keyboard_backspace

ಹಾನಗಲ್, ಸಿಂಧಗಿ ಚುನಾವಣಾ ಕಣದಲ್ಲಿ ಸಿದ್ದರಾಮಯ್ಯರಿಗೆ ಸಿಕ್ಕ ಸುಳಿವಿನ ಸೀಕ್ರೆಟ್!?

Google Oneindia Kannada News

ಹಾನಗಲ್, ಅಕ್ಟೋಬರ್ 23: ಕರ್ನಾಟಕದಲ್ಲಿ ಉಪಚುನಾವಣೆ ಪ್ರಚಾರ ಕಾವೇರಿದೆ. ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ಮುನ್ಸೂಚನೆ ಸಿಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭೆ ಕ್ಷೇತ್ರದ ಕುಬಟೂರಿನಲ್ಲಿ ಮಾತನಾಡಿದ ಅವರು, ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಡೆಗೆ ನಿರೀಕ್ಷೆಗೂ ಮೀರಿದ ಜನಸ್ಪಂದನೆ ವ್ಯಕ್ತವಾಗುತ್ತಿದೆ. ಇದನ್ನು ನೋಡಿದಾಗ ಕಾಂಗ್ರೆಸ್ ಪರವಾದ ವಾತಾವರಣ ಇದೆ ಎಂಬುದು ಗೊತ್ತಾಗುತ್ತಿದೆ ಎಂದು ಹೇಳಿದರು. ಈ ಮಧ್ಯೆ ಕಾಂಗ್ರೆಸ್ ಪಕ್ಷವನ್ನು ಸೇರಿ ಮಧು ಬಂಗಾರಪ್ಪ ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಮಾತು ಮುಂದುವರಿಸಿದರು. ಈಗ ಸರಿಯಾದ ವ್ಯಕ್ತಿ ಸರಿಯಾದ ಪಕ್ಷ ಸೇರಿದ್ದಾರೆ. ಈ ಹಿಂದೆ ಬಂಗಾರಪ್ಪನವರು ಕೂಡಾ ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಆದವರು. ನಾನು ಕಾಂಗ್ರೆಸ್ ಸೇರುವಾಗಲೂ ಇದೇ ಪ್ರಶ್ನೆ ಕೇಳಿದ್ದು, ಕೊನೆಗೆ ನಾನು ಮುಖ್ಯಮಂತ್ರಿ ಆಗಿಲ್ಲವೇ?, ಕಾಂಗ್ರೆಸ್ ಪಕ್ಷ ಭವಿಷ್ಯ ರೂಪಿಸುತ್ತೆ, ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ಉತ್ತಮ ಅವಕಾಶಗಳು ತಾನಾಗಿಯೇ ಸಿಗುತ್ತವೆ ಎಂದು ಹೇಳಿದರು.

ಪ್ರಧಾನಿ ಮೋದಿ ಸರ್ಕಾರದ ಬಗ್ಗೆ ಜನರಲ್ಲಿ ಬೇಸರ

ಪ್ರಧಾನಿ ಮೋದಿ ಸರ್ಕಾರದ ಬಗ್ಗೆ ಜನರಲ್ಲಿ ಬೇಸರ

"ರಾಜ್ಯದಲ್ಲಿನ ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಕೇಂದ್ರದಲ್ಲಿ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ನೀಡಿದ್ದ ಕಾರ್ಯಕ್ರಮಗಳನ್ನು ಜನರು ನೆನಪು ಮಾಡಿಕೊಳ್ಳುತ್ತಿದ್ದಾರೆ. ಕಳೆದ ಎರಡೂ ಕಾಲು ವರ್ಷಗಳಲ್ಲಿ ರಾಜ್ಯ ಸರ್ಕಾರದ ಮತ್ತು ಏಳು ವರ್ಷಗಳ ನರೇಂದ್ರ ಮೋದಿ ಸರ್ಕಾರದ ವೈಫಲ್ಯ ಜನರನ್ನು ಭ್ರಮನಿರಸನಗೊಳಿಸಿದೆ. 2014ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ. ಇದರಿಂದ ನೊಂದಿರುವ ಜನರಿಗೆ ಬೆಲೆ ಏರಿಕೆ ಇನ್ನಿಲ್ಲದಂತೆ ಕಾಡುತ್ತಿದೆ," ಎಂದು ಸಿದ್ದರಾಮಯ್ಯ ದೂಷಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕೇಂದ್ರದ ಕಾರಣಗಳು?

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕೇಂದ್ರದ ಕಾರಣಗಳು?

ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ಕೇಂದ್ರ ಸರ್ಕಾರ ಎರಡು ಕಾರಣ ನೀಡುತ್ತಿದೆ. ಒಂದು ಹಿಂದಿನ ಯು.ಪಿ.ಎ ಸರ್ಕಾರ ಕಚ್ಚಾತೈಲದ ಮೇಲೆ ಸಾಲ ಮಾಡಿತ್ತು. ಎರಡನೆಯದು ಬೆಲೆಯೇರಿಕೆ ಇಂದ ಬಂದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿಯವರು ತಮ್ಮ ಮನ್ ಕೀ ಬಾತ್ ನಲ್ಲಿ ಹೇಳಿದ್ದಾರೆ. ಆದರೆ ತೈಲಬಾಂಡ್ ಖರೀದಿ ಆರಂಭ ಮಾಡಿದ್ದು ವಾಜಪೇಯಿ ಸರ್ಕಾರ, 1 ಲಕ್ಷದ 40 ಸಾವಿರ ತೈಲಬಾಂಡ್ ಖರೀದಿ ಮಾಡಲಾಗಿದೆ. ಈವರೆಗೆ 3500 ಕೋಟಿ ರೂಪಾಯಿ ಸಾಲ ತೀರಿಸಲಾಗಿದ್ದು, ವಾರ್ಷಿಕ 10,000 ಕೋಟಿ ಬಡ್ಡಿ ಕಟ್ಟಲಾಗಿದೆ.

ಇಂಧನ ಬೆಲೆ ಮೇಲೆ ಹೆಚ್ಚುವರಿ ಅಬಕಾರಿ ಶುಲ್ಕ

ಇಂಧನ ಬೆಲೆ ಮೇಲೆ ಹೆಚ್ಚುವರಿ ಅಬಕಾರಿ ಶುಲ್ಕ

"ಇದರ ಹೊರತಾಗಿ 2014ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 9 ರೂಪಾಯಿ 21 ಪೈಸೆ ಹಾಗೂ ಡೀಸೆಲ್ ಮೇಲೆ 3 ರೂಪಾಯಿ 45 ಪೈಸೆ ಇತ್ತು. ಈಗ ಡೀಸೆಲ್ ಮೇಲೆ 31 ರೂಪಾಯಿ 84 ಪೈಸೆ ಮತ್ತು ಪೆಟ್ರೋಲ್ ಮೇಲೆ 32 ರೂಪಾಯಿ 98 ಪೈಸೆ ಅಬಕಾರಿ ಶುಲ್ಕವನ್ನು ಹಾಕುತ್ತಿದೆ. ಅದೇ ಮನಮೋಹನ್ ಸಿಂಗ್ ಅವರು ಪ್ರಧಾನಿಮಂತ್ರಿ ಆಗಿದ್ದ ವೇಳೆ ಡೀಸೆಲ್ ಬೆಲೆ 47 ರೂಪಾಯಿಯಿದ್ದು, ಇಂದು ಅದರ ಬೆಲೆ 100 ರೂಪಾಯಿ ಗಡಿ ದಾಟಿದೆ. ಈ ಹಿಂದೆ 70 ರೂಪಾಯಿಯಿದ್ದ ಪೆಟ್ರೋಲ್ ಬೆಲೆ, ಇಂದು 112 ರೂಪಾಯಿ ಗಡಿ ದಾಟಿದೆ. ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಸಂಗ್ರಹವಾಗಿರುವ ತೆರಿಗೆ 23 ಲಕ್ಷ ಕೋಟಿ ರೂಪಾಯಿ. ಒಟ್ಟು ಸಾಲ ಇರುವುದೇ 1‌ ಲಕ್ಷದ 40 ಸಾವಿರ ಕೋಟಿ. ನರೇಂದ್ರ ಮೋದಿ ಅವರೇ ಜನರಿಗೇಕೆ ಸುಳ್ಳು ಹೇಳ್ತೀರ? ಸತ್ಯ ಹೇಳಿ," ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

"ಅಲ್ಲದೇ ಯು.ಪಿ.ಎ ಅವಧಿಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ ವೊಂದಕ್ಕೆ 120- 125 ಡಾಲರ್ ಇತ್ತು. ಈಗ 70-80 ಡಾಲರ್ ಆಗಿದೆ. ಇದು 2013 ರಿಂದ 16ರ ವರೆಗೆ 45, 46, 49 ಡಾಲರ್ ಆಗಿತ್ತು. ಆಗ ಪೆಟ್ರೋಲ್ ಬೆಲೆ ಇಳಿಕೆ ಮಾಡಿದ್ರಾ? ಇದಕ್ಕೆ ಮೋದಿಯವರ ಬಳಿ ಉತ್ತರವಿದೆಯೇ?," ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಗ್ಯಾಸ್ ಬೆಲೆ 414 ರಿಂದ 980ಕ್ಕೆ ಏರಿಕೆ

ಗ್ಯಾಸ್ ಬೆಲೆ 414 ರಿಂದ 980ಕ್ಕೆ ಏರಿಕೆ

ಕಳೆದ 2013 ರಲ್ಲಿ ಒಂದು ಸಿಲಿಂಡರ್ ಬೆಲೆ 414 ರೂಪಾಯಿ ಇತ್ತು. ಆದರೆ ಇಂದು ಅದೇ ಅಡುಗೆ ಅನಿಲದ ಬೆಲೆ 980 ರೂಪಾಯಿ ಆಗಿದೆ. ಮೋದಿ ಹೇಳಿದ ಅಚ್ಚೇ ದಿನ್ ಎಲ್ಲಿದೆ?, ಡೀಸೆಲ್ ಬೆಲೆ ಹೆಚ್ಚಾದರೆ ಸಾಗಾಣಿಕೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತೆ. ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಾದರೆ ರೈತರಿಗೇನು ಸಮಸ್ಯೆ ಆಗಲ್ಲ ಎಂದು ಕೇಂದ್ರ ಸಚಿವರೊಬ್ಬರು ದಡ್ಡನಂತೆ ಹೇಳಿಕೆ ನೀಡಿದ್ದಾರೆ," ಎಂದು ಟೀಕಾಪ್ರಹಾರ ನಡೆಸಿದ್ದಾರೆ.

"ಎರಡೂಕಾಲು ವರ್ಷದಲ್ಲಿ ಅಭಿವೃದ್ಧಿ ಕಾರ್ಯಗಳೇ ಇಲ್ಲ"

"ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂ ಕಾಲು ವರ್ಷ ಆಗಿದೆ. ಈ ಅವಧಿಯಲ್ಲಿ ಸೂರಿಲ್ಲದ ಬಡವರಿಗೆ ಒಂದೇ ಒಂದು ಮನೆಯನ್ನು ಕಟ್ಟಿಸಿಕೊಟ್ಟಿಲ್ಲ. ಅದಕ್ಕಾಗಿಯೇ ನಿನ್ನೆ ನಾನು ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ ಎಂದು ಬಸವರಾಜ ಬೊಮ್ಮಾಯಿಯವರಿಗೆ ಸವಾಲು ಹಾಕಿದ್ದೆ, ಇದಕ್ಕೆ ಉತ್ತರವಿಲ್ಲ. ಅಭಿವೃದ್ಧಿ ಮೇಲೆ ಓಟು ಕೇಳೋರು ಅಭಿವೃದ್ಧಿ ಕೆಲಸ ಮಾಡಿದ್ದಾರಾ ಹೇಳಲಿ," ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

"ಕಾಂಗ್ರೆಸ್ ಕಡೆಗೆ ಹಾನಗಲ್ ಮತದಾರರ ಒಲವು"

"ಮಾಜಿ ಸಚಿವ ಸಿ.ಎಂ ಉದಾಸಿ ನಿಧನರಾದ ಮೇಲೆ ಬಿಜೆಪಿ ಅಭ್ಯರ್ಥಿ ಚುನಾವಣೆ ಘೋಷಣೆ ಆಗುವವರೆಗೆ ಹಾನಗಲ್ ಗೆ ಬಂದಿರಲಿಲ್ಲ. ಆದರೆ ನಮ್ಮ ಅಭ್ಯರ್ಥಿ ಶ್ರೀನಿವಾಸ್ ಮಾನೆ ಕೊರೊನಾವೈರಸ್ ಸಂದರ್ಭದಲ್ಲಿ ಮನೆಗೆ ಹೋಗಿರಲಿಲ್ಲ. ಹಾನಗಲ್ ಜನರ ಕಷ್ಟ ಸುಖಗಳನ್ನು ಆಲಿಸಿ, ಕೈಲಾದ ಸಹಾಯ ಮಾಡಿದ್ದಾರೆ. ಹೀಗಾಗಿ ಜನರು ಕಾಂಗ್ರೆಸ್ ಕಡೆ ಒಲವು ಹೊಂದಿದ್ದಾರೆ. ನಾವು ಇಲ್ಲಿ ನೂರಕ್ಕೆ ನೂರು ಗೆಲ್ಲುವುದು ಖಚಿತವಾಗಿದೆ. ಈ ಚುನಾವಣೆಯಲ್ಲಿ ಸ್ಪರ್ಧೆಯಿರುವುದು ನಮಗೆ ಮತ್ತು ಬಿಜೆಪಿಗೆ, ಜೆಡಿಎಸ್ ಸ್ಪರ್ಧಾ ಚಿತ್ರಣದಲ್ಲೇ ಇಲ್ಲ. ಜೆಡಿಎಸ್ ನವರು ಬಿಜೆಪಿಗೆ ಸಹಾಯವಾಗಲಿ ಎಂದು ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದಾರೆ. ಬಿಜೆಪಿಯವರು ಅಧಿಕಾರ ಮತ್ತು ಹಣದ ದುರುಪಯೋಗ ಮಾಡುತ್ತಿದ್ದಾರೆ, ಇಷ್ಟೆಲ್ಲಾ ಸವಾಲುಗಳಿದ್ದರೂ ನಾವೇ ಎರಡೂ ಕಡೆಗಳಲ್ಲಿ ಗೆಲ್ಲುತ್ತೇವೆ," ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಗಮಗಳಿಗೆ ಅನುದಾನ ನೀಡುವುದರಲ್ಲಿ ತಾರತಮ್ಯ ಸಲ್ಲದು

ನಿಗಮಗಳಿಗೆ ಅನುದಾನ ನೀಡುವುದರಲ್ಲಿ ತಾರತಮ್ಯ ಸಲ್ಲದು

"ಮೊದಲು ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮಗಳು ಇದ್ದವು. ಈಗ ಬೇರೆ ಬೇರೆ ಜಾತಿಗಳಿಗೆ ಒಂದೊಂದು ಅಭಿವೃದ್ಧಿ ನಿಗಮ ಆಗಿದೆ. ಯಾವುದೇ ಅಭಿವೃದ್ಧಿ ನಿಗಮ ಮಾಡೋದು ದೊಡ್ಡ ವಿಚಾರವಲ್ಲ, ಆ ಸಮುದಾಯದ ಅಭಿವೃದ್ಧಿಗೆ ಸಾಕಾಗುವಷ್ಟು ಅನುದಾನ ಕೊಡಬೇಕು. ಲಿಂಗಾಯತ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ರು, ಇದಕ್ಕೆ ನನ್ನ ವಿರೋಧವಿಲ್ಲ. ಆದರೆ ಈ ಎರಡು ನಿಗಮಗಳಿಗೆ ತಲಾ 500 ಕೋಟಿ ರೂಪಾಯಿ ನೀಡಿದರು, ಉಳಿದ ಎಲ್ಲಾ ನಿಗಮಗಳಿಗೆ ಸೇರಿ 500 ಕೋಟಿ ಅನುದಾನ ನೀಡಿಲ್ಲ. ಹೀಗಾದ್ರೆ ನಿಗಮ ಸ್ಥಾಪನೆಯಾಗಿಯೂ ಉಪಯೋಗವಿಲ್ಲ," ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಅರ್ಹರಿಗೆ ಮೀಸಲಾತಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ

ಅರ್ಹರಿಗೆ ಮೀಸಲಾತಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ

"ಈ ಮೊದಲು ಮೀಸಲಾತಿ ವಿರೋಧ ಮಾಡುತ್ತಿದ್ದವರೇ ಇಂದು ನಮಗೂ ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದಾರೆ. ಮೀಸಲಾತಿ ಇಂದ ಪ್ರತಿಭೆಗಳಿಗೆ ಅನ್ಯಾಯ ಆಗುತ್ತೆ ಎನ್ನುತ್ತಿದ್ದವರು ಇವರೇ ಅಲ್ಲವೇ?, ನರೇಂದ್ರ ಮೋದಿಯವರು ಸಂವಿಧಾನ ತಿದ್ದುಪಡಿ ಮಾಡಿ ಮೇಲ್ವರ್ಗದ ಜನರಿಗೂ ಮೀಸಲಾತಿ ನೀಡಿದ್ದಾರೆ. ಈಗ ಮೀಸಲಾತಿ ಬಗ್ಗೆ ವಿರೋಧ ಮಾಡುವ ಹಾಗಿಲ್ವ?,

ಯಾವುದೇ ಸಮುದಾಯ ಮೀಸಲಾತಿ ಕೇಳೋದು ತಪ್ಪಲ್ಲ. ಅರ್ಹರಿಗೆ ಮೀಸಲಾತಿ ನೀಡುವುದಕ್ಕೆ ನನ್ನ ವಿರೋಧವಿಲ್ಲ. ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಏನು ಹೇಳಿದೆ ಗೊತ್ತಾ, ಪ್ರತೀ ರಾಜ್ಯದಲ್ಲಿ ಒಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇರಬೇಕು, ಆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಲು ಬಯಸುವವರು ಆಯೋಗಕ್ಕೆ ಮನವಿ ನೀಡಬೇಕು. ಮನವಿ ಪರಿಶೀಲನೆ ನಡೆಸಿ, ಆ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದು ಬಿಡುವುದು ಆಯೋಗದ ಕೆಲಸವಾಗಿದೆ.

ಐಟಿ ಮತ್ತು ಜಾರಿ ನಿರ್ದೇಶನಾಲಯಗಳ ದುರ್ಬಳಕೆ ಆರೋಪ

ಐಟಿ ಮತ್ತು ಜಾರಿ ನಿರ್ದೇಶನಾಲಯಗಳ ದುರ್ಬಳಕೆ ಆರೋಪ

ಕೊರೊನಾವೈರಸ್ ಕಾಲದಲ್ಲೂ ನಮ್ಮ ಇತಿಮಿತಿಯೊಳಗೆ ಬೆಲೆಯೇರಿಕೆ ವಿರುದ್ಧ ಹೋರಾಟ ಮಾಡಿದ್ದೇವೆ. ಪ್ರತಿಭಟನೆ ಮಾಡಲು ಹೊರಟರೆ ಬಂಧಿಸುತ್ತಾರೆ. ನಮಗೆ ಮಾತನಾಡಲು ಅವಕಾಶವನ್ನೇ ಕೊಡುವುದಿಲ್ಲ. ಮೋದಿ ಸರ್ಕಾರ ವಿರುದ್ಧ ಮಾತನಾಡಿದರೆ ಭಯೋತ್ಪಾದಕರು ಅಂತಾರೆ, ದೇಶದ್ರೋಹಿ ಎನ್ನುತ್ತಾರೆ, ಇ.ಡಿ ಅಥವಾ ಐ.ಟಿ ಯವರನ್ನು ಚೂ ಬಿಡುತ್ತಾರೆ. ಇಂತಹ ಸ್ಥಿತಿಯಲ್ಲಿ ಏನು ಮಾಡಬೇಕು? ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕೂಡ ಹೀಗೆ ಮಾಡಿರಲಿಲ್ಲ. ಕೊರೊನಾವೈರಸ್ ಬಂದಿರುವುದು ಕೇಂದ್ರ ಸರ್ಕಾರಕ್ಕೆ ವರದಾನವಾಗಿದೆ. ಮಾಧ್ಯಮಗಳು ಸರ್ಕಾರದ ವಿರುದ್ಧ ಮಾತನಾಡಿದರೆ ನೋಟಿಸ್ ಬರುತ್ತದೆ. ಪರೀಕ್ಷೆ ಮಾಡಿ ಬೇಕಿದ್ದರೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇಂಥಾ ಸ್ಥಿತಿ ಸ್ವಾತಂತ್ರ್ಯ ಬಂದಮೇಲೆ ಯಾವತ್ತೂ ಬಂದಿರಲಿಲ್ಲ," ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

English summary
Congress leader Siddaramaiah talks about Hanagal and Sindagi by Elections. Congres candidates will win in both the constituencys. read on.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X