Kohli Vs Head: ಹ್ಯಾಂಡ್‌ಶೇಕ್ ಮಾಡಿದ್ರೆ ಏನಾದ್ರೂ ಕಳೆದುಕೊಳ್ತಿದ್ರಾ? ಆರ್‌ಸಿಬಿಯ ಕಿಂಗ್ ಕೊಹ್ಲಿ ನಡೆಗೆ ನೆಟ್ಟಿಗರ ತರಾಟೆ
Kohli Vs Travis Head: ಹೈದರಾಬಾದ್‌ನಲ್ಲಿ ಶುಕ್ರವಾರ (ಮೇ 22) ನಡೆದ ಐಪಿಎಲ್ 2026ರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು ಸಾಧಿಸಿತು. ಪಂದ್ಯದ ವೇಳೆ ಹಾಗೂ ನಂತರ ನಡೆದ ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವಿನ ಘಟನೆಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಪಂದ್ಯ ಮುಗಿದ ನಂತರ ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವೆ ಹ್ಯಾಂಡ್‌ಶೇಕ್ ನಡೆಯದಿರುವುದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಟ್ರಾವಿಸ್ ಹೆಡ್ ಅವರು ಮೈದಾನದಲ್ಲಿ ನಡೆದ ಭಿನ್ನಾಭಿಪ್ರಾಯಗಳನ್ನು ಮರೆತು ಕೈಕುಲುಕಲು ಮುಂದೆ ಬಂದರೂ ಕೊಹ್ಲಿ ಅದನ್ನು ನಿರಾಕರಿಸಿರುವುದೇ ಇದೀಗ ಭಾರೀ ವೈರಲ್ ಆಗುತ್ತಿದೆ.

ಅಚ್ಚರಿ ಮೂಡಿಸಿದ ಕೊಹ್ಲಿ ನಡೆ
ಸಾಮಾನ್ಯವಾಗಿ ಪಂದ್ಯ ಮುಗಿದ ಬಳಿಕ ಕ್ರೀಡಾ ಸ್ಫೂರ್ತಿ ಮೆರೆಯುವುದು ಕ್ರಿಕೆಟ್‌ನ ಸಂಪ್ರದಾಯ. ಆದರೆ ಕೊಹ್ಲಿ ಅವರ ಈ ನಡೆ ಅಚ್ಚರಿ ಮೂಡಿಸಿದೆ. ಇದು ಕೇವಲ ಪಂದ್ಯದ ಸೋಲಿನ ಕೋಪವೋ ಅಥವಾ ಇಬ್ಬರ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿವೆಯೋ ಎಂಬ ಕುತೂಹಲವನ್ನು ಕೂಡ ಹುಟ್ಟುಹಾಕಿದೆ.
ಮೈದಾನದಲ್ಲೇ ಮಾತಿನ ಚಕಮಕಿ
ವಿರಾಟ್ ಕೊಹ್ಲಿ ಅವರು 11 ಎಸೆತಗಳಲ್ಲಿ 15 ರನ್ ಗಳಿಸಿದ್ದ ಅವರು ಹೈದರಾಬಾದ್ ತಂಡದ ಯುವ ವೇಗಿ ಸಾಕಿಬ್ ಹುಸೇನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಅವರು ಔಟ್ ಆಗುವ ಮೊದಲು ಮೈದಾನದ ಮಧ್ಯದಲ್ಲಿ ಟ್ರಾವಿಸ್ ಹೆಡ್ ಮತ್ತು ಕೊಹ್ಲಿ ನಡುವೆ ಮಾತಿ ಚಕಮಕಿ ನಡೆಯಿತು. ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ ಅವರಿಗೆ ಟ್ರಾವಿಸ್ ಹೆಡ್ ಪದೇ ಪದೇ ಬಿಗ್ ಶಾಟ್‌ಗಳನ್ನು ಹೊಡೆಯುವಂತೆ ಸವಾಲು ಹಾಕುತ್ತಿದ್ದರು. ಇದರಿಂದ ಕೆರಳಿದ ಕೊಹ್ಲಿ, 'ನೋಡು ಈಗ ನೀನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಹೊರಹೋಗಲು ಸಾಧ್ಯವಿಲ್ಲ, ಸುಮ್ಮನೆ ಬೌಲಿಂಗ್ ಮಾಡು,' ಎಂದು ಲೇವಡಿ ಮಾಡಿದರು ಎಂದು ವರದಿಯಾಗಿದೆ.
ಹೆಡ್ ಇನ್‌ಸ್ಟಾ ಪೋಸ್ಟ್ ಬಗ್ಗೆ ನೆಟ್ಟಿಗರು ಹೇಳೋದೇನು?
ಪಂದ್ಯ ಮುಕ್ತಾಯಗೊಂಡ ಬಳಿಕ ಟ್ರಾವಿಸ್ ಹೆಡ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ಫೋಟೋವನ್ನು ಹಂಚಿಕೊಂಡು ಅದಕ್ಕೆ 'Keep the body guessing'(ದೇಹವು ಸದಾ ಊಹಿಸುವಂತೆ ಇರಲಿ) ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. 'ಟ್ರಾವಿಸ್ ಹೆಡ್ ಅವರ ಈ ಪೋಸ್ಟ್ ವಿರಾಟ್ ಕೊಹ್ಲಿ ಅವರು ಕೈಕುಲುಕಲು ನಿರಾಕರಿಸಿದ ಘಟನೆಗೆ ನೀಡಿದ ತಿರುಗೇಟು,' ಎಂದು ಅನೇಕ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು 'ಇಷ್ಟೊಂದು ದುರಹಂಕಾರ ಒಳ್ಳಯದಲ್ಲ. ಅವರಾಗಿಯೇ ಹಸ್ತಲಾಘವ ಮಾಡಲು ಬಂದಾಗ ಅದನ್ನು ಸಂತೋಷದಿಂದ ಸ್ವೀಕರಿಸಬೇಕಿತ್ತು,' ಎಂದು ಹೇಳಿದ್ದಾರೆ.
ಕೊಹ್ಲಿ ಕೆಣಕಿದ ಟ್ರಾವಿಸ್ ಹೆಡ್
ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ತೆರಳುವಾಗಲೂ ಟ್ರಾವಿಸ್ ಹೆಡ್ ಅವರಿಗೆ ಕೆಣಕಿದ್ದಾರೆ. "ನಾನು ನಿನಗೆ ಬೌಲಿಂಗ್ ಮಾಡುವ ಮೊದಲೇ ನೀನು ಔಟ್ ಆಗಿ ಹೊರನಡೆದಿದ್ದೀಯಾ," ಎಂದು ಹೆಡ್ ವ್ಯಂಗ್ಯವಾಡಿದರು ಎಂದು ವರದಿಯಾಗಿದೆ. ಪಂದ್ಯ ಮುಗಿದ ನಂತರ ಆಟಗಾರರು ಪರಸ್ಪರ ಕೈಕುಲುಕುವ ಸಂಪ್ರದಾಯದ ವೇಳೆ ಈ ವಿವಾದದ ಅಸಲಿ ಚಿತ್ರಣ ಕಂಡುಬಂದಿತು. ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯದ ಪ್ರಕಾರ ಟ್ರಾವಿಸ್ ಹೆಡ್ ಕೈಕುಲುಕಲು ಕೊಹ್ಲಿ ಕಡೆಗೆ ಕೈ ಚಾಚಿದರು. ಆದರೆ ಕೊಹ್ಲಿ ಅವರ ಮುಖವನ್ನೂ ನೋಡದೆ ಮುಂದೆ ನಡೆದರು.
ಗಮನಾರ್ಹ ಸಂಗತಿಯೆಂದರೆ ಕೊಹ್ಲಿ ಅವರು ಹೆಡ್ ಅವರಿಗೆ ಮಾತ್ರ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದರು. ಆದರೆ ಇತರ ಸನ್‌ರೈಸರ್ಸ್ ಆಟಗಾರರನ್ನು ಬಹಳ ಪ್ರೀತಿಯಿಂದ ಮಾತನಾಡಿಸಿದರು. ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಅಪ್ಪಿಕೊಂಡು ಮಾತನಾಡಿಸಿದ ಕೊಹ್ಲಿ ಕೇವಲ ಹೆಡ್ ವಿಷಯದಲ್ಲಿ ಮಾತ್ರ ಅಂತರ ಕಾಯ್ದುಕೊಂಡರು. ಒಟ್ಟಿನಲ್ಲಿ ಕೊಹ್ಲಿ ಅವರು ಉದ್ದೇಶಪೂರ್ವಕವಾಗಿಯೇ ಟ್ರಾವಿಸ್ ಹೆಡ್ ಅವರನ್ನು ಅವಮಾನಿಸಿದ್ದಾರೆ ಎಂಬುದು ಈಗ ಭಾರಿ ಚರ್ಚೆಯಾಗುತ್ತಿರುವ ವಿಚಾರವಾಗಿದೆ.












Click it and Unblock the Notifications