ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಪೇಗೌಡರ ಹೆಸರೇ ಸೂಕ್ತ, ಯಾಕೆಂದರೆ..

By Staff
|
Google Oneindia Kannada News

Kempegowda, Click on the image for big pictureಮಾನ್ಯರೇ,

ಓಬೀರಾಯನ ಕಾಲದಲ್ಲಿ ಬೆಂದಕಾಳೂರನ್ನು ಸ್ಥಾಪಿಸಿರುವ 'ಕೆಂಪೇಗೌಡ' ಹೆಸರು ಈಗಾಗಲೇ ಅತಿಯಾಗಿ ಬಳಕೆಯಲ್ಲಿದೆ ಮತ್ತು ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶ್ವೇಶ್ವರಯ್ಯನವರ ಹೆಸರೇ ಸೂಕ್ತ ಎಂಬ ಪ್ರತಾಪ ಸಿಂಹರ, "ಹೆಸರಲ್ಲೇನಿದೆ, ಎಲ್ಲವೂ ಹೆಸರಲ್ಲೇ ಇದೆ" ಬೆತ್ತಲೆ ಜಗತ್ತು ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಈ ಪತ್ರ. ಕೆಂಪೇಗೌಡ, ವಿಶ್ವೇಶ್ವರಯ್ಯ, ಟಿಪ್ಪೂ, ಬಸವಣ್ಣ, ಕಿತ್ತೂರು ಚೆನ್ನಮ್ಮ, ರಾಜಕುಮಾರ್ ಹೀಗೆ ಎಲ್ಲರ ಹೆಸರೂ ವಿಮಾನ ನಿಲ್ದಾಣಕ್ಕೆ ನಾಮಂಕಿತವಾಗಲು ಅರ್ಹವಾದದ್ದೆ. ಆದರೆ ಇದರಲ್ಲಿ ಅತ್ಯಂತ ಸೂಕ್ತವಾದದ್ದು ಯಾವುದು ಎಂಬುದೇ ಪ್ರಶ್ನೆ?

500 ವರ್ಷಗಳ ಕಾಲ ಯಲಹಂಕ ವಂಶದವರು ಈ ರಾಜ್ಯವನ್ನು ಆಳಿದ್ದಾರೆ. ಅವರ ಹೃದಯ ವೈಶಾಲ್ಯ ಮತ್ತು ವ್ಯಾಪ್ತಿಯ ದೃಷ್ಟಿಯಿಂದ ಯಲಹಂಕ ಮಹಾನಾಡು, ಒಡೆಯರು ಆಳಿದ ಮೈಸೂರು ಸಾಮ್ರಾಜ್ಯಕ್ಕಿಂತ ವಿಸ್ತಾರವಾಗಿತ್ತು. 450 ವರ್ಷಗಳ ಹಿಂದೆ ನಗರ ಕಟ್ಟಲು ಮನಸ್ಸು-ಧೈರ್ಯ ಮಾಡಿದ ಈ ವಂಶದ ಸಾಹಸಿಗೆ ಆ ಮುಂದಾಲೋಚನೆ ಇರದಿದ್ದ ಪಕ್ಷದಲ್ಲಿ ಬೆಂಗಳೂರೆಂಬ ಈ ಸುಂದರ ನಗರ ಇಂದು ಭೂಪಟದಲ್ಲಿರುತ್ತಿರಲಿಲ್ಲ ಎಂಬುದು ಸತ್ಯದ ಸಂಗತಿ! ಅಂದು ತಾನು ಕಟ್ಟಿದ ನಗರಕ್ಕೆ ಅಗಲವಾದ ರಸ್ತೆಗಳು, ಕೆರೆ, ಉದ್ಯಾನಗಳು, ಎಲ್ಲಾ ಮತಗಳ ವಿಧವಿಧ ವೃತ್ತಿ ಪರರಿಗೆ ಅವರದೇ ಮಾರುಕಟ್ಟೆಗಳು , ಮನೆಗಳು, ಛತ್ರ, ದೇವಸ್ಥಾನಗಳು ಇರಬೇಕೆಂದು ಯೋಚಿಸಿ ಕಾರ್ಯರೂಪಕ್ಕಿಳಿಸಿದ್ದ ವ್ಯಕ್ತಿಯ ನೆನಪು ಸದಾ ಹಸಿರಾಗಿರಿಸಲು ಇಂದು ಇಡೀ ಬೆಂಗಳೂರಿನಲ್ಲಿ 'ಅತಿಯಾದ' ಸ್ಮಾರಕಗಳಿರಬಹುದು! ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ, ನಾಡು ನಿರ್ಮಿಸಿದ ವ್ಯಕ್ತಿಗೆ, ನಮ್ಮ ಇತಿಹಾಸಕ್ಕೆ ಮತ್ತು ಕನ್ನಡ ಸಂಸ್ಕೃತಿಗೆ ಶೋಭೆ ತಂದಿರುವ ಕೆಂಪೇಗೌಡರನ್ನು ಪರಿಚಯಿಸಲು ಇರುವ ಬಹುದೊಡ್ಡ ಅವಕಾಶವೇ ಹೊಸದಾಗಿ ನಿರ್ಮಿತವಾಗಿರುವ ವಿಮಾನ ನಿಲ್ದಾಣ.

ಕೆಂಪೇಗೌಡರು ಅಂದು ಬೆಂಗಳೂರಿಗೆ ಹಾಕಿರುವ ಅಸ್ತಿಭಾರವೇ ಇಂದು ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವಾಗಲು ಕಾರಣೀಭೂತವಾಗಿದೆ. ಕೆಂಪೇಗೌಡರಿಗೆ ಬೆಂಗಳೂರು ನಿರ್ಮಿಸಬೇಕು ಎಂಬ ಆಲೋಚನೆ ಇರದಿದ್ದರೆ, ಟಿಪ್ಪು, ಅವರಪ್ಪ ಮತ್ತು ಅನುಯಾಯಿಗಳು ಬೆಂಗಳೂರಿಗೆ ಬಂದಿರುತ್ತಿರಲಿಲ್ಲ, ವಿಶ್ವೇಶ್ವರಯ್ಯನವರು ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕಾರ್ಖಾನೆಗಳನ್ನು ನಿರ್ಮಿಸುತ್ತಿರಲಿಲ್ಲ ಮತ್ತು ಕಾವೇರಿ ನೀರು ಹರಿಸಲು ಶ್ರಮಪಡುತ್ತಿರಲಿಲ್ಲ. 'ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ' ಎಂದು ನಮ್ಮ ರಾಜಣ್ಣ ಮನೋಜ್ಞವಾಗಿ ಅಭಿನಯಿಸಿ ಬಂಗಾರದ ಮನುಷ್ಯನಾಗಲು ಸಾಧ್ಯವಾಗುತ್ತಿರಲಿಲ್ಲ. ಸುಭಾಷ್ ನಗರ ಬಸ್ ನಿಲ್ದಾಣವೂ ಇರುತ್ತಿರಲಿಲ್ಲ ಮತ್ತು. ಜೆ.ಹೆಚ್. ಪಟೇಲರಿಗೆ ಆ ಹೆಸರು ಬದಲಾಯಿಸುವ ಅವಕಾಶವೂ ದೊರೆಯುತ್ತಿರಲಿಲ್ಲ! ಬೆಂಗಳೂರು ಬಿಟ್ಟರೆ, ಬೇರೆ ಇನ್ಯಾವ ನಗರಕ್ಕೂ ಈ ರೀತಿಯ ಇತಿಹಾಸವಿಲ್ಲ. ಚೆನ್ನೈ, ಮುಂಬೈ, ಕೋಲ್ಕೊತ್ತಾ ಹೀಗೆ ಭಾರತದ ಇತರ ನಗರಗಳನ್ನು ಕಟ್ಟಿ ಬೆಳೆಸಿದವರು ಬ್ರಿಟೀಷರು...... ಬೆಂಗಳೂರೊಂದೆ ಬೇರೆ ಸಾಲಿನಲ್ಲಿ ನಿಲ್ಲುವುದು. ಇದಕ್ಕೆಲ್ಲ ಮೂಲ ಕಾರಣ "ಕೆಂಪೇಗೌಡ". ಹಾಗಾಗಿ "ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ" ಬೆಂಗಳೂರು, ಈ ಹೆಸರು ಬಹಳ ಸೂಕ್ತವಾದದ್ದೆಂದು ಸಾಬೀತಾಗುತ್ತದೆ.

ಇನ್ನು, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಆಲೂರು ವೆಂಕಟರಾಯರು, ಬೆಂಗಳೂರಿನಲ್ಲಿ ಕನ್ನಡದ ಅಗ್ರಸ್ಥಾನಕ್ಕಾಗಿ ಹಗಲಿರುಳು ದುಡಿದ ಅನಕೃ, ಗೋಕಾಕ್ ಚಳುವಳಿಯ ರಥವನ್ನೆಳದ ರಾಜಕುಮಾರ ಇವರ್ಯಾರು, ಚುನಾಯಿತ ಜನಪ್ರತಿನಿಧಿಯಾಗಿರಲಿಲ್ಲ! ಹಾಗೆಯೇ ಇಂದಿನ ನಮ್ಮ ಎಲ್ಲಾ ಜನಪ್ರತಿನಿಧಿಗಳು ಕನ್ನಡದ ಕೆಲಸಗಳಿಗೆ ನಿರುಪಯೋಗಿಗಳಾಗಿರುವಾಗ, ನಾಳಿನ ಕರ್ನಾಟಕಕ್ಕೆ ಶುಭವಾಗುವ ಸೂಚನೆಗಳನ್ನು ನೀಡುತ್ತಿರುವ ಒಂದು ಸಂಘಟನೆ ಕರವೇ. ಹೊಸ ವಿಮಾನ ನಿಲ್ದಾಣದಲ್ಲಿ ಕರವೇ ಮುಖ್ಯವಾಗಿ ಬೇಡಿಕೆ ಇಟ್ಟಿರುವುದು ಕನ್ನಡಿಗರಿಗೆ ಉದ್ಯೋಗ, ಕನ್ನಡದಲ್ಲಿ ಗ್ರಾಹಕ ಸೇವೆ, ಕನ್ನಡ ವಾತಾವರಣ ನಿರ್ಮಾಣ ಮತ್ತು ಇವಕ್ಕೆಲ್ಲಾ ಸಂಕೇತವಾಗಬಹುದಾದಂತ ಕೆಂಪೇಗೌಡರ ಹೆಸರು. ಕರ್ನಾಟಕ ರಕ್ಷಣಾ ವೇದಿಕೆ ಜಾತಿವಾದಿಯಲ್ಲ. ಅದರ ಮುಖಂಡ "ಗೌಡ" ಕುಲನಾಮಾಂಕಿತರಾಗಿರುವುದರಿಂದ ಅವರು ಕೆಂಪೇಗೌಡರ ಹೆಸರಿಡಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ ಎಂಬ ವಾದ ಹುಸಿಯಾದದ್ದು. ಕರವೇ ಮತ್ತು ನಾರಾಯಣ ಗೌಡರ ಹೋರಾಟಗಳನ್ನು ಕಂಡವರಿಗೆ ತಿಳಿದು ಬರೋದು ಅವರೆಲ್ಲರದೂ ಒಂದೇ ಸಂಯುಕ್ತ ಜಾತಿ. ಅದು "ಕನ್ನಡ ಜಾತಿ". ಆಲೂರು, ಅನಕೃ, ರಾಜಕುಮಾರರಂತೆ ನಾರಾಯಣಗೌಡರು ಸಹ ಕನ್ನಡಿಗರ ಅನಭಿಷಿಕ್ತ ಸಾಂಸ್ಕೃತಿಕ ದೊರೆ. ಈ ಮಣ್ಣಿನ ಮಗನಾಗಿ, ನಾಡು-ನುಡಿ ಪರ ಹೋರಾಟದ ಸಂಘಟನೆಯ ನಾಯಕನಾಗಿ ಇದನ್ನು ಪ್ರತಿಪಾದಿಸಲು ಅವರು ಎಲ್ಲಾ ರೀತಿಯಲ್ಲೂ ಅರ್ಹರಾಗಿದ್ದಾರೆ.

ವಂದನೆಗಳು

ಚಂದ್ರಶೇಖರನ್ ಕಲ್ಯಾಣ ರಾಮನ್, ಬೆಂಗಳೂರು.

ಪೂರಕ ಓದಿಗೆ

ಕೆಂಪೇಗೌಡರ ಹೆಸರು ಪ್ರಥಮ ಆದ್ಯತೆಯಲ್ಲ : ಟಿಎನಾ ಗೌಡ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X