ಕೈ ತುಂಬಾ ಸಂಬಳ ಬಂದ್ರಷ್ಟೇ ಸಾಲಲ್ಲ, ದುಡ್ಡು ಉಳಿಸಲು ಬೆಂಗಳೂರು ಯುವಕ ನೀಡಿದ ಈ 7 ಸ್ಮಾರ್ಟ್ ಟಿಪ್ಸ್ Viral
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಮನೆ ಬಾಡಿಗೆ, ಸಾರಿಗೆ ವೆಚ್ಚ ಹಾಗೂ ದುಬಾರಿ ಜೀವನಶೈಲಿಯ ನಡುವೆ ಹಣ ಉಳಿತಾಯ ಮಾಡುವುದು ಎಲ್ಲರಿಗೂ ಒಂದು ರೀತಿಯ ಸವಾಲಾಗಿ ಪರಿಣಮಿಸಿದೆ. ಹೇಗೆ ದುಡ್ಡು ಉಳಿಸುವುದು ಎನ್ನುವುದೇ ದೊಡ್ಡ ಪ್ರಶ್ನೆ. ಇದರ ನಡುವೆ ಬೆಂಗಳೂರಿನ ಯುವಕನೊಬ್ಬ ತನ್ನ ದೈನಂದಿನ ದಿನಚರಿಯಲ್ಲಿ ಯಾವುದೇ ರೀತಿಯಲ್ಲಿಯೂ ರಾಜಿ ಮಾಡಿಕೊಳ್ಳದೆ ಹಣವನ್ನು ಉಳಿಸಲು ನೆರವಾದ ಕೆಲವು ಸರಳ ಅಭ್ಯಾಸಗಳನ್ನು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಅಕ್ಷಯ್ ಸಿ.ಎನ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ @bangalore_viral ಎಂಬ ತಮ್ಮ ಪೇಜ್ ಮೂಲಕ ಈ ಉಪಯುಕ್ತ ಟಿಪ್ಸ್ ಹಂಚಿಕೊಂಡಿದ್ದಾರೆ. "ನನ್ನ ಜೀವನಶೈಲಿಯನ್ನು ಬದಲಿಸದೆ ಬೆಂಗಳೂರಿನಲ್ಲಿ ನನ್ನ ಖರ್ಚುಗಳನ್ನು ಹೇಗೆ ಕಡಿಮೆ ಮಾಡಿದೆ" ಎಂದು ಶೀರ್ಷಿಕೆ ನೀಡಿರುವ ವಿಡಿಯೋದಲ್ಲಿ, ಸಣ್ಣ ಬದಲಾವಣೆಗಳು ಹೇಗೆ ಹಣ ಉಳಿಸಲು ನೆರವಾದವು ಎಂಬುದನ್ನು ಅವರು ವಿವರಿಸಿದ್ದಾರೆ.

ಮೆಟ್ರೋ ಸಮೀಪ ವಾಸ: ಅಕ್ಷಯ್ ಮಾಡಿದ ಅತಿದೊಡ್ಡ ಬದಲಾವಣೆಗಳಲ್ಲಿ ಒಂದೆಂದರೆ, ದುಬಾರಿ ಅಥವಾ ಫ್ಯಾನ್ಸಿ ಏರಿಯಾಗಳಲ್ಲಿ ಮನೆ ಮಾಡುವ ಬದಲು ಮೆಟ್ರೋ ನಿಲ್ದಾಣದ ಹತ್ತಿರಕ್ಕೆ ಶಿಫ್ಟ್ ಆಗಿದ್ದು. "ಆರಂಭದಲ್ಲಿ ಬಾಡಿಗೆ ಸ್ವಲ್ಪ ಹೆಚ್ಚೇ ಅನಿಸಿದರೂ, ನಿತ್ಯದ ಪ್ರಯಾಣ, ಇಂಧನ ಮತ್ತು ಆಟೋಗಳಿಗೆ ನೀಡುವ ಹಣ ಹಾಗೂ ಮಾನಸಿಕ ಒತ್ತಡವನ್ನು ಇದು ಉಳಿಸಿತು" ಎಂದು ಅವರು ಹೇಳಿದ್ದಾರೆ. ಪ್ರಯಾಣದ ಸಮಯ ಮತ್ತು ಕಡಿಮೆ ವೆಚ್ಚ ಅವರ ಮಾಸಿಕ ಬಜೆಟ್‌ನಲ್ಲಿ ಗಮನಾರ್ಹ ಬದಲಾವಣೆ ತಂದಿದೆ.
ಸಣ್ಣ ಖರ್ಚುಗಳ ಮೇಲೆ ನಿಯಂತ್ರಣ: ಕ್ವಿಕ್ ಡೆಲಿವರಿ ಸೇವೆಗಳು, ಪದೇ ಪದೇ ಆಟೋ ಪ್ರಯಾಣ, ಆನ್‌ಲೈನ್ ಸಬ್‌ಸ್ಕ್ರಿಪ್ಷನ್‌ಗಳು ಮತ್ತು ಸಣ್ಣ-ಪುಟ್ಟ ಆನ್‌ಲೈನ್ ಖರೀದಿಗಳಂತಹ ಖರ್ಚುಗಳು ಕಾಲಕ್ರಮೇಣ ಬೆಂಗಳೂರಿನಲ್ಲಿ ಅತಿದೊಡ್ಡ ಮಾಸಿಕ ವೆಚ್ಚಗಳಾಗುತ್ತವೆ. ಹೀಗಾಗಿ, ದೈನಂದಿನ ಖರ್ಚಿಗೆ ಅನುಕೂಲವನ್ನು ಸುಮ್ಮನೆ ನೆಪವಾಗಿ ಬಳಸುವುದನ್ನು ನಿಲ್ಲಿಸಿದೆ ಎಂದು ಅವರು ತಿಳಿಸಿದ್ದಾರೆ.
ವೀಕೆಂಡ್ ಪ್ಲ್ಯಾನಿಂಗ್: ಕೊನೆಯ ಕ್ಷಣದ ಪ್ಲ್ಯಾನ್‌ಗಳ ಬದಲು, ವಾರಾಂತ್ಯದ ಯೋಜನೆಗಳನ್ನು ಮುಂಚಿತವಾಗಿ ರೂಪಿಸುವ ಅಭ್ಯಾಸ ಹಣ ಉಳಿಸಲು ಸಹಾಯ ಮಾಡಿತು. ಯಾವುದೇ ಪ್ಲ್ಯಾನ್ ಇಲ್ಲದೆ ಕೆಫೆಗಳಿಗೆ ಭೇಟಿ ನೀಡುವುದು, ಪಬ್‌ಗಳಿಗೆ ಹೋಗುವುದು ಜನರಿಗೆ ಅರಿವಿಲ್ಲದಂತೆ ಅವರ ಉಳಿತಾಯವನ್ನು ಹಾಳುಮಾಡುತ್ತದೆ ಎಂಬುದು ಅವರ ಅಭಿಪ್ರಾಯ.
ಹೊಸ ಗ್ಯಾಜೆಟ್‌ಗಳನ್ನು ಖರೀದಿ: ಕೇವಲ ಇತರರು ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಗ್ಯಾಜೆಟ್‌ಗಳನ್ನು ಅಪ್‌ಗ್ರೇಡ್ ಮಾಡುವುದನ್ನು ನಿಲ್ಲಿಸಿದೆ ಎಂದು ಅಕ್ಷಯ್ ಹೇಳಿದ್ದಾರೆ. ಬೆಂಗಳೂರಿನ ಕಾರ್ಪೊರೇಟ್ ಕೆಲಸದ ಸಂಸ್ಕೃತಿಯು ಅನಗತ್ಯ ಜೀವನಶೈಲಿಯ ಒತ್ತಡವನ್ನು ಸೃಷ್ಟಿಸುತ್ತದೆ.
ಲೈಫ್‌ಸ್ಟೈಲ್ ಟ್ರೆಂಡ್ : ಬೆಂಗಳೂರಿನ ಲೈಫ್‌ಸ್ಟೈಲ್ ಟ್ರೆಂಡ್‌ಗಳನ್ನು ಫಾಲೋ ಮಾಡುವುದನ್ನು ಬಿಟ್ಟುಬಿಟ್ಟೆ. ಇಲ್ಲಿ ತುಂಬಾ ಜನ ತಮಗೆ ನಿಜವಾಗಿಯೂ ಅಗತ್ಯವಿಲ್ಲದಿದ್ದರೂ, ಕೇವಲ ನಾಲ್ಕು ಜನರ ಮುಂದೆ ಅಪ್‌ಡೇಟ್ ಆಗಿ ಕಾಣಿಸಿಕೊಳ್ಳಲು ಹಣ ಖರ್ಚು ಮಾಡುತ್ತಾರೆ.
ಮನೆಯಲ್ಲೇ ಅಡುಗೆ ಮಾಡಿ: ದಿನಾಲೂ ಹೊರಗೆ ತಿನ್ನುವ ಬದಲು, ಕೆಲವೊಮ್ಮೆ ಮನೆಯಲ್ಲೇ ಅಡುಗೆ ಮಾಡಲು ಶುರು ಮಾಡಿದೆ. ಇದು ನನ್ನ ಆರೋಗ್ಯ ಮತ್ತು ಉಳಿತಾಯ ಎರಡನ್ನೂ ನಿಜವಾಗಿಯೂ ಬದಲಾಯಿಸಿತು.
ಸಂಬಳದಿಂದ ಸಮಸ್ಯೆ ಬಗೆಹರಿಯಲ್ಲ: "ಕೇವಲ ಹೆಚ್ಚಿನ ಸಂಬಳ ಮಾತ್ರ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಬೆಂಗಳೂರಿನಲ್ಲಿ ಬದುಕಲು ಹಣಕ್ಕಿಂತ ನಮ್ಮ ಒಳ್ಳೆಯ ಅಭ್ಯಾಸಗಳು ತುಂಬಾ ಮುಖ್ಯವಾಗುತ್ತವೆ ಎಂದು ಅವರು ವಿಡಿಯೋವನ್ನು ಮುಕ್ತಾಯಗೊಳಿಸಿದ್ದಾರೆ.
ಅವರ ಈ ಸಲಹೆಗಳಿಗೆ ಇಂಟರ್ನೆಟ್ ಬಳಕೆದಾರರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಹಲವರು ಇದು ನೂರಕ್ಕೆ ನೂರು ಸತ್ಯ ಎಂದು ಒಪ್ಪಿಕೊಂಡಿದ್ದಾರೆ.












Click it and Unblock the Notifications