ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋರೆ ಮಾರಿಗೆ ಮಸಿ ಕನ್ನಡಿಗರಿಗೆ ಖುಷಿ!

By Staff
|
Google Oneindia Kannada News


ಕನ್ನಡ ವಿರೋಧಿ ಧೋರಣೆ ಅನುಸರಿಸಿದ ಬೆಳಗಾವಿ ಮೇಯರ್‌ ಮೋರೆಗೆ ಮಸಿ ಬಳಿದ ಪ್ರಕರಣ, ರಾಜ್ಯದೆಲ್ಲೆಡೆ ಬಿಸಿಬಿಸಿ ಚರ್ಚೆಗೆ, ಬಿಸಿಬಿಸಿ ಕನ್ನಡ ಪ್ರೀತಿ/ಹೋರಾಟಕ್ಕೆ ದಾರಿ ಮಾಡಿದೆ. ಚಿದಾನಂದ ಮೂರ್ತಿ, ಅನಂತಮೂರ್ತಿ ಮತ್ತಿತರರು ಮಸಿ ಬಳಿದ ಕರ್ನಾಟಕ ರಕ್ಷಣಾ ವೇದಿಕೆ ಕ್ರಮವನ್ನು ಸರಿಯಲ್ಲ ಅಂದಿದ್ದಾರೆ. ಸರಿಯಲ್ಲ ಅಂದವರನ್ನು ಪೂರ್ಣ ಚಂದ್ರ ತೇಜಸ್ವಿ ತರಾಟೆಗೆ ತೆಗೆದು ಕೊಂಡಿದ್ದಾರೆ. ಕನ್ನಡ ದ್ರೋಹಿಗಳಿಗೆ ‘ಮಸಿ’ಯಲ್ಲದೆ ‘ಫೇರ್‌ ಅಂಡ್‌ ಲವ್ಲಿ’ ಹಚ್ಚಬೇಕಾ? ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಓದುಗರ ಎರಡು ಪತ್ರಗಳು ಇಲ್ಲಿವೆ. ನಿಮ್ಮ ಅನಿಸಿಕೆಗಳಿಗೂ ಸ್ವಾಗತ.

ಮಾನ್ಯರೇ,

‘ಮೂಲೆಗೆ ಒತ್ತರಿಸಿದರೆ ಬೆಕ್ಕೂ ಕೂಡಾ ತಿರುಗಿ ಬೀಳುತ್ತದೆ’ ಎಂಬುದು ಒಂದು ನಾಣ್ಣುಡಿ. ಕರ್ನಾಟಕ ಏಕೀಕರಣವಾದ ಸುವರ್ಣ ವರ್ಷದಲ್ಲಿ ಬೆಳಗಾವಿ ನಗರ ಪಾಲಿಕೆ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವುದಿಲ್ಲ. ಬದಲಾಗಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಸಂವಿಧಾನ ಬಾಹಿರವಾದ ನಿರ್ಣಯವನ್ನು ಮಂಡಿಸುತ್ತದೆ! ನಮ್ಮ ಘನ ರಾಜ್ಯ ಸರ್ಕಾರ ಇವೆಲ್ಲವನ್ನು ಗಮನಿಸಿಯೂ ಯಾವುದೇ ಕ್ರಮ ಕೈಗೊಳ್ಳದೆ, ನಿಷ್ಕಿೃಯತೆಯನ್ನು ಮೆರೆಯುತ್ತದೆ. ಇದಿಷ್ಟು ಸಾಲದೇ ಕನ್ನಡಿಗನ ಸ್ವಾಭಿಮಾನ ಕೆರಳಲು.

ಇದೇ ಅಲ್ಲವೆ ಕರ್ನಾಟಕ ರಕ್ಷಣಾ ವೇದಿಕೆಯ ಕೃತ್ಯಕ್ಕೆ ಪ್ರೇರಣೆ ನೀಡಿದ್ದು. ಕನ್ನಡಮ್ಮನ ಮುಖಕ್ಕೇ ಮಸಿ ಬಳಿಯಲು ಯತ್ನಿಸಿದ ಮಹಾರಾಷ್ಟ ಏಕೀಕರಣ ಸಮಿತಿಯ ಮೇಯರ್‌ನ ಮುಖಕ್ಕೆ ಕಪ್ಪು ಬಳಿದು ಕನ್ನಡಿಗರ ಆಕ್ರೋಶ ವ್ಯಕ್ತ ಪಡಿಸಿದ್ದು ಕಾನೂನು ಬಾಹಿರ ಕ್ರಮವಾಗಿದ್ದಿರಬಹುದು. ಆದರೆ ಅನ್ಯಾಯವಾದ ಕ್ರಮವೆಂದು ಅನ್ನಿಸುವುದಿಲ್ಲ.

ತನ್ನ ದಿವ್ಯ ನಿಷ್ಕಿೃಯತೆಯಿಂದ ಸಮಸ್ಯೆ ತೀವ್ರವಾಗಲು ಕಾರಣವಾದ ರಾಜ್ಯ ಸರ್ಕಾರವೇ ಇದಕ್ಕೆ ಹೊಣೆಯಲ್ಲವೆ? ಕನ್ನಡಿಗರ ಸ್ವಾಭಿಮಾನ ಕೆಣಕಿದ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಿರ್ಣಯ ಭಾಷಾ ಸಾಮರಸ್ಯ ಕದಡುವ ಕಾರ್ಯವಲ್ಲವೇ?

ಈಗ ಕನ್ನಡ ಹೋರಾಟಗಾರರ ಮೇಲೆ, ಕೊಲೆ ಯತ್ನ ಮತ್ತು ಡಕಾಯಿತಿಯಂತಹ ಸುಳ್ಳುಕೇಸುಗಳನ್ನು ಹೇರಲು ಸನ್ನದ್ಧವಾಗಿರುವ ಸರ್ಕಾರ, ಮೊನ್ನಿನ ಬಂದ್‌ನಲ್ಲಿ ಕನ್ನಡ ಬಾವುಟಕ್ಕೆ ಬೆಂಕಿಯಿಟ್ಟ ಎಮ್‌.ಇ.ಎಸ್‌ನ ಮೇಲೆ ಯಾಕೆ ಕ್ರಮ ಕೈಗೊಳ್ಳುವುದಿಲ್ಲ? ಕಾನೂನು ಕ್ರಮ ಎಲ್ಲರಿಗೂ ಒಂದೇ ಏಕೆ ಆಗಿರುವುದಿಲ್ಲ.

ವೇದಿಕೆಯ ನಾರಾಯಣ ಗೌಡರನ್ನು, ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಬಂಧಿಸಲು ತೋರಿಸುವ ಉತ್ಸಾಹ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪದಾಧಿಕಾರಿಗಳನ್ನು, ಕಾರ್ಯಕರ್ತರನ್ನು ಬಂಧಿಸಲು ಏಕೆ ಇರುವುದಿಲ್ಲ ? ಇನ್ನು ನಮ್ಮ ಬುದ್ಧಿ(ಹೀನ)ಜೀವಿಗಳ ಹೇಳಿಕೆಗಳನ್ನು ನೋಡಬೇಕು. ಒಬ್ಬರಂತಾರೆ, ಅವರದ್ದು ತಪ್ಪು, ಇವರದ್ದು ಅದಕ್ಕಿಂತಾ ದೊಡ್ಡ ತಪ್ಪು. ಸರಿ, ಸ್ವಾಮಿ. ಬೆಳಗಾವಿ ನಗರ ಪಾಲಿಕೆಯ ನಿರ್ಣಯಕ್ಕೆ ತಾವುಗಳು ಏಕೆ ಸಾತ್ವಿಕ ರೀತಿಯಲ್ಲಿ ಪ್ರತಿಭಟಿಸಲಿಲ್ಲ. ಅಷ್ಟೇಕೆ, ಒಂದು ಪತ್ರಿಕಾ ಹೇಳಿಕೆಯೂ ತಮ್ಮಿಂದ ಬರಲಿಲ್ಲವಲ್ಲ.

ಮತ್ತೊಬ್ಬರಿಗೆ ಮಹಾರಾಷ್ಟ್ರದಲ್ಲಿ ವಾಸವಾಗಿರುವ 19 ಲಕ್ಷ ಕನ್ನಡಿಗರ ಸುರಕ್ಷೆಯ ಚಿಂತೆ. ಪಾಪ, ಅವರಿಗೆ ಕರ್ನಾಟಕದಲ್ಲಿ 25ಲಕ್ಷ ಮರಾಠಿಗರಿರುವುದು ತಿಳಿದಿಲ್ಲವೇನೋ ? ಮತ್ತೊಬ್ಬ ಮಹಾನುಭಾವರಿಗಂತೂ ಕನ್ನಡ ಹೋರಾಟಗಾರರು ಭಯೋತ್ಪಾದಕರಂತೆ ಕಾಣುತ್ತಾರೆ. ಹೋರಾಟಗಾರರ ಮೇಲೆ ಸುಳ್ಳು ಮೊಕದ್ದಮೆ ಹೇರ ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಇವರು ಹೇಳಿಕೆ ನೀಡಲಾರರು.

ರಕ್ಷಣಾ ವೇದಿಕೆಯ ಕ್ರಮವನ್ನು ಒಪ್ಪುವುದೂ ಬಿಡುವುದೂ ಅವರವರ ಇಷ್ಟ. ಆದರೆ ಹೀಗೆ ಹೋರಾಟಗಾರರ ಸ್ಥೈರ್ಯ ಕೆಡಿಸುವ ಹೇಳಿಕೆಗಳನ್ನು ಸ್ವಯಂ ಪ್ರೇರಿತರಾಗಿ, ಯಾರೂ ಕೇಳದೆ ತಾವಾಗಿ ನೀಡುವುದು, ಯಾವ ಪುರುಷಾರ್ಥ ಸಾಧನೆಗೋ ತಿಳಿಯದು.

ನಮ್ಮ ಸರ್ಕಾರ, ಬುದ್ಧಿಜೀವಿಗಳು ತಿಳಿದೋ ತಿಳಿಯದೆಯೋ ಕನ್ನಡ ವಿರೋಧಿಗಳಿಗೆ ಪೂರಕವಾದ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದರೆ, ಕನ್ನಡಿಗನ ಆಕ್ರೋಶ ಮತ್ತಷ್ಟು ಹೆಚ್ಚುವುದಿಲ್ಲವೇನು ?

-ಆನಂದ್‌ ಜಿ, ಬನವಾಸಿ ಬಳಗ, ಬೆಂಗಳೂರು.
[email protected]

*

ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಕ್ಕೆ ಬೆಂಬಲ

ಬೆಳಗಾವಿ, ಖಾನಾಪುರ, ನಿಪ್ಪಾಣಿ ಮುಂತಾದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ನಿರ್ಣಯ ಕೈಗೊಂಡ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಗರಪಾಲಿಕೆ ಸದಸ್ಯರ ನಿಲುವು ಖಂಡನೀಯ. ಬೆಳಗಾವಿಯಲ್ಲಿ ಅವರು ಕರ್ನಾಟಕ ರಾಜ್ಯೋತ್ಸವವನ್ನು ಕಪ್ಪುದಿನವನ್ನಾಗಿ ಆಚರಿಸಿ ಕಪ್ಪು ಬಾವುಟ ಪ್ರದರ್ಶಿಸಿರುವುದು ಅಕ್ಷಮ್ಯ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೆಳಗಾವಿ ನಗರದ ಮಹಾಪೌರ ವಿ.ಪಿ.ಮೋರೆಗೆ ಕಪ್ಪುಮಸಿ ಬಳಿದಿರುವುದು ಅತ್ಯಂತ ಸಮಂಜಸವಾಗಿದೆ.

ಬೆಳಗಾವಿಯ ಮರಾಠಿಗರ ಕನ್ನಡ ವಿರೋದಿ ನಿಲುವಿನ ವಿರುದ್ಧದ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಕ್ಕೆ ಕನ್ನಡಿಗರು ಸಂಪೂರ್ಣ ಬೆಂಬಲವನ್ನು ನೀಡಬೇಕು.

ಕರ್ನಾಟಕ ರಕ್ಷಣಾ ವೇದಿಕೆಯ ವಿರುದ್ಧ ಬೆಂಗಳೂರು ಪೊಲೀಸರು ಡಕಾಯಿತಿ ಮತ್ತು ಗೂಂಡಾ ಕಾಯಿದೆ ಪ್ರಕರಣವೆಂದು ಕೇಸು ದಾಖಲಿಸಿರುವುದು ಕನ್ನಡ ಹೋರಾಟಗಾರರಿಗೆ ಮಾಡಿದ ಅವಮಾನ. ಕನ್ನಡ ನಾಡಿನಲ್ಲೇ ಕನ್ನಡ ಹೋರಾಟಗಾರರನ್ನು ಡಕಾಯಿತರಂತೆ/ಗೂಂಡಾಗಳಂತೆ ನೋಡುತ್ತಿರುವುದು ನಿಜಕ್ಕೂ ದು:ಖದ ವಿಷಯ. ಕರ್ನಾಟಕ ರಕ್ಷಣಾ ವೇದಿಕೆಯ ವೀರ ಕಾರ್ಯಕರ್ತರು ಕನ್ನಡ ವಿರೋಧಿಗಳಿಗೆ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಅವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಕಪ್ಪುದಿನವನ್ನಾಗಿ ಆಚರಿಸಿ, ಕನ್ನಡದ ಧ್ವಜವನ್ನು ಸುಟ್ಟು, ಕನ್ನಡ ನಾಮ ಫಲಕಗಳಿಗೆ ಮಸಿಬಳೆದ ಕನ್ನಡ ವಿರೋಧಿ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆಯವರ ಕೃತ್ಯವನ್ನು ನಮ್ಮ ಬುದ್ಧಿ ಜೀವಿ ಸಾಹಿತಿಗಳೆನಿಸಿಕೊಂಡವರು ಖಂಡಿಸದೆ ಕನ್ನಡ ಹೋರಾಟಗಾರರನ್ನೆ ದೂಷಿಸುತ್ತಿರುವ ಅವರ ನಿಲುವು ಅತ್ಯಂತ ಖಂಡನೀಯ.

ಕರ್ನಾಟಕ ಸರ್ಕಾರಕ್ಕೆ ಒಂದು ಮನವಿ. ಕನ್ನಡ ಹೋರಾಟಗಾರರನ್ನು ಗೂಂಡಾಗಳು, ದರೋಡೆಕೋರರಿಗೆ ಹೋಲಿಸದೆ ನಾಡಿಗಾಗಿ ಹೋರಾಡುತ್ತಿರುವ ಸ್ವಾಭಿಮಾನಿ ಯೋಧರಂತೆ ನೋಡಿ. ರಾಜ್ಯ ಸರ್ಕಾರ ಕನ್ನಡ ವಿರೋಧಿ ನಿರ್ಣಯ ತೆಗೆದು ಕೊಂಡ ಬೆಳಗಾವಿ ಮಹಾನಗರ ಪಾಲಿಕೆಯ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿರುವುದೇ ಈ ಘಟನೆಗೆ ಮುಖ್ಯ ಕಾರಣ. ಆದ್ಧರಿಂದ ಬೆಳಗಾವಿ ಮಹಾನಗರಪಾಲಿಕೆಯನ್ನು ಈ ಕೂಡಲೆ ರದ್ದು ಪಡಿಸಿ ಅಲ್ಲಿಗೆ ಸರ್ಕಾರದ ಆಡಳಿತಾಧಿಕಾರಿಗಳನ್ನು ನೇಮಿಸಿ. ಬೆಳಗಾವಿಯಲ್ಲಿ ಕನ್ನಡದ ದ್ವಜವನ್ನು ಸುಟ್ಟು ಕನ್ನಡ ನಾಮ ಫಲಕಗಳಿಗೆ ಮಸಿ ಬಳೆದ ಕನ್ನಡ ವಿರೋಧಿಗಳನ್ನು ಈ ಕೂಡಲೆ ಬಂಧಿಸಿ ಕ್ರಮ ತೆಗೆದುಕೊಳ್ಳಿ.

ವಂದನೆಗಳು
-ಸಂಪಿಗೆ ಶ್ರೀನಿವಾಸ, ಬನವಾಸಿ ಬಳಗ, ಬೆಂಗಳೂರು
[email protected]

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X