ಕನ್ನಡ ಕಲೀತಿದ್ದೀನಿ, ಮುಂದಿನ ಸಲ ಪಕ್ಕಾ ಚೆನ್ನಾಗಿ ಮಾತನಾಡ್ತೀನಿ: 'ಪೆದ್ದಿ' ಪ್ರಚಾರದಲ್ಲಿ ಕನ್ನಡಿಗರ ಮನಗೆದ್ದ ನಟ ರಾಮ್‌ಚರಣ್
ಸಾಮಾನ್ಯವಾಗಿ ಪರಭಾಷಾ ಸ್ಟಾರ್ ನಟರು ನಮ್ಮೂರಿಗೆ ಬಂದು ಇಂಗ್ಲಿಷ್ ಅಥವಾ ತೆಲುಗಿನಲ್ಲೇ ಭಾಷಣ ಬಿಗಿಯುವ ಕಾಲ ಈಗ ಬದಲಾಗಿದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಮೆಗಾ ಪವರ್ ಸ್ಟಾರ್ ರಾಮ್‌ಚರಣ್. ಬೆಂಗಳೂರಿನಲ್ಲಿ ನಡೆದ 'ಪೆದ್ದಿ' ಚಿತ್ರದ ಭರ್ಜರಿ ಪ್ರಚಾರದ ವೇಳೆ, ತಮಗೆ ಕನ್ನಡ ಬರದಿದ್ದರೂ ಶಿವಣ್ಣನ ಕೈ ಹಿಡಿದು ವೇದಿಕೆ ಮೇಲೆ ರಾಮ್‌ಚರಣ್ ಕನ್ನಡದಲ್ಲೇ ಮಾತನಾಡಿದ ಆ ಒಂದು ಕ್ಷಣ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಹಾಗಾದರೆ ಬೆಂಗಳೂರು ಈವೆಂಟ್‌ನಲ್ಲಿ ರಾಮ್‌ಚರಣ್ ಕನ್ನಡಿಗರಿಗೆ ಒಂದು ಪ್ರಾಮಿಸ್ ಕೂಡ ಮಾಡಿದ್ರು.
ಟಾಲಿವುಡ್‌ನ ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ಅಭಿನಯದ ಬಹುನಿರೀಕ್ಷಿತ 'ಪೆದ್ದಿ' ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಜೂನ್ 4ರಂದು ವಿಶ್ವಾದ್ಯಂತ ತೆರೆಕಾಣಲಿರುವ ಈ ಚಿತ್ರದ ಭರ್ಜರಿ ಪ್ರಚಾರಕ್ಕಾಗಿ ನಟ ರಾಮ್‌ಚರಣ್ ಹಾಗೂ ಚಿತ್ರತಂಡ ನಿನ್ನೆ (ಮೇ 25) ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿತ್ತು. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಬಾಲಿವುಡ್ ಬ್ಯೂಟಿ ಹಾಗೂ ಚಿತ್ರದ ನಾಯಕಿ ಜಾನ್ವಿ ಕಪೂರ್ ಮತ್ತು ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಪಾಲ್ಗೊಂಡು ಕಳೆ ಹೆಚ್ಚಿಸಿದ್ದರು. ಈ ವೇಳೆ ರಾಮ್‌ಚರಣ್ ಕನ್ನಡದಲ್ಲೇ ಮಾತನಾಡುವ ಮೂಲಕ ಕನ್ನಡಿಗರ ಮನಗೆದ್ದರು.

ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ನಟ ರಾಮ್‌ಚರಣ್ ಅವರ ಕನ್ನಡ ಭಾಷಣ. ವೇದಿಕೆ ಮೇಲೆ ಮೈಕ್ ಹಿಡಿಯುತ್ತಿದ್ದಂತೆ ರಾಮ್‌ಚರಣ್ ಅವರು ಕನ್ನಡದಲ್ಲೇ ಮಾತನಾಡುವ ಮೂಲಕ ನೆರೆದಿದ್ದ ಕನ್ನಡಿಗರನ್ನು ಖುಷಿಪಡಿಸಿದರು. ಜೊತೆಗೆ ಕನ್ನಡಿಗರ ಮನಸ್ಸನ್ನು ಸಂಪೂರ್ಣವಾಗಿ ಗೆದ್ದುಕೊಂಡರು. ರಾಮ್ ಚರಣ್ ಅವರಿಗೆ ಕನ್ನಡ ಅಷ್ಟಾಗಿ ಬರದಿದ್ದರೂ ಶಿವಣ್ಣನ ಸಹಾಯ ಪಡೆದು ಕನ್ನಡದಲ್ಲೇ ಮಾತನಾಡಿದರು.
ಮುಂದಿನ ಸಲ ಕನ್ನಡದಲ್ಲೇ ಹೆಚ್ಚು ಮಾತನಾಡ್ತೀನಿ
"ದಯವಿಟ್ಟು ಕ್ಷಮಿಸಿ, ನನಗೆ ಕನ್ನಡ ಅಷ್ಟಾಗಿ ಬರೋದಿಲ್ಲ. ಆದ್ರೆ, ಮುಂದಿನ ಸಿನಿಮಾ ಮೀಟ್ ಹೊತ್ತಿಗೆ ನಾನು ಖಂಡಿತವಾಗಿ ಕನ್ನಡ ಕಲಿಯುತ್ತೇನೆ. ಈಗ ನನಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ, ಆದ್ರೆ ಮುಂದಿನ ದಿನಗಳಲ್ಲಿ ಹೆಚ್ಚಾಗಿ ಮಾತನಾಡ್ತೀನಿ. ತುಂಬಾ ಕಷ್ಟ ಪಟ್ಟು ಈ ಸಿನಿಮಾ ಮಾಡಿದ್ದೇವೆ, ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ" ಎಂದು ಕನ್ನಡಿಗರಲ್ಲಿ ಮನವಿ ಮಾಡಿಕೊಂಡರು. ವಿಶೇಷವೆಂದರೆ, ವೇದಿಕೆಯ ಮೇಲಿದ್ದ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಸಹಾಯ ಪಡೆದುಕೊಂಡು ರಾಮ್‌ಚರಣ್ ತಪ್ಪುಗಳಿಲ್ಲದೆ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಪ್ರಮುಖ ಪಾತ್ರದಲ್ಲಿ ಶಿವಣ್ಣ
'ಪೆದ್ದಿ' ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರು ಕೇವಲ ಅತಿಥಿ ಪಾತ್ರದಲ್ಲಲ್ಲ, ಬದಲಿಗೆ ಅತ್ಯಂತ ಪ್ರಮುಖ ಹಾಗೂ ತೂಕವಿರುವ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಹಾಗೂ ಕನ್ನಡಿಗರಲ್ಲಿ ಈ ಸಿನಿಮಾದ ಮೇಲೆ ಭಾರೀ ಕುತೂಹಲ ಮತ್ತು ನಿರೀಕ್ಷೆಗಳು ಮನೆಮಾಡಿವೆ. ತೆಲುಗಿನ ಖ್ಯಾತ ನಟ ಹಾಗೂ ಕನ್ನಡದ ಹೆಮ್ಮೆಯ ನಟ ಶಿವಣ್ಣ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವುದು ಸಿನಿಪ್ರೇಕ್ಷಕರಿಗೆ ಹಬ್ಬದೂಟ ಸಿಕ್ಕಂತಾಗಲಿದೆ.
ಜೂನ್ 4ಕ್ಕೆ ಅದ್ಧೂರಿ ಬಿಡುಗಡೆ
ಬಾಲಿವುಡ್‌ನ ಸ್ಟಾರ್ ನಟಿ ಜಾನ್ವಿ ಕಪೂರ್ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ದಕ್ಷಿಣ ಭಾರತದ ಸಿನಿಮಾರಂಗಕ್ಕೆ ಭರ್ಜರಿಯಾಗಿ ಹೆಜ್ಜೆ ಇಡುತ್ತಿದ್ದಾರೆ. ಚಿತ್ರತಂಡವು ದೇಶದಾದ್ಯಂತ ಪ್ರಚಾರ ಕಾರ್ಯದಲ್ಲಿ ನಿರತವಾಗಿದ್ದು, ಜೂನ್ 4ರಂದು ಸಿನಿಮಾ ಬೆಳ್ಳಿಪರದೆಗೆ ಅಪ್ಪಳಿಸಲಿದೆ. ಸದ್ಯ ಬೆಂಗಳೂರಿನಲ್ಲಿ ನಡೆದ ಪ್ರಚಾರ ಕಾರ್ಯಕ್ರಮ ಹಾಗೂ ರಾಮ್‌ಚರಣ್ ಅವರ ಕನ್ನಡದ ಪ್ರೇಮ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.













Click it and Unblock the Notifications