ಕ್ರಿಕೆಟ್‌ ದೇವರಿಂದ ವೈಭವ್‌ಗೆ ಸಿಕ್ತು ಸ್ಪೆಷಲ್ ಸರ್ಟಿಫಿಕೆಟ್; ವಿಶ್ವದ 7 ದಿಗ್ಗಜರ ಭವಿಷ್ಯವಾಣಿಗಳು ವೈರಲ್

Vaibhav Sooryavanshi: ಐಪಿಎಲ್‌ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ 15 ವರ್ಷದ ವೈಭವ್ ಸೂರ್ಯ ಅವರು ಸ್ಫೋಟಕ ಬ್ಯಾಟಿಂಗ್ ಆಡಿ ಇಡೀ ಕ್ರಿಕೆಟ್‌ ಲೋಕ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ನಡುವೆ ಇದೀಗ ಹಲವು ಕ್ರಿಕೆಟ್‌ ದಿಗ್ಗಜರು ಈ ಬಾಲಕನ ಆಕ್ರಮಣಕಾರಿ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸುವುದರ ಜೊತೆಗೆ ಟೀಂ ಇಂಡಿಯಾ ಟಿ20 ಕ್ರಿಕೆಟ್‌ನ ಭವಿಷ್ಯ ನುಡಿದಿದ್ದಾರೆ. ಅದರಲ್ಲೂ ಕ್ರಿಕೆಟ್‌ ದೇವರಿಂದ ಸಿಕ್ಕ ಸರ್ಟಿಫಿಕೆಟ್‌ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಕ್ರೀಸ್‌ನಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದ ಈ ಯುವ ಆಟಗಾರನನ್ನು ಇತ್ತೀಚೆಗೆ ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ದಿಗ್ಗಜರು ಮುಕ್ತಕಂಠದಿಂದ ಕೊಂಡಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈಭವ್ ಅವರು ಬ್ಯಾಟ್ ಹಿಡಿದು ರಾಜನ ಸಿಂಹಾಸನದ ಮೇಲೆ ಕುಳಿತಿರುವ ಪೋಸ್ಟರ್ ವೈರಲ್ ಆಗುತ್ತಿದೆ. ಇದರಲ್ಲಿ ವೈಭವ್ ಸೂರ್ಯವಂಶಿ ಅವರ ಟಿ20 ಕ್ರಿಕೆಟ್‌ ಭವಿಷ್ಯದ ಬಗ್ಗೆ ಹಲವು ಕ್ರಿಕೆಟ್‌ ದಿಗ್ಗಜರು ಮಹತ್ವದ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

Vaibhav Sooryavanshi Impresses Cricket Legends After IPL 2026 Heroics Predictions Huge Viral

ವೈಭವ್ ಟಿ20 ಕ್ರಿಕೆಟ್‌ ಬಗ್ಗೆ ದಿಗ್ಗಜರ ಭವಿಷ್ಯಗಳು

ಚಿಕ್ಕ ವಯಸ್ಸಿನಲ್ಲೇ ಅದ್ಭುತವಾಗಿ ಆಟ ಆಡಿ ಭಾರಿ ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿ ಬಗ್ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಸೇರಿದಂತೆ ಪ್ರಮುಖ 7 ದಿಗ್ಗಜರು ನುಡಿದಿರುವ ಭವಿಷ್ಯಗಳು ಈ ಪೋಸ್ಟರ್‌ನಲ್ಲಿವೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗುತ್ತಿದೆ.

ವೈಭವ್ ಬ್ಯಾಟಿಂಗ್ ವೇಗಕ್ಕೆ ಸಚಿನ್ ತೆಂಡೂಲ್ಕರ್ ಫಿದಾ

ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರು ವೈಭವ್ ಅವರ ಬ್ಯಾಟಿಂಗ್ ಶೈಲಿಗೆ ಮನಸೋತಿದ್ದಾರೆ. 'ವೈಭವ್ ಸೂರ್ಯವಂಶಿ ಅವರ ಬ್ಯಾಟ್ ಬೀಸುವ ವೇಗ ಜಗತ್ತಿನಲ್ಲೇ ಅತ್ಯಂತ ವೇಗವಾಗಿದೆ. ನನ್ನ ಇಡೀ ಕ್ರಿಕೆಟ್ ಜೀವನದಲ್ಲಿ ಇಷ್ಟು ಅದ್ಭುತವಾದ ಬ್ಯಾಟಿಂಗ್‌ ಶೈಲಿಯನ್ನು ಬೇರೆ ಯಾವುದೇ ಆಟಗಾರನಲ್ಲೂ ನೋಡಿಲ್ಲ,' ಎಂದು ಪ್ರಶಂಸಿಸಿದ್ದಾರೆ. ಯುವ ಆಟಗಾರನೊಬ್ಬನಿಗೆ ಸಚಿನ್ ಅವರಿಂದ ಇಂತಹ ಸರ್ಟಿಫಿಕೇಟ್ ಸಿಕ್ಕಿರುವುದು ಸಾಧಾರಣ ಮಾತಲ್ಲ.

ಕ್ರಿಸ್ ಗೇಲ್, ಅಂಬಟಿ ರಾಯುಡು ಮೆಚ್ಚುಗೆ

ಟಿ20 ಇತಿಹಾಸದ ಸ್ಫೋಟಕ ಬ್ಯಾಟರ್ ಆದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರು ವೈಭವ್ ಆಟದ ಕುರಿತು ಅಚ್ಚರಿ ಹೇಳಿಕೆ ನೀಡಿದ್ದಾರೆ. 'ನನ್ನ ಇದುವರೆಗೂ ನಾನು ಕಂಡ ಅಸಾಧಾರಣ ಪ್ರತಿಭೆಗಳಲ್ಲಿ ವೈಭವ್ ಸೂರ್ಯವಂಶಿ ಕೂಡ ಒಬ್ಬರು,' ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಅಂಬಟಿ ರಾಯುಡು ಅವರು, 'ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವೈಭವ್ ಅತ್ಯಂತ ದೊಡ್ಡ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ,' ಎಂದು ಭವಿಷ್ಯ ನುಡಿದಿದ್ದಾರೆ.

ಸೆಹ್ವಾಗ್, ಸುನಿಲ್ ಗವಾಸ್ಕರ್‌ ಶ್ಲಾಘನೆ

ಯಾರ ಹೆದರಿಕೆಯೂ ಇಲ್ಲದೆ ಕ್ರೀಸ್‌ನಲ್ಲಿ ಮೊದಲ ಎಸೆತದಿಂದಲೇ ಅಬ್ಬರಿಸುವ ವೈಭವ್ ಬ್ಯಾಟಿಂಗ್ ಶೈಲಿಯನ್ನ ಭಾರತದ ಮಾಜಿ ಸ್ಫೋಟಕ ಓಪನರ್ ವೀರೇಂದ್ರ ಸೆಹ್ವಾಗ್ ಕೊಂಡಾಡಿದ್ದಾರೆ. 'ಈ ಹಿಂದೆ ವೈಭವ್‌ ರೀತಿ ಅದ್ಭುತ ಆಟ ಆಡಿದ ಯಾವುದೇ ಯುವ ಆಟಗಾರನನ್ನು ನಾನು ಕಂಡೇ ಇಲ್ಲ,' ಎಂದಿದ್ದಾರೆ. ಇನ್ನು ಭಾರತೀಯ ಕ್ರಿಕೆಟ್‌ನ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರು ವೈಭವ್ ಅವರ ಬ್ಯಾಟಿಂಗ್ ಅನ್ನು ಮೆಚ್ಚಿಕೊಂಡಿದ್ದು, ಅವರನ್ನು 'ವಂಡರ್ ಕಿಡ್‌' ಎಂದು ಬಣ್ಣಿಸಿದ್ದಾರೆ.

ಆರ್.ಅಶ್ವಿನ್, ಯುವರಾಜ್ ಸಿಂಗ್ ಪ್ರಶಂಸೆ

ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ವೈಭವ್ ಅವರ ಬುದ್ಧಿವಂತಿಕೆಯನ್ನು ಶ್ಲಾಘಿಸುತ್ತಾ, 'ವೈಭವ್ ಸೂರ್ಯವಂಶಿ ಒಬ್ಬ ಜೀನಿಯಸ್ ಆಟಗಾರ,' ಎಂದು ಹೇಳಿದ್ದಾರೆ. ಇನ್ನು ಭಾರತಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮಾತನಾಡಿ, 'ವೈಭವ್ ಸಾಮಾನ್ಯ ಆಟಗಾರನಲ್ಲ, ಅವರು ಈಗಿನ ಕಾಲದ ಅಸಾಮಾನ್ಯ ಕ್ರಿಕೆಟಿಗ,' ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಚಿಕ್ಕ ವಯಸ್ಸಿನಲ್ಲೇ ದೇಶೀಯ ಕ್ರಿಕೆಟ್‌ನಲ್ಲಿ ಅಬ್ಬರಿಸಿ, ಐಪಿಎಲ್‌ನಲ್ಲೂ ಆರ್ಭಟಿಸಿ ಭಾರಿ ಸುದ್ದಿಯಾಗಿದ್ದ ವೈಭವ್ ಸೂರ್ಯವಂಶಿ ಈಗ ಶ್ರೀಲಂಕಾದಲ್ಲಿ ನಡೆಯಲಿರುವ ಭಾರತ 'ಎ' ತಂಡದ ತ್ರಿಕೋನ ಸರಣಿಯಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಕ್ರಿಕೆಟ್‌ನ ಇಷ್ಟೂ ದಿಗ್ಗಜರು ಒಟ್ಟಾಗಿ ಒಬ್ಬ ಯುವ ಆಟಗಾರನ ಬೆನ್ನಿಗೆ ನಿಂತಿರುವುದು ಭಾರತೀಯ ಕ್ರಿಕೆಟ್‌ನ ಭವಿಷ್ಯ ಎಷ್ಟು ಸುರಕ್ಷಿತ ಮತ್ತು ಉಜ್ವಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮುಂಬರುವ ದಿನಗಳಲ್ಲಿ ವೈಭವ್ ಸೂರ್ಯವಂಶಿ ಭಾರತ ಸೀನಿಯರ್ ತಂಡದಲ್ಲೂ ದೊಡ್ಡ ಸ್ಟಾರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬರೀ ಭಾರತ ಅಷ್ಟೇ ಅಲ್ಲದೆ, ಇಡೀ ವಿಶ್ವವೇ ಮಾತನಾಡಿಕೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+