಧ ಪಂಚಮಿಯಂದು ಪಾಂಚರಾತ್ರಗಮೋಕ್ತವಾಗಿ ಪುನಃ ಪ್ರತಿಷ್ಠಾಪನ ಕಾರ್ಯ ನೆರವೇರಿಸಿದರು. ಈ ಸಹೋದರರು ಶ್ರೀ ವೇಣುಗೋಪಾಲಕೃಷ್ಣನನ್ನು ಪ್ರತಿಷ್ಠಾಪಿಸುವುದರೊಂದಿಗೆ ಇದನ್ನು ಪವಿತ್ರ ಕ್ಷೇತ್ರವನ್ನಾಗಿ ಪರಿವರ್ತಿಸಿದ ಕಥಾನಕವು ಇತಿಹಾಸದ ಪುಟಗಳನ್ನು ಅಲಂಕರಿಸಿತು.

ಅನನ್ಯವಾದ ಆಳೆತ್ತರದ ಬೃಂದಾವನದಲ್ಲಿರುವ ಭಕ್ತಾನುಗ್ರಹಶೀಲ ವೇಣುಗೋಪಾಲಕೃಷ್ಣ ಪೀತಾಂಬರ ಹಾಗೂ ಕಿರೀಟಧಾರಿ. ಎಡಗಾಲಿನ ಮೇಲೆ ಬಲಗಾಲನ್ನಿಟ್ಟು ಕೊಳಲನ್ನು ಹಿಡಿದು ನುಡಿಸುತ್ತಿರುವ ಹಾಗೆ ಪ್ರತಿಮೀಕರಿಸಲಾಗಿದೆ. ಮಂದಹಾಸದಿಂದ ಮೂರು ಲೋಕವನ್ನೇ ಮೀರಿಸುವ ಇವನ ಸೌಂದರ್ಯ ಬೆರಗುಗೊಳಿಸುವಂತಹುದು. ಈ ಬೃಂದಾವನವನ್ನು ಎಷ್ಟು ನೋಡಿದರೂ ಸಾಲದೆನಿಸುತ್ತದೆ.

ಕಿರುಬೆರಳಿನ ಮುದ್ರೆಯುಂಗುರ ಮುಂಗೈಯ

ಕರದಲ್ಲಿ ಕಂಕಣ ನಳಿತೋಳುಗಳ

ವರ ಚತುರ್ಭುಜ ಶಂಖಚಕ್ರದಿ ಮೆರೆವನ

ನಿರುತದಿ ಒಪ್ಪುವ ಕರುಣಾಮೂರುತಿಯು ||

ಎಂದು ಪುರಂದರದಾಸರು ಹಾಡಿರುವುದು ಬಹುಶಃ ಇದಕ್ಕೆ ಇರಬಹುದು.

ಇಕ್ಕೆಲಗಳಲ್ಲಿ ಗೋವುಗಳು ವೇಣುಗಾನದಿಂದ ಪರವಶವಾಗಿರುವ ಮನಮೋಹಕ ಕೃತಿ ಇದು. ಚಿತ್ತಾಕರ್ಷಕವಾದ ಈ ಬೃಂದಾವನದ ಮುಂದೆ ಸುಂದರವಾದ ಶಿಲಾ ವಿಗ್ರಹದ ಅಷ್ಟಬಂಧ ಪ್ರತಿಷ್ಠಾಪನ ಕಾರ್ಯವು ತಂತ್ರಸಾರೋಕ್ತವಾಗಿ 1993ರಲ್ಲಿ ಶ್ರೀ ಸೋಸಲೆ ವ್ಯಾಸರಾಜ ಮಠಾಧೀಶರಾಗಿದ್ದ ಶ್ರೀ ವಿದ್ಯಾಪಯೋನಿಧಿ ತೀರ್ಥ ಶ್ರೀಪಾದರಿಂದ ಜರುಗಿತು.

ಕಾಕೋಳು ಕ್ಷೇತ್ರಕ್ಕೆ ತಲುಪುವುದು ಹೇಗೆ?

ಬೆಂಗಳೂರು ಸಿಟಿ ಮಾರ್ಕೆಟ್ (ಮಸೀದಿ ಮುಂಭಾಗದಿಂದ) ಬಿಎಂಟಿಸಿ 285ಇ, 251ಎ, 266ಸಿ. ಶಿವಾಜಿನಗರದಿಂದ : 285ಕ್ಯೂ, ಎಲ್/ವಿ. ಮೆಜೆಸ್ಟಿಕ್‌ನಿಂದ : 406 (ನೆಲಮಂಗಲ ಮಾರ್ಗ), ಬಾಪೂಜಿನಗರದಿಂದ : 248ಕ್ಯೂ (ಪೀಣ್ಯ-ಜಾಲಹಳ್ಳಿ ಕ್ರಾಸ್ ಮಾರ್ಗ) ಬಸ್ಸುಗಳು ನೇರವಾಗಿ ಕಾಕೋಳು ತಲುಪುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more