ದಿನೇಶ್ ಅಮಿನ್‌ಮಟ್ಟು ಅವರಿಗೆ ಭರತ್ ಶಾಸ್ತ್ರೀ ಓಪನ್ ಲೆಟರ್

By: ಭರತ್ ಎನ್ ಶಾಸ್ತ್ರೀ, ಇಂಡಿಯಾನಾ, ಅಮೆರಿಕ
Subscribe to Oneindia Kannada

ಮಾನ್ಯ ಶ್ರೀ ದಿನೇಶ್ ಅಮಿನ್ ಮಟ್ಟು ಅವರಿಗೆ ವಂದನೆಗಳು.

ಜ್ಞಾನವೃದ್ಧರೂ ವಯೋವೃದ್ಧರೂ ಆದ ಪೂಜ್ಯ ವಿಶ್ವೇಶತೀರ್ಥ ಸ್ವಾಮೀಜಿ ಅಥವಾ ಪೇಜಾವರ ಮಠದ ಸ್ವಾಮೀಜಿಯವರಿಗೆ ಬಹಿರಂಗ ಪತ್ರವೊಂದನ್ನು ನೀವು ಬರೆದಿದ್ದು, kannada.oneindia.com ಜಾಲತಾಣದಲ್ಲಿ ಪ್ರಕಟವಾಗಿದ್ದು, ಅದನ್ನು ಓದಿದೆ. ಜವಾಬ್ದಾರಿಯುತ ನಾಗರಿಕನಾಗಿ ಕರ್ತವ್ಯ ಪ್ರಜ್ಞೆಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ ಎಂಬ ಸ್ಪಷ್ಟನೆಯನ್ನೂ ನೀಡಿದ್ದೀರಿ, ಸಂತೋಷ.

ನಿಮ್ಮ ಈ ಮಾತಿನ ಉದ್ದೇಶ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನಾಗಿ ಸರ್ಕಾರ ಕೊಟ್ಟಿರುವ ಹುದ್ದೆಯಲ್ಲಿದ್ದುಕೊಂಡು ಅದರ ಪ್ರಭಾವವನ್ನು ಬಳಸದೆ ಪತ್ರ ಬರೆಯುತ್ತಿದ್ದೇನೆ ಎಂದು ಹೇಳಲು ಇದ್ದಿರಬೇಕು ಎಂದುಕೊಂಡಿದ್ದೇನೆ. ಏಕೆಂದರೆ, ವೈಚಾರಿಕ (ಮತ್ತು ವೈಯುಕ್ತಿಕ) ದಾಳಿಗಳಿಗೆ ಪ್ರತಿಯಾಗಿ ತೆರೆಮರೆಯಲ್ಲಿ ಮತ್ತು ಬಹಿರಂಗವಾಗಿ ನೀವು ಇದೇ ಹುದ್ದೆ ಮತ್ತದರ ಪ್ರಭಾವವನ್ನು ಯಾವುದೇ ಎಗ್ಗುಸಿಗ್ಗಿಲ್ಲದೆ ಬಳಸಿದ್ದನ್ನು ರಾಜ್ಯದ ಜನತೆ ನೋಡಿದ್ದಾರೆ.

ಬಹುಶಃ ಆ ನಿಮ್ಮ ಕೆಲಸಕ್ಕೆ ಸಂದ ಪ್ರತಿಕ್ರಿಯೆಗಳನ್ನು ಕಂಡು ನಿಮಗೆ ಸಂತಾಪವಾಗಿ, ಪೇಜಾವರ ಶ್ರೀಗಳಿಗೆ ಈ ಪತ್ರವನ್ನು 'ಜವಾಬ್ದಾರಿಯುತ ನಾಗರಿಕ'ನಾಗಿ ಬರೆಯುತ್ತಿದ್ದರೆ, ನಿಮ್ಮ ಮನಃಪರಿವರ್ತನೆಗೆ ಸಂತೋಷಿಸುತ್ತೇನೆ. ಇಂತಹ ಮನಃಪರಿವರ್ತನೆ ಸಾರ್ವಜನಿಕ ಜೀವನದಲ್ಲಿರುವ ಯಾರಿಗೂ ಅತ್ಯಗತ್ಯ ಮತ್ತು ಇಂತಹ ಪಶ್ಚಾತ್ತಾಪದಿಂದ ಇಡೀ ಸಮಾಜದ ಸಮೂಹ ಪ್ರಜ್ಞೆಯಲ್ಲಿ ಒಂದು ಭರವಸೆ ಮೂಡುತ್ತದೆ. [ಪೇಜಾವರ ಶ್ರೀಗಳಿಗೆ ದಿನೇಶ್ ಅಮಿನ್ ಮಟ್ಟು ಬಹಿರಂಗ ಪತ್ರ]

An open leter to Dinesh Aminmattu by Bharat Sastry

ವೈಯುಕ್ತಿಕವಾಗಿ ನಿಮಗೆ ಪೇಜಾವರ ಶ್ರೀಗಳ ಕುರಿತು ಗೌರವ ಇದೆ ಎನ್ನುವ ಮಾತು ನನಗೂ ಮೆಚ್ಚಿಗೆಯಾಯಿತು. ಪೇಜಾವರ ಶ್ರೀಗಳನ್ನು ಕುರಿತು 'ನಿಮ್ಮನ್ನೇ ಯಾಕೆ?' ಎನ್ನುವ ಪ್ರಶ್ನೆಗೆ ತಿರುಗಿ 'ನನ್ನನ್ನೇ ಯಾಕೆ?' ಎನ್ನುವ ಮರುಪ್ರಶ್ನೆಯನ್ನು ನೀವು ಹಾಕಿದ್ದೀರಿ. ಮತ್ತದಕ್ಕೆ ಕಾರಣವಾಗಿ 'ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಯಾವ ಮೂಲೆಯಲ್ಲೂ ಪ್ರಗತಿಪರರಿಂದ ಸಣ್ಣ ಪ್ರತಿಭಟನೆ, ಪ್ರತಿರೋಧ, ಚಳುವಳಿ, ಜಾಥಾಗಳು ನಡೆದರೂ ಕೂಡಾ ಅದರ ಹಿಂದೆ ನನ್ನ ಕುಮ್ಮಕ್ಕು ಇದೆಯೆಂದು ನಿಮ್ಮ ಸ್ನೇಹಿತರು ತೀರ್ಮಾನಿಸಿ ನನ್ನ ಮೇಲೆ ಅತ್ಯಂತ ಕೀಳು ಶಬ್ದಗಳಲ್ಲಿ ವೈಯುಕ್ತಿಕವಾಗಿ ದಾಳಿ ನಡೆಸುತ್ತಾರೆ' ಅಂತ ಬರೆದುಕೊಂಡಿದ್ದೀರಿ.

ರಾಜ್ಯದ ಜಿಲ್ಲೆಯೊಂದರ ಇಡೀ ಜನತೆಯನ್ನು ನಿಮ್ಮ ಅಪೇಕ್ಷೆಗೆ ತಕ್ಕಂತೆ ಸಂಸತ್ತಿನ ಚುನಾವಣೆಯಲ್ಲಿ ಮತ ಚಲಾಯಿಸಲಿಲ್ಲ ಎಂಬ ಕಾರಣಕ್ಕೆ ಜರಿಯಲು ನೀವು ಬಳಸಿದ ಶಬ್ದ ಬಹಳ ಸಭ್ಯವಾಗಿತ್ತು, ಬಿಡಿ. ಇರಲಿ, ನನ್ನ ಪ್ರಶ್ನೆ, ನಿಮಗೆ ತಮ್ಮ ಅಸಮ್ಮತಿಯನ್ನು ತೋರಿಸಿದ ಪುಣ್ಯಾತ್ಮರೆಲ್ಲ ಪೂಜ್ಯ ವಿಶ್ವೇಶ ತೀರ್ಥರ ಸ್ನೇಹಿತರೆಂದೂ, ಮತ್ತು ಅವರ ಮೇಲೆ ಶ್ರೀಗಳ ಸಂಪೂರ್ಣ ಹತೋಟಿ ಇದೆಯೆಂದೂ ನೀವು ಭಾವಿಸುವುದೇಕೆ? ಹಾಗೆ ನೀವು ನಿಜಕ್ಕೂ ತಿಳಿಯುವುದಾದರೆ ನಿಮ್ಮ ಮುಗ್ಧತೆಗೆ ನನ್ನದೊಂದು ಸಲಾಮ್. ಡಿಸ್ ಕ್ಲೇಮರ್: ನಾನು ಪೂಜ್ಯ ವಿಶ್ವೇಶತೀರ್ಥರ ಶಿಷ್ಯನೂ ಅಲ್ಲ, ಅವರ ಮಠದವನೂ ಅಲ್ಲ. [ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದರೆ ಸುಮ್ನೆ ಬಿಡ್ತೀವಾ]

ನಿಮಗೆ ಸರಿಕಂಡಿದ್ದನ್ನು ನೀವು ಮುಲಾಜಿಲ್ಲದೆ ಸಮರ್ಥಿಸಿಕೊಂಡಿದ್ದೀರಿ, ಸರಿಕಾಣದ್ದನ್ನು ನಿರ್ಭೀತಿಯಿಂದ ಖಂಡಿಸಿದ್ದೀರಿ, ಒಪ್ಪೋಣ. ಸನ್ಮಾರ್ಗದಲ್ಲಿರುವ ಸತ್ಪುರುಷರು ಹಾಗೆಯೇ ಮಾಡಬೇಕು, ಕೂಡಾ! ಆದರೆ ನೆನಪಿಡಿ, ಸಮಾಜ ಕನ್ನಡಿಯಿದ್ದಂತೆ, ನಿಮ್ಮ ಬಿಂಬವೇ ನಿಮಗೆ ಕಾಣುವುದು. ನೀವು ಕೆಟ್ಟ ಮಾತಿನಲ್ಲಿ ಬೈದರೆ, ನಿಮಗೆ ಬೈಗುಳವೇ ಸಿಗುತ್ತದೆಯೇ ಹೊರತು ಪ್ರೀತಿ, ಪ್ರೇಮ ಸಿಗಲು ಸಮಾಜದ ಎಲ್ಲರೂ ಪೂಜ್ಯ ಪೇಜಾವರ ಶ್ರೀಗಳಲ್ಲವಲ್ಲ!

ಮಠದಿಂದ ಒಂದು ಕಾಲನ್ನು ಹೊರಗಿಟ್ಟು ದಿಟ್ಟತನ ತೋರಿದ ಶ್ರೀಗಳಿಗೆ ಇನ್ನೊಂದು ಕಾಲನ್ನೂ ಹೊರಗಿಟ್ಟು ದಲಿತರನ್ನು ಮಠದೊಳಗೆ ಕರೆತಂದು ಜತೆಯಲ್ಲಿ ಕೂರಿಸಿಕೊಳ್ಳಬೇಕು ಎಂದು 'ಕಳಕಳಿ' ತೋರುತ್ತಾ, ಸ್ವಾಮಿ ವಿವೇಕಾನಂದರ ಚಿಂತನೆ ಶ್ರೀಗಳಿಗೆ ಪ್ರೇರಣೆ ನೀಡಲಿ ಎಂದು ಕೋರುತ್ತಿದ್ದೀರಿ, ಆಹಾ! ಇದೇ ಸ್ವಾಮಿ ವಿವೇಕಾನಂದರ ಬಗ್ಗೆ ತಾವು ಬರೆದ ಮತ್ತೊಂದು ಲೇಖನ ಅದೆಷ್ಟು ಯುವಕರಿಗೆ ನಿಮಗೆ ತಮ್ಮ ಅಸಮಾಧಾನವನ್ನು ತೋರುವ ಪ್ರೇರಣೆ ನೀಡಿತ್ತು ಎನ್ನುವುದನ್ನು ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನು ಬ್ರಹ್ಮಶ್ರೀ ನಾರಾಯಣಗುರುಗಳ ಅನುಯಾಯಿ ಅಂತ ಹೇಳಿಕೊಂಡೂ ಅವರ ಅನುಯಾಯಿಗಳಾದ ಬಿಲ್ಲವರನ್ನು ಗುರುಗಳೇ ಒಡೆಯಲು ಕೈಹಾಕದ ಹಿಂದೂ ಸಮಾಜವನ್ನು, ನಾರಾಯಣಗುರುಗಳ ಮಾರ್ಗವನ್ನು ತೊರೆದು, 'ಗರಡಿ ಮನೆ'ಗಳಿಗೆ ಮರಳಲು ಪ್ರಚೋದಿಸುತ್ತೀರಿ. ಇಂತಹ ವಿರೋಧಾಭಾಸಗಳಿಗೆ ಏನು ಹೇಳೋಣ?

ಈ ಎರಡೂ ಕಾರ್ಯಕ್ರಮಗಳು ನಡೆದು ಹೋದರೆ ಉಡುಪಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪೋಲಿಸರಿಗೂ ಕಷ್ಟವಾಗಬಹುದು ಎಂದು ಬೆದರಿಕೆ ಒಡ್ಡುವುದು ಸರ್ಕಾರದ ಜವಾಬ್ದಾರಿಯುತ ಹುದ್ದೆಯೊಂದರಲ್ಲಿ ಇದ್ದರೂ ನಿಮ್ಮ ಕರ್ತವ್ಯದ ವ್ಯಾಪ್ತಿಗೆ ಮೀರಿದ ಮಾತು. ಶಾಂತಿ ಮತ್ತು ಸುವ್ಯವಸ್ಥೆಯನ್ನು ಪೋಲಿಸರಿಗೇ ಬಿಟ್ಟು ಬಿಡುವುದು ಒಳ್ಳೆಯದು, ದಯವಿಟ್ಟು ಅದರಲ್ಲಿ ಹಸ್ತಕ್ಷೇಪ ಮಾಡಬೇಡಿ.

ಪರಸ್ಥಳದಿಂದ ಉಡುಪಿಯಂತಹ ಊರಿಗೆ ಬಂದು 'ಮುತ್ತಿಗೆ ಹಾಕುತ್ತೇವೆ' ಎಂದು ಹೇಳಲು ನಿಮ್ಮ ಸಹಾನುಭೂತಿಗೆ ಪಾತ್ರರಾದ ಜನರಿಗೆ ಅದೆಷ್ಟು ಹಕ್ಕಿದೆಯೋ, ಅಷ್ಟೇ ಹಕ್ಕು ಇಂತಹ ಮುತ್ತಿಗೆಯಿಂದ ಹಿಂದೂ ಧರ್ಮದ ಹಿರಿಯರಾದ ಪೇಜಾವರ ಸ್ವಾಮಿಗಳಿಗೆ ರಕ್ಷಣೆ ಕೊಡಲು ಬರುತ್ತೇವೆ ಎಂದು ಹೇಳುವ ಬಿಸಿರಕ್ತದ ಯುವಕರಿಗೂ ಇದೆ ಎನ್ನುವುದನ್ನು ನೆನಪಿಡಿ.

ಇಷ್ಟಕ್ಕೂ 'ಚಲೋ ಉಡುಪಿ', 'ಕೃಷ್ಣ ಮಠಕ್ಕೆ ಮುತ್ತಿಗೆ' ಮುಂತಾದ ಘೋಷಣೆಗಳಿಂದ ಹಿಂದೂ ಧರ್ಮಕ್ಕೆ ಬೆಲೆ ಕೊಡುವ ರಾಜ್ಯದ ಯುವಕರು ಮಾತ್ರವಲ್ಲ, ಬದಲಿಗೆ ಉಡುಪಿಯಲ್ಲೇ ವಾಸವಿರುವ ವಿವಿಧ ಧರ್ಮದ ಅನುಯಾಯಿಗಳಾದ ಸ್ಥಳೀಯರೂ ಅಸಮಾಧಾನಗೊಂಡಿದ್ದಾರೆ ಎನ್ನುವುದನ್ನು ತಾವು ನೆನಪಿಸಿಕೊಂಡರೆ ಒಳ್ಳೆಯದು. ನಿಮ್ಮ ದೃಷ್ಟಿಯಲ್ಲಿ ಅವರು ಏನೂ ಅಲ್ಲದಿದ್ದರೂ ಸರಿ, ಎಲ್ಲಿಂದಲೋ ಬಂದು ಧಮಕಿ ಹಾಕುವವರಿಗಿಂತ ಸ್ಥಳೀಯರಾದ ಇವರ ಅಭಿಪ್ರಾಯವನ್ನು ಕೇಳುವುದು ಹೆಚ್ಚು ಸಮಂಜಸ ಎಂದು ಸಾಮಾನ್ಯ ಜ್ಞಾನ ಇದ್ದವರೆಲ್ಲರಿಗೂ ಅನ್ನಿಸುತ್ತದೆ.

ಪತ್ರ ಬರೆಯುತ್ತಾ ಇರಿ. ಪೂಜ್ಯ ಪೇಜಾವರ ಯತಿಗಳಿಗೆ ಇದ್ದಷ್ಟು ಸಹನೆ ನಮ್ಮಂಥ ಪಾಮರರಿಗೆ ಇಲ್ಲ. ಒಂದು ವೇಳೆ ಇದಕ್ಕಿಂತ ಕಟು ಭಾಷೆಯ ಪತ್ರವೇನಾದರೂ ಉತ್ತರ ರೂಪದಲ್ಲಿ ಸಿಕ್ಕಿದರೆ, ತಾಳಿಕೊಳ್ಳುವ ಪಕ್ವತೆಯನ್ನು ದಯವಿಟ್ಟು ತೋರಿ. ಪೂಜ್ಯ ಪೇಜಾವರ ಯತಿಗಳನ್ನು ಕುರಿತು ಪತ್ರ ಬರೆಯುವಾಗಿನ ಕಳಕಳಿ, ಆವೇಶದ, ಆಕ್ರೋಶದ ಪ್ರತಿಕ್ರಿಯೆಗಳನ್ನು ತಾಳಿಕೊಳ್ಳುವಲ್ಲೂ ಕಂಡು ಬರಲಿ.

ನಮಸ್ಕಾರಗಳು.

ಭರತ್ ಎನ್ ಶಾಸ್ತ್ರೀ, ಇಂಡಿಯಾನಾ, ಅಮೆರಿಕ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Letters to the editor : Bharat N Sastry, resident of Indiana, USA has written an open letter to Dinesh Aminmattu, media advisor to chief minister Siddaramaiah, in response Dinesh's open letter to Pejawar sri, Udupi. Dinesh had criticized Pejawar seer's initiative.
Please Wait while comments are loading...