ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವುದು ಸ್ವಜಾತಿಪ್ರೇಮ ಕುಮಾರಸ್ವಾಮಿಯವರೆ?

By Staff
|
Google Oneindia Kannada News

*ಎಚ್.ಆನಂದರಾಮ ಶಾಸ್ತ್ರಿ, ಬೆಂಗಳೂರು

ಇದೀಗ ದೂರದರ್ಶನದ ಕನ್ನಡ ವಾಹಿನಿಗಳ ವಾರ್ತಾಪ್ರಸಾರದಲ್ಲಿ ನಾನು ನೋಡಿದ್ದು: ಸಿದ್ಧಗಂಗಾ ಶ್ರೀಗಳು ಮೈಸೂರಿನ ದಸರಾ ಮಹೋತ್ಸವವನ್ನು ಉದ್ಘಾಟಿಸಿದ್ದನ್ನು 'ಸ್ವಜಾತಿಪ್ರೇಮ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ. ತೀರ ಈ ಮಟ್ಟಕ್ಕೆ ಒಬ್ಬ ಮಾಜಿ ಮುಖ್ಯಮಂತ್ರಿ ಇಳಿಯಬಾರದಿತ್ತು. ತನ್ನ ಈ ಟೀಕೆಗೆ ಕಾರಣ ನೀಡುತ್ತ ಕುಮಾರಸ್ವಾಮಿಯವರು ಕಳೆದ ವರ್ಷ ತಾನು ಕರೆದಾಗ ಶ್ರೀಗಳು ಬರಲಿಲ್ಲವೆಂಬುದನ್ನು ಎತ್ತಿ ಆಡಿದ್ದಾರೆ.

ಅನಾರೋಗ್ಯದ ಕಾರಣ ತಿಳಿಸಿ ಶ್ರೀಗಳು ಕಳೆದ ವರ್ಷ ಆಗಮಿಸಲಾರೆನೆಂದಿದ್ದರು. ಸರ್ಕಾರವು ಸೂಕ್ತ ರೀತಿಯಲ್ಲಿ ತಮ್ಮನ್ನು ಆಹ್ವಾನಿಸಲಿಲ್ಲವೆಂಬ ಅಸಮಾಧಾನ ಶ್ರೀಗಳಲ್ಲಿ ಇದ್ದಂತಿತ್ತು. ಹಾಗೊಂದು ವೇಳೆ ಅಸಮಾಧಾನವಿದ್ದಲ್ಲಿ ಅದು ಸಹಜವೇ. ಏಕೆಂದರೆ ಶ್ರೀಗಳು ಒಂದು ಜನಾಂಗದ ಗುರುಗಳು; ಒಂದು ಪೀಠದ ಅಧಿಪತಿ. ಸರ್ಕಾರವು ಸೂಕ್ತ ರೀತಿಯಲ್ಲಿ ಆಹ್ವಾನ ನೀಡಬೇಕಿತ್ತು. ಆದಾಗ್ಗ್ಯೂ ಶ್ರೀಗಳು ಆಗಮಿಸಿದ್ದಲ್ಲಿ ಅವರು ಇನ್ನಷ್ಟು ದೊಡ್ಡವರಾಗುತ್ತಿದ್ದರು, ಆ ಮಾತು ಬೇರೆ. ಆದರೆ, ಅವರ ನಿರಾಕರಣೆಗೆ ಗೌರವದ ಪ್ರಶ್ನೆ ಕಾರಣವೇ ಹೊರತು ಜಾತಿ ಭೇದವಲ್ಲ.

ಕುಮಾರಸ್ವಾಮಿಗೆ ಸ್ವಜಾತಿಪ್ರೇಮ ಇಲ್ಲದೇ ಇದ್ದಿದ್ದರೆ ಕಳೆದ ವರ್ಷ ದಸರಾವನ್ನು ಅವರು ಸ್ವಜಾತಿಯ ಆದಿಚುಂಚನಗಿರಿ ಶ್ರೀಗಳಿಂದ ಏಕೆ ಉದ್ಘಾಟನೆ ಮಾಡಿಸಿದರು? ದಲಿತ ಸ್ವಾಮೀಜಿಯೊಬ್ಬರಿಂದ (ಸ್ವಾಮೀಜಿಯೇ ಆಗಬೇಕೆಂದಿದ್ದರೆ) ಮಾಡಿಸಬಹುದಿತ್ತಲ್ಲಾ!

ಸ್ವಜಾತಿಪ್ರೇಮ ಯಾರಲ್ಲಿಲ್ಲ? ಜಾತ್ಯತೀತ ಜನತಾದಳದಲ್ಲಿ ದಂಡಿಯಾಗಿಲ್ಲವೆ? ಬಿಜೆಪಿ ಸರ್ಕಾರದ ಪ್ರತಿ ನಡೆಯನ್ನೂ ತಾನು, ತನ್ನ ಸೋದರ, ತನ್ನ ತಂದೆ ಮತ್ತು ತನ್ನೊಡತಿಯ 'ಕಸ್ತೂರಿ' (ತುತ್ತೂರಿ) ಚಾನೆಲ್ ಎಲ್ಲರೂ ಟೀಕಿಸುವುದನ್ನೇ ಕಾಯಕವಾಗಿಸಿಕೊಂಡಿರುವ ಕುಮಾರಸ್ವಾಮಿ ಕನಿಷ್ಠಪಕ್ಷ ನಮ್ಮ ಧಾರ್ಮಿಕ ಪರಂಪರೆಯ ಉತ್ಸವವನ್ನು ಮತ್ತು ಆ ಸಂಬಂಧ ಧರ್ಮಗುರುವೊಬ್ಬರನ್ನು ಟೀಕಿಸುವ ಸಣ್ಣಬುದ್ಧಿಯನ್ನಾದರೂ ಹತ್ತಿಕ್ಕಿಕೊಳ್ಳಬೇಕಿತ್ತು. ಈಗಾಗಲೇ ಬಿಜೆಪಿ ಸರ್ಕಾರವನ್ನು ಮತ್ತು ಹಿಂದುಗಳನ್ನು ಬಾಯಿಗೆ ಬಂದಂತೆ ಆಡಿಕೊಳ್ಳುತ್ತಿರುವವರಿಗೆ ಆಡಿಕೊಳ್ಳಲು ಇನ್ನೊಂದು ವಿಷಯ ದೊರೆತಂತಾಗಲಿಲ್ಲವೆ? ಹಿಂದು ಮಠಾಧೀಶರು ಸ್ವಜಾತಿಪ್ರೇಮಿಗಳಿರಬಹುದು, ಆದರೆ ಮತಾಂಧರಲ್ಲ, ಮತಾಂತರ ಪ್ರೋತ್ಸಾಹಕರಲ್ಲ ಮತ್ತು ಅನ್ಯಮತ ದ್ವೇಷಿಗಳಲ್ಲ. ಸಾಧ್ಯವಿದ್ದರೆ ಕುಮಾರಸ್ವಾಮಿ ಈ ಸತ್ಯವನ್ನು ಪ್ರಚುರಗೊಳಿಸಲಿ. ಬರುವ ಚುನಾವಣೆಯಲ್ಲಿ 'ಮತ' ಗಳಿಸುವ ಏಕೈಕ ಉದ್ದೇಶದಿಂದ ಹಿಂದು ಧರ್ಮಗುರುಗಳಿಗೂ ಮತ್ತು ತನ್ಮೂಲಕ ಧರ್ಮಕ್ಕೂ ಕುಂದು ತರುವಂಥ ಹೇಳಿಕೆಗಳನ್ನು ನೀಡದಿರಲಿ.

ನಾನು ಲಿಂಗಾಯತ ಅಥವಾ ವೀರಶೈವ ಅಲ್ಲ. ಬಿಜೆಪಿಯ ಪಕ್ಷಪಾತಿಯೂ ಅಲ್ಲ. ನಾನು ಸ್ವಧರ್ಮಾಭಿಮಾನಿ. ಆದ್ದರಿಂದ ಟಿವಿಯಲ್ಲಿ ವಾರ್ತೆ ನೋಡಿ ಬಂದವನೇ ಈ ಬರಹ ಬರೆಯುತ್ತಿದ್ದೇನೆ.
ಇಲ್ಲಿ ಇನ್ನೊಂದು ಮುಖ್ಯ ವಿಷಯ. ನನ್ನಂಥ ಶ್ರೀಸಾಮಾನ್ಯನೇನಾದರೂ ಇಂಥ ಹೇಳಿಕೆ (ಕುಮಾರಸ್ವಾಮಿ ನೀಡಿದಂಥ ಹೇಳಿಕೆ) ನೀಡಿದರೆ ಅದರ ಪರಿಣಾಮ ಅಷ್ಟಕ್ಕಷ್ಟೆ. ಆದರೆ, ಓರ್ವ ಮಾಜಿ ಮುಖ್ಯಮಂತ್ರಿ ಇಂಥ ಹೇಳಿಕೆ ನೀಡಿದರೆ ಅದರ ಪರಿಣಾಮ ಭಾರಿಯಾಗಿರುತ್ತದೆ. ಇದನ್ನು ಕುಮಾರಸ್ವಾಮಿ ಅರಿಯಬೇಕು.

ಇಷ್ಟಕ್ಕೂ, ಜಾತಿಭಾವನೆ ಮತ್ತು ಸ್ವಜಾತಿಪ್ರೇಮದ ವಿಷಯ ತೆಗೆದುಕೊಂಡರೆ ಕುಮಾರಸ್ವಾಮಿಯ ಈ ಹೇಳಿಕೆ ಹೇಗಿದೆಯೆಂದರೆ, ತನ್ನ ಎಲೆಯಲ್ಲಿ ಹೆಗ್ಗಣ (ಹಂದಿಯೇ ಅಂದರೂ ಸರಿ) ಸತ್ತುಬಿದ್ದಿರುವಾಗ ಇನ್ನೊಬ್ಬರ ಎಲೆಯಲ್ಲಿ ಇರುವೆಯನ್ನು ಹುಡುಕಿದಂತಿದೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X