ಸಿನಿ ನಟರಿಗೆ ನಾಮ ತಿಕ್ಕಿ ಜೈಲು ಸೇರಿದ 'ಕಲಿಯುಗದ ಕಿಲಾಡಿ ಕಂಸ' !
ಬೆಂಗಳೂರು, ಜನವರಿ 01: ಹೌಸಿಂಗ್ ಬೋರ್ಡ್ ನಿವೇಶನ ಕೊಡಿಸುವುದಾಗಿ ನಂಬಿಸಿ ಖ್ಯಾತ ನಟರಿಂದ ಹಣ ಪಡೆದು ಮೋಸ ಮಾಡಿದ್ದ ಕಲಿಯುಗದ ಕಿಲಾಡಿ ಕಂಸ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ವ್ಯಕ್ತಿಯೊಬ್ಬರಿಗೆ ಮೋಸ ಮಾಡಲು ಯತ್ನಿಸಿದ ನಕಲಿ ನಿರ್ಮಾಪಕನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಸವೇಶ್ವರಗರ ನಿವಾಸಿ ಶ್ರೀಧರ್ ಅಲಿಯಾಸ್ ಹರಿಪ್ರಸಾದ್ ಬಂಧಿತ ಆರೋಪಿ.ಡಿಪ್ಲೋಮಾ ಮಾಡಿಕೊಂಡಿದ್ದು, ಯಾವುದೇ ಕೆಲಸಕ್ಕೆ ಹೋಗಲ್ಲ. ಸಿಕ್ಕಿದವರಿಗೆ ತಾನು ಇಂಜಿನಿಯರ್ ಕೆಎಚ್ ಬಿ ಉದ್ಯೋಗಿ ಹಾಗೂ ಸಿನಿಮಾ ನಿರ್ದೇಶಕ ಎಂದು ಹೇಳಿಕೊಂಡು ಮೋಸ ಮಾಡುತ್ತಿದ್ದ.

ಹೌಸಿಂಗ್ ಬೋರ್ಡ್ ನಲ್ಲಿ ಕಡಿಮೆ ಬೆಲೆಗೆ ನಿವೇಶನ
ಹೌಸಿಂಗ್ ಬೋರ್ಡ್ ನಲ್ಲಿ ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ತನ್ನ ಪರಿಚಿತ ಗಣ್ಯ ವ್ಯಕ್ತಿಗಳನ್ನು ನಂಬಿಸಿದ್ದ. ಕೆಲವರಿಂದ ಅರ್ಜಿ ಶುಲ್ಕವೆಂದು ತಲಾ ಎರಡು ಲಕ್ಷ ರೂಪಾಯಿ ವಸೂಲಿ ಮಾಡಿದ್ದ. ಅರ್ಜಿ ಶುಲ್ಕ ನಾನೇ ಪಾವತಿ ಮಾಡುತ್ತೇನೆ. ಆನಂತರ ನೀವು ಪಾವತಿ ಮಾಡಿ ಎಂದು ಹೇಳಿ ನಂಬಿಸುತ್ತಿದ್ದ. ಅದರಂತೆ ನಿಮ್ಮದು ನಿವೇಶನಕ್ಕಾಗಿ ಸಲ್ಲಿಸಿರುವ ಅರ್ಜಿ ಶುಲ್ಕ ಪಾವತಿಯಾಗಿದೆ ಎಂಬ ಸಂದೇಶಗಳನ್ನು ಮೊಬೈಲ್ ಗೆ ರವಾನಿಸುತ್ತಿದ್ದ. ಇತ್ತೀಚೆಗೆ ಶಂಕರ್ ಎಂಬ ವ್ಯಕ್ತಿಗೆ ಇದೇ ರೀತಿ ನಂಬಿಸಿ ಮೋಸ ಮಾಡಿದ್ದ ಶ್ರೀಧರ್ ಮೊದಲ ಕಂತಿನಲ್ಲಿ ಆರೂವರೆ ಲಕ್ಷ ನೀಡುವಂತೆ ಕೇಳಿದ್ದ. ಈ ಬಾರಿಯೂ ನಾನೇ ನಿಮ್ಮ ಹಣ ಪಾವತಿಸುತ್ತೇನೆ. ಪಾವತಿಯಾದ ಬಳಿಕ ವಾಪಸು ನೀಡುವಂತೆ ಹೇಳಿದ್ದ. ಹೀಗೆ ನಂಬಿಸಿ ಬೋಗಸ್ ಸಂದೇಶ ರವಾನಿಸಿದ್ದ.

ಶ್ರೀಧರ್ ನಡವಳಿಕೆ ಬಗ್ಗೆ ಅನುಮಾನಗೊಂಡ ಶಂಕರ್
ಶ್ರೀಧರ್ ನಡವಳಿಕೆ ಬಗ್ಗೆ ಅನುಮಾನಗೊಂಡ ಶಂಕರ್ ಹೌಸಿಂಗ್ ಬೋರ್ಡ್ ನಲ್ಲಿ ವಿಚಾರಿಸಿದ್ದಾರೆ. ಅಲ್ಲಿ ಶ್ರೀಧರ್ ಹೆಸರಿನ ವ್ಯಕ್ತಿ ಯಾರೂ ಇಲ್ಲ ಎಂಬುದು ಗೊತ್ತಾಗಿದೆ. ಎರಡನೇ ಕಂತು ಹಣ ಕೇಳುತ್ತಿದ್ದ ಶ್ರೀಧರ್ ನನ್ನು ಮನೆ ಸಮೀಪ ಕರಿಸಿಕೊಂಡು ಮಹಾಲಕ್ಷ್ಮೀ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ ಇದೇ ರೀತಿ ಸಿ.ಕೆ. ಅಚ್ಚುಕಟ್ಟು, ಮಡಿವಾಳ, ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಈತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ವ್ಯಕ್ತಿಗಳಿಗೆ ನಿವೇಶನ ಕೊಡಿಸಿರುವ ಸಂಬಂಧ ಶ್ರೀಧರ್ ನ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು ಮಹಾಲಕ್ಷ್ಮೀ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಾನಾ ಹೆಸರಿನಲ್ಲಿ ಪ್ರತಿಷ್ಠಿತ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ಅವರಿಗೆ ಹೌಸಿಂಗ್ ಬೋರ್ಡ್ ನಿವೇಶನ ಕೊಡುವುದಾಗಿ ಹಲವಾರು ಮಂದಿಗೆ ಮೋಸ ಮಾಡಿದ್ದಾನೆ. ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನ ವಿರುದ್ಧ ಒಂದು ಪ್ರಕರಣ ದಾಖಲಾಗಿದ್ದು 35 ಲಕ್ಷ ರೂ. ವಂಚನೆ ಮಾಡಿದ್ದಾನೆ. ಪ್ರತಿಷ್ಠಿತ ವ್ಯಕ್ತಿಗೆ 25 ಲಕ್ಷ ರೂ. ಮೋಸ ಮಾಡಿದ್ದು, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿವೆ. ಹೀಗೆ ಮಡಿವಾಳ, ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಹಲವು ವಂಚನೆ ಪ್ರಕರಣ ದಾಖಲಾಗಿದ್ದು, ಈಗಾಗಲೇ ಅನೇಕ ಸಲ ಜೈಲಿಗೆ ಹೋಗಿ ಬಂದಿದ್ದಾನೆ.
ವಂಚನೆ ಮಾಡಿದ ಹಣದಲ್ಲಿ ಮೊದಲು ರಾಜನಿಗೂ ಮತ್ತು ರಾಣಿಗೂ ಎಂಬ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದ. ಇದರಿಂದ ಸಿನಿಮಾ ರಂಗದ ಹಿರಿಯ ನಟರು ಪರಿಚಯವಾಗಿದ್ದರು. ಇದಾದ ನಂತರ ನಟ ಗಣೇಶ್ ಅವರ ಸಹೋದರ ಸಂದೀಪ್ ನಟನೆಯ ಕಲಿಯುಗದ ಕಂಸ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದ. ಆರು ತಿಂಗಳ ಹಿಂದೆ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದ. ಸಿನಿಮಾದಲ್ಲಿ ಹಿರಿಯ ನಟ ಶರತ್ ಲೋಹಿತಾಶ್ವ ಸೇರಿದಂತೆ ಹಲವರ ನಟನೆಗೆ ಅವಕಾಶ ನೀಡಿದ್ದ. ಹೀಗೆ ಹಿರಿಯರ ಸಂಪರ್ಕ ಗಳಿಸಿ ಲಕ್ಷಾಂತರ ರೂಪಾಯಿ ಪಡೆದು ನಾಮ ಹಾಕಿದ್ದಾನೆ.

ನಟರಿಗೆ ಮೋಸ :
ಖ್ಯಾತನಾಮರನ್ನೇ ಟಾರ್ಗೆಟ್ ಮಾಡುತ್ತಿದ್ದ ಶ್ರೀಧರ್ ಅಲಿಯಾಸ್ ಹರಿ ಪ್ರಸಾದ್ ನನ್ನು ನಂಬಿ ನಟ ಶರತ್ ಲೋಹಿತಾಶ್ವ 56 ಲಕ್ಷ ರೂಪಾಯಿ ಕೊಟ್ಟು ಮೋಸ ಹೋಗಿದ್ದಾರೆ. ಸಾಹಸ ನಿರ್ದೇಶಕ ರವಿ ವರ್ಮಾ ಬಳಿ ಹದಿನಾರು ಲಕ್ಷ ಪಡೆದು ವಂಚನೆ ಮಾಡಿದ್ದಾನೆ. ಇದಲ್ಲದೇ ಆನಂದ ಗುರೂಜಿಗೂ ನಿವೇಶನ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ವಕೀಲರು, ವೈದ್ಯರು ಸಾಕಷ್ಟು ಮಂದಿ ವಂಚನೆಗೆ ಒಳಗಾಗಿದ್ದಾರೆ. ಸಿನಿಮಾ ನಿರ್ದೇಶನ, ನಿರ್ಮಾಣದ ಕಾರ್ಯ ಮಾಡುತ್ತಿರುವುದಾಗಿ ತೋರಿಸಿಕೊಂಡೇ ಸಿನಿ ಗಣ್ಯರ ನಂಬಿಕೆ ಗಳಿಸಿ ನಾಮ ಹಾಕಿದ್ದು, ಈತ ಅನೇಕ ವಂಚನೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ ಎಂದು ಮಹಾಲಕ್ಷ್ಮೀ ಲೇಔಟ್ ಪೊಲೀಸರು ತಿಳಿಸಿದ್ದಾರೆ.

ಸಿನಿಮಾ ಸ್ಥಗಿತ:
ವಂಚನೆ ಮಾಡಿದ ಹಣದಲ್ಲಿ ಸಿನಿಮಾ ಮಾಡಲು ಹೊರಟಿದ್ದ. ನಟ ಗಣೇಶ್ ಸಹೋದರ ಸಂದೀಪ್ ನಟನೆಯ ಕಲಿಯುಗದ ಕಂಸ ಸಿನಿಮಾ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದ. ಹಿರಿಯ ನಟ ಶರತ್ ಲೋಹಿತಾಶ್ವ ಅದಕ್ಕೆ ಧ್ವನಿ ನೀಡಿದ್ದರು! ಸಿನಿಮಾ ನಿರ್ಮಾಣ ಕಷ್ಟ ಎಂದು ಅರಿತಿದ್ದ ಕಿಲಾಡಿ ಕಂಸ ಕೊನೆಗೂ ಬ್ಲೇಡ್ ಸ್ಕೀಮ್ ವಾಸಿ ಎಂದು ಭಾವಿಸಿ ಮತ್ತೆ ಹಳೇ ಚಾಳಿ ಮುಂದುವರೆಸಿದ್ದ. ಕೆಎಚ್ ಬಿ ನಿವೇಶನ ಕೊಡಿಸುವ ಬೋಗಸ್ ಸ್ಕೀಮ್ ನಿಂದ ಬಂದ ಹಣದಲ್ಲಿ ಐಶರಾಮಿ ಹೋಟೆಲ್ ನಲ್ಲಿ ತಂಗಿ ಬಿಂದಾಸ್ ಜೀವನ ನಡೆಸುತ್ತಿದ್ದ. ತಾನೇ ನಿರ್ದೇಶಿಸಿ ನಿರ್ಮಿಸಲು ಹೊರಟಿದ್ದ ಕಲಿಯುಗದ ಕಂಸ ಸಿನಿಮಾ ಅರ್ಧಕ್ಕೆ ನಿಲ್ಲಿಸಿದ್ದ. ಇದೀಗ ಈತನ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ವಿಚಾರಣೆ ಮುಗಿಸಿ ಜೈಲು ವಾಸ ಕೊನೆಗೊಳ್ಳುವ ವೇಳೆಗೆ ವರ್ಷಗಳೇ ಆದೀತು.ಅಂತೂ ಕಿಲಾಡಿ ಕಂಸನನ್ನು ಬಂಧಿಸುವಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಇನ್‌ಸ್ಪೆಕ್ಟರ್ ಎಚ್. ಎಂ. ಕಾಂತರಾಜು ಯಶಸ್ವಿಯಾಗಿದ್ದಾರೆ. ಇಲ್ಲದಿದ್ದರೆ, ಇನ್ನೂ ಅನೇಕ ಮುಗ್ಧರು ಹಣ ಕಳೆದುಕೊಳ್ಳುತ್ತಿದ್ದರು.