‘65’ ಅಂದ್ರೇನು? ಚಿಕನ್ 65 ಬಗ್ಗೆ ವೈರಲ್ ಆಗಿದ್ದ ಎಲ್ಲ ಕಥೆಗಳಿಗೆ ಇಲ್ಲಿದೆ ಉತ್ತರ
ಚಿಕನ್ 65 ಹೆಸರು ಕೇಳಿದರೆ ಸಾಕು ಮಾಂಸಾಹಾರ ಪ್ರಿಯರ ಬಾಯಲ್ಲಿ ನೀರೂರುತ್ತದೆ. ಖಾರದ ರುಚಿಯೊಂದಿಗೆ ಸಿಗುವ ಈ ಜನಪ್ರಿಯ ಸ್ಟಾರ್ಟರ್ ಭಾರತದೆಲ್ಲೆಡೆ ಮಾತ್ರವಲ್ಲ ವಿದೇಶಗಳಲ್ಲಿಯೂ ಸಾಕಷ್ಟು ಜನಪ್ರಿಯವಾಗಿದೆ. ಆದರೆ 'ಚಿಕನ್ 65' ಎಂಬ ಹೆಸರಿನ ಹಿಂದೆ ಇರುವ ನಿಜವಾದ ಕಥೆ ಏನು ಎಂಬುದು ಅನೇಕರಿಗೆ ಇನ್ನೂ ಗೊತ್ತಿಲ್ಲ.
ವರ್ಷಗಳಿಂದ ಚಿಕನ್ 65 ಹೆಸರಿನ ಬಗ್ಗೆ ಹಲವು ಕಥೆಗಳು ಹರಿದಾಡುತ್ತಿವೆ. ಕೆಲವರ ಪ್ರಕಾರ ಈ ಖಾದ್ಯ ತಯಾರಿಸಲು 65 ಬಗೆಯ ಮಸಾಲೆ ಮತ್ತು ಪದಾರ್ಥಗಳನ್ನು ಬಳಸಲಾಗುತ್ತದೆಯಂತೆ. ಇನ್ನೂ ಕೆಲವರು 65 ದಿನದ ಮೃದುವಾದ ಕೋಳಿಯ ಮಾಂಸದಿಂದ ಈ ಡಿಶ್ ತಯಾರಿಸಲಾಗುತ್ತಿತ್ತು ಎಂದು ಹೇಳುತ್ತಾರೆ. ಮತ್ತೊಂದು ಜನಪ್ರಿಯ ಕಥೆಯ ಪ್ರಕಾರ ಸೇನಾ ಕ್ಯಾಂಟೀನ್‌ನಲ್ಲಿ ಇದು 65ನೇ ಸಂಖ್ಯೆಯ ಮೆನು ಐಟಂ ಆಗಿದ್ದರಿಂದ ಈ ಹೆಸರು ಬಂದಿದೆ ಎನ್ನಲಾಗುತ್ತದೆ. ಆದರೆ ಈ ಎಲ್ಲ ಕಥೆಗಳಿಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲ.

ಅತ್ಯಂತ ವಿಶ್ವಾಸಾರ್ಹವಾಗಿ ಪರಿಗಣಿಸಲ್ಪಡುವ ಮಾಹಿತಿಯ ಪ್ರಕಾರ, ಚಿಕನ್ 65 ತಮಿಳುನಾಡಿನ ಚೆನ್ನೈ ನಗರದಲ್ಲಿ ಹುಟ್ಟಿಕೊಂಡ ಖಾದ್ಯವಾಗಿದೆ. ಆಗ ಚೆನ್ನೈ ನಗರವನ್ನು ಮದ್ರಾಸ್ ಎಂದು ಕರೆಯಲಾಗುತ್ತಿತ್ತು. 1965ರಲ್ಲಿ ಚೆನ್ನೈನ ಪ್ರಸಿದ್ಧ ಬುಹಾರಿ ಹೋಟೆಲ್‌ನ ಸ್ಥಾಪಕರಾದ ಎ.ಎಂ. ಬುಹಾರಿ ಈ ಖಾದ್ಯವನ್ನು ಪರಿಚಯಿಸಿದ್ದರು ಎಂದು ಹೇಳಲಾಗುತ್ತದೆ.
ಬುಹಾರಿ ಹೋಟೆಲ್‌ನ ಅಧಿಕೃತ ದಾಖಲೆಗಳ ಪ್ರಕಾರ, 1965ರಲ್ಲಿ ಮೊದಲ ಬಾರಿಗೆ ಈ ಖಾದ್ಯವನ್ನು ಪರಿಚಯಿಸಲಾಯಿತು. ಇದೇ ಕಾರಣಕ್ಕೆ ಇದಕ್ಕೆ 'ಚಿಕನ್ 65' ಎಂಬ ಹೆಸರು ಬಂದಿದೆ.
ಈ ಖಾದ್ಯವು ಎಷ್ಟು ಜನಪ್ರಿಯವಾಯಿತೆಂದರೆ, ಇದರ ಅಭೂತಪೂರ್ವ ಯಶಸ್ಸಿನಿಂದ ಸ್ಫೂರ್ತಿ ಪಡೆದ ಬುಹಾರಿ ಹೋಟೆಲ್ ಆನಂತರದ ವರ್ಷಗಳಲ್ಲಿ ಹೊಸ ರುಚಿಗಳನ್ನು ಪರಿಚಯಿಸಿತು:
ಚಿಕನ್ 78 (1978ರಲ್ಲಿ)
ಚಿಕನ್ 82 (1982ರಲ್ಲಿ)
ಚಿಕನ್ 90 (1990ರಲ್ಲಿ)
ಹಲವು ಹೊಸ ಮಾದರಿಯ ಚಿಕನ್ ಸ್ಟಾರ್ಟರ್‌ಗಳು ಬಂದಿದ್ದರೂ, ಚಿಕನ್ 65 ತನ್ನ ವಿಶಿಷ್ಟ ರುಚಿ ಮತ್ತು ಹೆಸರಿನ ಕಾರಣದಿಂದ ಇಂದಿಗೂ ಅತ್ಯಂತ ಜನಪ್ರಿಯ ಖಾದ್ಯವಾಗಿ ಉಳಿದಿದೆ. ಈ ಹೆಸರಿನ ಹಿಂದೆ ದೊಡ್ಡ ರಹಸ್ಯವೇನೂ ಇಲ್ಲ; ಅದು ಕೇವಲ ಈ ಖಾದ್ಯ ಹುಟ್ಟಿದ ವರ್ಷದ ನೆನಪನ್ನು ಮಾತ್ರ ಹೊತ್ತುಕೊಂಡಿದೆ.
ಸೂಚನೆ: ಈ ಮಾಹಿತಿಯು ಬುಹಾರಿ ಹೋಟೆಲ್‌ಗೆ ಸಂಬಂಧಿಸಿದ ದಾಖಲೆಗಳು ಹಾಗೂ ಆಹಾರ ಇತಿಹಾಸದ ಮಾಹಿತಿಗಳ ಆಧಾರಿತವಾಗಿದೆ. ಚಿಕನ್ 65 ಹೆಸರಿನ ಬಗ್ಗೆ ಹರಿದಾಡುವ ಹಲವು ಕಥೆಗಳು ಅಧಿಕೃತವಾಗಿ ದೃಢೀಕರಿಸಲ್ಪಟ್ಟಿಲ್ಲ.














Click it and Unblock the Notifications