ಕ್ವಾಲಿಫೈಯರ್ 1 ಪಂದ್ಯದಲ್ಲಿ ಜಿಟಿ ವಿರುದ್ಧ ಫಿಲ್ ಸಾಲ್ಟ್ ಲಭ್ಯತೆ ಬಗ್ಗೆ ಆರ್‌ಸಿಬಿ ನಾಯಕ ಬಿಗ್ ಅಪ್ಡೇ
IPL 2026 RCB: ಧರ್ಮಶಾಲದಲ್ಲಿ ಮಂಗಳವಾರ (ಮೇ 26) ನಡೆಯಲಿರುವ ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಕದನದಲ್ಲಿ ಆರ್‌ಸಿಬಿ ಪರ ಕೊಹ್ಲಿ ಜೊತೆ ಆರಂಭಿಕರಾಗಿ ಫಿಲ್ ಸಾಲ್ಟ್ ಕಣಕ್ಕಿಳಿಯುವ ಕುರಿತು ನಾಯಕ ರಜತ್ ಪಾಟಿದಾರ್ ಬಿಗ್ ಅಪ್ಡೇಟ್ ನೀಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಆರ್‌ಸಿಬಿ ಈ ಸೀಸನ್ ಆರಂಭದಿಂದಲೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಪ್ಲೇಆಫ್‌ಗೆ ಲಗ್ಗೆ ಇಟ್ಟ ಮೊದಲ ತಂಡ ಎನಿಸಿಕೊಂಡಿತು. ಇದೀಗ ಮಂಗಳವಾರ ಸಂಜೆ 7:30ಕ್ಕೆ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಆರ್‌ಸಿಬಿಯು ತನ್ನಷ್ಟೇ ಬಲಿಷ್ಠವಾಗಿರುವ ಗುಜರಾತ್ ಟೈಟಾನ್ಸ್ ಎದುರಿಸಲು ಭರ್ಜರಿ ಸಿದ್ಧತೆ ನಡೆಸಿದೆ.

ಫಿಲ್ ಸಾಲ್ಟ್ ಸ್ಥಾನ ತುಂಬಿದ್ದ ಬೆಥೆಲ್
ಇನ್ನು ಆರ್‌ಸಿಬಿ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಕಳೆದ ತಿಂಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ತವರಿನ ಪಂದ್ಯದ ವೇಳೆ ಎಡಗೈ ಬೆರಳಿನ ಗಾಯಕ್ಕೆ ಒಳಗಾದ ನಂತರ ರಾಯಲ್ ಚಾಲೆಂಜರ್ಸ್ ಪರ ಆಡಿಲ್ಲ. ಸಾಲ್ಟ್ ಸ್ಕ್ಯಾನಿಂಗ್ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ತಮ್ಮ ದೇಶ ಇಂಗ್ಲೆಂಡ್‌ಗೆ ಮರಳಿದ್ದರು. ಆದ್ದರಿಂದ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮತ್ತೊಬ್ಬ ಇಂಗ್ಲೆಂಡ್ ಆಟಗಾರ ಜೇಕಬ್ ಬೆಥೆಲ್ ಅವರನ್ನು ವಿರಾಟ್ ಕೊಹ್ಲಿ ಅವರ ಜೊತೆ ಆರಂಭಿಕ ಜೊತೆಗಾರನಾಗಿ ಪ್ಲೇಯಿಂಗ್ 11ಗೆ ಸೇರಿಸಿಕೊಂಡಿತ್ತು.
ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮುಂದಿದೆ ದೊಟ್ಟ ಸವಾಲು
ಬಳಿಕ ಕೇಕಬ್ ಬೆಥೆಲ್ ಕೂಡ ಈಗ ಬೆರಳಿನ ಗಾಯಕ್ಕೆ ಒಳಗಾಗಿದ್ದು, ಪ್ಲೇ-ಆಫ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಈಗಾಗಲೇ ಅವರು ಇಂಗ್ಲೆಂಡ್‌ಗೆ ತೆರಳಿದ್ದಾರೆ. ಇದು ಹಾಲಿ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟೂರ್ನಿಯ ಈ ನಿರ್ಣಾಯಕ ಹಂತದಲ್ಲಿ ಫಿಲ್ ಸಾಲ್ಟ್ ಅವರ ಫಿಟ್‌ನೆಸ್ ಮತ್ತು ಆರಂಭಿಕ ಜೋಡಿಯ ಸಂಯೋಜನೆಯ ಬಗ್ಗೆ ಮ್ಯಾನೇಜ್‌ಮೆಂಟ್ ಚಿಂತನೆಯಲ್ಲಿದೆ.
ಫಿಲ್ ಸಾಲ್ಟ್ ಲಭ್ಯತೆ ಬಗ್ಗೆ ಪಾಟಿದಾರ್ ಹೇಳಿದ್ದೇನು?
ಈ ಕುರಿತು ಮಾತನಾಡಿದ ರಜತ್ ಪಾಟಿದಾರ್ ಅವರು, ಕ್ವಾಲಿಫೈಯರ್ 1 ಪಂದ್ಯಕ್ಕೆ ಫಿಲ್ ಸಾಲ್ಟ್ ಅವರ ಲಭ್ಯತೆಯನ್ನು ಖಚಿತಪಡಿಸಲು ನಿರಾಕರಿಸಿದರು. ಆದರೆ ವಿಕೆಟ್ ಕೀಪರ್-ಬ್ಯಾಟರ್ ಸಾಲ್ಟ್ ಪ್ರಸ್ತುತ ಫಿಟ್ ಆಗಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿದರು. 'ಅವರು ಫಿಟ್ ಆಗಿದ್ದಾರೆ ಮತ್ತು ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ ನಾವು ಇನ್ನೂ ಅಂತಿಮ ಪ್ಲೇಯಿಂಗ್ 11 ಅನ್ನು ನಿರ್ಧರಿಸಿಲ್ಲ,' ಎಂದು ಆರ್‌ಸಿಬಿ ನಾಯಕ ತಿಳಿಸಿದರು.
ಕೊಹ್ಲಿ ಜೊತೆ ಕಣಕ್ಕಿಳಿಯುವವರು ಯಾರು?
ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ಪರ ಇನ್ನಿಂಗ್ಸ್ ಆರಂಭಿಸಿದ್ದರು. ಆ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ 44 ರನ್ ಸಿಡಿಸಿದ ಅವರು ಕೊಹ್ಲಿ ಜೊತೆಗೂಡಿ 60 ರನ್‌ಗಳ ಸ್ಫೋಟಕ ಜೊತೆಯಾಟವಾಡಿದ್ದರು. ಪ್ಲೇ-ಆಫ್ ಪಂದ್ಯಗಳಲ್ಲೂ ಅವರು ಅದೇ ಸ್ಥಾನದಲ್ಲಿ ಬ್ಯಾಟಿಂಗ್ ಮುಂದುವರಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ಈಗ ಕುತೂಹಲ ಮೂಡಿಸಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಐಪಿಎಲ್ ಫೈನಲ್ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪಾಟಿದಾರ್ ಅತ್ಯಂತ ಬುದ್ಧಿವಂತಿಕೆಯಿಂದ ಉತ್ತರಿಸಿದ್ದಾರೆ. ಸಾಮಾನ್ಯವಾಗಿ ಐಪಿಎಲ್ ನಿಯಮದಂತೆ ಪ್ಲೇ-ಆಫ್ ತಲುಪುವ ತಂಡಗಳು ಯಾವುದಿದ್ದರೂ ಸಹ ಹಾಲಿ ಚಾಂಪಿಯನ್ ತಂಡದ ತವರಿನ ಮೈದಾನದಲ್ಲೇ ಫೈನಲ್ ಪಂದ್ಯವನ್ನು ಆಯೋಜಿಸಲಾಗುತ್ತದೆ.
ಆದಾಗ್ಯೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಪಂದ್ಯದ ಟಿಕೆಟ್‌ಗಳಿಗೆ, ವಿಶೇಷವಾಗಿ ಶಾಸಕರು ಮತ್ತು ಅಧಿಕಾರಿಗಳಿಂದ ಅತಿಯಾದ ಬೇಡಿಕೆ ಬಂದಿರುವುದು ಸೇರಿದಂತೆ ಇತರ ಕಾರಣಗಳನ್ನು ನೀಡಿ ಬಿಸಿಸಿಐ ಫೈನಲ್ ಪಂದ್ಯದ ಆತಿಥ್ಯದಿಂದ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಹೊರಗಿಟ್ಟಿತ್ತು. ಈ ಕುರಿತು ಮಾತನಾಡಿದ ಆರ್‌ಸಿಬಿ ನಾಯಕ, 'ಅದು ನನ್ನ ನಿಯಂತ್ರಣದಲ್ಲಿ ಇಲ್ಲ. ಫೈನಲ್ ಪಂದ್ಯ ಎಲ್ಲೇ ನಡೆದರೂ ಅದು ಐತಿಹಾಸಿಕ ತಾಣವೇ ಆಗಿರುತ್ತದೆ. ನಮ್ಮ ಗಮನವೇನಿದ್ದರೂ ಫೈನಲ್ ತಲುಪುವುದರ ಮೇಲೆ ಮಾತ್ರ ಇದೆ,' ಎಂದು ಉತ್ತರಿಸಿದರು. ಒಟ್ಟಿನಲ್ಲಿ ಇಂದಿನ ಪಂದ್ಯದಿಂದಲೂ ಫಿಲ್ ಸಾಲ್ಟ್ ಹೊರಗುಳಿದರೆ ಅವರ ಬದಲಿಗೆ ಯಾರನ್ ಕಣಕ್ಕಿಳಿಸುತ್ತದೆಯೋ ಎಂದು ಕಾದುನೋಡಬೇಕಿದೆ. ಮತ್ತೊಂದೆಡೆ ಅಭಿಮಾನಿಗಳು ಸಾಲ್ಟ್ ಆಟ ನೋಡಲು ತುದಿಗಾಲಲ್ಲಿ ಕಾದು ನಿಂತಿದ್ದಾರೆ.












Click it and Unblock the Notifications