Gold: ಮಂಗಳಸೂತ್ರ ಕಸಿಯಲು ಕೈ ಹಾಕಿದ್ಯಾರು?: ಚಿನ್ನದ ಸುಂಕ ಏರಿಕೆ ವಿರುದ್ಧ ಖರ್ಗೆ ವಾಗ್ದಾಳಿ
ಬೆಂಗಳೂರು: ಚಿನ್ನ ಖರೀದಿಸದಂತೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಕರೆ ನೀಡುತ್ತಿದ್ದಂತೆ ಆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ಕಾಂಗ್ರೆಸ್ ಮಹಿಳೆಯರ ಮಂಗಳಸೂತ್ರ ಕಸಿದುಕೊಳ್ಳುತ್ತದೆ ಎಂದಿದ್ದ ಬಿಜೆಪಿ ಸರ್ಕಾರವೇ ಚಿನ್ನದ ಮೇಲಿನ ಸುಂಕ ಹೆಚ್ಚಿಸಿದೆ. ಹಾಗಾದರೆ ಮಂಗಳಸೂತ್ರ ಕಸಿಯಲು ಕೈಹಾಕಿದವರು ಯಾರು? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಆಗ್ರಹಿಸಿದ್ದಾರೆ.
ಪಾಶ್ಚಿಮಾತ್ಯ ದೇಶಗಳ ಯುದ್ಧಗಳ ಕಾರಣದಿಂದಾಗಿ ಇಂಧನ ಪೂರೈಕೆಗೆ ಹೊಡೆತ ಬಿದ್ದಿದೆ. ಆರ್ಥಿಕವಾಗಿ ಸಮಸ್ಯೆ ಆಗುವ ಕಾರಣಕ್ಕೆ ವಿದೇಶಿ ವಸ್ತುಗಳ ಬಳಕೆ, ಇಂಧನ ಬಳಕೆ ತಗ್ಗಿಸಬೇಕು, ಚಿನ್ನ ಖರೀದಿಸದಂತೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದರು. ಇದು ಆಡಳಿತ ವೈಫಲ್ಯ ಅನ್ನುತ್ತಲೇ ಬಂದಿರುವ ಕಾಂಗ್ರೆಸ್ ನಾಯಕರ ಪೈಕಿ ಶನಿವಾರ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರದ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮಂಗಳಸೂತ್ರಕ್ಕೆ ಕೈ ಹಾಕಿದ್ದು ಯಾರು?
ಎಕ್ಸ್ ಪೋಸ್ಟ್ ಮೂಲಕ ಸಚಿವರು, ಬಂಗಾರ ತ್ಯೆಜಿಸುವುದು ಅಚ್ಚೆ ದಿನ್, ಬದುಕು ತ್ಯೆಜಿಸುವುದು ಅಮೃತ್ ಕಾಲ್, ಇದು ಮೋದಿ ಮ್ಯಾಜಿಕ್! ಎಂದು ಪ್ರಧಾನಿ ಕರೆ ನೀಡಿರುವುದನ್ನು ಅವರು ಟೀಕಿಸಿದ್ದಾರೆ. 2024ರಲ್ಲಿ "ಕಾಂಗ್ರೆಸ್ ನಿಮ್ಮ ಮಂಗಳಸೂತ್ರವನ್ನು ಕಸಿಯುತ್ತದೆ" ಎಂದು ಆರೋಪಿಸಿದ್ದರು. ಇಂದು 2026ರಲ್ಲಿ ಬಂಗಾರದ ಮೇಲಿನ ಆಮದು ಸುಂಕ ಶೇ.6 ನಿಂದ ಶೇ.15ರಷ್ಟು ಹೆಚ್ಚಿಸಿದೆ. ಬಂಗಾರದ ಬೆಲೆ ಸಾರ್ವಕಾಲಿಕ ಏರಿಕೆ ಆಗಿದೆ. ಇದೀಗ ಬಂಗಾರ ಖರೀದಿಸಬೇಡಿ ಎಂಬ ಬಿಟ್ಟಿ ಉಪದೇಶ ಹೇಳುತ್ತಿದ್ದಾರೆ. ಈ ಮೂಲಕ ಮಂಗಳಸೂತ್ರ ಕಸಿಯಲು ಕೈಹಾಕಿದವರು ಯಾರು? ಇದಕ್ಕೆ ಬಿಜೆಪಿಗರು ಉತ್ತರಿಸುವರೇ? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ವೈಫಲ್ಯದ ಆಡಳಿತದ ಕಾರಣಕ್ಕೆ ಜನರಿಂದ ತ್ಯಾಗವನ್ನು ಬಯಸುವುದಕ್ಕೆ "ಅಮೃತ ಕಾಲ" ಎಂದು ಪ್ರಧಾನಿ ಮೋದಿ ಹೆಸರಿಟ್ಟಿದ್ದಾರೆ. ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ಜವಾಬ್ದಾರಿಯನ್ನು ಜನರ ತಲೆಗೆ ವರ್ಗಾಯಿಸುವ ಕಲೆ ಮೋದಿಯವರಿಗೆ ಚೆನ್ನಾಗಿ ತಿಳಿದಿದೆ ಎಂದು ಲೇವಡಿ ಮಾಡಿದರು.
ಬಿಜೆಪಿ ಆಡಳಿತ ವಿರುದ್ಧ ಖರ್ಗೆ ಕಿಡಿ
ಕೋವಿಡ್ ನಿರ್ವಹಣೆಯ ವೈಫಲ್ಯದ ಸಮಯದಲ್ಲಿ ತಟ್ಟೆ ಬಡಿಯಿರಿ, ದೀಪ ಹಚ್ಚಿರಿ ಎನ್ನುತ್ತಲೇ ಲಕ್ಷಾಂತರ ಮಂದಿಯನ್ನು ಬಲಿ ಕೊಟ್ಟಿದ್ದಾಯ್ತು. ನೋಟ್ ಬ್ಯಾನ್ ಸಮಯದಲ್ಲಿ "50 ದಿನಗಳ ಸಮಯ ಕೊಡಿ, ಪರಿಸ್ಥಿತಿ ಸರಿ ಹೋಗದಿದ್ದರೆ ನೀವು ಕೊಡುವ ಶಿಕ್ಷೆಗೆ ನಾನು ಸಿದ್ದ" ಎನ್ನುತ್ತಲೇ ನೂರಾರು ಜನರ ಜೀವಕ್ಕೆ ಕಂಟಕವಾಗಿದ್ದಾಯ್ತು.
ಈಗ ಹೊಸ ವರಸೆಯಾಗಿ, ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಮಿತವಾಗಿ ಬಳಸಿ, ಸರಳ ಜೀವನ ನಡೆಸಿ ಎಂಬ ಉಪದೇಶಗಳು ಶುರುವಾಗಿವೆ, ಈ ಉಪದೇಶಗಳು ಯಾವ ಭೀಕರ ದಿನಗಳ ಮುನ್ಸೂಚನೆಯೇ ಎಂದು ಬಿಜೆಪಿಗೆ ಉತ್ತರ ಕೇಳಿದ್ದಾರೆ. ಐತಿಹಾಸಿಕ ದಾಖಲೆ ಮಟ್ಟದ ಗ್ಯಾಸ್ ಬೆಲೆ ಏರಿಕೆಯ ನಂತರ ಈಗ ಇಂಧನ ತೈಲಗಳ ಬೆಲೆ ಏರಿಕೆಯ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ದುಸ್ತರವಾಗಿರುವ ಜನರ ಬದುಕನ್ನು ಇನ್ನಷ್ಟು ದುಸ್ತರವಾಗಿಸುವ ಅಚ್ಚೆ ದಿನಗಳಲ್ಲಿ ಬಂಗಾರ ತ್ಯಜಿಸುವುದನ್ನು ದೇಶಭಕ್ತಿ ಎನ್ನಲಾಗುತ್ತಿದೆ, ಮುಂದೆ ಅಮೃತ ಕಾಲದಲ್ಲಿ ಬದುಕು ತ್ಯಜಿಸುವುದನ್ನು ದೇಶಭಕ್ತಿ ಎನ್ನಲಾಗುತ್ತದೆ!
ಸರ್ಕಾರದ ಇದಕ್ಕೆಲ್ಲ ಪರಿಹಾರ ನೀಡಲಿ
ಭಾರತವು ಎಕನಾಮಿಕಲ್ ಎಮರ್ಜೆನ್ಸಿ ಸ್ಥಿತಿಯ ಎದುರು ನಿಂತಿದೆಯೇ? ದೇಶದ ಖಜಾನೆಯ ಪರಿಸ್ಥಿತಿ ಹೇಗಿದೆ? ಇಂಧನ ಭದ್ರತೆಗೆ ಸರ್ಕಾರ ಕೈಗೊಂಡ ಕ್ರಮಗಳೇನು? ಬಂಗಾರ ಖರೀದಿಸಬೇಡಿ ಎಂಬ ಹೇಳಿಕೆ ನೀಡುವ ಮುನ್ನ 85 ಬಿಲಿಯನ್ ಡಾಲರ್ ಗಾತ್ರದ ಭಾರತದ ಜ್ಯುವೆಲ್ಲರಿ ಮಾರ್ಕೆಟ್ ನಂಬಿ ಬದುಕುತ್ತಿರುವ ಕುಟುಂಬಗಳ ರಕ್ಷಣೆಯ ಬಗ್ಗೆ ಯೋಚಿಸಿದ್ದಾರೆಯೇ? ಇವರಿಗೆ ಸರ್ಕಾರ ನೀಡುವ ಪರಿಹಾರಗಳೇನು? ಎಂದು ಕೇಳಿದರು.
ಈ ಎಲ್ಲದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಶ್ವೇತ ಪತ್ರ ಹೊರಡಿಸಬೇಕು. ಇಲ್ಲವೇ ವಿಶೇಷ ಅಧಿವೇಶನ ಕರೆದು ಚರ್ಚಿಸಲಿ ಅಥವಾ ಸುದ್ದಿಗೋಷ್ಠಿಯನ್ನಾದರೂ ನಡೆಸಿ ನೈಜ ಪರಿಸ್ಥಿತಿಯನ್ನು ತಿಳಿಸಬೇಕು ಎಂದು ಹೇಳಿದರು.













Click it and Unblock the Notifications