Gold: ರಾಜ್ಯದ ಬೊಕ್ಕಸಕ್ಕೆ 'ಹಟ್ಟಿ ಚಿನ್ನ'ದ ಆಸರೆ: ಉತ್ಪಾದನೆಯಲ್ಲಿ ದಾಖಲೆ ಬರೆದ ಸರ್ಕಾರಿ ಸ್ವಾಮ್ಯದ ಗಣಿ
Hutti Gold Mines: ದಕ್ಷಿಣ ಏಷ್ಯಾದ ಏಕೈಕ ಸರ್ಕಾರಿ ಸ್ವಾಮ್ಯದ ಚಿನ್ನದ ಗಣಿ ಕಂಪನಿಯಾದ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ 2025-26ನೇ ಸಾಲಿನಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಕಂಪನಿಯ ಅಧ್ಯಕ್ಷರಾದ ಜೆ.ಟಿ. ಪಾಟೀಲ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು (ಮೇ 16) ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಸನ್ಮಾನಿಸಿದರು.
ಹಟ್ಟಿ ಚಿನ್ನದ ಗಣಿ ಕಂಪನಿಯು 2025-26ನೇ ಸಾಲಿನಲ್ಲಿ ಒಟ್ಟು 1,700 ಕೆ.ಜಿ ಚಿನ್ನ ಉತ್ಪಾದಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿತ್ತು. ಈ ಪೈಕಿ ಶೇಕಡ 99.50ರಷ್ಟು ಪ್ರಗತಿ ಸಾಧಿಸುವ ಮೂಲಕ ಒಟ್ಟು 1,691.50 ಕೆ.ಜಿ ಚಿನ್ನ ಉತ್ಪಾದಿಸಿ ದಾಖಲೆ ಬರೆದಿದೆ. ಪ್ರಸಕ್ತ ವರ್ಷದಲ್ಲಿ ಚಿನ್ನದ ಬೆಲೆ ಗಗನಕ್ಕೇರಿರುವುದು ಮತ್ತು ಗಣಿಯ ದಕ್ಷತೆ ಹೆಚ್ಚಿರುವುದು ಕಂಪನಿಗೆ ದೊಡ್ಡ ಲಾಭ ತಂದುಕೊಟ್ಟಿದೆ.

ಮೊದಲ ಬಾರಿ ಬೃಹತ್ ವಹಿವಾಟು
ಇದೇ ಮೊದಲ ಬಾರಿಗೆ ಕಂಪನಿಯು 1,910 ಕೋಟಿ ರೂಪಾಯಿ ಮೊತ್ತದ ಬೃಹತ್ ವಹಿವಾಟು ನಡೆಸಿದೆ. ಈ ವಹಿವಾಟಿನಿಂದ ಕಂಪನಿಗೆ ಬರೊಬ್ಬರಿ 844 ಕೋಟಿ ರೂಪಾಯಿ ನಿವ್ವಳ ಲಾಭ ಲಭಿಸಿದೆ. ಇದು ಕಳೆದ ಸಾಲಿನ ಲಾಭಕ್ಕಿಂತ (436 ಕೋಟಿ ರೂಪಾಯಿ) ಗಮನಾರ್ಹ ಏರಿಕೆಯಾಗಿದೆ.
ಸಿಎಂ ಸಿದ್ದರಾಮಯ್ಯ ಭೇಟಿಯಾದ ಜೆ.ಟಿ.ಪಾಟೀಲ
ಕಂಪನಿಯು ಈ ಐತಿಹಾಸಿಕ ಮೈಲಿಗಲ್ಲು ತಲುಪಿದ ಹಿನ್ನೆಲೆಯಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಜೆ.ಟಿ.ಪಾಟೀಲ ಅವರು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಸಿಎಂ ಅವರಿಗೆ ಪುಷ್ಪಗುಚ್ಚ ನೀಡಿ ಸನ್ಮಾನಿಸಿ ಕಂಪನಿಯ ಸಾಧನೆಯ ವಿವರಗಳನ್ನು ಹಂಚಿಕೊಂಡರು.
ಗಣಿಯ ಆಧುನೀಕರಣ ಮತ್ತು ಕೆಲಸಗಾರರ ಸುರಕ್ಷತೆಗೆ ಸರ್ಕಾರ ನೀಡುತ್ತಿರುವ ಬೆಂಬಲದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಕಳೆದ ಕೆಲವು ವರ್ಷಗಳಿಂದ ಹಟ್ಟಿ ಚಿನ್ನದ ಗಣಿ ಸತತವಾಗಿ ಲಾಭದ ಹಾದಿಯಲ್ಲಿದ್ದು, ರಾಜ್ಯದ ಬೊಕ್ಕಸಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಹೇಳಿದ್ದಾರೆ. ಈ ವೇಳೆ ಗೃಹ ಸಚಿವ ಜಿ.ಪರಮೇಶ್ವರ, ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಆರ್.ಶಿಲ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆ.ಟಿ.ಪಾಟೀಲರು ಅವರು, ಸರ್ಕಾರದ ಬೆಂಬಲ, ಗಣಿಯ ಆಧುನೀಕರಣ ಮತ್ತು ತಾಂತ್ರಿಕ ಸುಧಾರಣೆಗಳಿಂದ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿದೆ. ಗಣಿಯಲ್ಲಿ ಕಾರ್ಮಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ನಾಲ್ಕು ತಿಂಗಳಲ್ಲಿ ಚಿನ್ನ ಉದ್ಘಾದನೆಯಲ್ಲಿ ದಾಖಲೆ
ಹಟ್ಟಿ ಚಿನ್ನದ ಗಣಿಯ ಹೊಸ ದಾಖಲೆ ದಕ್ಷಿಣ ಏಷ್ಯಾದ ಏಕೈಕ ಸರ್ಕಾರಿ ಸ್ವಾಮ್ಯದ ಚಿನ್ನದ ಗಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಟ್ಟಿ ಚಿನ್ನದ ಗಣಿ ಕಂಪನಿಯು 2025-26ನೇ ಆರ್ಥಿಕ ವರ್ಷದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಇತ್ತೀಚೆಗಷ್ಟೇ ನಿಗದಿತ ಗುರಿಯ ಶೇಕಡ 99ರಷ್ಟು ಪ್ರಗತಿ ಸಾಧಿಸುವ ಮೂಲಕ ಕಂಪನಿಯು ದಾಖಲೆ ಬರೆದಿದೆ.
ಉತ್ಪಾದನೆಯ ಪ್ರಮುಖ ಅಂಕಿ-ಅಂಶಗಳು
* ಒಟ್ಟು ಉತ್ಪಾದನೆ: ಡಿಸೆಂಬರ್ 2025ರಿಂದ 2026ರ ಮಾರ್ಚ್ ಅವಧಿಯಲ್ಲಿ ಒಟ್ಟು 1691 ಕೆಜಿ 575 ಗ್ರಾಂ ಚಿನ್ನವನ್ನು ಉತ್ಪಾದಿಸಿದೆ.
* ಅದಿರು ಸಂಸ್ಕರಣೆ: ಸುಮಾರು 6,49,690 ಮೆಟ್ರಿಕ್ ಟನ್ ಅದಿರನ್ನು ಗಣಿಯಿಂದ ತೆಗೆದು ಸಂಸ್ಕರಿಸಲಾಗಿದೆ.
* ಗುರಿ ಮತ್ತು ಸಾಧನೆ: 1,700 ಕೆಜಿ ಚಿನ್ನದ ಉತ್ಪಾದನೆಯ ಗುರಿ ಹೊಂದಿದ್ದ ಕಂಪನಿಯು, ಅಲ್ಪ ಅಂತರದಲ್ಲಿ ಗುರಿ ತಪ್ಪಿದರೂ ಶೇಕಡ 99ರಷ್ಟು ಯಶಸ್ಸು ಕಂಡಿದೆ. ಪ್ರತಿ ಟನ್ ಅದಿರಿನಲ್ಲಿ 2.57 ಗ್ರಾಂ ಚಿನ್ನದ ನಿರೀಕ್ಷೆ ಇತ್ತು, ಆದರೆ ವಾಸ್ತವದಲ್ಲಿ ಪ್ರತಿ ಟನ್ನಿಗೆ 2.90 ಗ್ರಾಂ ಚಿನ್ನ ಲಭ್ಯವಾಗುವ ಮೂಲಕ ಕಾರ್ಯಕ್ಷಮತೆ ಹೆಚ್ಚಿದೆ.
ನಾಲ್ಕು ತಿಂಗಳ ಉತ್ಪಾದನೆ ವಿವರ
* ಡಿಸೆಂಬರ್, 2025: 133 ಕೆ.ಜಿ.
* ಜನವರಿ, 2026: 246.076 ಕೆ.ಜಿ.
* ಫೆಬ್ರವರಿ, 2026: 257.121 ಕೆ.ಜಿ.
* ಮಾರ್ಚ್, 2026: 286.839 ಕೆ.ಜಿ.












Click it and Unblock the Notifications