ಲೂಟಿ ಖಾತೆಗಳಿಗೆ ಕಾಂಗ್ರೆಸ್ ನಾಯಕರ ಆದ್ಯತೆ! ಶಿಕ್ಷಣ, ಕೃಷಿ ಖಾತೆಗಿಲ್ಲ ಸಚಿವರು: ಆರ್.ಅಶೋಕ್
ಬೆಂಗಳೂರು: ರಾಜ್ಯದಲ್ಲಿ ಶಾಲೆಗಳು ಜೂನ್ ತಿಂಗಳಿಂದ ಶುರುವಾಗಿವೆ. ಮತ್ತೊಂದೆಡೆ ರೈತರು ಮುಂಗಾರು ಹಂಗಾಮಿನ ಬಿತ್ತನೆ ಮಾಡಿದ್ದಾರೆ. ಕೃಷಿ ಚಟುವಟಿಕೆಗಳು ಗರಿಗೆದರಿದೆ. ಇಂತಹ ಸಮಯದಲ್ಲಿ ಶಿಕ್ಷಣ ಹಾಗೂ ಕೃಷಿ ಖಾತೆಗೆ ಸಚಿವರೇ ಇಲ್ಲದಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸರ್ಕಾರದ ಖಾತೆ ಹಂಚಿಕೆ ಪ್ರಹಸನ, ಕಾಂಗ್ರೆಸ್ ಪಕ್ಷದ ನಿಜವಾದ ಆದ್ಯತೆಗಳೇನು ಅನ್ನುವುದನ್ನು ರಾಜ್ಯದ ಜನರ ಮುಂದೆ ಸಂಪೂರ್ಣವಾಗಿ ಬೆತ್ತಲು ಮಾಡಿದೆ! ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಟೀಕಾಪ್ರಹಾರ ನಡೆಸಿದರು.
ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಒಂದು ಕಡೆ ರಾಜ್ಯದ ಬೆನ್ನೆಲುಬಾದ ರೈತರು ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸುತ್ತಿರುವ ಈ ಅತ್ಯಂತ ಮಹತ್ವದ ಸಮಯದಲ್ಲಿ ಕರ್ನಾಟಕಕ್ಕೆ ಒಬ್ಬ ಪೂರ್ಣಾವಧಿ ಕೃಷಿ ಸಚಿವರೇ ಇಲ್ಲ. ಬಿತ್ತನೆ ಬೀಜಗಳ ಲಭ್ಯತೆ, ರಸಗೊಬ್ಬರಗಳ ಪೂರೈಕೆ, ಬೆಳೆ ಸಾಲ, ಬೆಳೆ ವಿಮೆ, ಮಳೆ ಪರಿಸ್ಥಿತಿಯ ಅವಲೋಕನ, ಇವೆಲ್ಲದರ ಬಗ್ಗೆ ಕಾಳಜಿ ವಹಿಸಬೇಕಾದ ಕೃಷಿ ಇಲಾಖೆ ಈಗ ಸಚಿವರಿಲ್ಲದೆ ಅನಾಥವಾಗಿದೆ.

ಇನ್ನೊಂದೆಡೆ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಸಾವಿರಾರು ಸರ್ಕಾರಿ ಶಾಲೆಗಳಲ್ಲಿ ಮಳೆ ಬಂದರೆ ಸೋರುವ ಕೊಠಡಿಗಳು, ಕುಸಿಯುವ ಗೋಡೆಗಳು ದುರಸ್ತಿಗಾಗಿ ಕಾಯುತ್ತಿವೆ, ಶೌಚಾಲಯಗಳ ಕೊರತೆ ಹಾಗೇ ಇವೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ, ಶಿಕ್ಷಕರ ಕೊರತೆ ನೀಗಿಸುವ ನೂರಾರು ತುರ್ತು ಸವಾಲುಗಳಿ ಬೆಟ್ಟದಷ್ಟಿವೆ. ಆದರೆ ರಾಜ್ಯಕ್ಕೆ ಒಬ್ಬ ಶಿಕ್ಷಣ ಸಚಿವರೇ ಗತಿಯಿಲ್ಲ ಎಂದು ರಾಜ್ಯ ರಾಜಕೀಯದ ಸದ್ಯದ ಪರಿಸ್ಥಿತಿ ವಿವರಿಸಿದರು.
ನಾಯಕರಿಗೆ ಲೂಟಿ ಹೊಡೆಯುವ ಖಾತೆಗಳ ಮೇಲೆ ಕಣ್ಣು!
ಕಾಂಗ್ರೆಸ್ ನಾಯಕರ ಕಣ್ಣಿರುವುದು ಕೇವಲ ಲೂಟಿ ಹೊಡೆಯುವ ಖಾತೆಗಳ ಮೇಲೆ ಮಾತ್ರ! ರೈತರು, ವಿದ್ಯಾರ್ಥಿಗಳ ಕಷ್ಟ ಇವರಿಗೆ ಬೇಕಾಗಿಲ್ಲ. ಸಾವಿರಾರು ಕೋಟಿ ರೂಪಾಯಿಗಳ ಸಂಪನ್ಮೂಲ, ಗುತ್ತಿಗೆ ಮತ್ತು ಕಮಿಷನ್ ದಂಧೆಗೆ ಅನುಕೂಲವಾಗುವ ಖಾತೆಗಳಿಗಾಗಿ ಮಾತ್ರ ಕಾಂಗ್ರೆಸ್ ನಾಯಕರ ನಡುವೆ ರಣಹದ್ದುಗಳಂತೆ ಭಾರೀ ಪೈಪೋಟಿ ನಡೆಯುತ್ತಿದೆ. ಸಿಎಂ ಡಿಕೆ ಶಿವಕುಮಾರ್ ಅವರೇ ಇದೇನಾ ನಿಮ್ಮ ಜನಪರ ಆಡಳಿತ? ಎಂದು ಖಾರವಾಗಿ ಪ್ರಶ್ನಿಸಿದರು.
ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಕಾಂಗ್ರೆಸ್ ಹೈಕಮಾಂಡ್ ಒಬ್ಬ ಸಮರ್ಥ ಸಚಿವರಿಗೆ ಕೊಟ್ಟಿದೆ ಎಂದು ಡಂಗುರ ಸಾರುತ್ತಾರೆ. ಆದರೆ ನಗರದ ಯೋಜನೆ ಮತ್ತು ಅಭಿವೃದ್ಧಿಗೆ ಅತ್ಯಂತ ಮಹತ್ವವಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬಿಎಂಆರ್‌ಡಿಎ ಎನ್ನುವ ಮುಖ್ಯಮಂತ್ರಿಗಳೇ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಹಾಗಿದ್ದರೆ ಸಚಿವರ ಬಳಿ ಉಳಿದಿರುವುದು ಏನು? ಈ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ ಎಂದು ಲೇವಡಿ ಮಾಡಿದರು.
ತೆರಿಗೆ ಹಣ ಲೂಟಿಗೆ ರಾಜಕೀಯ ಹೊಂದಾಣಿಕೆ
ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ಎಂಬುದು ಅಭಿವೃದ್ಧಿಗಾಗಿ, ಆಡಳಿತಕ್ಕಾಗಿ ಮಾಡಿರುವ ವ್ಯವಸ್ಥೆಯಲ್ಲ, ಬದಲಿಗೆ ಸಂಪನ್ಮೂಲ ಹಂಚಿಕೆಗೆ, ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಮಾಡಿದ ರಾಜಕೀಯ ಹೊಂದಾಣಿಕೆಯಾಗಿದೆ. ಕಳೆದ ಹಲವು ವಾರಗಳಿಂದ ಇಡೀ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಕಾಂಗ್ರೆಸ್‌ನ ಒಳಜಗಳ, ಅಧಿಕಾರದ ಕಿತ್ತಾಟ ಮತ್ತು ಹುದ್ದೆಗಳ ಹಂಚಿಕೆಯ ರಾಜಕಾರಣಕ್ಕೆ ರಾಜ್ಯದ ಜನತೆ ಬಲಿಯಾಗುತ್ತಿದ್ದಾರೆ ಎಂದರು.
ರಾಜ್ಯ ಕಾಂಗ್ರೆಸ್ ನಾಯಕರಿಗೆ ರೈತರ ಸಮಸ್ಯೆಗಳಿಗೆ ಸಮಯವಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಕುರಿತು ಯೋಚಿಸಲು ಸಮಯವಿಲ್ಲ, ಶಾಲೆಗಳ ದುರಸ್ತಿಗೆ, ಪಠ್ಯಪುಸ್ತಕ ವಿತರಣೆಗೆ ಸಮಯವಿಲ್ಲ, ಬೆಂಗಳೂರಿನ ಅವ್ಯವಸ್ಥೆ ಸುಧಾರಿಸುವ ಉದ್ದೇಶವಿಲ್ಲ. ಆದರೆ, ಯಾರಿಗೆ ಯಾವ ಖಾತೆ, ಯಾರಿಗೆ ಎಷ್ಟು ಅಧಿಕಾರ, ಯಾರಿಗೆ ಎಷ್ಟು ಸಂಪನ್ಮೂಲ, ಯಾರಿಗೆ ಎಷ್ಟು ಲೂಟಿಯ ಅವಕಾಶ ಎಂಬ ಲೆಕ್ಕಾಚಾರ ಮಾತ್ರ ಕಾಂಗ್ರೆಸ್ ನಾಯಕರ ಏಕೈಕ ಅಜೆಂಡಾ ಆಗಿದೆ ಎಂದು ದೂರಿದರು.
ಈ ಖಾತೆ ಹಂಚಿಕೆ ಒಂದು ವಿಷಯ ಗೊತ್ತಾಗಿದೆ, ಈ ಸರ್ಕಾರದ ಮೊದಲ ಆದ್ಯತೆ ರೈತನಲ್ಲ, ವಿದ್ಯಾರ್ಥಿಯಲ್ಲ, ಜನಸಾಮಾನ್ಯರಲ್ಲ ರಾಜ್ಯದ ಅಭಿವೃದ್ಧಿಯೂ ಅಲ್ಲ. ಈ ಸರ್ಕಾರದ ಪ್ರಥಮ ಆದ್ಯತೆ, ಅಧಿಕಾರ, ಸಂಪನ್ಮೂಲ ಮತ್ತು ಲೂಟಿ ಹೊಡೆಯುವುದಾಗಿದೆ. ಈ ಲಜ್ಜೆಗೆಟ್ಟ ಅಧಿಕಾರ ದಾಹವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕರ್ನಾಟಕದ ಜನತೆ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ಮಾತ್ರ ನೂರಕ್ಕೆ ನೂರು ಪರ್ಸೆಂಟ್ ಗ್ಯಾರೆಂಟಿ ಎಂದು ಭವಿಷ್ಯ ನುಡಿದರು.














Click it and Unblock the Notifications