• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಗಲೇ ಹೋರಾಟಕ್ಕಿಳಿಯದಿದ್ದರೆ ಏನೂ ದಕ್ಕಲಿಕ್ಕಿಲ್ಲ!

By Staff
|
Google Oneindia Kannada News

BIALದೇವನಹಳ್ಳಿ ಸಮೀಪ ಬೆಂ.ಅಂ.ವಿ.ಪ್ರಾ. ನೇತೃತ್ವದಲ್ಲಿ ಬೆಂಗಳೂರಿನ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರು ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತಹ ಯಾವುದೇ ಯೋಜನೆಗಳನ್ನು ಕನ್ನಡಿಗ ಹೃದಯಪೂರ್ವಕವಾಗಿ ಸ್ವಾಗತಿಸುವುದರಲ್ಲಿ ಸಂದೇಹವಿಲ್ಲ. ಒಂದು ರಾಜ್ಯದ ಜನರ ಏಳಿಗೆ ಆಗುವುದು, ಅಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆ ಆಗುವುದರಿಂದ ಮತ್ತು ಅಲ್ಲಿನ ಜನ ದುಡಿಮೆ ಮಾಡಲು ತೊಡಗಿದಾಗ. ಇಂಥ ಏಳಿಗೆಗೆ ಸಾಧನವಾಗಿ ಪ್ರತಿ ರಾಜ್ಯಗಳಲ್ಲೂ ಉದ್ದಿಮೆಗಳು ಪ್ರಾರಂಭವಾಗಬೇಕಾದ್ದು ಅತ್ಯಗತ್ಯ. ಸರ್ಕಾರಗಳು ಉದ್ದಿಮೆಗಾರಿಕೆಗೆ ಉತ್ತೇಜನ ನೀಡುವ ಬಹು ಪ್ರಮುಖ ಕಾರಣ ಜನಗಳಿಗೆ ಉದ್ಯೋಗ ಸೃಷ್ಟಿ ಆಗುವ ಕಾರಣಕ್ಕಾಗಿಯೇ ಮತ್ತು ಅದು ಆಯಾ ರಾಜ್ಯದ ಜನರ ಅನುಕೂಲಗಳಿಗೆ ಪರಿವರ್ತನೆಯಾಗಬೇಕಾದ್ದು ಬಹು ಮುಖ್ಯವಾದದ್ದು. ಇವು ರಾಜ್ಯಗಳನ್ನು ಸುಭದ್ರಗೊಳಿಸಿ ಒಕ್ಕೂಟವನ್ನು ಬಲಪಡಿಸುವ ಬಹುದೊಡ್ಡ ಸಾಧನ. ಹಾಗಾಗಿ ಕರ್ನಾಟಕದಲ್ಲಿ ರೂಪುಗೊಳ್ಳುವ ಯಾವುದೇ ಉದ್ಯಮದಲ್ಲಿ ಕನ್ನಡಿಗನಿಗೆ ಉದ್ಯೋಗ ಮೀಸಲಾಗಿ ದೊರಕಬೇಕಾದದ್ದು ಈ ಮಣ್ಣಿನ ಮಗನಾದವನ ಹಕ್ಕು. ವ್ಯವಸ್ಥೆಯ ಮೂಲಕ ಈ ಉದ್ಯೋಗಗಳು ಕನ್ನಡಿಗನಿಗೆ ದೊರಕಿಸಿಕೊಡುವುದು ಉದ್ದಿಮೆದಾರರ ಸಹಜ ಹೊಣೆಗಾರಿಕೆಯಾಗಬೇಕಿದೆ. ಈ ಜವಾಬ್ದಾರಿಯ ಅರಿವು ಅವರಲ್ಲಿ ಸದಾ ಜಾಗೃತವಾಗಿರಬೇಕು. ಇದು ಇವರ ಮೇಲ್ವಿಚಾರಣೆ ಮಾಡುವ ಸರ್ಕಾರದ-ಅಧಿಕಾರಿಗಳ ಬಹುದೊಡ್ಡ ಜವಾಬ್ದಾರಿಯೆಂದರೆ ತಪ್ಪಲ್ಲ.

ಬೆಂ.ಅಂ.ವಿ.ಪ್ರಾ. ಸಹಭಾಗಿತ್ವದೊಡನೆ ಅನೇಕ ಸಂಸ್ಥೆಗಳು ಇಲ್ಲಿ ಕಾರ್ಯಾರಂಭಗೊಳಿಸಲು ಗುತ್ತಿಗೆ ಪಡೆದಿವೆ ಮತ್ತು ಇದರ ಸಲುವಾಗಿ ಇವರುಗಳು ಬೆಂಗಳೂರಿನಲ್ಲಿ ಕಚೇರಿ ತೆರೆಯುವ ಮೂಲಕ ಮುಂದಿನ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ದುರದೃಷ್ಟವಷಾತ್ ಈ ಉದ್ಯಮದಲ್ಲಿ ಸ್ಥಳೀಯರ ಹಿತವನ್ನು ಕಡೆಗಣಿಸಿರುವ ಮತ್ತು ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಯಾವುದೇ ನ್ಯಾಯ ಸಲ್ಲಿಸದಿರುವ ವಿವರಗಳು ಈಗಾಗಲೇ ಪ್ರಚಲಿತದಲ್ಲಿದೆ. ಒಂದು ಘಟನೆಯನ್ನು ಉದಾಹರಿಸುವುದಾದರೆ, ಪ್ರಯಾಣಿಕರು ವಿಮಾನ ನಿಲ್ದಾಣದಿಂದ ನಗರಪ್ರದೇಶಗಳಿಗೆ ತಲುಪಲು ಬೇಕಾಗುವ ವಾಹನ ಸೌಕರ್ಯ ಒದಗಿಸುವ ಗುತ್ತಿಗೆ ಪಡೆದಿರುವ ಸಂಸ್ಥೆಯೊಂದು, ವಾಹನ ಚಾಲಕರ ನೇಮಕಾತಿಯಲ್ಲಿ, ಆ ಹುದ್ದೆಗಳಿಗೆ ಇಂಗ್ಲಿಷ್ ಕಡ್ಡಾಯವಾಗಿ ಬರಬೇಕು ಎನ್ನುವ ನಿಯಮ ಒಡ್ಡಿ ಆ ನೇಮಕಾತಿಯಲ್ಲಿ ಕನ್ನಡಿಗರನ್ನು ದೂರವಿಟ್ಟು ಪರ ರಾಜ್ಯದ ಅಭ್ಯರ್ಥಿಗಳನ್ನು ನೇಮಕ ಮಾಡುವ ಪ್ರಕ್ರಿಯೆಗೆಚಾಲನೆ ನೀಡಿತ್ತು. ಇದರ ವಿರುದ್ಧ 'ಕರವೇ' ಪ್ರತಿಭಟಿಸಿದ ಹಿನ್ನಲೆಯಲ್ಲಿ ಇಂದು ಅವರು ಚಾಲಕರ ಹುದ್ದೆಗೆ ಕನ್ನಡ ಭಾಷೆಯ ಪರಿಣತಿ ಇರಬೇಕು ಎಂಬ ಜಾಹೀರಾತನ್ನು ಪತ್ರಿಕೆಗಳಲ್ಲಿ ಬಿಡುಗಡೆ ಮಾಡಿರುವುದನ್ನು ತಾವು ಗಮನಿಸಿರಬಹುದು. ಹೋರಾಟ ನಡೆಸಿಯೇ ಎಲ್ಲವನ್ನೂ ಪಡೆಯಬೇಕಾಗಿರುವುದು ಕನ್ನಡಿಗನ ಹಿತಕಾಯಬೇಕಾದ ಆಡಳಿತದ ನಿರ್ಲಕ್ಷ್ಯವನ್ನು ಸಾಬೀತು ಮಾಡುತ್ತದೆ.

ಇಡೀ ಪ್ರಪಂಚದಲ್ಲಿ ಅಲ್ಲಲ್ಲಿಯ ಸ್ಥಳೀಯ ಭಾಷೆ, ಜನಾಂಗಕ್ಕೆ ಆಧ್ಯತೆ ಎಂಬುದು ಪ್ರಚಲಿತದಲ್ಲಿರುವಂತೆ, ಕನ್ನಡ ನಾಡಿನ ನೆಲ, ಜಲ, ಸಂಪನ್ಮೂಲ, ಉದ್ದಿಮೆಗಳು, ಉದ್ಯೋಗಗಳು, ವ್ಯವಸ್ಥೆಗಳು... ಇರುವುದು ಕನ್ನಡಿಗರ ಏಳಿಗೆಗಾಗಿ ಮತ್ತು ಸೌಕರ್ಯಕ್ಕಾಗಿ, ಹಾಗಾಗಿ ಹೊಸ ವಿಮಾನ ನಿಲ್ದಾಣದಲ್ಲಿನ ಎಲ್ಲಾ ಕೆಲಸಗಳು ಕನ್ನಡಿಗನಿಗೆ ಆಧ್ಯತೆಯ ಮೇಲೆ ದೊರಕಬೇಕು. ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ಕನ್ನಡತನ ಪ್ರತಿಷ್ಠಾಪಿತವಾಗಬೇಕು. ಕನ್ನಡ ನಾಡು - ನುಡಿ ಕಟ್ಟಿ ಮೆರೆಸಲು ಶ್ರಮಿಸಿದ ಮಹನೀಯರೊಬ್ಬರ ಹೆಸರಿಗೆ ಇದು ಅರ್ಪಿತವಾಗಬೇಕು. ಆದರೆ ನಿಲ್ದಾಣ ನಿರ್ಮಾಣಕ್ಕೆ ಜಮೀನು-ಮನೆ-ಮಠ-ಆಸ್ತಿ ಬಿಟ್ಟುಕೊಟ್ಟ ಆ ಪ್ರದೇಶದ ಸುತ್ತಮುತ್ತಲಿನ ರೈತರು, ಹಳ್ಳಿಗಳ ನಿರುದ್ಯೋಗಿಗಳು ಹಾಗು ಪ್ರತಿಭಾವಂತರು ವಿಮಾನ ನಿಲ್ದಾಣದ ಕಾಮಗಾರಿಗೆ ಚಾಲನೆ ದೊರೆತ ದಿನದಿಂದಲೂ ಅಲ್ಲಿ ಕೆಲಸ ದೊರಕಿಸಿಕೊಳ್ಳಲು ಅಪೇಕ್ಷಿಸುತ್ತ ಕಾತರ ಮತ್ತು ನೀರೀಕ್ಷೆಗಳಿಂದ ಇನ್ನೂ ಎದುರು ನೋಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸೃಷ್ಟಿಯಾಗುವ ಎಲ್ಲಾ ಉದ್ಯೋಗ, ನಿಲ್ದಾಣಕ್ಕೆ ಸಂಬಂಧಪಟ್ಟ ಸೇವೆಗಳಲ್ಲಿ ಕನ್ನಡ ಭಾಷೆಯ ಉಪಯೋಗ, ನಿಲ್ದಾಣಕ್ಕೆ ಕನ್ನಡಿಗನೊಬ್ಬನ ಹೆಸರು ಹಾಗು ನಿಲ್ದಾಣ ಕಾರ್ಯನಿರ್ವಹಣೆಯಿಂದ ಕನ್ನಡದ ಜನತೆಗೆ ಉಂಟಾಗಬೇಕಾಗಿರುವ ಲಾಭ ಕನ್ನಡಿಗನಿಗೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಇತ್ತೀಚಿನ ಚುನಾವಣೆಯಲ್ಲಿ, ಸಮಸ್ತ ಕನ್ನಡಿಗರ ಹಿತಕಾಯುವ ಭರವಸೆಗಳ ಮಹಾಪೂರವನ್ನೇ ಹರಿಸಿರುವ - ಇನ್ನೇನು ಕರ್ನಾಟಕದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿರುವ - ಹೊಸ ಸರ್ಕಾರ ರಚಿಸಲಿರುವವರಿಗೆ, ಅಧಿಕಾರ ಕೈಗೆ ತೆಗೆದುಕೊಂಡಕೂಡಲೇ, ಕನ್ನಡಿಗನಿಗೆ ನ್ಯಾಯ ದೊರಕಿಸಿ ಕೊಡುವುದರ ಮೂಲಕ ಸಮಸ್ತ ಕನ್ನಡಿಗರನ್ನು ತನ್ನೆಡೆಗೆ ಸೆಳೆದುಕೊಳ್ಳಬಹುದಾದಂಥ ಒಂದು ಸದವಕಾಶ ವರವಾಗಿ ಪರಿಣಮಿಸಿದೆ. ಆದರೆ ಕಾರ್ಯರೂಪಕ್ಕಿಳಿಸಲು ಇವರಿಗೆಲ್ಲರಿಗೂ ಇರುವ ದೊಡ್ಡ ಕೊರತೆ ಕನ್ನಡಪರ ಕಾಳಜಿ ಹಾಗು ಇಚ್ಛಾಶಕ್ತಿ!

ಹೀಗೆ ಯಾವುದೇ ರಾಜಕೀಯ ಪಕ್ಷಗಳು, ನಾಯಕರು, ಕನ್ನಡಿಗರ ಪರ ಧ್ವನಿ ಎತ್ತದೇ ಇರುವ ಈ ಸಂದರ್ಭದಲ್ಲಿ ಕನ್ನಡಿಗರಿಗೆ ಆಶಾದಾಯಕವಾಗಿ ಕಂಡುಬರುತ್ತಿರುವ ಒಂದೇ ಸಂಘಟನೆ ಕ.ರ.ವೇ. ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ಅಲ್ಲಿ ಕನ್ನಡಿಗರಿಗಾಗಿರುವ ಅನ್ಯಾಯದ ವಿರುದ್ಧ ಪ್ರಶ್ನಿಸುತ್ತ, ಪ್ರತಿಭಟಿಸುತ್ತಲೇ ಬಂದಿದೆ. ಜನಾಂದೋಲನ, ಜನಾಭಿಪ್ರಾಯಗಳನ್ನು ಮೂಡಿಸುತ್ತ ಬೃಹತ್ ಪ್ರತಿಭಟನೆಗೆ ಅಣಿಯಾಗುತ್ತಿದ್ದಾರೆ. ಸ್ವಾಭಿಮಾನಿ ಕನ್ನಡಿಗರು ಈ ಹೋರಾಟದಲ್ಲಿ ಕರವೇಯನ್ನು ಬೆಂಬಲಿಸಿ ಕೈ ಜೋಡಿಸಬೇಕಿದೆ.

ವಂದನೆಗಳು

ಚಂದ್ರಶೇಖರನ್ ಕಲ್ಯಾಣ ರಾಮನ್, ಬೆಂಗಳೂರು.

ಪೂರಕ ಓದಿಗೆ

ಮೇ 21ರಂದು ಕರವೇ ವಿಮಾನ ನಿಲ್ದಾಣ ಮುತ್ತಿಗೆ
ದೇವನಹಳ್ಳಿ ಉಕ್ಕಿನ ಹಕ್ಕಿಗಳಲ್ಲಿ ಕನ್ನಡದ ಉಲಿ
ಬಿಐಎಲ್‌ನಲ್ಲಿ ಕನ್ನಡಿಗರಿಗೆ ಉದ್ಯೋಗದ ಸಿಂಹಪಾಲು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X