ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆಯ ಅಧ್ವಾನಗಳು : ನಿಜವಾದ ಕನ್ನಡಿಗ ಯಾರು?

By Super
|
Google Oneindia Kannada News

ವಲಸಿಗರಿಂದ ರಾಜಧಾನಿ ನಗರ ತುಂಬಿಹೋಗಿದೆ. ಆ ಪರಿಣಾಮ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಕನ್ನಡ ಭಾಷೆ ಉಸಿರಾಡಲು ಕಷ್ಟಪಡುತ್ತಿದೆ. ಈ ನಿಟ್ಟಿನಲ್ಲಿ ಎರಡು ಪಕ್ವ ವಾದಗಳು ನಿಮ್ಮ ಗಮನಕ್ಕೆ... ನಿಮ್ಮ ವಾದಗಳಿಗೂ ಸ್ವಾಗತ... ಎರಡು ಸಾಲು ಬರೆಯಬಹುದು.

ಸಂಪಿಗೆಯವರಿಗೆ ನಮಸ್ಕಾರ.

ನಿಮ್ಮ ಉತ್ತರಕ್ಕೆ ನನ್ನ ವಂದನೆಗಳು!

ಗಡಿಭಾಗದ ಸಮಸ್ಯೆಯನ್ನು ಹೊರತುಪಡಿಸಿ, ನೀವೇ ಹೇಳಿರುವಂತೆ ಹಿಂದಿನ ಒಂದು ದಶಕದಲ್ಲಿ ಪರಭಾಷಿಕರ ಸಂಖ್ಯೆ ಮಿತಿಮೀರಿದೆ ಮತ್ತು ಸಮಸ್ಯೆಗಳೂ ಉಲ್ಬಣಿಸಿವೆ. ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೊಡುಗೆ ಎಂಬುದನ್ನು ನೀವೂ ಹೇಳಿದ್ದೀರಿ ಮತ್ತು ನಾನೂ ಒಪ್ಪಿದ್ದೇನೆ. ಇದರಿಂದಾಗಿಯೇ ಸಮಸ್ಯೆ ರಭಸವಾಗಿ ಬೆಳೆಯುತ್ತಿದೆ ಮತ್ತು ಮುಂದೆ (ಈಗಾಗಲೇ?) ಅಪಾಯಕಾರಿ ಮಟ್ಟ ತಲುಪುತ್ತದೆ ಎನ್ನುವುದನ್ನೂ ಒಪ್ಪಿದ್ದೇನೆ.

ಆದರೆ ಅದೇ ಸಮಯಕ್ಕೆ ನಾವು ಎಲ್ಲಾ ದಿಕ್ಕಿನಲ್ಲೂ ಯೋಚಿಸಬೇಕಾಗುತ್ತದೆ. ಕನ್ನಡದ ಬಗ್ಗೆ ಅಭಿಮಾನವಿರದ ಬಿಹಾರಿಯನ್ನು ನಡೆಯಾಚೆ ಎನ್ನಬಹುದು. ಕನ್ನಡದಲ್ಲೇ ಮಾತಾಡುತ್ತ ವ್ಯಾಪಾರ ನಡೆಸುವ ದಿನಸಿ ಅಂಗಡಿ ಶೆಟ್ಟಿಯನ್ನು ಹೊರದಬ್ಬುವುದು ಹಾಗೆಯೇ ಇತರ ರಾಜ್ಯದಲ್ಲಿ ವಾಸ ಮಾಡುತ್ತಿರುವ ಕನ್ನಡಿಗರನ್ನು ಅಲ್ಲಿಂದ ಹೊರಗಟ್ಟುವುದು ಸರಿಯಾಗಲಾರದು.

ಒಂದು ಪ್ರದೇಶದಲ್ಲಿ, ಅನ್ಯಭಾಷಿಕರ ಸಂಖ್ಯೆ ಮಿತಿಮೀರಿ ಬೆಳೆದಾಗ ಅದು ಅಲ್ಲಿನ ಮೂಲ ಸಂಸ್ಕೃತಿಗೆ ಸಂಚಕಾರ ಸರಿ. ಇಂದು ಬೆಂಗಳೂರಿಗೆ ಈ ಸಮಸ್ಯೆ ಬಂದಿರುವುದು ಮಾಹಿತಿ ತಂತ್ರಜ್ಞಾನದಿಂದಾಗಿ. ಮೈಸೂರು, ಮಂಗಳೂರಿನಲ್ಲಿ ಇದು ಅಷ್ಟರ ಮಟ್ಟಿಗೆ ಇಲ್ಲ. ಗಡಿ ಭಾಗಗಳಲ್ಲಿನ ಸಮಸ್ಯೆ ಬೆಂಗಳೂರಿನ ಸಮಸ್ಯೆಗಿಂತ ತೀರಾ ಭಿನ್ನ ಆದರೆ ಅಷ್ಟೇ ಭಯಾನಕ.

ಎಲ್ಲದಕ್ಕೂ ಮೂಲ ಕಾರಣ ವಲಸೆಯೇ ಆದರೂ ಒಂದು ವ್ಯತ್ಯಾಸವಿದೆ- ಗಡಿಭಾಗಳಲ್ಲಿ ವಲಸಿಗರ ಸಂಖ್ಯೆ ಶೇಕಡವಾರು 10-20ರಷ್ಟಿದ್ದರೆ ಅಲ್ಲಿನ ಜನರಿಗೆ ಕನ್ನಡದ ಪರಿಚಯ ಮಾಡಿಸಬಹುದು. ಅದೇ ಬೆಂಗಳೂರಿನಲ್ಲಿ ಇಂದು ಎಲ್ಲರನ್ನು ಹೊರಗಟ್ಟಿ ಶೇಕಡವಾರು 4-5ರಷ್ಟು ಜನರನ್ನು ಉಳಿಸಿಕೊಂಡರೂ ಅವರಿಗೆ ಕನ್ನಡ ಕಲಿಯುವ ಅನಿವಾರ್ಯತೆಯೇ ಇಲ್ಲದಂತಾಗಿದೆ. ಅಷ್ಟರ ಮಟ್ಟಿಗೆ ಇಂಗ್ಲಿಷು ಬೆಂಗಳೂರನ್ನು ಆಕ್ರಮಿಸಿದೆ. ಹೌದು, ಬೆಂಗಳೂರೇ ಆಗಲೀ ಬೆಳಗಾವಿಯೇ ಆಗಲಿ ಕನ್ನಡಿಗರ ಸಂಖ್ಯೆ ಶೇಕಡವಾರು 60-70ಕ್ಕಿಂತ ಕಮ್ಮಿಯಾದರೆ ಏನೂ ಮಾಡಲಾಗದ ಪರಿಸ್ಥಿತಿ. ಅಂದರೆ ವಲಸೆ ತಡೆ ಅನ್ನುವುದಕ್ಕಿಂತ ವಲಸೆ ನಿಯಂತ್ರಣ ಎನ್ನುವುದು ಸೂಕ್ತ.

ಇತರ ಕಡೆ ಇರುವ ಅಲ್ಪಸಂಖ್ಯಾತ ಕನ್ನಡಿಗರನ್ನು ಗಮನದಲ್ಲಿಟ್ಟುಕೊಂಡು- ಕೊಬ್ಬಿದ ಸಾಫ್ಟ್‌ ವೇರ್‌ ಇಂಜಿನಿಯರನ್ನು, ಮಾರ್ವಾಡಿಗಳನ್ನು ಹೊರಗಿಟ್ಟು ದುಡಿಯುವ ಕೂಲಿ ಆಳುಗಳಿಗೆ, ಮಿತ ಸಂಖ್ಯೆಯ ವ್ಯಾಪಾರಿಗಳಿಗೆ ಒಳಬರಲು ಬಿಡಬೇಕು ಎನ್ನುವುದು ನನ್ನ ಅನಿಸಿಕೆ. ಈ ನಿಟ್ಟಿನಲ್ಲಿ ಸಂವಿಧಾನದಲ್ಲಿ ತಿದ್ದುಪಡಿ ತರಬಹುದಾದರೆ ಅಥವಾ ಬೇರೆ ಇನ್ಯಾವುದೇ ಉಪಾಯವಿದ್ದರೆ ತಿಳಿಸಿ.

ಅಭಿವಂದನೆಗಳೊಂದಿಗೆ,

-ವಿಕ್ರಮ ಹತ್ವಾರ

ಆತ್ಮೀಯ ವಿಕ್ರಮ ಹತ್ವಾರ ಅವರಿಗೆ ನಮಸ್ಕಾರಗಳು,

ನನ್ನ ಅಭಿಪ್ರಾಯಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.

ನೀವು ಹೇಳುವುದು ನಿಜ ನಾನು ಈಗ ಬಂದಿರುವ ಅನ್ಯಭಾಷಿಕರನ್ನು ಅಥವಾ ಇಲ್ಲೇ ಬಹಳ ವರ್ಷಗಳಿಂದ ನೆಲೆಸಿರುವ ನೆರೆರಾಜ್ಯದವರನ್ನು ಕನ್ನಡನಾಡಿನಿಂದ ಓಡಿಸಬೇಕು ಎಂದು ಹೇಳುತ್ತಿಲ್ಲ. ಆದರೆ ಅವರು ಇಲ್ಲಿಗೆ ಬಂದು ಇಲ್ಲಿನ ಭಾಷೆ ಸಂಸ್ಕೃತಿಗೆ ಗೌರವ ಕೊಡಬೇಕಾದುದು ಅವರ ಕರ್ತವ್ಯ. ನೀವೇ ಹೇಳಿದಂತೆ ಕನ್ನಡನಾಡಿನಲ್ಲಿರುವ ಬಹಳಷ್ಟು ಪರಭಾಷಿಕರು ಕನ್ನಡ ಕಲಿತು ಕನ್ನಡಿಗರಾಗೇ ಬದುಕುತ್ತಿದ್ದಾರೆ. ಅವರನ್ನು ಪರಭಾಷಿಕರು ಎಂದು ಕರೆಯುವುದು ಸಲ್ಲ. ಅವರೂ ಕನ್ನಡಿಗರೇ.

ಕನ್ನಡಿಗ ಎನ್ನುವುದು ಬರೀ ಕನ್ನಡ ಮಾತೃಭಾಷೆಯಾಗಿರುವವರು ಮಾತ್ರ ಅಲ್ಲ ಎಂದು ನನ್ನ ನಂಬಿಕೆ. ಕನ್ನಡಿಗ ಎನ್ನುವುದನ್ನು ವಿಶಾಲ ದೃಷ್ಟಿಯಿಂದ ನೋಡಬೇಕಾಗಿದೆ. ಇಲ್ಲೇ ನೆಲೆಸಿರುವ ದಿನಸಿ ಅಂಗಡಿ ಸೆಟ್ಟಿ ಕನ್ನಡ ಕಲಿತು ಕನ್ನಡಲ್ಲೇ ವ್ಯಾಪಾರ ಮಾಡುತ್ತಿರುವ್ಯದರಿಂದ ಅವನು ಕನ್ನಡಿಗ. ಹಾಗೆ ಕನ್ನಡ ಮಾತೃಭಾಷೆಯಲ್ಲದ ಕನ್ನಡ ಸಾಹಿತಿಗಳಾದ ಕನ್ನಡದ ವರಕವಿ ಬೇಂದ್ರೆಯವರು, ಕನ್ನಡದ ಆಸ್ತಿ ಮಾಸ್ತಿಯವರು, ರಾಷ್ಟ್ರಕವಿ ಗೋವಿಂದ ಪೈಗಳು, ನಿತ್ಯೋತ್ಸವದ ಕವಿ ನಿಸಾರ್‌ ಅಹಮದ್‌ ಅವರು ಕನ್ನಡಿಗರಲ್ಲ ಎಂದು ಯಾರು ಹೇಳುತ್ತಾರೆ. ಇವರೆಲ್ಲಾ ಕನ್ನಡದ ಆಸ್ತಿಗಳು. ಆದರೆ ಇವರ ಉದಾಹರಣೆ ತೆಗೆದು ಕೊಂಡು ವಲಸೆ ಬಂದ ತಮಿಳರೆಲ್ಲಾ, ಮರಾಠಿಗರೆಲ್ಲಾ, ಉರ್ದು ಭಾಷಿಕರೆಲ್ಲಾ ಕನ್ನಡ ಅಭಿಮಾನ ಹೊಂದಿದ್ದಾರೆ ಎನ್ನುವುದೂ ಅಷ್ಟೇ ಮೂರ್ಖತನವಾಗುತ್ತದೆ.

ನಾನು ಮಾಸ್ತಿಯವರಂತೆ ತಮಿಳು ಶ್ರೀವೈಷ್ಣವ. ಆದರೆ ಎಲ್ಲಾ ತಮಿಳು ಶ್ರೀವೈಷ್ಣವರು ಮಾಸ್ತಿಯವರಂತೆ, ಗೋರೂರು ಅವರಂತೆ, ಪು.ತಿ.ನ ಅಥವಾ ಜಿ.ಪಿ.ರಾಜರತ್ನಂ ಅವರಂತೆ ಕನ್ನಡ ಅಭಿಮಾನಿಗಳಲ್ಲ ಎನ್ನುವುದು ನನಗೆ ಗೊತ್ತು. ಈಗಿನ ಉಪಗ್ರಹ ಟಿ.ವಿ ಪ್ರಭಾವದಿಂದ, ಸಿನಿಮಾಗಳ ಪ್ರಭಾವದಿಂದ ಇಲ್ಲಿ ನೆಲೆಸಿರುವ ಪರಭಾಷಿಕ್ಪರಿಗೆ ಅದರಲ್ಲೂ ಯುವಜನಾಂಗಕ್ಕೆ ಅವರ ಭಾಷೆಯ ವಾಹಿನಿಗಳನ್ನು ನೋಡುವ ಅವಕಾಶ ದೊರೆತಮೇಲೇ ಕನ್ನಡದ ಬಗ್ಗೆ ಅವರು ಆಸಕ್ತಿ ತಳೆವುದು ಇನ್ನೂ ಕಡಿಮೆಯಾಗಿದೆ.

ಅಂತಾರಾಜ್ಯ ವಲಸೆ ಸಂಪೂರ್ಣವಾಗಿ ತಡೆಗಟ್ಟುವುದು ಸರಿಯಲ್ಲವಾದರೂ ಅದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕಾದುದು ಕನ್ನಡ ನಾಡಿನ ಮಟ್ಟಿಗೆ ಬಹಳ ಅಗತ್ಯವಾಗಿದೆ. ಇದನ್ನು ಸಾಧಿಸಲು ಸಂವಿಧಾನಕ್ಕೆ ತಿದ್ದುಪಡಿ ತಂದರೆ ಮಾತ್ರ ಸಾದ್ಯ. ಇದಕ್ಕಾಗಿ ರಾಜಕೀಯ ಒತ್ತಡ ಮೂಡಬೇಕಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಗಳಿಸಿಕೊಳ್ಳಲು ಇನ್ನೂ ಸಾದ್ಯವಾಗಿಲ್ಲ. ಇನ್ನು ವಲಸೆ ಬಗ್ಗೆ ನಮ್ಮ ರಾಜಕಾರಣಿಗಳು ಚಿಂತಿಸಿ, ಸಂವಿಧಾನ ತಿದ್ದು ಪಡಿಗೆ ಒತ್ತಾಯಿಸುವುದು ದೂರದ ಮಾತು. ಇದಕ್ಕೆಲ್ಲಾ ಕನ್ನಡ ಪರವಾದ ಒಂದು ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಇದಕ್ಕಾಗಿ ಕನ್ನಡಿಗರು ಸಂಘಟಿತರಾಗಬೇಕಿದೆ.

ಆದ್ದರಿಂದ ಇರುವ ಒಂದೇ ದಾರಿ ಕನ್ನಡಿಗರು ಹೆಚ್ಚು ಮಕ್ಕಳನ್ನು ಹೆತ್ತು ಕನ್ನಡಿಗರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ನಾನು ಹೇಳಿದ್ದು.

ವಂದನೆಗಳು
ಸಂಪಿಗೆ ಶ್ರೀನಿವಾಸ, ಬೆಂಗಳೂರು

English summary
How to fight emigration problem? : A Healthy Debate by Sampige Srinivas and Vikram Hathwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X