SWR: ಪ್ರಯಾಗರಾಜ್ ಪ್ರಯಾಣಿಕರಿಗೆ ಸಿಹಿಸುದ್ದಿ: ಹುಬ್ಬಳ್ಳಿಯಿಂದ ಜೂನ್, ಜುಲೈ ತಿಂಗಳಲ್ಲಿ ವಿಶೇಷ ರೈಲು, ವೇಳಾಪಟ್ಟಿ
Prayagraj-Hubballi Special Express Train: ರಾಜ್ಯದಲ್ಲಿ ಬೇಸಿಗೆ ಕಳೆದು ಮಳೆಗಾಲ ಆರಂಭವಾಗಿದ್ದು, ಮಕ್ಕಳ ಶಾಲೆ-ಕಾಲೇಜುಗಳು ಓಪನ್ ಆಗಿವೆ. ಹೀಗಿದ್ದರೂ ಉತ್ತರ ಕರ್ನಾಟಕ ಪ್ರಮುಖ ನಗರ ಹುಬ್ಬಳ್ಳಿಯಿಂದ ಬೇರೆ ಬೇರೆ ಮಾರ್ಗಗಳಲ್ಲಿ ಸಂಚರಿಸುವ ರೈಲು ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿಲ್ಲ. ಪ್ರಯಾಣಿಕರ ಅನೂಕೂಲಕ್ಕಾಗಿ ನೈಋತ್ಯ ರೈಲ್ವೆ ಅಧಿಕಾರಿಗಳು ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್‌ನಿಂದ ಪ್ರಯಾಗ್ ರಾಜ್‌ಗೆ ತೆರಳುವವರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಹುಬ್ಬಳ್ಳಿ-ಪ್ರಯಾಗ್ ರಾಜ್ ಸಂಚಾರ ದಟ್ಟಣೆ ನಿರ್ವಹಣೆಗಾಗಿ ರೈಲ್ವೆ ಇಲಾಖೆಯು ಪ್ರಯಾಗ್‌ರಾಜ್ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಒಟ್ಟು 6 ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆ ಆರಂಭಿಸುವುದಾಗಿ ಮಂಗಳವಾರ ತಿಳಿಸಿದೆ. ಈ ರೈಲಿನ ವೇಳಾಪಟ್ಟಿ, ನಿಲುಗಡೆ ನಿಲ್ದಾಣಗಳು, ಸಮಯ, ಬೋಗಿಗಳು, ಟಿಕೆಟ್ ಬುಕಿಂಗ್ ಮಾಹಿತಿ ಮುಂದಿದೆ.

ಜುಲೈ 14ರವರೆಗೆ ವಿಶೇಷ ರೈಲು ಸಂಚಾರ, ವೇಳಾಪಟ್ಟಿ ಹೀಗಿದೆ
ಪ್ರಯಾಗ್‌ರಾಜ್-ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ರೈಲು (04113) 2026 ಜೂನ್ 6 ರಿಂದ ಜುಲೈ 11ರ ಅವಧಿಯಲ್ಲಿ ಸಂಚಾರ ಸೇವೆ ಒದಗಿಸಲಿದೆ. ಪ್ರಯಾಗ್‌ರಾಜ್‌ನಿಂದ ಪ್ರತಿ ಶನಿವಾರ ಬೆಳಗ್ಗೆ 05.05 ಗಂಟೆಗೆ ಹೊರಟು, ಸೋಮವಾರ ಮಧ್ಯಾಹ್ನ 15.10 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.
ಎಸ್‌ಎಸ್‌ಎಸ್ ಹುಬ್ಬಳ್ಳಿ-ಪ್ರಯಾಗ್‌ರಾಜ್ ವಿಶೇಷ ರೈಲು (04114) 2026 ರಿಂದ ಜೂನ್ 9 ರಿಂದ ಜುಲೈ 14ರವರೆಗೆ ಸಂಚರಿಸಲಿದೆ. ಪ್ರತಿ ಮಂಗಳವಾರ ಬೆಳಗ್ಗೆ 09 ಗಂಟೆಗೆ ಹುಬ್ಬಳ್ಳಿ ನಿಲ್ದಾಣದಿಂದ ಸಂಚಾರ ಆರಂಭಿಸಿ, ಗುರುವಾರ ರಾತ್ರಿ 22.40ಕ್ಕೆ ಪ್ರಯಾಗ್‌ರಾಜ್ ನಿಲ್ದಾಣ ಮುಟ್ಟಲಿದೆ.
22 ಬೋಗಿಗಳ ವಿಶೇಷ ರೈಲು
ಜನರಲ್ ಬೋಗಿ, ತ್ರಿ ಟೈರ್ ಎಸಿ, ಟು ಟೈರ್ ಎಸಿ ಕೋಚ್, ನಾನ್ ಎಸಿ ಸ್ಲೀಪರ್ ಕೋಚ್‌ಗಳು ಸೇರಿದಂತೆ ಒಟ್ಟು 22 ಬೋಗಿಗಳನ್ನು ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಹೊಂದಿರಲಿದೆ. ಎರಡೂ ದಿಕ್ಕುಗಳಲ್ಲಿ ಸಂಚಾರ ಮಾಡುವಾಗ ಬೋಗಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಈ ರೈಲು ಫತೇಪುರ್, ಗೋವಿಂದ್‌ಪುರಿ, ಗ್ವಾಲಿಯರ್, ಶಿವಪುರಿ, ಗುಣಾ, ಇಟಾವಾ, ಭಿಂಡ್, ಸೋನಿ, ಬಿನಾ, ಭೋಪಾಲ್, ನಾಗ್ಪುರ, ಬಲ್ಹರ್ಷಾ, ಸಿರ್‍ಪುರ ಕಾಗಜ್‌ನಗರ, ಮಂಚೇರಿಯಲ್, ಕಾಜಿಪೇಟ್, ಗದ್ವಾಲ್, ಕರ್ನೂಲ್ ಸಿಟಿ, ಧೋನೆ, ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ, ತುಮಕೂರು, ಅರಸೀಕೆರೆ, ದಾವಣಗೆರೆ ಮತ್ತು ಎಸ್‌ಎಂಎಂ ಹಾವೇರಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ವಿಶೇಷ ರೈಲಿನ ಸಮಯ, ವೇಳಾಪಟ್ಟಿ, ಇನ್ನಿತರ ಹೆಚ್ಚಿನ ಮಾಹಿತಿ ಪಡೆಯಲು ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ (https://indianrail.gov.in/)ಗೆ ಭೇಟಿ ನೀಡಬಹುದು. ಇಲ್ಲವೇ ಎನ್‌ಟಿಇಎಸ್ ಆ್ಯಪ್ ಅಥವಾ 139 ಸಹಾಯವಾಣಿ ಸಂಪರ್ಕಿಸುವಂತೆ ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













Click it and Unblock the Notifications