ಪಟಾಕಿ ಹಚ್ಚೋದು ಅಂದ್ರೆ ನೀವ್ ಏನೆಂದುಕೊಂಡಿರುವಿರಿ?
ಮಾನ್ಯರೇ,
ಅಜ್ಞಾನದ ಅಂಧಕಾರವೆಂಬ ಕತ್ತಲೆಯನ್ನು ದೂರಾಗಿಸಿ, ಜ್ಞಾನ ಜ್ಯೋತಿಯನ್ನು ಬೆಳಗುವುದೇ ದೀಪಾವಳಿಯ ಆಶಯ. ಆದರೆ ಮುಂಚೆಲ್ಲಾ ಪರಿಸರ ಸ್ನೇಹಿಯಾಗಿದ್ದ ದೀಪಾವಳಿ ಇಂದು ಪಟಾಕಿಗಳ ಹಾವಳಿಯಿಂದ ಮಾಲಿನ್ಯ ಮಯವಾಗುತ್ತಿದೆ.
ಹೆಚ್ಚು ಶಬ್ದ ಮಾಡುವ, ಕಣ್ಣು ಕೋರೈಸುವ ಬೆಳಕು ಹರಿಸುವ ಪಟಾಕಿ ಸಿಡಿಸಿದರೆ ದೀಪಾವಳಿ ಆಚರಣೆ ಆದಂತೆ ಎಂಬ ಹುಚ್ಚು ಕಲ್ಪನೆಯಲ್ಲಿ ಇಂದಿನ ಯುವ ಪೀಳಿಗೆ ಇದ್ದಂತ್ತಿದೆ. ಪಟಾಕಿ ಸಿಡಿತದಿಂದ ಆಗುವ ಪರಿಸರ ಮಾಲಿನ್ಯ , ದುಷ್ಪರಿಣಾಮಗಳ ಬಗ್ಗೆ ಯಾರಿಗೂ ಕಾಳಜಿ ಇಲ್ಲವಾಗಿದೆ. ಪಟಾಕಿ ಹೊಡೆಯುವುದರಿಂದ ಕ್ಷಣಿಕವಾಗಿ ಆನಂದ ಸಿಕ್ಕರೂ, ಅದರಿಂದ ಆಗುವ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ನಿರಂತರವಾಗಿ ಎಲ್ಲರ ಆನಂದವನ್ನು ಕಳೆದುಬಿಡುತ್ತದೆ.
ಪಟಾಕಿಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರನ್ನು ಬಳಸುತ್ತಾರೆ ಎಂಬ ವಿಷಯ ಎಲ್ಲರಿಗೂ ಗೊತ್ತು. ಪಟಾಕಿ ಖರೀದಿಸುವ ಮುಖಾಂತರ, ಬಾಲ ಕಾರ್ಮಿಕ ಪದ್ಧತಿಗೆ ಬೆಂಬಲ ನೀಡುತ್ತಿರುವ ಸಂಗತಿ ಎಷ್ಟು ಮಂದಿಗೆ ಗೊತ್ತು? ತಾಮ್ರ, ಸೀಸ, ಕ್ಯಾಡ್ಮಿಯಂ,ಮ್ಯಾಗ್ನೇಷಿಯಂ, ಸೋಡಿಯಂ,ಸಾರಜನಕ,ರಂಜಕ, ಸತು.. ಇನ್ನೂ ಅನೇಕ ರಾಸಾಯನಿಕಗಳ ಮಿಶ್ರಣದಿಂದ ತಯಾರಾಗುವ ಪಟಾಕಿಗಳು ಬಣ್ಣ ಬಣ್ಣವಾಗಿ ಆಕರ್ಷಕವಾಗಿ ಕಾಣುವುದಂತು ನಿಜ. ಆದರೆ ಈ ಪಟಾಕಿಗಳ ಸಿಡಿತದಿಂದ ಉಂಟಾಗುವ ವಾಯು ಮಾಲಿನ್ಯ, ಶಬ್ದ ಮಾಲಿನ್ಯದಿಂದ ಜನರಿಗೆ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
ಶ್ವಾಸಕೋಶದ ತೊಂದರೆ, ಮೂತ್ರಕೋಶ ವೈಫಲ್ಯ, ಕಣ್ಣುರಿ, ಚರ್ಮ ರೋಗ, ನರ ದೌರ್ಬಲ್ಯ ಮುಂತಾದ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಬೆಂಗಳೂರು ನಗರವೊಂದರಲ್ಲೇ ಶೇ.30ರಷ್ಟು ಹಸುಗೂಸುಗಳಿಗೆ ಶ್ವಾಸಕೋಶ ತೊಂದರೆಯಿರುವುದು ಕಂಡುಬಂದಿದೆ. ಇನ್ನೂ ದೃಷ್ಟಿ ದೋಷ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿ ಹೋಗಿದೆ. ಸ್ವಲ್ಪ ಯೋಚನೆ ಮಾಡಿ.
ದೀಪಾವಳಿ ಬೆಳಕಿನ ಹಬ್ಬ. ಮನೆ ಮುಂದೆ ದೀಪ ಹಚ್ಚಿ, ಮನದೊಳಗೆ ದೀಪ ಹಚ್ಚಿ. ನಿಮಗೆ ಮತ್ತು ಎಲ್ಲರಿಗೂ ಬೆಳಕು ನೆಮ್ಮದಿ ತರಲಿ. ಅದು ಕಿಚ್ಚಾಗದಿರಲಿ.
ಪರಿಸರ ಪ್ರೇಮಿ












Click it and Unblock the Notifications