ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ಏನಿದು? ಕುದಿಯುವ ಕಪ್ಪೆ ಸಿಂಡ್ರೋಮ್!

By ರೇಖಾ ಬೆಳವಾಡಿ, ಆಪ್ತ ಸಲಹೆಗಾರರು
|
Google Oneindia Kannada News

ನೀವು ಎಲ್ಲಾ ಸಮಯ ಸಂದರ್ಭಗಳಿಗೆ ಹೊಂದಿಕೊಳ್ಳುತ್ತೀರಿ ಎಂದಿಟ್ಟುಕೊಳ್ಳೋಣ. ನಿಮ್ಮ ಎಲ್ಲಾ ಶಕ್ತಿ ಮೀರಿ ವೈಯಕ್ತಿಕ, ವೃತ್ತಿ ಜೀವನವನ್ನು ನಡೆಸುತ್ತಿರುತ್ತೀರಿ. ಯಾರಾದರೂ ಏನಾದರು ಸಹಾಯ ಕೇಳಿದರೆ ನಿಮ್ಮಿಂದ ಇಲ್ಲ ಎನ್ನಲಾಗುವುದಿಲ್ಲ. ಕೆಲಸ, ಭಾವನೆಗಳು, ಒತ್ತಡ, ಆತಂಕಗಳು ಬದುಕಿನಲ್ಲಿ ಬಹಳ ಸಹಜ ಎಂಬಂತೆ ಎಣಿಸುತ್ತೀರಿ‌. ಅದು ಹೌದು ಸಹ. ಆದರೆ, ತನ್ನ ಬಗೆಗೆ ಯೋಚಿಸುವುದು ಸ್ವಾರ್ಥ ಎಂಬಂತೆ ತಿಳಿಯುತ್ತೀರಿ ಇತರರ ನೋವು ನಲಿವುಗಳು ನಿಮ್ಮದಾಗಿರುತ್ತದೆ. ಕೊಂಚ ಸಮಯ ವಿರಾಮ ತೆಗೆದುಕೊಳ್ಳುವ ಬಗ್ಗೆಯಾಗಲೀ, ಜವಾಬ್ದಾರಿಯನ್ನು ಹಂಚಿಕೊಂಡು ಪರಿಸ್ಥಿತಿ ನಿಭಾಯಿಸುವ ಬಗ್ಗೆಯಾಗಲೀ, ತಮ್ಮ ಬಗ್ಗೆಯಾಗಲೀ ಯೋಚಿಸುವುದು ಕಡಿಮೆ. ಇತರರ ಬದುಕೇ ನಮ್ಮ ಬದುಕು ಎಂದು ಬದುಕುತ್ತಿರುತ್ತೀರಿ. ಎಷ್ಟರ ಮಟ್ಟಿಗೆ ಈ ಬದುಕಿಗೆ ಒಗ್ಗಿರುತ್ತೇವೆ ಎಂದರೆ, ಆಗುತ್ತಿರುವ, ಆಗುವ ದೈಹಿಕ ಹಾಗು ಮಾನಸಿಕ ದಣಿವಿನ ಅರಿವೂ ಕೂಡ ನಮಗಾಗಿರುವುದಿಲ್ಲ.

ಒಂದು ವೇಳೆ ಆಗುತ್ತಿರುವ ದಣಿವು ಹಾಗು ಒತ್ತಡದ ಪರಿಸ್ಥಿತಿ ಅರಿವಾದಾಗ ನೀವು ಏನು ಮಾಡುತ್ತೀರಿ? ಆ ಪರಿಸ್ಥಿತಿ ಇಂದ ಹೊರ ಬರಲು ಏನು ಕ್ರಮ ತೆಗೆದುಕೊಳ್ಳುತ್ತೀರಿ? ಸಂಬಂಧಗಳ ಬಗ್ಗೆ ಭಯವೇ? ಪರಿಸ್ಥಿತಿ ಇಂದ ಹೊರ ಬರಲು ನಿಮ್ಮಲ್ಲಿ ಶಕ್ತಿ ಇದೆಯೇ? ಈ ಕಥೆ ಓದಿ...

Psychology: ಸುರಕ್ಷತೆಯ ಭಾವನೆ ಬಹಳ ವಿಚಿತ್ರವಾದುದು Psychology: ಸುರಕ್ಷತೆಯ ಭಾವನೆ ಬಹಳ ವಿಚಿತ್ರವಾದುದು

 ಬಾಣಲೆ ಇಂದ ಜಿಗಿಯುವ ಸಮಯ ಯಾವುದಯ್ಯ?

ಬಾಣಲೆ ಇಂದ ಜಿಗಿಯುವ ಸಮಯ ಯಾವುದಯ್ಯ?

ಸಣ್ಣ ಹುಡುಗನೊಬ್ಬ ಕೆರೆಯಲ್ಲಿದ್ದ ಕಪ್ಪೆಯೊಂದನ್ನು ತಂದು ನೀರಿದ್ದ ಅಗಲವಾದ ಬಾಣಲೆಯಲ್ಲಿ ಹಾಕಿದನು. ಕಪ್ಪೆಗೆ ತಣ್ಣನೆಯ ನೀರಿನಲ್ಲಿ ಈಜಲು ಹಿತವಾಗಿತ್ತು. ಕಪ್ಪೆಗೆ ಬಾಣಲೆ ನೀರಿನ ಬಗ್ಗೆ ಅರಿವಿರದೆ ಸಹಜವಾಗಿ ಹಾಯಾಗಿ ಈಜಾಡಿಕೊಂಡಿತ್ತು . ಸ್ವಲ್ಪ ಸಮಯದ ನಂತರ ಹುಡುಗನು ಒಲೆ ಹೊತ್ತಿಸಿದನು. ಬಾಣಲೆಯಲ್ಲಿನ ನೀರು ಕ್ರಮೇಣವಾಗಿ ಬೆಚ್ಚಗಾಯಿತು. ಆಗ ಕಪ್ಪೆ ತನ್ನ ತಾಪಮಾನವನ್ನು ಕ್ರಮೇಣ ನೀರಿಗೆ ಸರಿಹೊಂದಿಸುತ್ತದೆ. ಸಮಯ ಕಳೆದಂತೆ ನೀರು ಕುದಿಯುವ ಹಂತವನ್ನು ತಲುಪಿದಾಗ ಕಪ್ಪೆಗೆ ಇನ್ನು ಮುಂದೆ ತನ್ನ ತಾಪಮಾನವನ್ನು ಸರಿಹೊಂದಿಸಲು ಸಾಧ್ಯವಿಲ್ಲ ಎಂದು ಅರಿವಾಗಿ ಬಾಣಲೆ ಇಂದ ಹೊರಗೆ ಜಿಗಿಯಲು ಪ್ರಯತ್ನಿಸುತ್ತದೆ. ಆದರೆ ಆ ಹೊತ್ತಿಗೆ ಕಪ್ಪೆಯ ಬಲವು ಕ್ಷೀಣಿಸಿರುತ್ತದೆ. ಕಾರಣ ಕಪ್ಪೆಯು ತನ್ನೆಲ್ಲಾ ಶಕ್ತಿಯನ್ನು ನೀರಿನ ತಾಪಮಾನಕ್ಕೆ ಹೊಂದಿಕೊಳ್ಳುವಲ್ಲಿ ವ್ಯಯಿಸಿರುತ್ತದೆ. ಇದರ ಪರಿಣಾಮವಾಗಿ ಕಪ್ಪೆಯು ಬಾಣಲೆ ಇಂದ ಹೊರಬರಲಾಗದೆ ಬಾಣಲೆ ನೀರಿನಲ್ಲಿ ಕುದಿಯಬೇಕಾಗುತ್ತದೆ. ತನ್ನನ್ನು ತಾನು ರಕ್ಷಿಸಿಕೊಳ್ಳಲಾಗುವುದಿಲ್ಲ.

ಈ ಹಂತದಲ್ಲಿ ಮೂಡುವ ಪ್ರಶ್ನೆ ಅಂಶಗಳೆಂದರೆ1) ಕಪ್ಪೆಯ ಸಾವಿಗೆ ಕಾರಣವಾಗಿದ್ದು ಕುದಿಯುವ ಬಿಸಿ ನೀರು
ಅಥವಾ2) ಬಾಣಲೆ ನೀರಿನಿಂದ ಯಾವಾಗ ಹೊರ ಜಿಗಿಯಬೇಕು ಎಂದು ನಿರ್ಧರಿಸುವಲ್ಲಿ ಕಪ್ಪೆಯ ಅಸಮರ್ಥತೆ

ಹೀಗೊಮ್ಮೆ ಯೋಚಿಸೋಣ. ಒಂದು ವೇಳೆ ಹುಡುಗನು ಕಪ್ಪೆಯನ್ನು ಮೊದಲೇ ಕುದಿಯುತ್ತಿದ್ದ ನೀರಿಗೆ ಹಾಕಿದ್ದರೆ, ಕಪ್ಪೆಯು ತಕ್ಷಣವೇ ಬಾಣಲೆಯಿಂದ ಜಿಗಿಯುವ ಪ್ರಯತ್ನ ಮಾಡುತ್ತಿತ್ತು. ತನ್ನ ಎಲ್ಲಾ ಶಕ್ತಿ ಹಾಕಿ, ಬೇರೇನೂ ಯೋಚಿಸದೆ, ಹಿಂಜರಿಕೆ ಇಲ್ಲದೆ, ಬಾಣಲೆ ಇಂದ ಜಿಗಿದು ಹೊರ ಬಂದು ಬದುಕುಳಿದಿದ್ದರೆ ಆಶ್ಚರ್ಯವಿಲ್ಲ. ಬಾಣಲೆಇಂದ ಜಿಗಿಯುವಾಗ ನೀರಿನ ತಾಪಮಾನವಾಗಲೀ, ಯಾವಾಗ ಹೊರ ಜಿಗಿಯಬೇಕು ಎಂಬ ಸಮಯಕ್ಕಾಗಲೀ, ಈಗ ಜಿಗಿದರೆ ಸುರಕ್ಷಿತವಾಗಿರುತ್ತೇನೆ ಎಂಬ ಅಂಶವಾಗಲೀ, ಇದಾವುದನ್ನೂ ಪರಿಗಣಿಸಲಿಲ್ಲ.

 ನಮ್ಮಲ್ಲಿ ಹಲವಾರು ಮಂದಿ ಇಂತಹ ಸನ್ನಿವೇಶದಲ್ಲಿರಬಹುದು.

ನಮ್ಮಲ್ಲಿ ಹಲವಾರು ಮಂದಿ ಇಂತಹ ಸನ್ನಿವೇಶದಲ್ಲಿರಬಹುದು.

ಒಂದು ಹಂತದ ತನಕ ಮಾತ್ರ ಒತ್ತಡ, ನಿರಾಶೆ, ಆತಂಕ, ದೈಹಿಕ ಹಾಗು ಮಾನಸಿಕ ಹಿಂಸೆ, ನಿಂದನೆ, ಅಪಮಾನ, ಎದುರಿಸಬಹುದು ಹಾಗು ಅನುಭವಿಸಬಹುದು, ಸಂದರ್ಭಕ್ಕೆ ತಕ್ಕ ಹಾಗೆ ಹೊಂದಿಕೊಳ್ಳಬಹುದು. ಸವಾಲು ಎದುರಿಸಬಹುದು ಮತ್ತು ಅದು ಜೀವನದ ಒಂದು ಭಾಗ ಕೂಡ. ಇವು ನಮ್ಮನ್ನು ಗಟ್ಟಿಯಾಗಿ ಮಾಡುವುದಲ್ಲದೇ ಜೀವನಕ್ಕೆ ಅರ್ಥ ಕೊಡುತ್ತದೆ.‌ ಆದರೆ ಇದೇ ಅಭ್ಯಾಸವಾಗಿಬಿಟ್ಟರೆ, ಕಪ್ಪೆಯ ಪರಿಸ್ಥಿತಿ ನಮಗೂ ಒದಗಬಹುದು. ಸನ್ನಿವೇಶ ದೊಂದಿಗೆ ಹೊಂದಾಣಿಕೆ ಮಾಡುಕೊಳ್ಳುವಲ್ಲಿ, ಕಪ್ಪೆಗಳು ಮನುಷ್ಯರಿಗೆ ಹೋಲುತ್ತದೆ. ಒಮ್ಮೆ ಯೋಚಿಸಿ..

ಉದಾಹರಣೆಗೆ: ಸಹೋದ್ಯೋಗಿ ಹಾಗು ನೀವು ಒಬ್ಬ ಒಳ್ಳೆ ಸ್ನೇಹಿತ ಎಂದು ತಿಳಿಯುವ ವ್ಯಕ್ತಿ, ಕೆಲವು ಕಾರಣ ನಿಮಿತ್ತ ತನ್ನ ಫೈಲ್ ಒಂದರ ಮೇಲೆ ಕೆಲಸ ಮಾಡುವಂತೆ ಕೇಳಿಕೊಳ್ಳುತ್ತಾನೆ. ಸ್ನೇಹಿತ ಹಾಗು ಸಹಾಯ ಎಂಬ ಕಾರಣಕ್ಕೆ ನೀವೂ ಸಹ ಅವನ ಕೆಲಸ ಮಾಡುತ್ತೀರಿ. ಹೀಗೆ ಮುಂದಿನ ದಿನಗಳಲ್ಲೂ ಸಹ ಅನೇಕ ಸನ್ನಿವೇಶಗಳ ಕಾರಣ ನಿಮ್ಮ ಸ್ನೇಹಿತ ಸಹಾಯ ಮಾಡಲು ಕೇಳುತ್ತಾನೆ‌. ನೀವೂ ಸಹ ''ಇರಲಿ, ನಾ ಈ ಕೆಲಸ ನೋಡಿಕೊಳ್ಳುತ್ತೇನೆ'' ಎಂದು ಖುಷಿ ಇಂದಲೇ ಹೇಳುತ್ತೀರಿ. ಮೊದ ಮೊದಲು ಎಲ್ಲವೂ ಚೆನ್ನಾಗಿರುತ್ತದೆ. ಬರ ಬರುತ್ತಾ ಇದು ದಿನ ನಿತ್ಯದ ಸಹಜ ಕೆಲಸವೆಂಬಂತೆ ಆಗಿಬಿಡುತ್ತದೆ. ನಿಮಗೆ ನಿಮ್ಮ ಕೆಲಸದ ಜೊತೆ ಸ್ನೇಹಿತನ ಕೆಲಸವೂ ಸೇರಿ ಒತ್ತಡ ಹೆಚ್ಚಾಗುತ್ತದೆ. ಹೆಚ್ಚು ಗಂಟೆಗಳು ಆಫೀಸಿನಲ್ಲಿಯೇ ಕಳೆಯುವಂತಾಗುತ್ತದೆ. ಮನೆಗೆ ದಿನವೂ ತಡವಾಗಿ ಹೋಗಿ, ಮನೆಯ ವಾತಾವರಣದ ಮೇಲೂ ಪರಿಣಾಮ ಬೀರುತ್ತದೆ.

Psychology: ಆಲೋಚನೆ ನಿಗ್ರಹ, ದುರ್ಬಲ ಮನಸ್ಸು ಹತೋಟಿ ಹೇಗೆ?Psychology: ಆಲೋಚನೆ ನಿಗ್ರಹ, ದುರ್ಬಲ ಮನಸ್ಸು ಹತೋಟಿ ಹೇಗೆ?

 ಎಲ್ಲೆಡೆ ವಾತಾವರಣ ಕೂಡ ಹದಗೆಡುತ್ತದೆ

ಎಲ್ಲೆಡೆ ವಾತಾವರಣ ಕೂಡ ಹದಗೆಡುತ್ತದೆ

ಸ್ನೇಹಿತನೂ ಕೂಡ ತನ್ನನ್ನು ಬಹಳ ಲಘುವಾಗಿ ತೆಗೆದುಕೊಂಡಿದ್ದಾನೆ ಎಂಬಂತೆ ಭಾಸವಾಗಲು ಶುರುವಾಗುತ್ತದೆ. ಒಂದು ಕಡೆ ಹೆಚ್ಚಿದ ಕೆಲಸದ ಒತ್ತಡ, ಫೈಲ್ ನೋಡುವುದಿಲ್ಲಾ ಎಂದು ಒಮ್ಮೆಲೇ ಹೇಳಿದರೆ, ಸ್ನೇಹ ಕಳೆದುಕೊಳ್ಳುವ ಭಯ, ಇಷ್ಟೆಲ್ಲಾ ಮಾಡಿದರೂ ಸಹ ಸ್ನೇಹಿತ ಲಘುವಾಗಿ ನೋಡುತ್ತಾನೆ ಎಂಬ ದುಃಖ ಸಹ ಇದೆ, ಇದರಿಂದ ಮನೆಯವರ ಮೇಲೆ ಸಿಡಿಮಿಡಿಗೊಂಡು ಮನೆಯ ವಾತಾವರಣ ಕೂಡ ಹದಗೆಟ್ಟಿದೆ. ಇದೆಲ್ಲಾ ಅರಿವಾಗುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿದೆ. ಈ ಪರಿಸ್ಥಿತಿ ಇಂದ ಹೊರಬರುವುದಾದರೂ ಹೇಗೆ ಎಂಬ ಚಿಂತೆ ಕಾಡುತ್ತದೆ.

ಈ ಮೇಲಿನ ರೀತಿಯ ಬೇರೆ ಅನೇಕ ಪರಿಸ್ಥಿತಿಯನ್ನು ನೀವು ಅನುಭವಿಸಿರಬಹುದು. ಪರಿಸ್ಥಿತಿ ಕೈ ಮೀರಿ ಹೋಗುವ ಮೊದಲೇ ನಾವು ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತು. ಅನೇಕ ಬಾರಿ ಜನರು ಅರಿವಿಲ್ಲದೆ ಪ್ರಜ್ಞಾಪೂರ್ವಕವಾಗಿ ಇಂತಹ ಪರಿಸ್ಥಿತಿ ಸನ್ನಿವೇಶಗಳಿಗೆ ಹೊಂದಿಕೊಂಡುಬಿಟ್ಟಿರುತ್ತಾರೆ. ಹೆದರಿಕೆ, ಆತಂಕ, ಇಲ್ಲ ಎನ್ನಲಾಗದೆ ಹಾಗು ತಮ್ಮ ಆರಾಮ ವಲಯ( comfort zone) ಕೂಡ ಇದಕ್ಕೆ ಕಾರಣವಾಗುತ್ತದೆ.

 ಭಾವನೆಗಳಿಗೆ ಕಡಿವಾಣ ಹಾಕಿಕೊಳ್ಳುತ್ತೇವೆ

ಭಾವನೆಗಳಿಗೆ ಕಡಿವಾಣ ಹಾಕಿಕೊಳ್ಳುತ್ತೇವೆ

ಇದರ ಪರಿಣಾಮವಾಗಿ, ನಮ್ಮ ಬೇಕು ಬೇಡಗಳು, ಆಸೆಗಳು, ಭಾವನೆಗಳಿಗೆ ಕಡಿವಾಣ ಹಾಕಿಕೊಳ್ಳುತ್ತೇವೆ. ನಮಗೇ ನಾವು ಅಪರಿಚಿತರಾಗಿಬಿಡುತ್ತೇವೆ. ತಮ್ಮ ಬಗ್ಗೆ ಯೋಚಿಸುವುದು ಸ್ವಾರ್ಥ ಎಂಬ ತಪ್ಪು ಭಾವನೆ ಬೆಳೆಯುತ್ತದೆ. ಆದರೆ ತಮ್ಮ ಬೇಕು, ಬೇಡ, ಆಸೆಗಳ ಬಗ್ಗೆ ಯೋಚಿಸುವುದು ತಪ್ಪಲ್ಲ. ತಾವು ಸಂತೋಷವಾಗಿದ್ದರೆ ಇತರರೊಂದಿಗೆ ಆರೋಗ್ಯಕರವಾಗಿ ಇರಬಹುದು. ತಮ್ಮ ಶಕ್ತಿ ಸಾಮರ್ಥ್ಯ ವನ್ನು ಉತ್ಪಾದಕ ಕೆಲಸಕ್ಕಾಗಿ ಬಳಸಬಹುದು. ದೈಹಿಕ, ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ.

ಅನೇಕ ಬಾರಿ ವೈಯುಕ್ತಿಕ, ವೃತ್ತಿ ಹಾಗು ಸಾಮಾಜಿಕ ಬದುಕಲ್ಲಿ ಆಗುವ ಆಗುವ ದೈಹಿಕ, ಮಾನಸಿಕ , ಭಾವನಾತ್ಮಕ ಶೋಷಣೆಯನ್ನು ಸಹಿಸುತ್ತಾ ಹೋದರೆ ಪರೋಕ್ಷವಾಗಿ ಇತರರು ನಮ್ಮನ್ನು ಶೋಷಿಸಲು ನಾವೇ ಸಮ್ಮತಿ ನೀಡಿದಂತಾಗುತ್ತದೆ. ಅವರು ಶೋಷಣೆಯನ್ನು ಮುಂದುವರೆಸುತ್ತಾರೆ. ಅಂತಹ ಸಂದರ್ಭದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವಷ್ಟು ಸಿದ್ದರಿರಬೇಕು. ತಮ್ಮ ಮೇಲಿನ ಶೋಷಣೆಯನ್ನು ತಡೆಯುವುದು ಎಂದರೆ ನಮ್ಮನ್ನು ನಾವು ಗೌರವಿಸುವ ಮೊದಲ ಸೂಕ್ತ ಕ್ರಮ.

 ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು

ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು

ಹಾಗಾದರೆ ಅಸಹಾಯಕ ಪರಿಸ್ಥಿತಿ ತಲುಪದೆ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು ನೋಡೋಣ

1. ನಮ್ಮನ್ನು ನಾವು ಗೌರವಿಸೋಣ.
2. ಕೆಲವು ಸಂದರ್ಭಗಳು, ವಿಚಾರ ಇಷ್ಟವಾಗದಿದ್ದಲ್ಲಿ "ಇಲ್ಲ" ಅಥವಾ "ಸಾಕು" ಎಂದು ಹೇಳುವುದನ್ನು ಕಲಿಯೋಣ.
3. ಎಲ್ಲವೂ ಎಲ್ಲರಿಂದಲೂ ಸಾಧ್ಯವಿಲ್ಲ. ಅವರವರ ಸಾಮರ್ಥ್ಯ ಅಭಿರುಚಿಗೆ ತಕ್ಕಂತೆ ಕೆಲಸ ಮಾಡುವುದು ಉತ್ತಮ.
4. ಆದ್ದರಿಂದ ಕೀಳರಿಮೆ ಬೇಡ.
5. ಬೇರೆಯವರೊಂದಿಗೆ ಹೊಂದಾಣಿಕೆ ಬೇಡ.
6. ಜವಾಬ್ದಾರಿ ಹಂಚಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳೋಣ.
7. ದೈಹಿಕ ಹಾಗು ಮಾನಸಿಕ ವಿರಾಮ ಅಗತ್ಯ. ಇದರಿಂದ ಉತ್ತಮವಾಗಿ ಕೆಲಸ ಮಾಡುವ ಹಾಗು ಸಂಬಂಧಗಳನ್ನು ನಿಭಾಯಿಸಬಹುದು. ಸವಾಲುಗಳನ್ನು ಎದುರಿಸಬಹುದು.
8. ತನ್ನ ಇಷ್ಟದ ವಿರುದ್ದದ ಸನ್ನಿವೇಶಗಳಿಗೆ ಹೊಂದಿಕೊಂಡು, ಒತ್ತಡ ಹೆಚ್ಚಿಸಿಕೊಳ್ಳುವ ಮೊದಲು ಯೋಚಿಸಿ.
9. ನೀವು ಇಷ್ಟ ಪಡುವ ಹಾಗು ನಿಮ್ಮನ್ನು ಇಷ್ಟ ಪಡುವವರ ಹತ್ತಿರ ನಿಮ್ಮ ಆಸೆ, ಆಕಾಂಕ್ಷೆ, ಅನಿಸಿಕೆ ಹಾಗು ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.
10. ಇದರಿಂದ ಭಾವನಾತ್ಮಕ ಯೋಗಕ್ಷೇಮ ಸುಧಾರಿಸುತ್ತದೆ.
11. ಆತ್ಮವಿಶ್ವಾಸ ಹೆಚ್ಚುತ್ತದೆ.
12. ಅಗತ್ಯವಿದ್ದಲ್ಲಿ ಮಾನಸಿಕ ತಜ್ಞರ ಸಹಾಯ ಪಡೆಯಿರಿ.

ಕುದಿಯುವ ನೀರಿನ ಕಪ್ಪೆಯಂತೆ ನಾವು ಆಗಬಾರದು. ಆರಾಮ ವಲಯದಿಂದ ಹೊರ ಬರೋಣ, ಯಾವುದೇ ನಿರ್ಲಕ್ಷ್ಯ ಬೇಡ. ನಮ್ಮ ವೃತ್ತಿ ಹಾಗು ವೈಯುಕ್ತಿಕ ಜೀವನ, ಆರೋಗ್ಯ, ಸ್ನೇಹ, ಪ್ರೀತಿ, ಸಂಬಂಧಗಳ ಬಗ್ಗೆ ಗಮನ ಹರಿಸೋಣ. ಕಾಲ ಕಾಲಕ್ಕೆ ಮಾಡಬೇಕಾದ ಬದಲಾವಣೆಗಳಿಗೆ ಸಿದ್ದರಾಗೋಣ. ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುವುದು ಒಳಿತು. ಎಚ್ಚರವಾಗಿದ್ದು ಸಂದರ್ಭಗಳನ್ನು ಅರಿತು ಶಕ್ತಿ ಇರುವಾಗಲೇ ಜಿಗಿಯೋಣ. ಮಾದರಿಯಾಗೋಣ.

English summary
What is Boiling Frog Syndrome? How to come out of Comfort zone? Read on article by Art Therapist Rekha Belvadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X