ಬರೀ ಎಳ್ಳು ಬೀರುವುದಷ್ಟೇ ಸಂಕ್ರಾಂತಿ ಆಗದಿರಲಿ
ಹಳ್ಳಿಗಳಲ್ಲಿ ಸಂಕ್ರಾಂತಿ ಎಂದರೆ ಸ್ತ್ರೀ ಪುರುಷರು ಜತೆಜತೆಯಾಗಿ ಸಂಭ್ರಮದಿಂದ ಆಚರಿಸುವ ಹಬ್ಬ. ಮಹಿಳೆಯರು ಮುಂಜಾನೆಯೇ ಎದ್ದು ಸ್ನಾನ ಮಾಡಿ ಹಬ್ಬದ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ಪುರುಷರು ತಮ್ಮ ಏಳಿಗೆಗಾಗಿ ದುಡಿದ ಗೋವುಗಳ ಆರೈಕೆಗೆ ಮುಂದಾಗುತ್ತಾರೆ.
- ರಾಮಯ್ಯ, ಕೈವಾರ.
ಹಳ್ಳಿಗಳಲ್ಲಿ ಇಂದಿಗೂ ಸಂಕ್ರಾಂತಿ ಎಂದರೆ ಆ ಸಂಭ್ರಮವೇ ಬೇರೆ. ಬೆಳಗಿನಿಂದಲೇ ಗೋವುಗಳ ಸಿಂಗಾರ ಆರಂಭವಾಗುತ್ತದೆ. ಎತ್ತುಗಳ ಕೊಂಬುಗಳನ್ನು ನುಣುಪಾಗಿ ಜೀಕಿ, ಬಣ್ಣಹಾಕಿ, ಬಣ್ಣಬಣ್ಣದ ಸುನೇರಿಗಳನ್ನು ಸುತ್ತಿ ಸಿಂಗರಿಸುತ್ತಾರೆ. ಸಿಂಗಾರಗೊಂಡ ಗೋವುಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಗೋವುಗಳನ್ನೆಲ್ಲಾ ಊರ ಬಾಗಿಲಲ್ಲಿ ಸಂಗಮಿಸಿ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಡುತ್ತವೆ. ಎಲ್ಲ ಭೇದಭಾವ ಮರೆತು ಊರಿನ ಸಮಸ್ತ ಜನರು ಈ ಸಂಭ್ರಮದಲ್ಲಿ ಭಾಗಿಯಾಗಿರುತ್ತಾರೆ.
ಹೋರಿಗಳ ಕೊರಳಿಗೆ ಕಟ್ಟಿದ ಬೆಲೆ ಬಾಳುವ ವಸ್ತುಗಳನ್ನು ಕಿತ್ತುಕೊಳ್ಳಲು ಅವುಗಳನ್ನು ಅಟ್ಟಿಸಿಕೊಂಡು ಓಡುವ ಯುವಕರ ಸಾಹಸವಂತೂ ಮೈನವಿರೇಳಿಸುತ್ತದೆ. ಸಂಜೆ ಪಂಜಿನ ಮೆರವಣಿಗೆ ಇರುತ್ತದೆ. ಊರಂಚಿನ ಗುಡಿಯ ಮುಂದೆ ಗೋವುಗಳ ಮಂದೆ ಸೇರಿ ದೇವರಿಗೆ ಪೂಜೆ ಸಲ್ಲಿಸಿ ತಂದ ಪಂಜುಗಳನ್ನೆಲ್ಲಾ ಆ ಗುಡಿಯ ಮುಂದೆ ಹಾಕಿ ಎಲ್ಲ ಗೋವುಗಳನ್ನೂ ಕಿಚ್ಚು ಹಾಯಿಸುತ್ತಾರೆ. ಗೋವುಗಳಿಗೆ ಯಾವುದೇ ರೀತಿಯ ಕೇಡು ಬರದಿರಲಿ ಎಂಬ ನಂಬಿಕೆಯಿಂದ.
ಇಂತಹ ಸಂಭ್ರಮ, ಸಡಗರದ ಎತ್ತುಗಳ ಹಬ್ಬ ಸಂಕ್ರಾಂತಿ ಈಗ ಎಷ್ಟೋ ಹಳ್ಳಿಗಳಲ್ಲಿ ಮರೆತೇ ಹೋಗಿದೆ. ಎಳ್ಳು ಬೆಲ್ಲದ ವಿನಿಮಯಕ್ಕಷ್ಟೇ ಸೀಮಿತವಾಗಿದೆ. ಆಗ ರೈತರು ರಾಶಿಗಟ್ಟಲೆ ಅವರೆಕಾಯಿ, ನೆಲಗಡಲೆ ಬೆಳೆಯುತ್ತಿದ್ದರು. ಬೆಳೆದ ದವಸ ಧಾನ್ಯಗಳನ್ನು ರಾಶಿ ರಾಶಿ ಹಾಕಿ ಪೂಜಿಸುತ್ತಿದ್ದರು. ಆ ಸುಗ್ಗಿಯ ಸಂಭ್ರಮ ಈಗೆಲ್ಲಿ?
ಈಗೀಗ ದೇಸೀ ತಳಿಗಳು ಕಣ್ಮರೆಯಾಗುತ್ತಿವೆ. ಹಳ್ಳಿಗಳಿಗೆ ಹೋದರೆ ಬರೀ ಸೀಮೆ ಹಸುಗಳೇ ಕಣ್ಣಿಗೆ ರಾಚುತ್ತವೆ. ಅವುಗಳಿಗೆ ತೀರ್ಥ ಕೊಟ್ಟರೆ ಶೀತ, ಆರತಿ ಎತ್ತಿದರೆ ಉಷ್ಣ ಎಂಬಂತೆ. ಎತ್ತು, ಎಮ್ಮೆ, ಹೋರಿಗಳೇ ಇಲ್ಲ ಅಂದ ಮೇಲೆ ಸಿಂಗಾರ ಎಲ್ಲಿಂದ ಬಂತು? ಬಂಗಾರ ಎಲ್ಲಿಂದ ಬಂತು? ಮಳೆ ಇಲ್ಲದೆ ಕೆರೆ, ಬಾವಿಗಳು ಅಂಬಾ ಎಂದು ಆಕಾಶಕ್ಕೆ ಬಾಯಿ ತೆರೆದುಕೊಂಡಿವೆ. ನೆಡುತೋಪುಗಳಿಲ್ಲ, ಗುಂಡುತೋಪುಗಳಿಲ್ಲ. ಈ ಎಲ್ಲಾ ಇಲ್ಲಗಳ ನಡುವೆ ದೇಸಿ ತಳಿಗಳು ಬದುಕುಳಿಯುವುದಾದರೂ ಹೇಗೆ? ಸಾಲದ್ದಕ್ಕೆ ಊರಲ್ಲಿದ್ದ ದನಗಳೆಲ್ಲಾ ಕಸಾಯಿಖಾನೆ ಸೇರುತ್ತಿವೆ. ಇದೆಲ್ಲಾ ಹಬ್ಬದ ಸಂಭ್ರಮವನ್ನೇ ಕಿತ್ತುಕೊಂಡಿದೆ. ಗುರೆಳ್ಳು, ಹುಚ್ಚೆಳ್ಳು ಎಲ್ಲಾ ಎಲ್ಲಿ ಹೋದವು? ಬರೀ ಎಳ್ಳಿಗಷ್ಟೇ ಸೀಮಿತವಾಗುತ್ತಿದ್ದೇವೆ.
ಬರೀ ಎಳ್ಳು ಬೀರಿ ಸಂಭ್ರಮಿಸುವುದಷ್ಟೇ ಸಂಕ್ರಾಂತಿ ಅಲ್ಲ. ನಮ್ಮ ಹಳ್ಳಿ ಸೊಗಡಿನ ಸುಗ್ಗಿಯ ಸಂಭ್ರಮ ಮತ್ತೆ ಬರಲಿ. ದೇಸೀ ತಳಿಗಳು ಉಳಿದು ಬೆಳಯಲಿ.












Click it and Unblock the Notifications