ಚಂದ್ರಯಾನ ಕೇವಲ ಷೋಕಿಗಾಗಿ ಅಲ್ಲ!
ರಮೇಶ್ ಬಾಳೆಹೊನ್ನೂರು ಅವರ 'ಎಲ್ಲ ದೇಶಗಳಿಗೂ ಚಂದ್ರನ ಮೇಲೇಕೆ ಕಣ್ಣು?' ಓದಿದ ನಂತರ ಬರೆಯಲೇಬೇಕೆನ್ನಿಸಿದ ಒಂದೆರಡು ಮಾತು. ಚಂದ್ರಯಾನ ಕೇವಲ ಷೋಕಿಗಾಗಿ ಅಲ್ಲ. ಈ ಬಾರಿಯ ಮಾನವ ರಹಿತ ಉಡ್ಡಾಣ explorationಗಾಗಿ. ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಸಂಶೋಧನೆಗಾಗಿ ದೃಢವಾದ ಹೆಜ್ಜೆಗಳನ್ನು ಇಡುವ ದಿಕ್ಕಿನಲ್ಲಿ ಚಂದ್ರಯಾನ ಮೊದಲ ಮೆಟ್ಟಿಲು.
ಭೂಮಿಯಿಂದ ಸುಮಾರು 384,403 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಅದರ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನ ಬಗ್ಗೆ ಮನುಷ್ಯನಿಗೆ ಬಹಳ ಕಾಲದಿಂದಲೂ ಇರುವ ಕುತೂಹಲ, ಆಕರ್ಷಣೆ ಸಹಜವಾದದ್ದೆ. ಇದನ್ನು ನಾವು ಸಾಹಿತ್ಯದಲ್ಲೂ ವೈಜ್ಞಾನಿಕ ಚಿಂತನೆಗಳಲ್ಲೂ ವಿಪುಲವಾಗಿ ಕಾಣುತ್ತೇವೆ. ಆಧುನಿಕ ಖಗೋಳ ವಿಜ್ಞಾನದಲ್ಲಿ ವಿವಿಧ ದೇಶಗಳು ನಡೆಸಿದ ಸಂಶೋಧನೆಗಳ ಫಲವಾಗಿ ಇಂದು ಮಂಗಳ ಗ್ರಹದ ತನಕ ನಮ್ಮ ಅರಿವು ವಿಸ್ತರಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಯಾವುದೇ ದೇಶ ಮುಂದುವರಿದಿರುವುದರ ದ್ಯೋತಕ ಇಂತಹ ಸಾಧನೆಗಳೇ. ಭೂಮಿಯ ಮೇಲಿನ ಸಮಸ್ಯೆಗಳಿಗೂ ಪರಿಹಾರ ಒದಗಿಸಬೇಕೆಂಬ ಮಾತು ನೂರಕ್ಕೆ ನೂರರಷ್ಟು ಸತ್ಯ. ಆದರೆ ಅದಕ್ಕಾಗಿ ಪ್ರಯತ್ನವೇ ನಡೆದಿಲ್ಲ ಎಂದು ದೂರುವುದು ಒಂದೋ ಅಜ್ಞಾನ, ಅಥವಾ ಜಾಣಕುರುಡು. 'ಭೂಮಿಯ ಮೇಲಿನ 'ಸಮಸ್ಯೆ'ಗಳಿಗೆ ಇಸ್ರೊ ಯಾವ ರೀತಿ ಸ್ಪಂದಿಸಿದೆ ಎನ್ನುವುದನ್ನು ನೋಡೋಣ.
ಇಸ್ರೋದ Telemedicine Facility ದೂರದೂರದ ಕುಗ್ರಾಮಗಳನ್ನು ಉತ್ತಮ ಆಸ್ಪತ್ರೆಗಳಿಗೆ ನೇರ ಸಂಪರ್ಕಿಸುವಲ್ಲಿ ಸಹಕರಿಸುತ್ತಿದೆ. ಬೆಂಗಳೂರಿನ ನಾರಾಯಣ ಹೃದಯಾಲಯ ಹಾಗೂ ಮಣಿಪಾಲ ಆಸ್ಪತ್ರೆ, ಮತ್ತು ಕೊಚ್ಚಿಯ ಅಮೃತ ವೈದ್ಯಕೀಯ ಸಂಸ್ಥೆ ಈ ವ್ಯವಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿವೆ. ಗುಜರಾತದ ಭುಜ್ ಭೂಕಂಪದ, ಇತ್ತೀಚಿನ ಕುಂಭ ಮೇಳದ ಸಂದರ್ಭಗಳಲ್ಲಿ ಇದರ ಪ್ರಯೋಜನ ಪಡೆಯಲಾಗಿದೆ. ಇದಕ್ಕಾಗಿ ಇಸ್ರೋ ತನ್ನ ವಾರ್ಷಿಕ ಬಜೆಟ್ಟಿನ ಹೊರತಾಗಿ ಹಣ ಹೂಡಿದೆ. ಇದು ಸಾಧ್ಯವಾದದ್ದು ಹೇಗೆ? ಇಂದು ನಮ್ಮದೇ ಕೃತಕ ಉಪಗ್ರಹಗಳು ಭೂಮಿಯ ಸುತ್ತ ತಿರುಗುತ್ತಿರುವುದರಿಂದಲೇ ಅಲ್ಲವೆ?
ಇಂದು ಮೊಬೈಲ್ ಕ್ರಾಂತಿಯಿಂದಾಗಿ ನಾವೆಲ್ಲ ಅನುಭವಿಸುತ್ತಿರುವ 'ಕನೆಕ್ಟಿವಿಟಿ', ನೋಡಲು ಸಿಗುತ್ತಿರುವ (ತಲೆ ತಿನ್ನುವ ಎನ್ನಲು ಅಡ್ಡಿಯಿಲ್ಲ) ನೂರೆಂಟು ಟಿವಿ ಚಾನೆಲ್‌ಗಳು, ಇವೆಲ್ಲ ಸಾಧ್ಯವಾಗಿರುವುದು ಸಂಪರ್ಕ ಉಪಗ್ರಹಗಳ ಸಹಾಯದಿಂದಲೇ.
ಮುಂಚಿನ ದಿನಗಳಲ್ಲಿ ಯಾವುದಾದರೂ ದೇಶ ತನ್ನದೊಂದು ಉಪಗ್ರಹವನ್ನು ಅಂತರಿಕ್ಷಕ್ಕೆ ಹಾರಿಬಿಡಲು ಯೋಚಿಸಿದರೆ, ಅದಕ್ಕಿದ್ದ ಆಯ್ಕೆ ಕೇವಲ ಅಮೆರಿಕ, ಐರೋಪ್ಯ ಅಂತರಿಕ್ಷ ಸಂಸ್ಥೆ, ರಷ್ಯಾ, ಅಥವಾ ಜಪಾನ್. ಈ ದೇಶಗಳ ಸಾಲಿಗೆ ಭಾರತವೂ ಸೇರಿ, ಅತ್ಯಂತ ಕಡಿಮೆ ವೆಚ್ಚದಲ್ಲಿ ಸಕ್ಷಮವಾಗಿ ಈ ಕೆಲಸವನ್ನು ಮಾಡಿಕೊಡುವುದು ಸಾಧ್ಯವಾಗಿದ್ದರೆ ಅದು ಇಲ್ಲಿಯ ತನಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪರಿಶ್ರಮದ ಫಲ.
'ಚಂದ್ರಯಾನ'ದಲ್ಲಿ ಈ ಉಪಗ್ರಹ ಭೂಮಿಯನ್ನು ಕ್ರಮೇಣ ಉದ್ದವಾಗುವ ಎರಡು ಕಕ್ಷೆಗಳಲ್ಲಿ ಪ್ರದಕ್ಷಿಣೆ ಮಾಡಿ ನಂತರ ಚಂದ್ರನಿಗೆ ಹತ್ತಿರವಾಗುತ್ತದೆ. ಈ ಯಾನದಲ್ಲಿ ಉಪಗ್ರಹವನ್ನು ನಿಖರವಾದ ಪಥದಲ್ಲಿ ಹೋಗುವಂತೆ ನಿರ್ದೇಶಿಸುವುದು ಕಠಿಣ. ಇಂತಹ ಹತೋಟಿಯನ್ನು 'ರಿಮೋಟ್' ಆಗಿದ್ದು ಮಾಡುವುದೂ ಒಂದು ಸಾಧನೆಯೇ. ಇದನ್ನು ಕಲಿತಲ್ಲಿ ಭಾರತ ಅಂತರಿಕ್ಷದಲ್ಲಿ ಮುಂದಿನ ಹೆಜ್ಜೆಗಳನ್ನು ಇಡುವುದು ಕಷ್ಟವಾಗುವುದಿಲ್ಲ.
ಈ ಉಡಾವಣೆಗೆ ವಿಮೆ ಏಕೆ ಮಾಡಲಿಲ್ಲವೆಂಬುದನ್ನು ಇಸ್ರೋದ ವಕ್ತಾರರೇ ಹೇಳಿದ್ದಾರೆ. ವಿಮೆ ಮಾಡಿಸಿದ್ದರೆ ಭಾರತ ಸರ್ಕಾರದ ಅಂಗ ಸಂಸ್ಥೆಗಳೇ ಅದರ ಹೊಣೆಯನ್ನು ವಹಿಸಿಕೊಳ್ಳಬೇಕಿತ್ತು ಮತ್ತು ಈ ಯೋಜನೆ ವಿಫಲವಾದಲ್ಲಿ, ವಿಮೆಯ ಹಣವನ್ನು ಭಾರತ ಸರ್ಕಾರವೇ ಕೊಡಬೇಕಾಗುತ್ತಿತ್ತು, ಹೀಗಾಗಿ ವಿಮೆ ಮಾಡಿಸುವುದರಿಂದ ಏನೂ ಪ್ರಯೋಜನವಿರುತ್ತಿರಲಿಲ್ಲ, ಎಂದು.
ಕೇವಲ ರೂ.386 ಕೋಟಿಗಳ ಖರ್ಚು ನಿಮ್ಮ ಕಣ್ಣು ಉರಿಸಲು ಕಾರಣವಾಯಿತೆಂದರೆ ಕಳೆದ ಬಜೆಟ್ಟಿನಲ್ಲಿ ರೈತರ ಸಾಲ ಮನ್ನಾ ಮಾಡಲು ತೆಗೆದಿರಿಸಿದ ರೂ.10,000 ಕೋಟಿಗಳ ಖರ್ಚು ನಿಮ್ಮ ಕಣ್ಣು ತಪ್ಪಿಸಿತೆ? ರಾಷ್ಟ್ರೀಯ ಗ್ರಾಮೀಣ ಖಚಿತ ಉದ್ಯೋಗ ಯೋಜನೆ (NREGP) ಎಂಬ ತಳವಿಲ್ಲದ 'ಹೊಂಡ' ಕಾಣುತ್ತಿಲ್ಲವೆ?
ಕೊನೆಯ ಮಾತು : ಅಟ್ಟಕ್ಕೆ ಹಾರಲಾರದವನು ಬೆಟ್ಟಕ್ಕೆ ಹಾರಿಯಾನೆ? ಎಂಬಂತೆ, ಇಷ್ಟು ಹತ್ತಿರವಿರುವ ಚಂದ್ರನನ್ನೇ ಮುಟ್ಟಲಾರದೆ ಹೋದರೆ ಇನ್ನು ಬೇರೆ ಗ್ರಹಗಳು ದೂರದ ಮಾತೇ ಸರಿ!
ಭರತ್ ಶಾಸ್ತ್ರಿ, ನ್ಯೂಜೆರ್ಸಿ.
ರಮೇಶ್ ಬಾಳೆಹೊನ್ನೂರು ಪತ್ರ












Click it and Unblock the Notifications