ಬೆಲೆ ಏರಿಕೆ ಬರೆ ಮೇಲೆ ಚಿಲ್ಲರೆ ಅಭಾವದ ಉಪ್ಪು!
ಮಾನ್ಯರೇ,
ಇತ್ತೀಚಿನ ದಿನಗಳಲ್ಲಂತೂ ಎಲ್ಲದಕ್ಕೂ ಅಭಾವ. ಹೀಗಾಗಿ, ಈ ಅಭಾವಗಳ ಬದುಕು ಎನ್ನುವುದು ಪ್ರತಿಯೊಬ್ಬರಿಗೂ ಕಷ್ಟಕರವಾಗಿ ಪರಿಣಮಿಸುತ್ತಿದೆ. ಹಣದುಬ್ಬರ ಹಿಂದೆಂದೂ ಇರದಷ್ಟು ಹೆಚ್ಚುತ್ತಿದೆ, ಪರಿಣಾಮವಾಗಿ ಬೆಲೆ ಏರಿಕೆ, ಇದರ ನಡುವೆಯೇ ನಮ್ಮ ದಿನನಿತ್ಯದ ವ್ಯವಹಾರಕ್ಕೆ ಅತ್ಯಗತ್ಯವಾದ 'ಚಿಲ್ಲರೆ ನಾಣ್ಯಗಳ' ಅಭಾವವೂ ಎಲ್ಲರನ್ನೂ ಕಾಡತೊಡಗಿದೆ.
ನಮ್ಮ ಅಂಗಡಿ ಮುಂಗಟ್ಟುಗಳಲ್ಲಿ, ಬ್ಯಾಂಕ್‌ಗಳಲ್ಲಿ, ಅಂಚೆ ಕಚೇರಿಗಳಲ್ಲಿ, ಬಸ್ಸುಗಳಲ್ಲಿ, ಹಾಲಿನ ಬೂತುಗಳಲ್ಲಿ... ಹೀಗೆ ... ಎಲ್ಲೆಲ್ಲೂ ಚಿಲ್ಲರೆ ಅಭಾವ. ನಮ್ಮ ವಿದ್ಯುತ್, ನೀರು, ದೂರವಾಣಿ ಬಿಲ್ಲುಗಳನ್ನು ಪಾವತಿ ಮಾಡಲು ಹೋದಾಗ ಕೌಂಟರಿನಲ್ಲಿ ಯಾರೇ ಕೂತಿರಲಿ, ಮೊತ್ತ ಮೊದಲು ಕೇಳುವುದು ಚಿಲ್ಲರೆ ಇದೆಯೇ?...(1, 2 ಹಾಗೂ 5 ರುಪಾಯಿಗಳ ತನಕ) ಇದ್ದರೆ ಅಷ್ಟು ಕೊಡಿ, ಇಷ್ಟು ಕೊಡಿ, ಕರೆಕ್ಟಾಗಿ, ಬಿಲ್ಲು ಎಷ್ಟಿರುತ್ತದೋ ಅಷ್ಟನ್ನು ಕರಾರುವಕ್ಕಾಗಿ ಕೊಡಬೇಕು ಎಂಬ ಸೂಚನೆ.
ನಮ್ಮ ಬ್ಯಾಂಕ್, ಅಂಚೆ ಕಚೇರಿ ಹಾಗೂ ಇನ್ನಿತರ ಬಿಲ್ಲು ಪಾವತಿಸುವ, ಹಣದ ವ್ಯವಹಾರ ನಡೆಸುವ ಕೌಂಟರುಗಳಲ್ಲಿಯೇ ಹೀಗೆ ಚಿಲ್ಲರೆ ಇಲ್ಲದಿರುವಾಗ, ಬಡಪಾಯಿ ಗ್ರಾಹಕರಾದ ನಮ್ಮಲ್ಲಿ ಚಿಲ್ಲರೆ ಇರುವುದಾದರೂ ಹೇಗೆ?
ಬ್ಯಾಂಕ್‌ಗಳಲ್ಲಿ ನಾಣ್ಯ ಪಡೆಯುವ 'ಎಟಿಎಂ' ಗಳಲ್ಲಿಯೇ ದಿನವಿಡೀ ಚಿಲ್ಲರೆ ದೊರಕದಿದ್ದರೆ ಮತ್ತ್ಯಾರಲ್ಲಿ ದೊರಕೀತು? ಇನ್ನು ಚಿಲ್ಲರೆಗೂ ಅಲೆಯುವಂಥ ವಿಚಿತ್ರ ಪರಿಸ್ಥಿತಿ ನಿರ್ಮಾಣವಾದರೆ ಏನು ಮಾಡಬೇಕು?
ಅದಕ್ಕಾಗಿ ಬ್ಯಾಂಕು, ಅಂಚೆ ಕಚೇರಿ, ವಿದ್ಯುತ್ ಮತ್ತು ಜಲ ಮಂಡಳಿಯ ಕ್ಯಾಷ್ ಕೌಂಟರುಗಳು ಹಾಗೂ ಸಾರ್ವಜನಿಕ ವ್ಯವಹಾರವಿರುವ ಸಂಘ ಸಂಸ್ಥೆಗಳು, ಸರಕಾರಿ ಇಲಾಖೆಗಳಲ್ಲಾಗಲಿ ದಯವಿಟ್ಟು ಇನ್ನಾದರೂ ಸರ್ಕಾರ ಸಾಕಷ್ಟು ಚಿಲ್ಲರೆ ಹಣ/ನಾಣ್ಯಗಳ ವ್ಯವಸ್ಥೆ ಮಾಡಲು ವಿನಂತಿ.
ಚಿಲ್ಲರೆ ಇಲ್ಲವೆಂದು ಗ್ರಾಹಕರನ್ನು ಗೋಳುಗುಟ್ಟಿಸುವುದು ಬೇಡ. ಸಾರ್ವಜನಿಕರನ್ನು ಸತಾಯಿಸುವುದು ಬೇಡ. ಚಿಲ್ಲರೆ ಇಲ್ಲವಾದಲ್ಲಿ ಕೌಂಟರಿನಲ್ಲಿ ಒಂದು ಫಲಕವನ್ನು ತೂಗು ಹಾಕಿ 'ಕ್ಯೂ'ನಲ್ಲಿ ನಿಂತವರ ಗಮನಕ್ಕಾದರೂ ತನ್ನಿ. ಉದ್ದಕ್ಕೆ ಗಂಟೆಗಟ್ಟಲೆ ಕ್ಯೂ ನಿಂತು ಕಾದು ಕೊನೆಗೆ ಕೌಂಟರಿಗೆ ಬಂದು ಮುಟ್ಟಿದಾಗ ಚಿಲ್ಲರೆ ಇಲ್ಲ, ಚಿಲ್ಲರೆ ಕೊಡಿ ಎಂದು ಸಾರ್ವಜನಿಕರು ತಾಳ್ಮೆ ಕಳೆದುಕೊಳ್ಳುವಂತೆ ಮಾಡಬೇಡಿ.
-ಜೆ.ಎಫ್.ಡಿ'ಸೋಜ, ಅತ್ತಾವರ












Click it and Unblock the Notifications