ಕೇಸರಿ ಶಾಲು, ಹಿಜಾಬ್ ಉದ್ಯೋಗ ಕೊಡಲ್ಲ: ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಬೆಂಗಳೂರು: ಕರ್ನಾಟಕದಲ್ಲಿ ವರ್ಷಗಳ ಹಿಂದೆ ಶಾಲೆಗಳಲ್ಲಿ ಹಿಜಾಬ್, ಕೇಸರಿ ಶಾಲು ಧರಿಸುವ ಬಗ್ಗೆ ಒಂದಷ್ಟು ಆಕ್ರೋಶ, ಪರ ವಿರೋಧ ಚರ್ಚೆ ಆಗಿತ್ತು. ಅದೆಲ್ಲ ಧರಿಸುವುದನ್ನು ಶಾಲೆಗಳಲ್ಲಿ ನಿಷೇಧಿಸಿ ಜಾರಿಗೊಳಿಸಿದ್ದ ಬಿಜೆಪಿ ಸರ್ಕಾರದ ಆದೇಶವನ್ನು ರದ್ದು ಮಾಡಿ ಹಾಲಿ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತು. ಇದರ ಬೆನ್ನಲ್ಲಿ ಹಿಜಾಬ್, ಕೇಸರಿ ಶಾಲಿನಿಂದ ಉದ್ಯೋಗ ಸಿಗುತ್ತಾ? ಎಂದು ಬಿಜೆಪಿ, ಕಾಂಗ್ರೆಸ್ ಮಧ್ಯೆ ನಡೆಯುತ್ತಿರುವ ಚರ್ಚೆಗಳು ತೀವ್ರವಾಗಿವೆ.
ಶಿಕ್ಷಣದ ವಾತಾವರಣದಲ್ಲಿ ವಸ್ತ್ರದ ನಿರ್ಬಂಧ ತೆಗೆದು ಹಾಕಿದ ಬೆನ್ನಲ್ಲೇ ವಾಟ್ಸಾಪ್ ಯೂನಿವರ್ಸಿಟಿಯ ರ್‍ಯಾಂಕ್ ಸ್ಟೂಡೆಂಟ್ ಗಳು ಜಾಗೃತರಾಗಿದ್ದಾರೆ, ತಮ್ಮ ಪ್ರೊಪೆಗಂಡಾ ಶುರು ಮಾಡಿದ್ದಾರೆ ಎಂದು ಎಕ್ಸ್ ಪೋಸ್ಟ್ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ವಿರುದ್ಧ ಶನಿವಾರ ಆರೋಪಿಸಿದ್ದಾರೆ.

ಕೇಸರಿ, ಹಳದಿ, ನೀಲಿ, ಗುಲಾಬಿ ಶಾಲುಗಳು ಅಥವಾ ಹಿಜಾಬ್ ಯಾವುದೂ ಸಹ ನಿಮಗೆ ಉದ್ಯೋಗವನ್ನು ನೀಡುವುದಿಲ್ಲ. ಉದ್ಯೋಗಸ್ಥರಾಗಲು ಬೇಕಿರುವುದು ಶಿಕ್ಷಣ, ಕೌಶಲ್ಯವೇ ಹೊರತು ನಿಮ್ಮ ರಾಜಕೀಯ ಅಜೆಂಡಾದ ಅಸ್ತ್ರಗಳೂ ಅಲ್ಲ, ವಸ್ತ್ರಗಳೂ ಅಲ್ಲ ಎಂದಿದ್ದಾರೆ.
ಅಂದಹಾಗೆ ಬಿಜೆಪಿಯವರು ಕೇಸರಿ ಶಾಲು ಹಾಕಿ ಕಳಿಸಿದವರು ಇಂದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಅನೈತಿಕತೆಯಲ್ಲಿ ತೊಡಗಿದ್ದಾರೆ, ಅದನ್ನು ಉದ್ಯೋಗ ಎನ್ನುವುದಿಲ್ಲ, ಅಕ್ರಮ ಎನ್ನುತ್ತಾರೆ, ಬಿಜೆಪಿಗೆ ಇದು ತಿಳಿದಿರಲಿ ಎಂದು ಅವರು ಅಕ್ರಮಗಳ ಕುರಿತು ಬಿಜೆಪಿಯನ್ನು ದೂರಿದರು.
ಬಿಜೆಪಿ ನಾಯಕರ ಮಕ್ಕಳ ಹೆಸರು ಹೇಳಿ?
ಪ್ರತಿದಿನ ಕೇಸರಿ ಶಾಲು ಧರಿಸಿ, ಗೋಮೂತ್ರ ಕುಡಿದು, ಗೋರಕ್ಷಕರು ಮತ್ತು ಧರ್ಮರಕ್ಷಕರಾಗಿ ದುಡಿಯುತ್ತಿರುವ ಯಾರಾದ್ರೂ ಒಬ್ಬ ಬಿಜೆಪಿ ನಾಯಕರ ಮಕ್ಕಳ ಹೆಸರನ್ನು ಹೇಳಿ. ನಂತರ ಬಡವರ ಮನೆಯ ಮಕ್ಕಳಿಗೆ ಕೇಸರಿ ಶಾಲು ತೊಡಿಸುವ ಮಾತನ್ನಾಡಲಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಬಿಜೆಪಿ ಹೇಳಿದ್ದೇನು?
ಕೇಸರಿ ಶಾಲು ಉದ್ಯೋಗ ಕೊಡಲ್ಲ ಎನ್ನುವ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಹಾಗಾದರೆ ಹಿಜಾಬ್ ಧರಿಸಿದರೆ ಉದ್ಯೋಗ ಸಿಗುತ್ತಾ?. ನಿಯಮಗಳು ಹಾಗೂ ತರ್ಕಗಳು ಕೇವಲ ಬಹುಸಂಖ್ಯಾತರ ಆಚರಣೆಗಳಿಗೆ ಮಾತ್ರ ಅನ್ವಯಿಸುವುದಾದರೆ, ಅದನ್ನು ಪ್ರಗತಿಪರತೆ ಎನ್ನಲಾಗುವುದಿಲ್ಲ. ತುಷ್ಟೀಕರಣದ ಪರಮಾವಧಿ ಎನ್ನಲಾಗುತ್ತದೆ. ಒಂದು ವರ್ಗದ ಓಲೈಕೆಗಾಗಿ ಹಿಂದೂಗಳ ಧಾರ್ಮಿಕ ಶ್ರದ್ಧೆಯನ್ನು ಹೀಯಾಳಿಸುವುದನ್ನು ಮೊದಲು ನಿಲ್ಲಿಸಿ ಎಂದು ಬಿಜೆಪಿ ಆಕ್ರೋಶ ಹೊರ ಹಾಕಿತ್ತು. ಇದರ ಬೆನ್ನಲ್ಲೆ ಖರ್ಗೆಯವರು ಮತ್ತೆ ಬಿಜೆಪಿ ವಿರುದ್ಧ ಹರಿಹಾಯ್ದರು.













Click it and Unblock the Notifications