ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕನ್ನಡಿಗನಾಗಿ ಹುಟ್ಟಿದ್ದೇ ಶಾಪವಾಯಿತೇ?

By Staff
|
Google Oneindia Kannada News

;?
ಏಷ್ಯಾದ ಸಿಲಿಕಾನ್‌ ವ್ಯಾಲಿ, ಏಷ್ಯಾದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ ಎಂಬ ಹೆಗ್ಗಳಿಕೆ ಬೆಂಗಳೂರಿಗೆ ಸಂದಿದೆ. ಈ ಹೆಗ್ಗಳಿಕೆ(?) ಮತ್ತು ಪ್ರಗತಿ(?)ಯನ್ನು ಮತ್ತೊಂದು ದಿಕ್ಕಿನಲ್ಲಿ ಕಾಣುವ ಪ್ರಯತ್ನ ಇಲ್ಲಿದೆ. ನೊಂದ ಮನಸ್ಸಿನ ಭಾವನೆಗಳು ಅಕ್ಷರ ರೂಪ ಪಡೆದಿವೆ.

ಮಾನ್ಯರೆ,

ಐಟಿ ಉದ್ಯಮದಲ್ಲಿ ಕನ್ನಡಿಗರಿಗೆ ಮಲತಾಯಿಧೋರಣೆ ಅನುಸರಿಸಲಾಗುತ್ತಿದೆ. ನಾನು ಒಬ್ಬ ಕನ್ನಡಿಗ ಸಾಫ್ಟ್‌ವೇರ್‌ ತಜ್ಞನಾಗಿ ನನ್ನ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ.

ಬಹಳಷ್ಟು ಐಟಿ ಸಂಸ್ಥೆಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ. ಕನ್ನಡಿಗರಿಗೆ ನೇರವಾಗಿ ಉದ್ಯೋಗ ನಿರಾಕರಣೆ ಮಾಡದಿದ್ದರೂ, ಕನ್ನಡಿಗ ಅಭ್ಯರ್ಥಿ ಎಂದು ತಿಳಿದರೆ ಅವನಿಗೆ ಅರ್ಹತೆ ಇದ್ದರೂ ಪರಭಾಷಿಕರನ್ನು ಆಯ್ಕೆ ಮಾಡುತ್ತಾರೆ. ಇದಕ್ಕೆ ಮೂಲ ಕಾರಣ ಆಯ್ಕೆ ಮಾಡುವವರಲ್ಲಿ ಬಹುಮಂದಿ ಪರಭಾಷಿಕರಾಗಿರುತ್ತಾರೆ.

ತಮಿಳಿನವನು ತಮಿಳುನಾಡಿನ ಅಭ್ಯರ್ಥಿಗೆ, ಬಂಗಾಲದವನು ಬಂಗಾಲಿಗೆ, ಕೇರಳದವನು ತನ್ನ ರಾಜ್ಯದವನಿಗೆ, ಉತ್ತರ ಭಾರತದವನು ಉತ್ತರ ಭಾರತದ ಅಭ್ಯರ್ಥಿಗೆ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ನಮ್ಮ ಕೆಲವು ಕನ್ನಡಿಗರು ಉನ್ನತ ಹುದ್ದೆಯಲ್ಲಿದ್ದರೂ ಕನ್ನಡಿಗರನ್ನು ಅಯ್ಕೆ ಮಡುವುದು ಕಡಿಮೆ. ಹೀಗೆ ತನ್ನವರಿಂದಲೂ ಪರಭಾಷಿಕರಿಂದಲೂ ಕನ್ನಡಿಗ ಅಭ್ಯರ್ಥಿಗೆ ನ್ಯಾಯ ದೊರೆಯುತ್ತಿಲ್ಲ.

ಬಹಳಷ್ಟು ಸಂಸ್ಥೆಗಳಲ್ಲಿ ಅನುಭವವಿಲ್ಲದ ಅಭ್ಯರ್ಥಿಗಳನ್ನು, ಅಂದರೆ ಈಗಷ್ಟೇ ಪದವೀಧರರಾಗುತ್ತಿರುವ ಅಭ್ಯರ್ಥಿಗಳನ್ನು ಆರಿಸಲು ಪಕ್ಕದ ರಾಜ್ಯಗಳಿಗೆ ಹೋಗಿ ಅಲ್ಲಿನ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸಂದರ್ಶನ ನಡೆಸಿ ಅಲ್ಲಿಂದ ಪರಭಾಷಿಕರನ್ನು ಆಯ್ಕೆ ಮಾಡುವುದು ಹೆಚ್ಚಾಗಿ ನಡೆದಿದೆ. ಈ ಸಂಸ್ಥೆಗಳಿಗೆ ನಮ್ಮ ರಾಜ್ಯದ ಇಂಜಿನಿಯರಿಂಗ್‌ ಕಾಲೇಜಿನ ಪದವೀಧರರು ಬೇಕಿಲ್ಲ. ಬೆಂಗಳೂರಿನ ಕಾಲೇಜುಗಳಿಗೆ ಅಪರೂಪಕ್ಕೆ ಹೋದರೂ, ಉತ್ತರ ಕರ್ನಾಟಕದ ಕಾಲೇಜುಗಳಿಗೆ, ಮಧ್ಯ ಕರ್ನಾಟಕದ ಕಾಲೇಜುಗಳಿಗೆ ಇವರು ಹೋಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿರುವ ಉದಾಹರಣೆಗಳು ಅತಿವಿರಳ ಅಥವಾ ಇಲ್ಲವೇ ಇಲ್ಲವೆನ್ನಬಹುದು. ಬೆಂಗಳೂರಿನ ಐಟಿ ಸಂಸ್ಥೆಗಳಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇರಲು ಇದೂ ಒಂದು ಮುಖ್ಯ ಕಾರಣ.

ಈ ಐಟಿ ಸಂಸ್ಥೆಗಳಲ್ಲಿ ಮತ್ತೊಂದು ರೀತಿಯಲ್ಲಿ ಕೂಡ ಕನ್ನಡಿಗರಿಗೆ ಅನ್ಯಾಯ ನಡೆಯುತ್ತಿದೆ. ಕನ್ನಡದ ಉದ್ಯೋಗಿಗಳಿಗೆ ಬಡ್ತಿಯಲ್ಲೂ ಮಲತಾಯಿಧೋರಣೆ ತೋರಿಸುವುದು ಸಾಮಾನ್ಯ. ಆದ್ದರಿಂದ ಈ ಸಂಸ್ಥೆಗಳಲ್ಲಿ ಹೆಚ್ಚಾಗಿ ಉನ್ನತ ಹುದ್ದೆಯಲ್ಲಿ ಪರಭಾಷಿಕರದೇ ಕಾರುಬಾರು. ಐಟಿ ಉದ್ಯಮದಲ್ಲಿ ಉನ್ನತ ಹುದ್ದೆಯಲ್ಲಿರುವ ಕನ್ನಡಿಗರನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕು.

ಕನ್ನಡಿಗರಿಗೆ ಮಲತಾಯಿಧೋರಣೆ ತೋರುವ ಇಂತಹ ಐಟಿ ಸಂಸ್ಥೆಗಳು ಕನ್ನಡಿಗರ ಹೆಮ್ಮೆಯ ರಾಜಧಾನಿ ಬೆಂಗಳೂರಿನಲ್ಲೇ ಇರುವುದು ವಿಪರ್ಯಾಸ ಅಲ್ಲವೇ? ಇದಕ್ಕೆ ಐಟಿ ಉದ್ಯಮದಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಕಡ್ಡಾಯವಾಗಿ ಜಾರಿ ಮಾಡುವುದೇ ನಮ್ಮ ಸರ್ಕಾರ ಕನ್ನಡಿಗರಿಗೆ ಮಾಡುವ ಉಪಕಾರವಾಗುತ್ತದೆ.

ಇತಿ

-ನೊಂದ ಕನ್ನಡಿಗ ಸಾಫ್ಟ್‌ವೇರ್‌ ತಜ್ಞ

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X