ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಪ್ಪಾಳೆ ಗಿಟ್ಟಿಸುವ ಪ್ರಯತ್ನ ಬಿಡಿ, ಪರಿಹಾರ ಹುಡುಕಿ...

By Staff
|
Google Oneindia Kannada News


ಜಾಗತೀಕರಣ ಒದಗಿಸುವ ಅವಕಾಶಗಳನ್ನು ಉಪಯೋಗಿಸುವಾಗ, ಎದುರಾಗುವ ಸವಾಲುಗಳಿಗೆ ಉತ್ತರಿಸುವುದು ಹೇಗೆ? ಇದರಲ್ಲಿ ಸರ್ಕಾರದ ಪಾತ್ರವೇನು? ಇವೆಲ್ಲಾ ಉತ್ತರಿಸಬೇಕಾದ ಪ್ರಶ್ನೆಗಳೇ. ಆದರೆ, ರವಿ ಬೆಳಗೆರೆಯವರು ಬರೆದಿರುವ ತರ್ಕರಹಿತ ಲೇಖನದಲ್ಲಿ ಇಂತಹ ಯಾವ ಪ್ರಶ್ನೆಗಳೂ ಇಲ್ಲ. ಇನ್ನು ಉತ್ತರಗಳನ್ನು ನಿರೀಕ್ಷಿಸುವುದಂತೂ ದೂರದ ಮಾತು...

  • ಶೇಷಾದ್ರಿ, ಸೌತ್‌ ಬ್ರನ್ಸ್‌ವಿಕ್‌, ನ್ಯೂ ಜರ್ಸಿ, ಯು.ಎಸ್‌.ಎ.
    [email protected]
ಇನ್ಫೋಸಿಸ್‌ನ ಸುಧಾಮೂರ್ತಿಯವರಿಗೆ ರವಿ ಬೆಳಗೆರೆಯವರು ಬರೆದ ಪತ್ರವನ್ನೋದಿದೆ. ‘ಅಕ್ಕ’ ಎಂದೆನ್ನುತ್ತಲೇ, ‘ಡಾಲರ್‌ ತಿಂತೀರಾ?’ ಎಂದು ಕೇಳುವ, ‘ತಮ್ಮ’ ಎಂದು ಹೇಳಿಕೊಳ್ಳುತ್ತಲೇ ‘ಬ್ಲ್ಯಾಕ್‌ಮೇಲ್‌’ ಆಪಾದನೆ ಹೊರಿಸಿ ‘ಅಕ್ಕನನ್ನೇ’ ಮನೆಯಿಂದ ಹೊರಹಾಕುವ ಯೋಚನೆ ಮಾಡುವ ಬೆಳಗೆರೆಯವರ ಸೋದರ ಬಾಂಧವ್ಯಕ್ಕೆ ಚಪ್ಪಾಳೆ ತಟ್ಟಲೇಬೇಕು.

ಬೆಳಗೆರೆಯವರು ತಮ್ಮ ಪತ್ರದಲ್ಲಿ ಬರೆಯುತ್ತಾರೆ: ‘...ಕೇಂದ್ರ ಸರ್ಕಾರದಿಂದ ಸಂತ್ರಸ್ತರಿಗೆ ಮನೆ ಕಟ್ಟಿಕೊಡೋಕೆ ಅಂತ ಹತ್ತಿಪ್ಪತ್ತು ಸಾವಿರ ರೂಪಾಯಿಗಳ ನೆರವು ಬರುತ್ತೆ. ಅದನ್ನೂ ನಿಮಗೇ ಕೊಟ್ಟು ಬಿಡ್ತೀವಿ...’ ಅಂದರು ಎಂ.ಪಿ.ಪ್ರಕಾಶ್‌

ಪತ್ರಿಕಾ ವರದಿಗಳಂತೆ (ಉದಾಹರಣೆ:ಈ ವರದಿ) ನೆರೆ ನೆರವಿಗಾಗಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಕೊಟ್ಟ ಹಣ 300 ಕೋಟಿ ರೂಪಾಯಿಗಳು. ಆ ಹಣದಲ್ಲಿ ಪ್ರವಾಹದಿಂದ ನಿರ್ಗತಿಕರಾದವರಿಗೆ ಮನೆ ಕಟ್ಟಿಕೊಡಲು ಸಲ್ಲುವುದು ಕೇವಲ ‘ಹತ್ತಿಪ್ಪತ್ತು ಸಾವಿರ ರೂಪಾಯಿಗಳು’ ಮಾತ್ರವೇ?

ಸರ್ಕಾರೀ ಹಣವನ್ನು ಎಂ.ಪಿ.ಪ್ರಕಾಶ್‌ರವರು ಖಾಸಗಿಯವರ ಕೈಗೊಪ್ಪಿಸುವ ಯೋಜನೆ ಮಾಡುವ ಮುನ್ನ ವಿಧಾನ ಮಂಡಲದಲ್ಲಿ ಈ ಕುರಿತು ಚರ್ಚೆ ನಡೆಯಿತೇ? ಯಾರಪ್ಪಣೆ ಪಡೆದು ಎಂ.ಪಿ.ಪ್ರಕಾಶ್‌ರವರು ಈ ಯೋಜನೆಯನ್ನು ‘ಐ.ಟಿ. ಕಂಪನಿ’ ಯವರ ಮುಂದಿಟ್ಟರು? (ವಿರೋಧ ಪಕ್ಷದವರು ರವಿ ಬೆಳಗೆರೆಯವರ ಲೇಖನವನ್ನು ಓದಿಯಾದರೂ ಸರ್ಕಾರವನ್ನು ಈ ಕುರಿತು ತರಾಟೆಗೆ ತೆಗೆದುಕೊಳ್ಳುತ್ತಾರೆಯೇ?!)

ಎಂ.ಪಿ.ಪ್ರಕಾಶ್‌ರವರು ಈ ವಿಷಯವನ್ನು ಪ್ರಸ್ತಾಪಿಸಿದಾಗ, ರೆವಿ ಬೆಳಗೆರೆಯವರ ಪ್ರತಿಕ್ರಿಯೆ (ಅಥವಾ ಇಲ್ಲದ ಪ್ರತಿಕ್ರಿಯೆ) ಸಹ ಆಶ್ಚರ್ಯಕರ; ತಾವೇ ಎನ್ನುವಂತೆ ‘ಬ್ಲ್ಯಾಕ್‌ಮೇಲ್‌’ ಮಾಡುವ ‘ಐ.ಟಿ. ಕಂಪನಿಗಳವರು’ ಸರ್ಕಾರದ ಹಣ ತೆಗೆದುಕೊಳ್ಳದೇ ಇದ್ದಕ್ಕೆ ಸಮಾಧಾನದ ನಿಟ್ಟುಸಿರು ಬಿಡುವುದನ್ನು ಬಿಟ್ಟು, ರವಿಯವರು ಅಸಮಾಧಾನಗೊಳ್ಳುತ್ತಾರೆ! ಎಂ.ಪಿ.ಪ್ರಕಾಶ್‌ರವನ್ನು ಪ್ರಶ್ನಿಸುವುದನ್ನು ಬಿಟ್ಟು, ಅವರ ದನಿಯಲ್ಲಿನ ನೋವಿನ ಕುರಿತು ಬರೆಯುತ್ತಾರೆ.

ಬರ, ಪ್ರವಾಹಗಳು ಇಂದು ನಿನ್ನೆಯದಲ್ಲ. ಇವುಗಳ ಕುರಿತು ಸರ್ಕಾರ ಏನಾದರೂ ದೂರಾಲೋಚನೆಯ ಯೋಜನೆಗಳನ್ನು ಹಾಕಿಕೊಂಡಿದೆಯೇ ಎಂಬ ಪ್ರಶ್ನೆ ಬೆಳಗೆರೆಯವರಿಗೆ ಮೂಡುವುದಿಲ್ಲ. ಬದಲಿಗೆ, ಸಿರಿವಂತ ರವಿಯವರು ತಮ್ಮ ಕೆಂಗಣ್ಣು ಬಿಡುವುದು ತಮಗಿಂತ ಸಿರಿವಂತರಾದ ಸುಧಾಮೂರ್ತಿಯವರ ಮೇಲೆ. (ಆಕಾಶಕ್ಕೇರುತ್ತಿರುವ ಮನೆ-ಜಮೀನಿನ ಬೆಲೆಗಳು, ನರ್ಸರಿ ಸ್ಕೂಲ್‌ ಡೊನೇಷನ್‌ಗಳ ನಡುವೆ, ಬೆಳಗೆರೆಯವರ ಗಮನ ಪಬ್‌ಗಳಲ್ಲಿ ಏರುತ್ತಿರುವ ಬೀರಿನ ಬೆಲೆಯ ಕಡೆಗೂ ಹೊರಳುತ್ತದೆ! ಪಾಪ, ಬೀರಿಲ್ಲದೆ ಬದುಕುವುದೆಂತು?!)

ಐ.ಟಿ. ಕಂಪನಿಗಳು ಬೆಂಗಳೂರಿಗೆ ‘ಭಾರ’ ವೇ ಆಗಿದ್ದಲ್ಲಿ, ಅವರು ‘ಹೈದರಾಬಾದಿಗೆ ಹೊರ್ಟೋಗ್ತೀವಿ ನೋಡಿ’’ ಎಂದಾಗ ಸಂತೋಷದಿಂದ ‘ಹೊರಡಿ’ ಎನ್ನುವುದನ್ನು ಬಿಟ್ಟು ‘ಬ್ಲ್ಯಾಕ್‌ಮೇಲ್‌’ ಎಂದು ಬೊಬ್ಬೆಯಿಡುವ ಬೆಳಗೆರೆಯವರ ತರ್ಕ ಅರ್ಥವಾಗುವುದಿಲ್ಲ.

ಬೆಳಗೆರೆಯವರು ಸುಧಾಮೂರ್ತಿಯವರ ಬಗೆಗೆ ಬರೆಯುತ್ತಾರೆ: ‘ನೀವು ಈ ತನಕ ಬೆಂಗಳೂರಿಗೆ ಮಾಡಿದ್ದು ಏನೂ ಇಲ್ಲ’ ಶೌಚಾಲಯದಿಂದ, ಗ್ರಂಥಾಲಯದವರೆಗೆ, ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಧರ್ಮಶಾಲೆಯಿಂದ ಹಿಡಿದು, ಬಳ್ಳಾರಿಯಲ್ಲಿ ಬ್ರೇಯ್ನ್‌ ಫೀವರ್‌ ಆಸ್ಪತ್ರೆಯವರೆಗೆ ‘ಏನೂ ಮಾಡಿಲ್ಲದ’ ಸುಧಾಮೂರ್ತಿಯವರ ಇನ್ಫೋಸಿಸ್‌ ಫೌಂಡೇಷನ್ನಿನ ಕೆಲವಾರು ಕಾರ್ಯಗಳ ವಿವರ ಇಲ್ಲಿದೆ, ಇಲ್ಲಿದೆ, ಇಲ್ಲಿದೆ, ಇಲ್ಲಿದೆ,ಇಲ್ಲಿದೆ ಮತ್ತೆ ಇಲ್ಲಿದೆ.

ಇನ್ಫೋಸಿಸ್‌ ಸಂಸ್ಥೆ ತನ್ನ ಲಾಭದಲ್ಲಿ (ತೆರಿಗೆಯ ನಂತರ) ಶೇ. ಒಂದೂವರೆಯಷ್ಟು ಮೊತ್ತವನ್ನು ಲಾಭರಹಿತ ಸಾಮಾಜಿಕ ಕಾರ್ಯಕ್ರಮಗಳಿಗೆ ಇನ್ಫೋಸಿಸ್‌ ಫೌಂಡೇಷನ್‌ ಮೂಲಕ ಬಳಸುವ ನಿರ್ಧಾರ ಹೊಂದಿದೆ. (ಕಳೆದ ವರ್ಷದ ತೆರಿಗೆಯ ನಂತರದ ಲಾಭ: 1846.48 ಕೋಟಿ. ಆಧಾರ: ಈ ವರದಿ.)

ಇನ್ಫೋಸಿಸ್‌ ಸಂಸ್ಥೆ ಸಾಮಾಜಿಕ ಕಾರ್ಯಗಳಿಗೆ ವ್ಯಯಿಸುತ್ತಿರುವ ಹಣ ಸಾಕೇ? ಸಾಲದೇ? ಈ ಹಣ ಸಮರ್ಪಕವಾಗಿ ಬಳಕೆಯಾಗುತ್ತಿದೆಯೇ? (ಉದಾಹರಣೆಗೆ, ಶೌಚಾಲಯಗಳಿಗೆಂದು ಇನ್ಫೋಸಿಸ್‌ ಫೌಂಡೇಷನ್‌ ನೀಡಿದ ಎಂಟು ಕೋಟಿ ರೂಪಾಯಿಗಳು), ಇನ್ಫೋಸಿಸ್‌ ಫೌಂಡೇಷನ್ನಿನ ಕಾರ್ಯ ಚಟುವಟಿಕೆಗಳ ಫೋಕಸ್‌ ಬದಲಿಸಬೇಕೇ? ಐ.ಟಿ. ಕಂಪೆನಿಗಳಿಂದ ಬೆಂಗಳೂರಿಗೆ-ಕರ್ನಾಟಕಕ್ಕೆ ಒಳಿತಾಗಿದೆಯೇ? ಹಾನಿಯಾಗಿದೆಯೇ? ಜಾಗತೀಕರಣ ಒದಗಿಸುವ ಅವಕಾಶಗಳನ್ನು ಉಪಯೋಗಿಸುವಾಗ ಎದುರಾಗುವ ಸವಾಲುಗಳಿಗೆ ಉತ್ತರಿಸುವುದು ಹೇಗೆ? ಇದರಲ್ಲಿ ಸರ್ಕಾರದ ಪಾತ್ರವೇನು? ಇವೆಲ್ಲಾ ಉತ್ತರಿಸಬೇಕಾದ ಪ್ರಶ್ನೆಗಳೇ. ಆದರೆ, ರವಿ ಬೆಳಗೆರೆಯವರು ಬರೆದಿರುವ ತರ್ಕರಹಿತ ಲೇಖನದಲ್ಲಿ ಕಾಣುವುದು ಇಂತಹ ಪ್ರಶ್ನೆಗಳೂ ಅಲ್ಲ, ಇವುಗಳಿಗೆ ಉತ್ತರಗಳಂತೂ ಅಲ್ಲವೇ ಅಲ್ಲ; ಬದಲಿಗೆ, ‘ಅಕ್ಕ-ತಮ್ಮ’, ‘ಬ್ಲ್ಯಾಕ್‌ಮೇಲ್‌’, ‘ಯಾಕೆ ಬಂದ್ರಿ’, ‘ಎಲ್ಲಿಂದ ಬಂದ್ರಿ’ ಎಂದೆಲ್ಲಾ ಸೆಂಟಿಮೆಂಟಲ್ಲಾಗಿ ಬರೆದು ಅಗ್ಗವಾಗಿ ಓದುಗರ ಚಪ್ಪಾಳೆಗಿಟ್ಟಿಸುವ ಪ್ರಯತ್ನ ಅಷ್ಟೇ.


ರವಿ ಪತ್ರದ ಪೂರ್ಣ ಪಾಠ :
ಇನ್‌ಫೋಸಿಸ್‌ನ ಹೆಣ್ಣುಮಗಳು ಸುಧಾಮೂರ್ತಿ ಅವರಿಗೆ
ಧರ್ಮೂ ದಾದಾ ಡೌಲು ಸುಧಾ ಕೀರ್ತಿಯ ಮಹಲು!


ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X