• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಷ್ಣುವಿನ ಅವತಾರಗಳ ವಿಷಯವೇ ಪ್ರಶ್ನಾರ್ಹ

By ರಾಘವೇಂದ್ರ ಹೆಬ್ಬಳಲು, ಬೆಂಗಳೂರು
|

ಭಗವದ್ಭಕ್ತಿ ಬೇಕು. ಆದರೆ ಅವತಾರಗಳ ಮೂಲಕ್ಕೆ ಹೋಗಬಾರದು. ತುಂಬ ಕೆದಕಿದರೆ ಭಕ್ತರ ಭಕ್ತಿಗೇ ಏಟು ಹಾಕಿದ ಹಾಗೆ.

ನಮಸ್ಕಾರ,

ನಾನು ರವೀಂದ್ರ ವಿಶ್ವನಾಥ ಅವರ ಬುದ್ಧನ ಮೇಲಿನ ಲೇಖನವನ್ನೋದಿದೆ. ಮೊದಲಿಗೆ ಈ ಅವತಾರ ಎನ್ನುವ ವಿಷಯವೇ ಚರ್ಚಾಸ್ಪದ. ವಿಷ್ಣುವಿನ ಹತ್ತೇ ಅವತಾರಗಳೇಕೆ ? ಅದಕ್ಕಿಂತಲೂ ಹೆಚ್ಚಿಲ್ಲವೇ ? ಇವೆ. ಭಾಗವತವನ್ನು ನೋಡಿದ್ದಾದರೆ - ಅಲ್ಲಿ ಪೃಥು, ಕಪಿಲ, ದತ್ತಾತ್ರೇಯ, ಋಷಭದೇವ, ಸ್ವಯಂ ವ್ಯಾಸರೇ ಮೊದಲಾದ ಹಲವರು ಭಗವಂತನಾದ ನಾರಾಯಣನ ಅವತಾರಗಳು. ಆದ್ದರಿಂದ ಹತ್ತಕ್ಕೆ ಈ ಸಂಖ್ಯೆಯನ್ನು ಸೀಮಿತವಾಗಿರಿಸುವುದು ಅಷ್ಟು ಸರಿಯಲ್ಲ. ಹತ್ತು ಮುಖ್ಯ ಅವತಾರಗಳು ಎಂದು ಕರೆದರೆ ಒಪ್ಪಬಹುದೋ ಏನೋ.

ಈಗ ಬುದ್ಧನ ವಿಷಯಕ್ಕೆ ಬಂದಿರಿ. ಗೀತಗೋವಿಂದಖ್ಯಾತಿಯ ಕವಿ ಜಯದೇವ ತನ್ನ ದಶಾವತಾರಸ್ತೋತ್ರದಲ್ಲಿ -

ನಿಂದಸಿ ಯಜ್ಞ-ವಿಧೇರಹಹ ಶ್ರುತಿ-ಜಾತಮ್‌

ಸದಯ-ಹೃದಯ ದರ್ಶಿತ-ಪಶು-ಘಾತಮ್‌

ಕೇಶವ ಧೃತ-ಬುದ್ಧ-ಶರೀರ ಜಯ ಜಗದೀಶ ಹರೇ ।।

ಈತನು ಕ್ರಿ. ಶ ಹನ್ನೆರಡನೆಯ ಶತಮಾನದಲ್ಲಿದನೆಂದು ಇತಿಹಾಸಜ್ಞರ ನಂಬಿಕೆ. ಆಗಲೇ ಬುದ್ಧನ ಅವತಾರವನ್ನು ಭಗವಂತನದ್ದಾಗಿ ಸ್ವೀಕರಿಸಿಯಾಗಿತ್ತು. ಮೇಲಿನ ಶ್ಲೋಕದ ಸುಮಾರಾದ ಅರ್ಥ = 'ಕೇಶವ! ಬುದ್ಧನ ಶರೀರವನ್ನು ಧರಿಸಿದವನೇ ! ದಯೆಯುಳ್ಳ ಹೃದಯದವನೇ ! ವೇದಗಳಲ್ಲಿ ಹುಟ್ಟಿದರೂ ಪ್ರಾಣಿಹಿಂಸಾತ್ಮಕವಾದಂಥ ಯಜ್ಞವಿಧಿಗಳನ್ನು ನೀನು ನಿಂದಿಸುತ್ತೀಯೆ! ಜಗದೀಶ ಹರೇ ನಿನಗೆ ಜಯವು !'

ಇಲ್ಲಿ ಬುದ್ಧನ ಅವತಾರದ ಉದ್ದೇಶ ಸ್ಪಷ್ಟವಾಗಿಯೇ ಮೂಡಿಬಂದಿದೆ. ರವೀಂದ್ರರು ಹೇಳಿದ ಹಾಗೆ = ನಾಸ್ತಿಕರನ್ನು ತನ್ನತ್ತ ಸೆಳೆದು ಮರುಳು ಮಾಡಲೋಸುಗವೇ ಈ ಅವತಾರವಾದದ್ದು. ಮೋಹಿನಿಯ ಅವತಾರದ ಹಾಗೆ. ಒಂದು ರೀತಿಯ ್ಞಛಿಜಚಠಿಜಿಡಛಿ ಅವತಾರವೆಂದರೆ ತಪ್ಪಲ್ಲ.

ಈಗ ರವೀಂದ್ರರ ಮಾತು ಅವತಾರದ ಉದ್ದೇಶವನ್ನು ಬುದ್ಧ ಈಡೇರಿಸಲಿಲ್ಲ. ಆದ್ದರಿಂದ ಬುದ್ಧನನ್ನು ಅವತಾರವಾಗಿ ಪರಿಗಣಿಸಲಾಗುವುದಿಲ್ಲ ಎಂದು. ಆದರೆ ಮೋಹಿನಿಯನ್ನು ಅವತಾರವೆಂದು ಪರಿಗಣಿಸಿದರೆ ಬುದ್ಧನನ್ನೂ ಅವತಾರವೆಂದು ಪರಿಗಣಿಸಬಹುದಲ್ಲ ?

ಒಂದು ಸಣ್ಣ ವಿಷಯ - ನೀವು ವಾಲ್ಮೀಕಿ ರಾಮಾಯಣದ ಬಾಲಕಾಂಡ ನೋಡಿದ್ದೇ ಆದರೆ - ಭಗವಂತನ ಸ್ವಂತ ಅಂಶಗಳಿಂದ ಹುಟ್ಟಿದವರು ರಾಮ-ಲಕ್ಷ್ಮಣ-ಭರತ-ಶತ್ರುಘ್ನರು. ಲಕ್ಷ್ಮಣನು ಆದಿಶೇಷನ ಅವತಾರವೆಂಬ ವಿಷಯದ ಪ್ರಸ್ತಾಪ ವಾಲ್ಮೀಕಿ ರಾಮಾಯಣದಲ್ಲಂತೂ ಬರುವುದಿಲ್ಲ. ಬೇರೆ ರಾಮಾಯಣಗಳ ಬಗ್ಗೆ ನಾನು ಮಾತನಾಡುತ್ತಿಲ್ಲ. ಭಕ್ತರಾದ ರಾಮಾನುಜರ ಅನುಯಾಯಿಗಳಾದ ವಿಶಿಷ್ಟಾದ್ವೈತಿಗಳು ಈ ಕೆಲಸವನ್ನು ಮಾಡಿರುತ್ತಾರೆ.

ಆ ವಿಷಯ ಇರಲಿ. ಈಗ ಹಲಾಯುಧನೆಂಬ ಭಗವಂತನ ಹೊಸ ಅವತಾರವನ್ನು ರವೀಂದ್ರರು ಬೆಳಕಿಗೆ ತಂದಿರುತ್ತಾರೆ. ಇದು ಬಲರಾಮನಲ್ಲದೇ ಬೇರೆ ಯಾರೋ ಎನ್ನುವ ವಿಷಯ ಎಲ್ಲಿಯೂ ಕಾಣುವುದಿಲ್ಲ. ''ಹಲಾಯುಧ'' ಎಂಬ ಬೇರೆಯ ಅವತಾರ ಕೇವಲ ರವೀಂದ್ರರ ಕಲ್ಪನೆಯ ಸೃಷ್ಟಿ. ಹೌದು ಪುರಾಣಗಳಿಂದ ಅವನ ಹೆಸರನ್ನು ಕಿತ್ತು ಹಾಕಿ ಬುದ್ಧನ ಅಥವಾ ಬಲರಾಮನ ಹೆಸರನ್ನು ಸೇರಿಸಿರಬಹುದು ಎಂಬ ವಾದ ಸರಿಯಾಗಿ ಕಂಡರೂ - ಅಷ್ಟೂ ಪುರಾಣಗಳಲ್ಲಿ ಲವಲೇಶವಿಲ್ಲದೇ ಒಂದು ಇಡಿಯ ಅವತಾರವನ್ನೇ ತೆಗೆಯುವುದು ಕಷ್ಟವೆಂದು ತೋರುವುದಿಲ್ಲವೇ?

ಉತ್ಕಾೃಂತಿಯ ವಿಷಯ ಪ್ರಶ್ನಾರ್ಹ ಎಂದು ರವೀಂದ್ರರೇ ಒಪ್ಪಿರುತ್ತಾರೆ.

ಅವತಾರಗಳ ವಿಷಯವೇ ಪ್ರಶ್ನಾರ್ಹ. ವೇದಗಳೆಲ್ಲಿಯೂ ಅವತಾರದ ವಿಷಯ ಹೆಚ್ಚಾಗಿ ಬಂದಿರುವುದನ್ನು ನಾ ಕಾಣೆ. ಪುರಾಣಗಳು ಮಾನವಮತಿನಿರ್ಮಿತಗಳೆಂದು ಸರ್ವವೇದ್ಯ. ಆದ್ದರಿಂದ ಅಲ್ಲಿ ಏನಾದರೂ ಸೇರುವ ಸಂಭವವಿದೆ. ಏಕೆ, ಮಹಮ್ಮದ ಪೈಗಂಬರರೇ ನಿಮ್ಮ ಕಲ್ಕಿ ಎಂದು ಹೇಳುವ ಕೆಲವು ಮುಸ್ಲಿಂ ಬಂಧುಗಳಿಲ್ಲವೇ? ಏಕೆಂದರೆ ಇಬ್ಬರೂ ಖಡ್ಗ ಧರಿಸಿ ಅಶ್ವಾರೂಢರಾಗಿ ಯುದ್ಧಮಾಡಿದವರು. ಆದ್ದರಿಂದ ಇಬ್ಬರೂ ಒಂದೇ ಎಂದು ಅವರ ವಾದ. ಅದಕ್ಕೇನು ಹೇಳುತ್ತೀರಿ?

ಬುದ್ಧನ ಜನಪ್ರಿಯತೆಯನ್ನು ನೋಡಿ ಗುಪ್ತರ ಕಾಲದಲ್ಲಿ ಅವನನ್ನೂ ನಮ್ಮವನನ್ನಾಗಿ ಮಾಡಿ - ಜೊತೆಗೆ ಬೌದ್ಧರ ಮತ ನಾಸ್ತಿಕರದೆಂದು ಜರಿಯಲು - ಅವನನ್ನು ಅವತಾರ ಮಾಡಿಕೊಂಡೆವು. ಸತ್ಯ ಸಾಯಿಬಾಬಾ ಅವರ ಅನುಯಾಯಿಗಳ ಸಂಖ್ಯೆ ವರ್ಧಿಸಿದರೆ - ಅವರನ್ನೇ ಕುದುರೆಯ ಮೇಲೆ ಕೂಡಿಸಿ ಕತ್ತಿ ಕೊಟ್ಟು - ಅವತಾರವೆಂದು ಮಾಡಿಯಾರು! ಈಗಾಗಲೇ ಕಲ್ಕಿ ಭಗವನ್‌ ನಮ್ಮೊಂದಿಗಿಲ್ಲವೇ? (ಕಲ್ಕಿ ಮತದವರು). ಆ ಮತದವರಿಗೆ ನಿಮ್ಮ ದೇವರು ಕಲ್ಕಿಯಲ್ಲ ಎಂದು ಹೇಳಿ ನೋಡೋಣ !

ಭಗವದ್ಭಕ್ತಿ ಬೇಕು. ಆದರೆ ಅವತಾರಗಳ ಮೂಲಕ್ಕೆ ಹೋಗಬಾರದು. ತುಂಬ ಕೆದಕಿದರೆ ಭಕ್ತರ ಭಕ್ತಿಗೇ ಏಟು ಹಾಕಿದ ಹಾಗೆ. ಭಕ್ತಿ ಒಂದು ಮನಸ್ಸಿನ ಭಾವ. ಒಂದು ವಸ್ತುವಿನ ಬಗ್ಗೆ ಇರುವ ನಿರತಿಶಯವಾದ ಪ್ರೀತಿ. ಆ ವಸ್ತುವನ್ನೇ ಅಲ್ಲಗೆಳೆದರೆ ಭಕ್ತರಿಗಾಗುವ ಹಾನಿ ಅಪಾರ. ಭಗವಂತನೇ ಗೀತೆಯಲ್ಲಿ ಹೇಳಿಲ್ಲವೇ? ''ಯೇ ಯಥಾ ಮಾಂ ಪ್ರಪದ್ಯಂತಿ ತಾಂಸ್ತಥೈವ ಭಜಾಮ್ಯಹಮ್‌'' ಎಂದು? ಯಾವ ಅವತಾರ ನಮಗೆ ಪ್ರೀತಿಯಾದರೂ ಅದರ ಮೂಲಕ ಭಗವಂತನೇ ಆರಾಧಿಸಲ್ಪಡುತ್ತಾನೆ.

ರವೀಂದ್ರರ ಕೊನೆಯ ಪ್ರಶ್ನೆ ''ಬುದ್ಧನು ಹಿಂದೂ ದೇವತೆ ವಿಷ್ಣುವಿನ ಅವತಾರ ಹೌದೋ ಅಲ್ಲವೋ?''. ಇದಕ್ಕೆ ಒಬ್ಬ ಹಿಂದುವಾದ ನನ್ನ ಉತ್ತರ - ''ಆಗಿದ್ದರೆ ಅಡ್ಡಿಯಿಲ್ಲ. ಇಲ್ಲದಿದ್ದರೆ ಅಂಥ ತೊಂದರೆಯೇನೂ ಇಲ್ಲ'' ಎಂದು. ನೀವೇನನ್ನುತ್ತೀರಿ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ravindra Vishwanath as set debate on whether Buddha is Vishnus avatara. Raghavendra Hebbalalu of Bangalore says we should not go to the root of avataras.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more