ನಿರ್ಮಲಾ ಸೀತಾರಾಮನ್‌ಗೆ ಬಿಗ್ ಶಾಕ್ ನೀಡಿದ ಪ್ರಧಾನಿ ಮೋದಿ; ಕೈತಪ್ಪಲಿದೆಯೇ ಅತ್ಯಂತ ಪ್ರಮುಖ ಖಾತೆ?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 'ಮಿಷನ್ 2029' ಗುರಿಯಿಟ್ಟುಕೊಂಡು ದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸಬಲ್ಲ ಮಹತ್ವದ ನಿರ್ಧಾರಗಳಿಗೆ ಕೈಹಾಕಿದೆ. ಮೂರನೇ ಬಾರಿಗೆ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರ ಮತ್ತು ಪಕ್ಷ ಸಂಘಟನೆಯಲ್ಲಿ ತಮ್ಮದೇ ಆದ ವಿಶಿಷ್ಟ ಮುದ್ರೆ ಒತ್ತಲು ಮೋದಿ ಅವರು ಭಾರಿ ಸಚಿವ ಸಂಪುಟ ಬದಲಾವಣೆಯ ಕಸರತ್ತು ಆರಂಭಿಸಿದ್ದಾರೆ. ಈ ತಿಂಗಳ 10ರಂದು ನಡೆಯಲಿರುವ ಎನ್‌ಡಿಎ (NDA) ಒಕ್ಕೂಟದ ಸಭೆಯ ನಂತರ ಈ ಬದಲಾವಣೆಗಳು ಅಧಿಕೃತ ರೂಪ ಪಡೆದುಕೊಳ್ಳಲಿವೆ.
ಪ್ರಮುಖ ಸಚಿವರ ಖಾತೆ ಬದಲಾವಣೆಯ ಅಂದಾಜು ಪಟ್ಟಿ
2029ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಬಲಿಷ್ಠ ತಂಡವನ್ನು ಸಿದ್ಧಪಡಿಸುವ ಉದ್ದೇಶದಿಂದ, ಈ ತಿಂಗಳ 20ರ ಸುಮಾರಿಗೆ ಕೇಂದ್ರ ಸಚಿವ ಸಂಪುಟ ಪುನಾರಚನೆ ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಸುಮಾರು 17 ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಅವರಿಗೆ ಪಕ್ಷದ ಸಾಂಸ್ಥಿಕ ಜವಾಬ್ದಾರಿಗಳನ್ನು ವಹಿಸುವ ಸಾಧ್ಯತೆಯಿದೆ. ಅತ್ಯಂತ ಪ್ರಮುಖವಾಗಿರುವ ಗೃಹ, ರಕ್ಷಣೆ ಮತ್ತು ಹೆದ್ದಾರಿ ಸಾರಿಗೆ ಇಲಾಖೆಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎನ್ನಲಾಗಿದೆ. ಆದರೆ ಇತರ ಪ್ರಮುಖ ಖಾತೆಗಳಲ್ಲಿ ಅದಲು-ಬದಲಾಗುವ ಸಾಧ್ಯತೆ ಇದೆ.

ನಿರ್ಮಲಾ ಸೀತಾರಾಮನ್ ಖಾತೆ ಬದಲು?
ಪ್ರಸ್ತುತ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಾರಿ ಕೇಂದ್ರ ಶಿಕ್ಷಣ ಇಲಾಖೆಯ ಜವಾಬ್ದಾರಿ ಸಿಗುವ ಸಾಧ್ಯತೆ ಹೆಚ್ಚಿದೆ. ಇತ್ತೀಚೆಗೆ ನೀಟ್ (NEET) ಮತ್ತು ಸಿಬಿಎಸ್‌ಇ (CBSE) ವಿವಾದಗಳಿಂದಾಗಿ ಶಿಕ್ಷಣ ಇಲಾಖೆ ತೀವ್ರ ಟೀಕೆಗೆ ಒಳಗಾಗಿದ್ದರಿಂದ, ಧರ್ಮೇಂದ್ರ ಪ್ರಧಾನ್ ಅವರ ಜಾಗಕ್ಕೆ ನಿರ್ಮಲಾ ಅವರನ್ನು ತಂದು ಇಲಾಖೆಯನ್ನು ಬಲಪಡಿಸಲು ಮೋದಿ ಯೋಚಿಸಿದ್ದಾರಂತೆ. ಸದ್ಯ ವಾಣಿಜ್ಯ ಇಲಾಖೆಯನ್ನು ಮುನ್ನಡೆಸುತ್ತಿರುವ ಹಿರಿಯ ನಾಯಕ ಪಿಯೂಷ್ ಗೋಯಲ್ ಅವರಿಗೆ ಅತ್ಯಂತ ಪ್ರಮುಖವಾದ ಹಣಕಾಸು ಸಚಿವ ಸ್ಥಾನ ಒಲಿಯುವ ಸಾಧ್ಯತೆಯಿದೆ.
ರೈಲ್ವೆ ಸಚಿವರಾಗಿರುವ ಅಶ್ವಿನಿ ವೈಷ್ಣವ್ ಅವರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಅಥವಾ ಪೂರ್ಣ ಪ್ರಮಾಣದ ಜವಾಬ್ದಾರಿ ಸಿಗಬಹುದು ಎನ್ನಲಾಗುತ್ತಿದೆ. ಪ್ರಸ್ತುತ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾಗಿರುವ ಹರಿಯಾಣದ ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರನ್ನು ಸಂಪುಟದಿಂದ ಮುಕ್ತಗೊಳಿಸಿ, ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಕಳುಹಿಸುವ ಯೋಚನೆ ಹೈಕಮಾಂಡ್ ಮಟ್ಟದಲ್ಲಿದೆ ಎನ್ನಲಾಗಿದೆ. ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಪಕ್ಷ ಸಂಘಟನೆಗಾಗಿ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.
ಮಾಜಿ ಅಧಿಕಾರಿಗಳಿಗೆ ಮಣೆ
ಮುಂದಿನ ಒಂದು ವರ್ಷದಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಸ್ತರಣೆ ನಡೆಯಲಿದೆ. ತಾಂತ್ರಿಕ ಮತ್ತು ಆರ್ಥಿಕ ವಲಯದಲ್ಲಿ ಅಪಾರ ಅನುಭವ ಹೊಂದಿರುವ ಇಬ್ಬರು ಮಾಜಿ ಬ್ಯೂರೋಕ್ರಾಟ್‌ಗಳಿಗೆ (ನಿವೃತ್ತ ಅಧಿಕಾರಿಗಳು) ಈ ಬಾರಿ ರಾಜ್ಯ ಸಚಿವರಾಗಿ ಅವಕಾಶ ನೀಡಲಾಗುವುದು ಎಂಬ ಚರ್ಚೆ ನಡೆದಿದೆ. ಇನ್ನು ದಕ್ಷಿಣ ಭಾರತದ ಮೇಲೆ ವಿಶೇಷ ಕಣ್ಣಿಟ್ಟಿರುವ ಮೋದಿ, ಆಂಧ್ರಪ್ರದೇಶದಿಂದ ಮತ್ತೊಂದು ಹೊಸ ಮುಖಕ್ಕೆ ಸಚಿವ ಸ್ಥಾನ ಹಾಗೂ ತೆಲಂಗಾಣದಿಂದ ಇಬ್ಬರು ನಾಯಕರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲು ಉದ್ದೇಶಿಸಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. 2029ರ ಚುನಾವಣೆಯನ್ನು ಟಾರ್ಗೆಟ್ ಮಾಡಿ ನಡೆಸಲಾಗುತ್ತಿರುವ ಈ 'ಮೋದಿ ಮಾರ್ಕ್' ಈಗ ದೇಶದ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.












Click it and Unblock the Notifications