ನನ್ನ ಮಗಳು ಒಬ್ಬನನ್ನೇ ಡೇಟ್ ಮಾಡಬೇಕೆಂಬ ನಿಯಮ ಇಲ್ಲ, ಮದುವೆ ಆಗದಿದ್ರೂ ನನಗೆ ಓಕೆ: ಟಾಕ್ಸಿಕ್ ನಟಿ ಕಿಯಾರಾ ಅಡ್ವಾಣಿ
ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿ ನಟಿಸಿರುವ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ಸದ್ಯ ತಮ್ಮ ಬೋಲ್ಡ್ ಹೇಳಿಕೆಗಳಿಂದ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷವಷ್ಟೇ ತಾಯ್ತನಕ್ಕೆ ಹೆಜ್ಜೆ ಇಟ್ಟಿರುವ ಕಿಯಾರಾ, ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ ತಮ್ಮ ಮಗಳು ಸರಾಯಾ ಬೆಳೆದು ದೊಡ್ಡವಳಾದಾಗ ಆಕೆಯ ವೈಯಕ್ತಿಕ ಜೀವನ ಮತ್ತು ಸಂಬಂಧಗಳ ನಿರ್ಧಾರಗಳಲ್ಲಿ ತಾನು ಯಾವುದೇ ನಿರ್ಬಂಧಗಳನ್ನು ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮದುವೆ ವಿಚಾರದಲ್ಲಿ ಒತ್ತಾಯ ಮಾಡಲ್ಲ, ಅವಳಿಷ್ಟ
"ನನ್ನ ಮಗಳು ಜೀವನವನ್ನು ಅದರ ಸಂಪೂರ್ಣತೆಯಲ್ಲಿ ಅನುಭವಿಸಬೇಕು ಎಂದು ನಾನು ಬಯಸುತ್ತೇನೆ. ಆಕೆ ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಡೇಟ್ ಮಾಡಬೇಕು ಮತ್ತು ಆತನನ್ನೇ ಮದುವೆಯಾಗಬೇಕು ಎಂಬ ಒತ್ತಡಕ್ಕೆ ಒಳಗಾಗುವುದು ನನಗೆ ಇಷ್ಟವಿಲ್ಲ. ಆಕೆಗೆ ಮದುವೆಯಾಗಲು ಇಷ್ಟವಿದ್ದರೆ ಆಗಲಿ, ಇಲ್ಲದಿದ್ದರೆ ಬೇಡ, ನಮ್ಮ ಕಡೆಯಿಂದ ಯಾವುದೇ ಒತ್ತಾಯ ಇರುವುದಿಲ್ಲ. ಮದುವೆಯಾಗದಿದ್ದರೂ ನನ್ನ ಬೆಂಬಲ ಆಕೆಗೆ ಇರಲಿದೆ" ಎಂದು ಕಿಯಾರಾ ಹೇಳಿದ್ದಾರೆ.

ಡೇಟಿಂಗ್ ದಿನಗಳನ್ನು ನೆನೆದ ಕಿಯಾರಾ
ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಕಿಯಾರಾ, "ನಾನು ಈ ಹಿಂದೆ ಯಾರನ್ನೇ ಡೇಟ್ ಮಾಡಿದಾಗಲೂ, ಆತನನ್ನೇ ಮದುವೆಯಾಗುತ್ತೇನೆ ಎಂದು ಭಾವಿಸುತ್ತಿದ್ದೆ. ಆದರೆ ಜೀವನ ನಾವು ಅಂದುಕೊಂಡಂತೆ ಸಾಗುವುದಿಲ್ಲ. ದೇವರು ನನಗೆ ಕೊನೆಗೆ ಯಾರನ್ನು ಜೀವನ ಸಂಗಾತಿಯಾಗಿ (ಸಿದ್ಧಾರ್ಥ್ ಮಲ್ಹೋತ್ರಾ) ಆರಿಸಿದ್ದಾನೋ ಅವರೊಂದಿಗೆ ನಾನೀಗ ತುಂಬಾ ಸಂತೋಷವಾಗಿದ್ದೇನೆ. ಅದಕ್ಕಾಗಿ ದೇವರಿಗೆ ಧನ್ಯವಾದ. ನಾವು ಬೆಳೆಯುವಾಗ ಎದುರಾಗುವ ಪ್ರತಿಯೊಂದು ಸಂಬಂಧವೂ ನಮಗೆ ಏನನ್ನಾದರೂ ಕಲಿಸುತ್ತದೆ ಮತ್ತು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ" ಎಂದಿದ್ದಾರೆ.
ಮಗಳಿಗೆ ತಪ್ಪುಗಳಿಂದ ಕಲಿಯುವ ಸ್ವಾತಂತ್ರ್ಯ ನೀಡುವ ಬಗ್ಗೆ ಮಾತನಾಡಿದ ಅವರು, "ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಪ್ಪುಗಳಾಗುವುದು ಸಹಜ. ಹಿಂತಿರುಗಿ ನೋಡಿದಾಗ ಕೆಲವು ನಿರ್ಧಾರಗಳು ತಪ್ಪು ಅನಿಸಬಹುದು, ಆದರೆ ಆ ತಪ್ಪುಗಳಿಂದ ನಾವು ಏನನ್ನು ಕಲಿಯುತ್ತೇವೆ ಎಂಬುದು ಮುಖ್ಯ ಎಂಬುದನ್ನು ನಾನು ಮಗಳಿಗೆ ಹೇಳಿಕೊಡುತ್ತೇನೆ" ಎಂದು ತಿಳಿಸಿದ್ದಾರೆ.

ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ದಂಪತಿ 2025ರಲ್ಲಿ ಹೆಣ್ಣು ಮಗುವನ್ನು (ಸರಾಯಾ) ಬರಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ಕಿಯಾರಾ ತಮ್ಮ ಮೊದಲ ತಾಯಂದಿರ ದಿನವನ್ನು ಆಚರಿಸಿಕೊಂಡಿದ್ದು, ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅವರು ಪ್ಯಾನ್‌ಕೇಕ್ ತಯಾರಿಸುವ ಮೂಲಕ ಕಿಯಾರಾಗೆ ವಿಶೇಷ ಸರ್ಪ್ರೈಸ್ ನೀಡಿದ್ದರು.
'ಟಾಕ್ಸಿಕ್' ಚಿತ್ರದಲ್ಲಿ ಕಿಯಾರಾ
ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ, ಕಿಯಾರಾ ಅಡ್ವಾಣಿ ಅವರು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಕೂಡ ನಟಿಸುತ್ತಿದ್ದಾರೆ. ಈ ಹಿಂದೆ ಜೂನ್ 4ಕ್ಕೆ ನಿಗದಿಯಾಗಿದ್ದ ಈ ಚಿತ್ರದ ಬಿಡುಗಡೆಯು ಸದ್ಯ ಮುಂದೂಡಲ್ಪಟ್ಟಿದ್ದು, ಚಿತ್ರತಂಡ ಶೀಘ್ರದಲ್ಲೇ ಹೊಸ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದೆ.













Click it and Unblock the Notifications