ಸುಧೀಂದ್ರ ಕುಲಕರ್ಣಿಯವರಿಂದ ಕನ್ನಡಿಗರಿಗೆ ಹಿಂದೀ ಪಾಠ!

By: ಪ್ರವೀಣ್ ರಾಜು
Subscribe to Oneindia Kannada

ಸುಧೀಂದ್ರ ಕುಲಕರ್ಣಿಯವರು ಗೂಗಲ್ ಹುಡುಕಾಟದಂತೆ ಬೆಳಗಾವಿನವರು. ಅಥಣಿಯ ಜಾದವಜಿ ಆನಂದಜಿ ಸ್ಕೂಲಿನಲ್ಲಿ ಓದಿ, ಐಐಟಿ ಬಾಂಬೆಯಲ್ಲಿ ವಿದ್ಯಾಭ್ಯಾಸ ಮಾಡಿದವರು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಅವರಿಗೆ ಭಾಷಣ ಸಿದ್ಧಪಡಿಸಲು ಸಹಾಯ ಮಾಡುತ್ತಿದ್ದರು, ಅಡ್ವಾಣಿಯವರಿಗೂ ರಾಜಕೀಯ ಸಲಹೆಗಾರರಾಗಿದ್ದರು. ಅಡ್ವಾಣಿಯವರ ನೇತೃತ್ವದಲ್ಲಿ ಬಿಜೆಪಿ ಹೀನಾಯವಾಗಿ ಸೋತನಂತರ ಬಿಜೆಪಿಗೆ 2009ರಲ್ಲಿ ಗುಡ್ ಬೈ ಹೇಳಿದ್ದರು.

ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಮೊಹಮ್ಮದ್ ಕಸೂರಿಯವರ ಪುಸ್ತಕವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಹೋಗಿ ಶಿವಸೇನೆ ಕಾರ್ಯಕರ್ತರಿಂದ ಮುಖಕ್ಕೆ ಮಸಿ ಬಳಿಸಿಕೊಂಡಿದ್ದ ಮಹಾಮೇಧಾವಿ ರಾಜಕಾರಣಿ ಸುಧೀಂದ್ರ ಕುಲಕರ್ಣಿಯವರು ಟ್ವಿಟ್ಟರಿನಲ್ಲಿ ಕನ್ನಡಿಗರಿಗೆ ಹಿಂದೀ ಮತ್ತು ದೇಶಭಕ್ತಿಯ ಪಾಠ ಮಾಡಲು ಹೊರಟಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರವೀಣ್ ರಾಜು ಅವರು ಕೆಳಗೆ ತಕ್ಕ ಉತ್ತರ ಕೊಟ್ಟಿದ್ದಾರೆ. [ಶಿವಸೇನೆಯಿಂದ ಸುಧೀಂದ್ರ ಕುಲಕರ್ಣಿ ಮುಖಕ್ಕೆ ಮಸಿ]

Sudheendra Kulkarni says Kannadigas must learn Hindi

ಇವರು ಟ್ವಿಟ್ಟರ್ ನಲ್ಲಿ ಮಾಡಿರುವ ಪೋಸ್ಟ್ ಗಳನ್ನು ಒಮ್ಮೆ ನೋಡೋಣ.

ಕರ್ನಾಟಕವು ಹಿಂದಿ ಮಾತನಾಡುವ ಪ್ರದೇಶ ಅಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಇಲ್ಲಿಗೆ ಹಿಂದಿ ಭಾಷೆಯನ್ನು ತಂದು ಇವರು ಯಾರನ್ನು ಉದ್ಧಾರ ಮಾಡಬೇಕೆಂದಿದ್ದಾರೊ ಕಾಣೆ. ಆದರೆ ಒಂದಂತೂ ಸತ್ಯ. ಹಿಂದಿ ಕರ್ನಾಟಕಕ್ಕೆ ಒಕ್ಕರಿಸಿ, ಕನ್ನಡ ಭಾಷೆ ಇಂದು ನಮ್ಮ ಬ್ಯಾಂಕುಗಳಲ್ಲಿ, ಮಾಲುಗಳಲ್ಲಿ ಕಣ್ಮರೆಯಾಗುತ್ತಿರುವುದು ಕಾಣುತ್ತಿದ್ದೇವೆ.


ಹಿಂದಿ ಕರ್ನಾಟಕದಲ್ಲಿ ಕನ್ನಡವನ್ನು ಕಿತ್ತೊಗೆಯುತ್ತಿದೆಯೇ ಹೊರತು ಇಂಗ್ಲಿಷನ್ನಲ್ಲ. ಕರ್ನಾಟಕದ ಮಧ್ಯ ಭಾಗದಲ್ಲಿರುವ ಊರಿನ ಬ್ಯಾಂಕುಗಳಲ್ಲಿ ಬ್ಯಾಂಕಿನ ಸಿಬ್ಬಂದಿಗೆ ಕನ್ನಡ ಮಾತಾಡಲು ಬರುವುದಿಲ್ಲ ಮತ್ತು ಅವರು ನಮಗೆ ಹಿಂದಿ ರಾಷ್ಟ್ರಭಾಷೆ ಎನ್ನುವ ಬೋಧನೆ ಮಾಡುತ್ತಾರೆ. ಈಗ ಹೇಳಿ ನಮ್ಮ ಕನ್ನಡಕ್ಕೆ ಮಾರಕವಾಗಿರುವ ಭಾಷೆಯನ್ನು ಒಪ್ಪಿಕೊಳ್ಳುವುದು ಹೇಗೆ ತಾನೇ ಸಾಧ್ಯ? [ಟೀಂ ಇಂಡಿಯಾಕ್ಕೆ 'ಹಿಂದಿ' ಭಾಷೆ ಬಲ್ಲ ಕೋಚ್ ಬೇಕಂತೆ!]

ಇವರ ಈ ಹೇಳಿಕೆಯನ್ನು ಗಮನಿಸಿ, ಭಾರತದಲ್ಲಿ ಎಲ್ಲ ಭಾಷೆಗಳು ಒಂದೇ ಅಂತೆ. ಆದರೆ ಹಿಂದಿ ಇಂಗ್ಲಿಷ್ ಮೇಲಂತೆ, ಹಾಗು ಅವುಗಳ ಮಹತ್ವ ಅಧಿಕವಂತೆ. ಕರ್ನಾಟಕದಲ್ಲೊ ತಮಿಳುನಾಡಿನಲ್ಲೊ ಹುಟ್ಟಿ ಬೆಳೆದ ಮಕ್ಕಳಿಗೆ ಹಿಂದಿಯ ಅವಶ್ಯಕತೆಯೂ ಇರುವುದಿಲ್ಲ. ಇಲ್ಲಿಯ ಮಕ್ಕಳಿಗೆ ಅವರದೇ ಆದ ಭಾಷೆಯಿದೆ. ಅವರದೇ ಒಂದು ಸಂಸ್ಕೃತಿಯಿದೆ. ಇವರು ಹೇಳಿದಂತೆ ಹಿಂದಿ ಭಾರತೀಯರನ್ನು ಒಗ್ಗೂಡಿಸಿದ್ದರೆ, ನಮಗೆ ಇಂಗ್ಲಿಷಿನ ಅವಶ್ಯಕತೆಯೇ ಇರುತ್ತಿರಲಿಲ್ಲವೇನೋ!


ಆದರೆ ಭಾರತದಲ್ಲಿ ಹಿಂದಿಗಿಂತ ಎತ್ತರಕ್ಕೆ ಬೆಳೆದು ನಿಂತ ಭಾಷೆಗಳಿವೆ. ಕನ್ನಡ ತಮಿಳು ಇವುಗಳು ಹಿಂದಿಗಿಂತ ಹೆಚ್ಚು ಪ್ರಾಚೀನವಾದ ಭಾಷೆಗಳು. ಹಿಂದಿಯನ್ನು ಇಲ್ಲಿ ಹೇರುವುದು ಭಾರತದ ಏಕತೆಗೆ ಮಾರಕ. ದಕ್ಷಿಣ ಭಾರತದ ಜನರು ರಾಷ್ಟ್ರೀಯತೆಯನ್ನು ಮೆರೆಯಲು ಹಿಂದಿ ಕಲಿಯಬೇಕು ಎಂದರೆ ಅದು ರಾಷ್ಟ್ರೀಯತೆಯಲ್ಲ ದಾಸ್ಯವಾಗುತ್ತದೆ. ದಾಸ್ಯವನ್ನು ವಿರೋಧಿಸುವ ಜನರನ್ನು ದೇಶ ವಿರೋಧಿ ಎಂದರೆ ಅದು ಇಲ್ಲಿನ ಜನರಿಗೆ ಹಿಂದಿಯಿಂದ ಮುಕ್ತಿ ಪಡೆಯುವ ಹೋರಾಟವಾಗಿ ಸಂಭವಿಸಬಹುದು.

ಭಾರತದಲ್ಲಿ ಎಲ್ಲ ಧರ್ಮಗಳೂ ಸಮಾನ, ಹಿಂದೂ ಧರ್ಮ ಶ್ರೇಷ್ಠ ಎಂದರೆ ಹೇಗಾಗುತ್ತದೆ ಸ್ವಾಮಿ... ಹಾಗೆ ಎಲ್ಲರೂ ಸಮಾನ ಎಲ್ಲರ ಭಾಷೆಗಳು ಸಮಾನ. ಭಾಷಾ ಹಕ್ಕುಗಳು ಮಾನವನ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. [ವಿಶ್ವ ತಾಯ್ನುಡಿ ದಿನ ಇತರ ಭಾಷೆಯ ದನಿಯೂ ಕೇಳಲಿ]


ದಕ್ಷಿಣ ಭಾರತದಲ್ಲಿ ಹಿಂದಿಯ ಅವಶ್ಯಕತೆ ಕಾಣುವವವರು ದಕ್ಷಿಣ ಭಾರತದ ಯಾವುದೇ ಗಂಧ ಗಾಳಿ ಗೊತ್ತಿಲ್ಲದವರು. ಹಾಗೂ ಅವರು ಈ ಭಾಗವನ್ನು ದಿಲ್ಲಿಯ ದಾಸ್ಯದ ಭಾಗಗಳು ಎಂದುಕೊಂಡಿರುವವರು. "ಬಿ ಎ ರೋಮನ್ ಇನ್ ರೋಮ್"ಎಂಬ ಇಂಗ್ಲಿಷ್ ಗಾದೆಯನ್ನು ಕೇಳಿಲ್ಲವೇ? ದೇಶಭಕ್ತಿಗೆ ಯಾವುದೇ ಭಾಷೆಯಿಲ್ಲ ಎಂಬುದನ್ನು ಕುಲಕರ್ಣಿಯವರು ಅರಿಯಬೇಕಾಗಿದೆ.

ಕನ್ನಡಕ್ಕೆ ಸಂಕಟ ಇರುವುದು ಆಂಗ್ಲ ಮಾತಾಡುವ ಕನ್ನಡಿಗರಿಂದ ಎಂಬುವುದು ಸತ್ಯದ ಮಾತು. ಆದರೆ ಹಿಂದಿಯನ್ನು ಹೇರುವ ಕೇಂದ್ರ ಸರ್ಕಾರದಿಂದ ಯಾವುದೇ ಸಂಕಟ ಇಲ್ಲವೆಂಬುದು ಮುರ್ಖತನ. ಸ್ವಾತಂತ್ರ್ಯ ಬಂದಾಗಿನಿಂದ ಭಾರದಲ್ಲಿ 800 ಭಾಷೆಗಳು ಕಣ್ಮರೆಯಾಗಿವೆ. ಭಾರತದಲ್ಲಿ ಭಾಷಾ ತಾರತಮ್ಯ ತಾಂಡವವಾಡುತ್ತಿದೆ. ಭಾರತವು ಯಾವ ಒಂದು ಭಾಷೆಯ ಆಧಾರದ ಮೇಲೆ ಕಟ್ಟಲ್ಪಟ್ಟಿಲ್ಲ. ಹಾಗೆ ಮಾಡಲು ಹೊರಡುವುದು ಭಾರತದ ಏಕತೆಗೆ ಮಾರಕ ಎಂಬುವುದು ಕಟುಸತ್ಯ. [ಕನ್ನಡ ಕಲಿತರೆ ಏನು ಲಾಭ ಎಂದು ಪ್ರಶ್ನೆ ಕೇಳುವವರಿಗೆ]

ಓದುಗರೆ, ಈ ವಿಷಯ ಕುರಿತಂತೆ ತಮ್ಮ ವಸ್ತುನಿಷ್ಠ ಅಭಿಪ್ರಾಯವನ್ನು ನಿರ್ಭಿಡೆಯಾಗಿ ಮಂಡಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sudheendra Kulkarni, an Indian politician and columnist and head of Observer Research Foundation, says there is no threat to Kannada from Hindi language and Kannadigas should learn Hindi. He has post series of messages on twitter on this subject.
Please Wait while comments are loading...