ಸರಕಾರಕ್ಕೆ ಒಳ್ಳೆ ಬುದ್ಧಿ ಬರೋದು ಯಾವಾಗ? : ಪಾಪು
ಸರಕಾರ ಏನು ಮಾಡಿದರೂ ಅದು ಕರ್ನಾಟಕ ಒಂದಾಗಿ ಉಳಿಯುವುದಕ್ಕೆ ಪೂರಕವಾಗಿರಬೇಕು. ಯಾವುದೇ ಕಾರಣದಿಂದಲೂ ಕರ್ನಾಟಕದ ಬೆಸುಗೆ ಬಂಧ ಸಡಿಲಗೊಳ್ಳುವಂತಿರಬಾರದು. ಕರ್ನಾಟಕ ನಿರ್ಮಾಣಗೊಂಡು 50 ವರ್ಷಗಳು ಕಳೆದ ನಂತರವೂ ಇಂಥ ಮಾತನ್ನು ಹೇಳಬೇಕಾದ ಪ್ರಸಂಗ ಇದೆಯೆಂದರೆ, ಇದು ನಾಚಿಕೆಪಟ್ಟುಕೊಳ್ಳುವ ವಿಚಾರ.
ಮೈಸೂರಿನಲ್ಲಿ ದಸರಾ ಉತ್ಸವ ನಡೆಯುತ್ತದೆ. ಅದು ನಾಡ ಹಬ್ಬವಾಗಿ ಆಚರಣೆಗೊಳ್ಳಬೇಕೆಂಬುದು ಸರಕಾರದ ಅಪೇಕ್ಷೆ. ಮೈಸೂರು ದಸರಾ ನಾಡಹಬ್ಬವಾಗಬೇಕೆಂದರೆ ಅದು ಕೇವಲ ಮೈಸೂರಿನ, ಪೂರ್ವ ಮೈಸೂರು ರಾಜ್ಯದ ಉತ್ಸವ ಎನಿಸಬಾರದು. ರಾಜ್ಯದ ಜನರ ಉತ್ಸವವೆನಿಸಬೇಕು. ಅದು ಆ ರೀತಿ ಆಗಬೇಕಾದರೆ ಸಮಗ್ರ ಕರ್ನಾಟಕದ ಜನ ದಸರಾ ಆಚರಣೆಯ ಸಮಿತಿಯಲ್ಲಿ ಇರಬೇಕು. ಸರಕಾರಕ್ಕೆ ತುಂಗಭದ್ರಾ ನದಿಯ ಆಚೆ ಇರುವ ಜನರು ಕಾಣಿಸುವುದೇ ಇಲ್ಲ. ಸರಕಾರದಲ್ಲಿ 15-16 ಅಕಾಡೆಮಿ ಪ್ರಾಧಿಕಾರಗಳಿವೆ. ಅವುಗಳನ್ನು ಈ ರಾಜ್ಯದ ಹಳೆಯ ಹಾಗೂ ಹೊಸ ಪ್ರದೇಶಗಳಲ್ಲಿ ಸಮನಾಗಿ, ನ್ಯಾಯಯುತವಾಗಿ ಹಂಚಬೇಕೆನ್ನುವ ಬುದ್ಧಿ ಸರಕಾರಕ್ಕೆ ಎಂದು ಬರುತ್ತದೆ? ಕೇವಲ ವಿಧಾನಸೌಧಕ್ಕೆ ಹತ್ತಿರವಾಗಿರುವ ಜನರು ಮಾತ್ರ ಸರಕಾರಕ್ಕೆ ಕಾಣಿಸುತ್ತಾರೆ. ಈ ತಾರತಮ್ಯ ಸರಕಾರ ಎಂದು ನಿವಾರಣೆ ಮಾಡುತ್ತದೆ.
ಎರಡು ಕರ್ನಾಟಕಗಳ ಭಾವನೆ ಜನರಲ್ಲಿ ಬರದಂತೆ ಸರಕಾರ ತನ್ನ ಆಡಳಿತವನ್ನು ನಡೆಸಬೇಕು. ನಂಜುಂಡಪ್ಪ ಶಿಫಾರಸಿನಂತೆ, ಉತ್ತರ ಕರ್ನಾಟಕವನ್ನು ಸಂತೋಷಪಡಿಸಲು ವಿಜಾಪುರದಲ್ಲಿ ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಿರುವುದಾಗಿ ಸರಕಾರ ಹೆಮ್ಮೆಪಟ್ಟುಕೊಂಡು ಹೇಳಿಕೊಳ್ಳುತ್ತದೆ. ಅದನ್ನು ರಾಜ್ಯ ವಿಶ್ವವಿದ್ಯಾಲಯವಾಗಿ ಏಕೆ ಮಾಡಲಿಲ್ಲ? ಉತ್ತರದ 12 ಜಿಲ್ಲೆಗಳಿಗೆ ಮಾತ್ರವೇ ಅದು ಏಕೆ ಸಂಬಂಧಿಸಿರಬೇಕು? ರಾಜ್ಯದ ಇನ್ನುಳಿದ ಮಹಿಳಾ ಕಾಲೇಜುಗಳನ್ನೇಕೆ ಅದಕ್ಕೆ ಸೇರ್ಪಡೆ ಮಾಡಿಲ್ಲ? ಸರಕಾರ ರಾಜ್ಯದ ಬಂಧುರತೆ ಹೆಚ್ಚಿಸುವ ವಿಚಾರ ಮಾಡಬೇಕಲ್ಲದೆ, ಅದನ್ನು ಹಾಳು ಮಾಡುವ ವಿಚಾರಕ್ಕೆ ಎಂದೂ ಹೋಗಬಾರದು.
ಲೇಖಕರು : ಪಾಟೀಲ ಪುಟ್ಟಪ್ಪ, ಹುಬ್ಬಳ್ಳಿ












Click it and Unblock the Notifications