• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುವರ್ಣ ಕರ್ನಾಟಕದ ಕನಸು ನನಸಾಗಲು ಏನ್‌ ಮಾಡಬೇಕು?

By ಜಿ.ಎ. ಕುಲಕರ್ಣಿ
|

ದಂಡಂ ದಶಗುಣಮ್‌ ಬದಲು ಸುವರ್ಣ ಕರ್ನಾಟಕ ಸಾಕಾರ ಮಾಡಲು, ಇನ್ನೂ ಸರಳ ಮತ್ತು ಉತ್ತಮ ಹಾದಿ ಅವ ಅಂತ ಬಲ್ಲವರು ತಿಳಿಹೇಳಿದ್ರ ಕೇಳಲಿಕ್ಕೆ ನಾನು ತಯಾರ. ಕಲಾಂ ಹೇಳಿದ ಹನ್ನೊಂದು ಅಂಶಗಳಲ್ಲಿ ನಾಲ್ಕೈದಾದರೂ ಸಾಕಾರವಾಗುವವರೆಗೆ ನಾವುಗಳೆಲ್ಲಾ ಜಾಗೃತರಾಗಿರಬೇಕು. ಏನಂತೀರಾ?

ಸುವರ್ಣ ಕರ್ನಾಟಕದ ಸಂಭ್ರಮದಲ್ಲಿ ಪುಸ್ತಕಗಳ ಡಿಜಿಟೈಜೆಶನ್‌, ಕನ್ನಡ ಸಮ್ಮೇಳನ, ಹಣ ಪೋಲು ಇತ್ಯಾದಿ ಮೇಲಿಂದ ಮೇಲೆ ಸುದ್ದಿಯಾಗುತ್ತಿವೆ. ಇಂತಹ ಗದ್ದಲಗಳ ನಡುವೆಯೇ ರಾಷ್ಟ್ರಪತಿಯವರ ಭಾಷಣ ಅನೇಕರ ಕುತೂಹಲ ಕೆರಳಿಸಿದೆ. ಭಾಷಣವಾದ ತಕ್ಷಣವೇ ರಾಷ್ಟ್ರಪತಿಯವರ ಅಂತರ್ಜಾಲ ಪುಟಕ್ಕೆ ಹೋಗಿ. ಕರ್ನಾಟಕದ ಪ್ರಗತಿಯ ನೀಲನಕ್ಷೆ ಕಂಡು ‘ಶಭಾಶ್‌' ಎಂದೆ. ಅನೇಕ ಪತ್ರಿಕೆಗಳಲ್ಲಿ ಅದಕ್ಕೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ಈ ಬಗ್ಗೆ ‘ನೂರೆಂಟು ಮಾತು' ಅಂಕಣದಲ್ಲಿ ಧ್ವನಿ ಪ್ರತಿಧ್ವನಿಸಿದೆ.

ಲೇಖನದಲ್ಲಿ ಉದಾಹರಿಸಿದ ಮಂತ್ರಿಗಳ ಅಣಿಮುತ್ತು ಅಪೇಕ್ಷಿತವೆ. ಅಷ್ಟೊಂದು ಸರಳವಾಗಿ ಸರಿಯಾದ ಹಾದಿಗೆ ಬರುವ ತಳಿಯಲ್ಲ ರಾಜಕಾರಣಿ ಮಂದಿ. ರಾಷ್ಟ್ರಪತಿಗಳ ಕಳಕಳಿಯ ಸಂದೇಶವನ್ನು ಇಷ್ಟೊಂದು ಚಿಲ್ಲರೆಯಾಗಿ ತೆಗೆದುಕೊಳ್ಳುತ್ತಾರೆಂದರೆ ಅದು ಆ ಪೀಠಕ್ಕೆ ಅದ ಅವಮಾನವಲ್ಲದೇ ಮತ್ತೇನು? ಈ ಸಂದರ್ಭದಲ್ಲಿಯಂತೂ ಹೇಳಿಕೆ ಹೇಸಿಗೆ ಹುಟ್ಟಿಸುವಷ್ಟು ಅಸಹ್ಯಕರವಾಗಿದೆ. ಇಷ್ಟೊಂದು ನಿರ್ಲಜ್ಜತನದಿಂದ ಹೇಳುವದಿದ್ದಲ್ಲಿ ರಾಷ್ಟ್ರಪತಿಯವರನ್ನು ಕರೆಸುವ ಜರೂರತ್ತಾದರೂ ಏನಿತ್ತು? ನಿಮ್ಮ ಧೋರಣೆಯೇ ಈ ರೀತಿ ಇದ್ದಲ್ಲಿ ಅವರನ್ನು ಯಾವ ಮಹತ್ಕಾರ್ಯಕ್ಕೆ ಕರೆಸಿದಿರಿ? ಅದರ ಬದಲು ಯಾವುದೋ ಸಿನಿಮಾ ನಟನನ್ನೋ, ಡೊಳ್ಳು ಕುಣಿತದವರನ್ನೋ ಕರೆಸಿ ಡಿಂಗು ಡಾಂಗು ಮಾಡಿಸಿ ಅಮ್ಯಾಲೊಂದೆರಡು ಗುಂಡು ಹಾಕಿ ಸುಖವಾಗಿ ಇರಬಹುದಿತ್ತಲ್ಲ ಮಂತ್ರಿ ಮಹಾಶಯರೇ? ನಾಲ್ಕು ಜನ ಪ್ರಜ್ಞಾವಂತರಲ್ಲಿಯೂ ಕೂಡ ಹುಸಿ ಭರವಸೆ ಮೂಡುತ್ತಿರಲಿಲ್ಲ.

ಎಲ್ಲರೂ ಹೇಳುವಂತೆ ನಮ್ಮಲ್ಲಿ ಇಚ್ಛಾಶಕ್ತಿಯ ಕೊರತೆ ಮಾತ್ರ ಇದೆ. ಅದೊಂದಿದ್ದರೆ ನಮ್ಮ ಕರ್ನಾಟಕ ಅಕ್ಷರಶಃ ಸುವರ್ಣ ಕರ್ನಾಟಕವಾಗುವದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಇಂತಹ ನಿರ್ಲಜ್ಜರಲ್ಲಿ ಇಚ್ಛಾಶಕ್ತಿಯ ಚಿಗುರೊಡೆಯುವದಾದರೂ ಹೇಗೆ? ನಮ್ಮಲ್ಲಿ ಶೇ.1ರಷ್ಟಾದರೂ ಇಚ್ಛಾಶಕ್ತಿಯಿದ್ದಲ್ಲಿ ಎಂದೋ ಮಾಡಿ ಮುಗಿಸಬಹುದಾಗಿದ್ದಂತಹ ಒಂದೆರಡು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೆಸರಿಸುವೆ.

‘ವಿಜಾಪುರಕ್ಕ ಬ್ರಾಡಗೇಜ್‌ ಮಾಡ್ರಿ ಮಾಡ್ರಿ' ಅಂತ ಅಲ್ಲಿನ ಮಂದಿ ಎಂದಿನಿಂದ ಶಂಖಾ ಹೊಡಿಲಿಕ್ಕೆ ಹತ್ಯಾರ. ಆದ್ರ ಕೇಳವರ್ಯಾರು? ಕನಿಷ್ಟ ಪಕ್ಷ ಮೊದಲು ವಿಜಾಪುರ-ಗದಗ ನಡುವ ಮೀಟರ್‌ ಗೇಜ್‌ ಟ್ರೈನ್‌ ಅದ್ರೂ ಓಡತಿತ್ತು. ಬ್ರಾಡಗೇಜ್‌ ಮಾಡ್ತೀವಿ ಅಂಥೇಳಿ ಇದ್ದ ಹಳಿನೂ ಕಿತ್ತಿಹಾಕಿ ಎಷ್ಟೋ ತಿಂಗಳು/ವರ್ಷಗಳೇ ಕಳೆದಿವೆ. ಅಗಸರ ನಾಯಿ ಇತ್ಲಾಗೆ ಮನೀನೂ ಇಲ್ಲಾ ಅತ್ಲಾಗೆ ಹಳ್ಳಾನೂ ಇಲ್ಲಾ ಅನ್ನೂಹಂಗ ಅಗ್ಯೇದ ನಮ್ಮ ಪರಿಸ್ಥಿತಿ! ಕಲಾಂ ಹೇಳಿದ ಹಾಗೆ ಪ್ರವಾಸಿ ತಾಣ ಅಭಿವೃದ್ಧಿ ಮಾಡೂದಾದ್ರ ಮೊದಲೊಂದು ಸರಿಯಾಗಿ ಟ್ರೈನ್‌ ಕನೆಕ್ಷನ್‌ ಕೊಡ್ರಿ.

ಪ್ರತಿ ವರ್ಷ ‘ಈ ಸಲದ ಡಿಸೆಂಬರಗೆ ಮುಗಿತದ' ಅಂತ ಹೇಳಿ ಹಂಗೇ ಮುಂದ ದಬ್ಬಲಿಕ್ಕೇ ಹತ್ಯಾರ. ಕೇವಲ ಕೆಲವು ಕೋಟಿಗಳ ಯೋಜನೆ ಉತ್ತರ ಕರ್ನಾಟಕದ ಜಿಲ್ಲೆಯ ಜನರ ಸಹನೆ ಪರೀಕ್ಷಿಸುತ್ತಿದೆ, ತಾಳ್ಮೆಯೊಡನೆ ಚೆಲ್ಲಾಟವಾಡುತ್ತಿದೆ! ಹೋಗಲಿ ಮಂತ್ರಿಗಳು ಹಾಂಗ ಇದ್ದಾರ ಅಂದ್ರ ನಮ್ಮ ಎಮ್ಮೆಲ್ಲೆ/ಎಮ್ಮೆಲ್ಸಿಗಳಿಗೇನಾಗಿದೆ? ಸರಕಾರದ ಮೇಲೆ ಒತ್ತಡ ತರದೇ ಏನು ನಡಸ್ಯಾರ? ಯಾರಿಗೂ ಗೊತ್ತಿಲ್ಲ. ಕಾಣದಂತೆ ಮಾಯವಾದರೋ! ಆಗೊಮ್ಮೆ ಇಗೊಮ್ಮೆ ಬಂದು ಅಲ್ಲೊಂದು ಇಲ್ಲೊಂದು ಅಡಿಗಲ್ಲು ಹಾಕಿ ಹೋಗ್ತಾರ ಅಷ್ಟೆ.

ಗುಲ್ಬರ್ಗಾ ಜಿಲ್ಲಾದ್ದೂ ಇನ್ನೊಂದು ಕಥಿ. ನಮ್ಮ ಮು.ಮಂ ಅಲ್ಲಿಯವರೇ ಇದ್ದಾರ, ಅರ್ಧ ಡಜನ್‌ಗಟ್ಲೆ ಮಂತ್ರಿಗಳೂ ಅಲ್ಲಿಯವರೇ ಇದ್ದಾರ. ಒಂದಲ್ಲಧಂಗ ಆರಾರು-ಎಂಟೆಂಟು ಸಲ ಆರಿಸಿ ಬಂದಾರ. ಆದರ ಗುಲ್ಬರ್ಗಾದೊಳಗ ಪ್ರೈಮರಿ ಮತ್ತು ಹೈಸ್ಕೂಲ್‌ ಶಿಕ್ಷಣದ ಹಣೆಬರಹ ಏನದ ಅಂತ ಎಲ್ಲರಿಗೂ ಗೊತ್ತದ. ಪ್ರತಿ ವರ್ಷ ಮೆಟ್ರಿಕ್‌ನಲ್ಲಿ ಶೇ.40 ಆಜುಬಾಜು ರಿಸಲ್ಟ್‌ ಬರ್ತದ ಜಿಲ್ಲಾದ್ದು. ಬಿಹಾರದ ಜೋಡಿ ಜಿದ್ದಿಗೆ ಬಿದ್ದಾರ ನಮ್ಮ ಗುಲ್ಬರ್ಗಾ ಮಂದಿ. ಇದು ಇಂದು ನಿನ್ನೆಯ ಕಥಿ ಅಲ್ಲ, ಪ್ರತಿ ವರ್ಷ ಹಿಂಗೆ ಅದ. ರಿಸಲ್ಟ್‌ನ್ನ ಶೇ.60-70 ಮುಟ್ಟಸಲ್ಲಿಕ್ಕೆ ಏನಾದ್ರೂ ಪ್ರಯತ್ನ ನಡದಾವೇನು? ಆ ದೇವರಿಗೆ ಗೊತ್ತು! ಇವೆರಡು ಕೇವಲ ಉದಾಹರಣೆ ಮಾತ್ರ.

ವಿಜಾಪುರ ಭಾಗದ ಹಳ್ಳಿಗಳಲ್ಲಿಯ ಜನ ಪ್ರತಿ ಸಲ ಬರಗಾಲದಿಂದಾಗಿ ಪಕ್ಕದ ಮಹಾರಾಷ್ಟ್ರ, ಗೋವಾಗಳಿಗೆ ಗುಳೆ ಹೋಗುವದು, ಕೃಷ್ಣಾ ಕೊಳ್ಳದ ನೀರಿನ ಸದ್ಬಳಕೆ, ಅನೇಕ ಅರ್ಧಕ್ಕೆ ನಿಂತಿರುವ ನೀರಾವರಿ ಯೋಜನೆಗಳು, ನಗರದಲ್ಲಿಯ ಕುಡಿಯುವ ನೀರಿನ ಅವ್ಯವಸ್ಥೆ, ಹದಗೆಟ್ಟ ರಸ್ತೆಗಳು, ರೇಲ್ವೆ ಅನುಕೂಲತೆ ಇತ್ಯಾದಿ ಸಮಸ್ಯೆಗಳ ಸರಮಾಲೆಯೇ ಇದೆ. ಇದೇ ವರ್ಷ ವಿಜಾಪುರ ಜಿಲ್ಲೆಯಲ್ಲಿ ಪ್ರವಾಹ ಬಂದು ಅರ್ಧ ಹಾಳಾಗಿದೆ, ಆದರೆ ಇವತ್ತಿನ ದಿನ ಇಂಡಿ ತಾಲೂಕಿನ ಕೆಲವು ಹಳ್ಳಿಗಳಲ್ಲಿ ದನಕರುಗಳಿಗೆ ಕುಡಿಯುವ ನೀರಿಗೆ ಗತಿ ಇಲ್ಲ! ಅಂದ ಮೇಲೆ ಪರಿಸ್ಥಿತಿಯ ಗಂಭಿರತೆಯನ್ನು ಅರ್ಥ ಮಾಡಿಕೊಳ್ಳಿ. ಅಂತಹ ದುರದೃಷ್ಟ ಹಳ್ಳಿಗಳಲ್ಲಿ ನನ್ನದೂ ಒಂದಿದೆ.

ಹಿಂಗಾದ್ರ ಪರಿಸ್ಥಿತಿಯಿಂದ ಹೊರಬರುವುದು ಹೇಗೆ? ಮತ್ತ ನಮ್ಮವರಲ್ಲಿ ಕೆಲಸ ಮಾಡುವಂತಹ ಇಚ್ಛಾಶಕ್ತಿ ಹುಟ್ಟಿಸುವದು ಹೇಗೆ? ಒಂದು ಸಣ್ಣ ಉದಾಹರಣೆ ಕೊಡುವೆ. ನಮ್ಮ ವಿಜಾಪುರದ ಒಂದು ಗಲ್ಲಿಯಲ್ಲಿ ನಡೆದಾಡಲಿಕ್ಕೆ ಬರಲಾರದಷ್ಟು ರಸ್ತಾ ಹದಗೆಟ್ಟಿತ್ತು. ಮುನ್ಸಿಪಾಲ್ಟಿ ಮೆಂಬರ್ಗ ಹೇಳಿ ಅಯ್ತು, ಕಮಿಶನರ್ಗ ಅರ್ಜಿ ಕೊಟ್ಟಾಯ್ತು. ಏನೂ ದರಕಾರೇ ಇಲ್ಲ, ಹಾಂನೂ ಇಲ್ಲಾ ಹೂಂನೂ ಇಲ್ಲಾ! ನಮ್ಮ ಮಂದಿ ಒಂದಿನ ಅವರಿಬ್ಬರನ್ನೂ ಯಾವದೋ ಕಾರ್ಯಕ್ರಮಕ್ಕ ಅಂತ ಕರ್ದು, ಅದೇ ರಸ್ತೆದಾಗ ನಿಂತಂಥ ರಾಡಿ ನೀರ ಅವರ ಮುಖಕ್ಕ ಉಗ್ಗಿದರು. ಕೊಳಚೆ ನೀರಿನ ಆದಮ್ಯಾಲೇ ಅಗ್ದೀ ತಾಬಡತೋಬಡ ಮರುದಿವ್ಸೇ ಕೆಲಸ ಶುರು ಅಯ್ತು. ಇದಕ್ಕೇನಂತಿರಿ? ಮೊನ್ನೆ ಮೊನ್ನೆ ನಡೆದ ಬೆಳಗಾಂವಿ ಘಟನೆಯು ಇಂತಹದೆ. ಮೊದಲಿಗೆ ಯಾರೂ ತಲೆಯಲ್ಲಿ ಹಾಕಿಕೊಳ್ಳಲಿಲ್ಲ, ಯಾವಾಗ ಮಸಿ ಬಳದರೋ ಝಟ್‌ಪಟ್‌ ನಿರ್ಣಯಗಳು ಹೊರಬೀಳಲಿಕ್ಕೆ ಶುರು ಆದವು. ಹಾಂಗಂದ್ರ ನಮ್ಮ ರಾಜಕಾರಣಿ/ಅಧಿಕಾರಶಾಹಿ ಕುಲಕ್ಕ ಪಕ್ಕಾ ಬಿಸಿ ಯಾವುದು ಆಗುದಿಲ್ಲೇನು?

ತೇಜಸ್ವಿಯವರು ಹೇಳಿದ್ದು ಖರೆ ಅನ್ಲಿಕ್ಕೆ ಇವೆರಡು ಘಟನೆಗಳು ಸಾಕ್ಷಿ. ಇನ್ನೂ ಎಷ್ಟೋ ಇರಬಹುದು. ಇದಕ್ಕೆ ತಿಳಬಲ್ಲ ಜನ ‘ಹಿಂಸೆಯ ಪ್ರತಿಪಾದನೆ', ‘ಅತಿರೇಕದ ವರ್ತನೆ', ‘ಗೂಂಡಾಗಿರಿ ಪ್ರವೃತ್ತಿ' ಇತ್ಯಾದಿ ಕರೆಯಬಹುದು. ಆದ್ರ ಏನು ಮಾಡೂದ್ರಿ? ಮಾತಿನಿಂದ ಹೇಳಿದ್ರ ತಿಳಕೊಳ್ಳುವಂತಹ ಜಾಣತನ, ಪ್ರಬುದ್ಧತೆ ನಮ್ಮ ಅನೇಕ (ಎಲ್ಲರೂ ಅಲ್ಲ!) ಜನಪ್ರತಿನಿಧಿಗಳು ತೋರಿಸುತ್ತಿಲ್ಲ. ಲತ್ತೆಯ ಪೆಟ್ಟಿಗೆ ಸುಧಾರಿಸುವಂತಹ ಕೋಣನಷ್ಟು ಅವರ ತೊಗಲು ದಪ್ಪ ಅಗ್ಯೇದ. ಹಿಂಗಾದಾಗ ನಾವು ಅಗೊಮ್ಮೆ ಇಗೊಮ್ಮೆ ಲತ್ತೆ ಕೊಡಬೇಕಾಗ್ತದ.

ಕಲಾಂ ಹೇಳಿದಂತಹ ಹನ್ನೊಂದು ಸೂತ್ರ ಜಾರಿ ಮಾಡುವಂತಹ ಇಚ್ಛಾಶಕ್ತಿ ಬೆಳಿಬೇಕು ಅಂದ್ರ ನಮ್ಮ ಜನ ಸಂಬಂಧಿಸಿದವರಿಗೆ ಸಣ್ಣದಾಗಿ ಲತ್ತೆ ಕೊಡಬೇಕೇನೊ ಅನಸ್ತದ. ಅಧಿಕಾರಿ ತಾವಾಗಿಯೇ ಕಾರ್ಯಪ್ರವೃತ್ತರಾಗಿ ಪ್ರಗತಿ ತೋರಿಸಿದಲ್ಲಿ ಸರಿ, ಇಲ್ಲವಾದಲ್ಲಿ ಜನ ಕಾಲಲ್ಲಿಯ ಮೆಟ್ಟು ಕೈಯಲ್ಲಿ ಹಿಡಿದರೆ ತಪ್ಪೇನಿಲ್ಲ. ಯಾಕಂದ್ರ ನಿರ್ಲಜ್ಜ ಮಂದಿಗೆ ಅದೇ ಅರ್ಥ ಅಗೂ ಹಂಗಿದ್ರ ನಾವೇನು ಮಾಡಲು ಸಾಧ್ಯ? ಇದರ ಬಗ್ಗೆ ತಿಳಿದವರು ಚರ್ಚೆ ಮಾಡಲಿ. ದಂಡಂ ದಶಗುಣಮ್‌ ಬದಲು ಸುವರ್ಣ ಕರ್ನಾಟಕ ಸಾಕಾರ ಮಾಡಲು ಇನ್ನೂ ಸರಳ ಮತ್ತು ಉತ್ತಮ ಹಾದಿ ಅವ ಅಂತ ಬಲ್ಲವರು ತಿಳಿಹೇಳಿದ್ರ ಕೇಳಲಿಕ್ಕೆ ನಾನು ತಯಾರ.

ಕಲಾಂ ಹೇಳಿದ ಹನ್ನೊಂದು ಅಂಶಗಳಲ್ಲಿ ನಾಲ್ಕೈದಾದರೂ ಸಾಕಾರವಾಗುವವರೆಗೆ ನಾವುಗಳೆಲ್ಲಾ ಜಾಗ್ರತರಾಗಿರಬೇಕು. ಮುಖ್ಯವಾಗಿ ನಮ್ಮ ಮಾಧ್ಯಮಗಳು ಆಗಿಂದಾಗ ಚುಚ್ಚುತ್ತಿರಬೇಕು. ಇಲ್ಲವಾದಲ್ಲಿ ಜನ ಮಾಧ್ಯಮಗಳನ್ನು ಕೂಡ ಜಡ್ಡುಗಟ್ಟಿದ ವ್ಯವಸ್ಥೆಯ ಒಂದು ಭಾಗ ಎಂದು ಭಾವಿಸುವರೇನೋ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thatskannada reader Gururaj Kulakarni writes in response to Vishveshwarabhats Norentumaatu Column.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more