ಐಪಿಎಲ್ 2026: ಈ ತಂಡ ಫೈನಲ್ ಟಿಕೆಟ್ ಪಡೆಯುವುದು ಪಕ್ಕಾ ಎಂದ ಆರ್‌ಸಿಬಿ ನಾಯಕ ಪಾಟಿದಾರ್
IPL 2026 Final: ಧರ್ಮಶಾಲಾದಲ್ಲಿ ಮಂಗಳವಾರ (ಮೇ 26) ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರು ಯಾವ ತಂಡ ಫೈನಲ್ ಟಿಕೆಟ್ ಪಡೆಯಲಿದೆ ಎನ್ನುವ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ.
ರಜತ್ ಪಾಟಿದಾರ್ ಅವರು ಕಳೆದ ವರ್ಷ ನಾಯಕನಾಗಿ ತಮ್ಮ ಚೊಚ್ಚಲ ಸೀಸನ್‌ನಲ್ಲೇ ಆರ್‌ಸಿಬಿಗೆ ಮೊದಲ ಬಾರಿಗೆ ಐಪಿಎಲ್ ಕಿರೀಟವನ್ನು ತಂದುಕೊಟ್ಟಿದ್ದರು. ಈ ಬಾರಿಯೂ ತಂಡವನ್ನು ಉತ್ತಮವಾಗಿ ಮನ್ನಡೆಸಿಕೊಂಡು ಹೋಗುವ ಮೂಲಕ ಗಮನ ಸೆಳೆದಿದ್ದಾರೆ. ಅವರ ದಕ್ಷ ನಾಯಕತ್ವದ ನೆರವಿನಿಂದ ರಾಯಲ್ ಚಾಲೆಂಜರ್ಸ್ ತಂಡವು ಐಪಿಎಲ್ ಇತಿಹಾಸದಲ್ಲಿ ಎರಡನೇ ಬಾರಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವುದು ವಿಶೇಷವಾಗಿದೆ.

ಉತ್ತಮ ಫಾರ್ಮ್‌ನಲ್ಲಿರುವ ಆರ್‌ಸಿಬಿ-ಜಿಟಿ
ಆದರೂ ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಟೈಟಾನ್ಸ್ ಒಡ್ಡಲಿರುವ ಸವಾಲಿನ ಬಗ್ಗೆ ಆರ್‌ಸಿಬಿ ಎಚ್ಚರಿಕೆಯಿಂದಿರಬೇಕಿದೆ. ಏಕೆಂದರೆ ಶುಭ್‌ಮನ್ ಗಿಲ್ ನಾಯಕತ್ವದ ಈ ತಂಡವು ಕೂಡ ಆಡಿದ 14 ಪಂದ್ಯಗಳಲ್ಲಿ 9ರಲ್ಲಿ ಗೆಲ್ಲುವು ಸಾಧಿಸುವ ಮೂಲಕ 18 ಅಂಕಗಳೊಂದಿಗೆ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ಗೆ ಸಮಬಲದ ಪೈಪೋಟಿ ನೀಡಿತ್ತು. ಆದರೆ ನೆಟ್‌ರೇಟ್ ಆಧಾರದ ಮೇಲೆ ಎರಡನೇ ಸ್ಥಾನ ಅಲಂಕರಿಸಿದ್ದು, ಆರ್‌ಸಿಬಿ ಜೊತೆಗೆ ಮೊದಲ ಕ್ವಾಲಿಫೈಯರ್‌ನಲ್ಲಿ ಕಣಕ್ಕಿಲಿಯಲು ಭರ್ಜರಿ ಸಿದ್ಧತೆ ನಡೆಸಿದೆ.
ರಜತ್ ಪಾಟಿದಾರ್ ಹೇಳಿದ್ದೇನು?
ಈ ಸೀಸನ್ ಆರಂಭದಿಂದಲೂ ಉತ್ತಮವಾಗಿ ಪ್ರದರ್ಶನ ತೋರಿರುವ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಅತ್ಯಂತ ಪ್ರಬಲ ತಂಡಗಳಾಗಿ ಹೊರಹೊಮ್ಮಿವೆ. ಹೀಗಾಗ ಅಂಕಪಟ್ಟಿಯಲ್ಲಿ ಇವೆರಡೂ ಮೊದಲ ಎರಡು ಸ್ಥಾನಗಳನ್ನು ಪಡೆದು ಫೈನಲ್‌ಗೆ ಅರ್ಹತೆ ಪಡೆಯಲು ಎರಡು ಅವಕಾಶಗಳನ್ನು ಗಿಟ್ಟಿಸಿಕೊಂಡಿರುವುದು ಅವುಗಳ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.
ಇನ್ನೂ ಇಂದಿನ ಪಂದ್ಯದಲ್ಲಿ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ ಯಾರು ಅದ್ಭುತವಾಗಿ ಪ್ರದರ್ಶನ ನೀಡುತ್ತಾರೆಯೋ ಅವರು ನೇರವಾಗಿ ಫೈನಲ್‌ಗೆ ಪ್ರವೇಶದ ಟಿಕೆಟ್ ಪಡೆಯಲಿದ್ದಾರೆ.
ಫೈನಲ್ ಟಿಕೆಟ್ ಪಡೆಯುವ ತಂಡ ಹೆಸರಿಸಿದ ರಜತ್
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರು, 'ಎರಡೂ ತಂಡಗಳು ಉತ್ತಮ ಫಾರ್ಮ್‌ನಲ್ಲಿವೆ. ಪಂದ್ಯದಲ್ಲಿ ಯಾರು ತಮ್ಮ ಯೋಜನೆಗಳನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತರುತ್ತಾರೋ ಮತ್ತು ಯಾರು ಒತ್ತಡದ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸುತ್ತಾರೆಯೋ ಅವರ ತಂಡವು ಪಂದ್ಯವನ್ನು ಗೆಲ್ಲಲಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ ಎರಡೂ ತಂಡಗಳು ಸಮಾನವಾಗಿ ಬಲಿಷ್ಠವಾಗಿವೆ,' ಎಂದು ಹೇಳಿದರು.
'ನಾವು ಒತ್ತಡದ ಸಮಯದಲ್ಲಿ ತಾಳ್ಮೆಯಿಂದ ಇರಬೇಕಾಗುತ್ತದೆ. ಖಂಡಿತವಾಗಿಯೂ ಇದು ಕ್ವಾಲಿಫೈಯರ್ 1 ಎಂಬುದು ದೊಡ್ಡ ವೇದಿಕೆ. ನಾವು ನಮ್ಮ ಸಂಯಮವನ್ನು ಕಳೆದುಕೊಳ್ಳಬಾರದು ಮತ್ತು ನಾವು ಮಾಡುತ್ತಿರುವ ಕೆಲಸದ ಮೇಲೆ ನಮಗೆ ನಂಬಿಕೆ ಇರಬೇಕು,' ಎಂದು ಅವರು ತಿಳಿಸಿದರು.
ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಆರ್‌ಸಿಬಿ
ಕಳೆದ ಕೆಲವು ಸೀಸನ್‌ಗಳಿಂದ ಆರ್‌ಸಿಬಿಯ ಯಶಸ್ಸಿನಲ್ಲಿ ಬೌಲಿಂಗ್ ವಿಭಾಗವು ಪ್ರಮುಖ ಪಾತ್ರ ವಹಿಸಿದೆ. ಇಂದಿನ ವೇಗದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್ ಮತ್ತು ರಸಿಖ್ ಸಲಾಮ್ ದಾರ್ ಪ್ರಮುಖ ಪಾತ್ರವಹಿಸಲಿದ್ದಾರೆ. ಪ್ರಸ್ತುತ ಭುವನೇಶ್ವರ್ ಕುಮಾರ್ ಅವರು 18.50ರ ಸರಾಸರಿ ಮತ್ತು 8.7ರ ಎಕಾನಮಿಯಲ್ಲಿ 24 ವಿಕೆಟ್‌ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಹ್ಯಾಜಲ್‌ವುಡ್ ಜೊತೆಗೂಡಿ ಅವರು ಪವರ್‌ಪ್ಲೇನಲ್ಲಿ ಎದುರಾಳಿಗಳ ವಿರುದ್ಧ ಪ್ರಾಬಲ್ಯ ಸಾಧಿಸಲು ನೆರವಾಗಿದ್ದಾರೆ.
ತಮ್ಮ ಬೌಲಿಂಗ್ ಪಡೆಯ ಬಗ್ಗೆ ಮಾತನಾಡಿದ ಪಾಟಿದಾರ್ ಅವರು, 'ಬೌಲಿಂಗ್ ನಮ್ಮ ಶಕ್ತಿಯಾಗಿದೆ. ಪವರ್‌ಪ್ಲೇನಲ್ಲಿ ನಾವು ಬೌಲಿಂಗ್ ಮಾಡುವ ರೀತಿ ಅತ್ಯಂತ ನಿರ್ಣಾಯಕವಾಗಲಿದೆ ಎಂದು ನಾನು ಭಾವಿಸುತ್ತೇನೆ. ನಾವು ಇಲ್ಲಿ ರನ್ ರಕ್ಷಿಸಿಕೊಳ್ಳಲು ಬಂದಿಲ್ಲ, ಬದಲಿಗೆ ಆಕ್ರಮಣಕಾರಿ ಮನೋಭಾವದೊಂದಿಗೆ ದಾಳಿ ಮಾಡಲು ಬಂದಿದ್ದೇವೆ ಎಂಬುದು ತಂಡದ ಪ್ರತಿಯೊಬ್ಬರಿಗೂ ತಿಳಿದಿದೆ,' ಎಂದು ಹೇಳಿದರು.
'ನಾವು ಆರಂಭಿಕ ವಿಕೆಟ್‌ಗಳಿಗಾಗಿ ಹುಡುಕಾಟ ನಡೆಸುತ್ತೇವೆ. ಇಲ್ಲಿಯವರೆಗೆ ನಾವು ಮಾಡಿಕೊಂಡು ಬಂದಿರುವುದು ಕೂಡ ಅದನ್ನೇ. ಭುವನೇಶ್ವರ್ ಕುಮಾರ್, ಹ್ಯಾಜಲ್‌ವುಡ್ ಮತ್ತು ರಸಿಖ್ ಸಲಾಮ್ ದಾರ್ ಅಚ್ಚುಟ್ಟಾಗಿ ಬೌಲಿಂಗ್ ದಾಳಿ ಮುಂದುವರೆಸಿಕೊಂಡು ಬಂದಿದ್ದಾರೆ. ನಾವು ಇದೇ ಪ್ರಕ್ರಿಯೆಯನ್ನು ಮುಂದುವರಿಸುತ್ತೇವೆ ಎಂಬ ಭರವಸೆ ನನಗಿದೆ,' ಎಂದು ಅವರು ತಿಳಿಸಿದರು.












Click it and Unblock the Notifications