ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದಯ ಟೀವಿ : ಸುವರ್ಣ ಕರ್ನಾಟಕಕ್ಕೆ ತಮಿಳು ಉಡುಗೊರೆ!!

By Staff
|
Google Oneindia Kannada News


ಸರಿಯಾದ ಕನ್ನಡವನ್ನು ಮತ್ತು ಇಲ್ಲಿ ಬರೀ ಕನ್ನಡವನ್ನು ಮಾತ್ರ ಪ್ರಸಾರ ಮಾಡಿ, ಇಲ್ಲವೇ ಜಾಗ ಖಾಲಿ ಮಾಡಿ ಎಂದು ನಮ್ಮ ನಾಯಕರು ಹೇಳುತ್ತಿಲ್ಲ...

  • ಚಂದ್ರಶೇಖರನ್‌ ಕಲ್ಯಾಣರಾಮನ್‌, ಬೆಂಗಳೂರು
    [email protected]
ಮಾನ್ಯರೇ,

ಬೆಂಗಳೂರಿನಲ್ಲಿ ಈಗಾಗಲೇ ಹಲವು ಖಾಸಗಿ ಎಫ್‌ಎಂ ವಾಹಿನಿಗಳು ಕಾರ್ಯಾರಂಭ ಮಾಡಿ ಕನ್ನಡವನ್ನು ಕಡೆಗಣಿಸಿ ಹಿಂದಿ ಮತ್ತು ಆಂಗ್ಲ ಭಾಷೆಯನ್ನು ಮೆರಸುತ್ತಿರುವುದನ್ನು ಗಮನಿಸಿರಬಹುದು. ಮತ್ತೊಂದು ಖಾಸಗಿ ಎಫ್‌ಎಂ ರೇಡಿಯೋ ವಾಹಿನಿ ಸನ್‌ ನೆಟ್‌ವರ್ಕ್‌ನವರ ಎಸ್‌ ಎಫ್‌ಎಂ 93.5, ಬೆಂಗಳೂರಿನಲ್ಲಿ ಬರುವ ನವಂಬರ್‌ 6ರಿಂದ ಪ್ರಸಾರಗೊಳ್ಳುವ ಬಗ್ಗೆ ಪ್ರಕಟಣೆಗಳು ಹೊರಬಿದ್ದಿವೆ. ಸುವರ್ಣ ಕರ್ನಾಟಕ ಸಂಭ್ರಮದ ಈ ಸಮಯದಲ್ಲಿ ಕನ್ನಡಿಗರಿಗೆ ಈ ವಾಹಿನಿಯ ಮೂಲಕ ಇವರು ನೀಡ ಬಯಸಿರುವ ಕೊಡುಗೆ ತಮಿಳು ಹಾಡುಗಳ ಪ್ರಸಾರದ ಪ್ರಸಾದ.

ಖಾಸಗಿ ವಾಹಿನಿಗಳು ಕಾರ್ಯಾರಂಭದ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಯವರನ್ನೂ ಒಳಗೊಂಡು, ಕನ್ನಡದ ಎಲ್ಲಾ ಕ್ಷೇತ್ರಗಳಿಗೂ ಸಂಬಂಧಿಸಿದ ಗಣ್ಯರು, ಪ್ರಾದೇಶಿಕ ಭಾವನೆ ಬಿಂಬಿಸದ, ಕನ್ನಡವನ್ನು ಕಡೆಗಣಿಸಿದ, ಕೀಳು ಅಭಿರುಚಿಯ ರೇಡಿಯೋ ವಾಹಿನಿಗಳ ನಿರ್ವಾಹಕರನ್ನು, ರೇಡಿಯೋ ಜಾಕಿಗಳ ಅರಚಾಟ, ತಲೆಹರಟೆಯನ್ನು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಬೆಂಬಲಿಸಿ ಶುಭಹಾರೈಸಿದರೇ ಹೊರತು ಕನ್ನಡತನ, ಕನ್ನಡ ಸಂಸ್ಕೃತಿಗೆ ಪ್ರಾಶಸ್ತ್ಯ ನೀಡಿ ಎಂದು ಯಾರೂ ಅವರನ್ನು ಪ್ರೇರೇಪಿಸಲಿಲ್ಲ.

ಕೇಳಿ-ಕೇಳಿಸಿ- ಸ್ವಲ್ಪ ಜೀವ ಹಿಡಿದುಕೊಳ್ಳಿ, ಒಂದು ಖಾಸಗಿ ವಾಹಿನಿ ಪ್ರಸ್ತುತ ಪಡಿಸುವ ಕನ್ನಡ ಕಾರ್ಯಕ್ರಮದ ಹೆಸರು ‘ಡೀಲ್‌ ಮಚ್ಚಾ ಡೀಲ್‌’. ಕಾರ್ಯಕ್ರಮ ನಡೆಸಿಕೊಡುವ ಸಮಯದಲ್ಲಿ ಐಶ್ವರ್ಯ ರೈ- ಶಾರೂಖ್‌ಖಾನ್‌ ಹೇಗೆ ಹುಟ್ಟುಹಬ್ಬ ಆಚರಿಸಿಕೊಂಡರು, ಆಚರಿಸಿಕೊಳ್ಳುವ ಸಮಯದಲ್ಲಿ ಅವರು ಹುಟ್ಟುಡುಗೆಯಲ್ಲಿದ್ದರೆ ಎಂಬಂತಹ ಲತ್ತೆ ಆಲೋಚನೆ ಇವರ ತಲೆಗಳಿಗೆ ಹೊಳೆಯುತ್ತವೆಯೇ ಹೊರತು ಕನ್ನಡಕ್ಕೆ ದುಡಿದ ಲತೆಗಳ ನೆನಪು ಮಾಡಿಕೊಳ್ಳದ ಇಂಗ್ಲೀಷ್‌-ಹಿಂದಿಯ ಉದ್ದೀಪನ ಮದ್ದು ಸೇವಿಸಿದವರಂತೆ ಕೇಳಿ ಬರುತ್ತಾರೆ.

ಸರಿಯಾದ ಕನ್ನಡವನ್ನು ಮತ್ತು ಇಲ್ಲಿ ಬರೀ ಕನ್ನಡವನ್ನು ಮಾತ್ರ ಪ್ರಸಾರ ಮಾಡಿ, ಇಲ್ಲವೇ ಜಾಗ ಖಾಲಿ ಮಾಡಿ ಎಂದು ಅಂದೇ ನಮ್ಮ ನಾಯಕರುಗಳು ನಮ್ಮನ್ನು ‘ಮಚ್ಚು ಹಿಡಿದು ಲೀಡ್‌’!! ಮಾಡಿದ್ದಲ್ಲಿ ಇಂದು ಎಫ್‌ಎಂನಲ್ಲಿ ತಮಿಳು ನುಸುಳುತ್ತಿರಲಿಲ್ಲ.

ಕನ್ನಡಿಗರೇ, ಎದ್ದೇಳಿ ಸ್ವಲ್ಪ ಮೈಕೊಡವಿ, ಬೆಂಗಳೂರಿನಲ್ಲಿ ಕನ್ನಡೇತರ ಬಾಷೆಯ ಹಾವಳಿಯನ್ನು ಕೆಡವಿ. ಹೀಗೆಯೇ ನಾವು ಮುಸುಗು ಹೊದ್ದು ಮಲಗಿಬಿಟ್ಟಲ್ಲಿ(ನವಂಬರ್‌ನಲ್ಲಿ ಈ ಬಾರಿ ಚಳಿ ಸ್ವಲ್ಪ ಜಾಸ್ತಿಯೆಂಬುದು ಸುದ್ಧಿ!) ನಾಳೆ ತೆಲುಗು, ನಾಳಿದ್ದು ಮಲಯಾಳಿ ಇಲ್ಲಿ ಆವರಿಸಿಕೊಳ್ಳುತ್ತವೆ. ನಂತರ ನಮ್ಮ ಕನ್ನಡವನ್ನು ಅರಬ್ಬಿ ಸಮುದ್ರ ಅಥವ ಬಂಗಾಳಕೊಲ್ಲಿಯಲ್ಲಿ ಹುಡುಕಬೇಕಾಗಿ ಬರುವ ಪ್ರಮೇಯ ಉಂಟು ಮಾಡಿ ಬಿಡಬೇಡಿ.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X