ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ಧರ್ಮ – ದರ್ಪ ಮತ್ತು ರಾಜಕೀಯ ಮಾನಸಿಕತೆ

By ಡಾ. ಎ. ಶ್ರೀಧರ, ಮನೋವಿಜ್ಞಾನಿ
|
Google Oneindia Kannada News

ಕುರು ವಂಶದ ಎರಡು ರಾಜಕುಟುಂಬಗಳ ನಡುವೆ ಹಸ್ತಿನಾಪುರದ ಆಳ್ವಿಕೆಯ ವಿಷಯವಾಗಿ ಹುಟ್ಟಿದ ಮನಸ್ತಾಪವು ಗಾಢವಾದ ಹಗೆತನದ ರೂಪತಾಳಿ ಘೋರ ಯುದ್ಧವಾಗಿ ಪರಿಣಮಿಸಿತು. ಇದೇನೋ ಕಥಾ ಸ್ವರೂಪದಲ್ಲಿ ಜನಪ್ರಿಯಗೊಂಡಿದ್ದರೂ ಮನುಷ್ಯ ಮನಸಿನ ನಿಗೂಢತೆಯ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಮನುಷ್ಯರ ಹಂಬಲಕ್ಕೆ ಎಲ್ಲೆಗಳೇ ಇರದು ಎನ್ನುವುದನ್ನು ಎಳೆಎಳೆಯಾಗಿ ಬಿಡಿಸಿ ತಿಳಿಸಿಕೊಡುವುದರೊಂದಿಗೆ ಧರ್ಮ, ಕರ್ಮ, ದರ್ಪಗಳಂತಹ ಅತಿ ಸೂಕ್ಷ್ಮ ಮಾನಸಿಕ ಸ್ಥಿತಿಗಳ ಸರ್ವಕಾಲಿಕ ಮಹತ್ವವೇನೆಂಬುದನ್ನು ಬಯಲಿಗೆಳೆಯುವುದರಲ್ಲೂ ಯಶಸ್ವಿಯಾಗಿದೆ. ಮೇಧಾವಿ ಆಚಾರ್ಯರುಗಳಿಂದ ಧೀರ್ಘಕಾಲದ ವಿದ್ಯಾಭ್ಯಾಸ ಪಡೆದವರುಗಳೂ ಸಹ ಭಾವೋದ್ವೇಗಕ್ಕೆ ಗುರಿಯಾಗುವ ಪ್ರಸಂಗಗಳಲ್ಲಿ ಹೇರಳ. ಧರ್ಮಶಾಸ್ತ್ರ, ಶಸ್ತ್ರಶಾಸ್ತ್ರಗಳನ್ನು ಶಿಸ್ತು, ಶ್ರದ್ಧೆಯಿಂದ ಕಲಿತು ಪಾರಂಗತರಾಗಿದ್ದರೂ ಅಸೂಯೆ, ಅಸಹನೆ, ಅನಾಚಾರದ ಮಾನಸಿಕತೆಯನ್ನು ತಪ್ಪಿಸಿಕೊಳ್ಳಲಾಗಿಲ್ಲವೆನ್ನುವುದನ್ನು ಅವರ ದಿನನಿತ್ಯದ ನಡೆನುಡಿಗಳು ಎತ್ತಿ ತೋರಿಸುತ್ತವೆ.

ಧರ್ಮರಾಯನ ಪಗಡೆಯಾಟದಲ್ಲಿನ ಆಸಕ್ತಿಯು ಸೋತು ಗೆಲ್ಲುವ ರೀತಿ ಎನ್ನುವ ಹಾಗೇ ತೋರಿಬರುತ್ತದೆ. ಧರ್ಮದ ಮನೋಭಿವೃತ್ತಿಯು ದರ್ಪದ ಮನೋಭಿವೃತ್ತಿಗೆ ಶರಣಾದಂತೆ ಕಂಡುಬರುತ್ತದೆ ಈ ಜೂಜಾಟದ ಪ್ರಸಂಗ. ಧರ್ಮರಾಯನ ಮನೋಧರ್ಮ ಯಾವುದು ಎನ್ನುವ ಪ್ರಶ್ನೆಗೆ ಉತ್ತರಗಳು ಹಲವಾರು. ಮುಖ್ಯವಾಗಿ ಸಂಯಮ, ವಿಚಾರ ಮಾಡುವ ಬಲ ಮತ್ತು ಸಮಾನತೆಯನ್ನು ಸದಾ ಆಚರಿಸಬೇಕೆಂಬ ಮನಸು. ಪ್ರಜೆಗಳು ತಮ್ಮ ರಾಜನಲ್ಲಿ ಸದಾ ಬಯಸುವಂತಹ ಗುಣಗಳಿವು. ಇಂದಿನ ಪರಿಸ್ಥಿತಿಯಲ್ಲಿಯೂ ಕೂಡ ಈ ಗುಣಗಳು ಇರುವವರೇ ಮುಂದಾಳುತನ ವಹಿಸಿಕೊಳ್ಳಬೇಕೆಂಬುದು ಜನಮಾನಸದಿಂದ ಕಳಚಿ ಹೋಗಿಲ್ಲ.

ಸೈಕಾಲಜಿ ವಿಶ್ಲೇಷಣೆ: ದುರ್ಯೋಧನ ಕೆಟ್ಟವನಾದದ್ದು ಹೇಗೆ? ಏಕೆ?ಸೈಕಾಲಜಿ ವಿಶ್ಲೇಷಣೆ: ದುರ್ಯೋಧನ ಕೆಟ್ಟವನಾದದ್ದು ಹೇಗೆ? ಏಕೆ?

 ಸಹಜವಾಗಿ ಗ್ರಹಿಸಬಲ್ಲ ಮನೋಭಾವ

ಸಹಜವಾಗಿ ಗ್ರಹಿಸಬಲ್ಲ ಮನೋಭಾವ

ಧರ್ಮವೆಂಬುದು ವ್ಯಕ್ತಿಯಲ್ಲಿ ಸದಾ ಇರಬೇಕಾದ ಮನೋಭಿವೃತ್ತಿ. ಆದರಲ್ಲಿಯೂ ವಿಶೇಷವಾಗಿ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗವಹಿಸುವವರಲ್ಲಿ, ಅಥವಾ ಭಾಗವಹಿಸಬೇಕೆಂಬ ಹಂಬಲ ಇರುವವರಲ್ಲಿ ಹೆಚ್ಚಾಗಿಯೇ ಇರಬೇಕು. ಇವುಗಳಿಗೆ ಅಡಿಪಾಯವಾಗಿರುವಂತಹ ಒಂದು ಪ್ರಬಲ ಲಕ್ಷಣವೆಂದರೇ ಸಂಯಮ, ಸ್ವಾನುಕಂಪ- ಇನ್ನೊಬ್ಬರ ನೋವು, ಸಂತಸಗಳನ್ನು ಸಹಜವಾಗಿ ಗ್ರಹಿಸಬಲ್ಲ ಮನೋಭಾವ. ಇಂತಹ ಲಕ್ಷಣಗಳು ವ್ಯಕ್ತಿತ್ವದ ಸೂಚಿಯಾಗಿದ್ದಾಗ ಮಾನವೀಯತೆಯ ಭಾವಗಳು ಸದಾ ಜಾಗೃತವಾಗಿಯೇ ಇರುತ್ತವೆ.

 ದರ್ಪದ ಹಿಡಿತದಲ್ಲಿ ರಾಜಕೀಯ ಧರ್ಮ

ದರ್ಪದ ಹಿಡಿತದಲ್ಲಿ ರಾಜಕೀಯ ಧರ್ಮ

ಸದ್ಯದ ರಾಜಕೀಯ ವಾತಾವರಣದಲ್ಲಿ ಧರ್ಮದ ಕಡೆ ವಾಲುವ ಅಭಿಮಾನಕ್ಕಿಂತಲೂ ದರ್ಪದತ್ತ ಹರಿಯು ಅಭಿಮಾನವೇ ಮುನ್ನೆಲೆಯಲ್ಲಿರುತ್ತದೆ. ಜನತೆಯಲ್ಲಿಯೂ ಸಹ ಇಂತಹದೊಂದು ಮನೋಭಾವಕ್ಕೆ ಹೆಚ್ಚು ಉತ್ತೇಜನ ಸಿಗುತ್ತದೆ ಎನ್ನುವುದಕ್ಕೆ ನಮ್ಮ ಚುನಾವಣಾ ಫಲಿತಾಂಶಗಳೇ ಸಾಕ್ಷಿ. ಜನತೆಯು ತಮ್ಮ ದಿನನಿತ್ಯದ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸುವುದನ್ನು ಬಯಸುವುದಕ್ಕಿಂತಲೂ ಧರ್ಮಸ್ವರೂಪಿ ಹಿತವನ್ನು ಬಯಸುತ್ತಾರೆ. ಇಂತಹ ಮನೋಹಿತವನ್ನು ಒದಗಿಸುವುದೇನು ಕಷ್ಟಕರವಲ್ಲ. ಇತರರನ್ನು ಜರಿಯುವ ದರ್ಪದ ನಡೆನುಡಿಗಳ ಮೂಲಕ ಜನಾನುರಾಗ ಪಡೆಯುವುದು ಬಹಳ ಸುಲಭ ಎನ್ನುವುದರ ನಿದರ್ಶನಗಳು ಸಾಕಷ್ಟು ಸಿಗುತ್ತವೆ.

ಆದುದರಿಂದಲೇ ಇಂದಿನ ನಾಯಕರುಗಳಲ್ಲಿ ಪ್ರಕ್ಷುಬ್ದತೆಯನ್ನು ಉಂಟುಮಾಡುವಂತಹ ಮಾನಸಿಕ ಸ್ಥಿತಿಯು ಸದಾ ಜಾಗೃತವಾಗಿರುವುದು. ಮಿತಿಮೀರಿದ ಭಾವನಾತ್ಮಕ ಮಾನಸಿಕತೆಯನ್ನು ಪ್ರದರ್ಶಿಸುವವರು ಅತಿ ಕ್ಷಿಪ್ರವಾಗಿ ಮುಂದಾಳತ್ವದ ಮುಂಚೂಣಿಯಲಿ ಕಾಣಿಸಿಕೊಳ್ಳುತ್ತಾರೆ. ರಾಜಕೀಯ ಸ್ವರೂಪದ ತಾತ್ವಿಕತೆಯಿಂದಲೇ ಮೂಡುವ ಅಭಿಪ್ರಾಯಗಳಿಂದು ಆಕ್ರೋಶ, ಆವೇಶಗಳು ತುಂಬಿದ ನಡೆ-ನುಡಿಗಳ ಮೂಲಕ ವ್ಯಕ್ತಗೊಳ್ಳುತ್ತಿವೆ.

ರಾಜಕೀಯ ವಿರೋಧಿಗಳನ್ನು ದ್ರೋಹಿಗಳು, ವಿಧ್ವಂಸಕರು ಎನ್ನುವ ದರ್ಪ ತುಂಬಿದ ನಿಲುವೇ ವಿಶ್ವವ್ಯಾಪಕವಾಗಿರುವಂತೆ ಕಂಡುಬರುತ್ತಿದೆ. ಜನರ ಸಮಾಧಾನ ಉಳಿಸಬಲ್ಲ ದರ್ಮದ ಭಾವನೆಗಳು ಹೇಗೋ ಏನೋ ಬದಲಾಗುತ್ತಿವೆ. ಬಹುಶಃ, ಜನನಾಯಕರ ದರ್ಪದ ನಡೆನುಡಿಗಳು ಜನಮನಸಿನಲ್ಲಿ ಹೆಚ್ಚು ವಿಶ್ವಾಸ ಮೂಡಿಸುತ್ತಿರಲೂಬಹುದು. ನಶೆ ಏರಿಸುವ ಪದಾರ್ಥಗಳಾದ ತಂಬಾಕು, ಅಫೀಮು, ಟೀ, ವಿಸ್ಕಿಗಳು ಎರಿಸುವಂತಹ ಮಾದಕ ಶಕ್ತಿಯು ದರ್ಪದ ಮಾತುಗಳಲ್ಲಿಯೂ ನುಸುಳಿರಬಹುದೆ?

ನತದೃಷ್ಟ ನಾಯಕನ ಉಭಯ ಕುಶಲೋಪರಿನತದೃಷ್ಟ ನಾಯಕನ ಉಭಯ ಕುಶಲೋಪರಿ

 ದರ್ಪ ಬಯಸುವ ಮನಸು

ದರ್ಪ ಬಯಸುವ ಮನಸು

ಇಂದಿನ ಕಾಲಘಟ್ಟದಲ್ಲಿ ಯಾವುದೇ ರೀತಿಯ ರಾಜಕೀಯ ಭಿನ್ನಾಭಿಪ್ರಾಯವು ಹಗೆತನಕ್ಕೆ ಆಹ್ವಾನ ಎನ್ನುವಂತಾಗಿದೆ. ಇಂತಹದೊಂದು ಮಾನಸಿಕತೆಗೂ ಹದಿಹರೆಯದ ಮಾನಸಿಕ ವಿಕಾಸದ ಸ್ಥಿತಿಗೂ ಹತ್ತಿರದ ನೆಂಟು. ಹದಿಹರೆಯವು ಜಾರಿ ವಯಸ್ಕತನದತ್ತ ಸಾಗುವ ಸಮಯದಲ್ಲಿ ವ್ಯಕ್ತಿತ್ವವು ವಿಚಾರ, ವಿಮರ್ಶೆಯನ್ನು ಪ್ರಧಾನವಾಗಿಸಿಕೊಂಡಿರುವ ಬೆಳವಣಿಗೆಯ ಸ್ಥಿತಿಯಾಗಿರುತ್ತದೆ. ಹೊಸ ಅಭಿಪ್ರಾಯಗಳನ್ನು ಸ್ವಾಗತಿಸುವ ಮನಸ್ಥಿತಿಯೊಂದಿಗೆ ಭಿನ್ನಾಭಿಪ್ರಾಯವನ್ನು ಸ್ವೀಕರಿಸುವ ಮನೋಭಾವವೂ ಗಟ್ಟಿಗೊಳ್ಳುವ ಪ್ರಯತ್ನ ಹೆಚ್ಚಾಗಿಯೇ ಇರುತ್ತದೆ. ಮುಂದಾಳುತನದ ಮಾನಸಿಕ ಲಕ್ಷಣಗಳು ಮೊಳಕೆಯೊಡೆಯುವುದಕ್ಕೆ ರಾಜಕಾರಣ ಅತ್ಯಂತ ಫಲವತ್ತತೆಯ ಕ್ಷೇತ್ರ. ಆಗಿಂದ್ದಾಗ್ಗೆ ಬದಲಾಗುವ ಜನಮಾನಸದ ನಿರೀಕ್ಷೆ, ನಿಲುವುಗಳನ್ನು ಗ್ರಹಿಸಬಲ್ಲ ಅಂತರ್ದೃಷ್ಟಿ ಇರುವವರನ್ನು ಕೈಬೀಸಿ ಕರೆಯುವ ಕ್ಷೇತ್ರವಿದು. ಉತ್ತಮ ಮುಂದಾಳತ್ವದ ಲಕ್ಷಣಗಳನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಹಂಬಲವನ್ನೂ ಉತ್ತೇಜಿಸುವ ವಲಯ ರಾಜಕಾರಣ.

ತಮ್ಮ ಸುತ್ತಮುತ್ತಾದ ಸಮಾಜವನ್ನು ಸ್ಪಷ್ಟವಾಗಿ, ಸರಾಗವಾಗಿ ಗ್ರಹಿಸಬಲ್ಲ ಪೂರ್ವ್ರಗ್ರಹ ರಹಿತ ವ್ಯಕ್ತಿತ್ವ ಇರುವವರನೇಕರು, ಈ ಕ್ಷೇತ್ರದ ಪಾವಿತ್ರ್ಯವನ್ನು ರಕ್ಷಿಸುವ ಸಲುವಾಗಿಯೇ, ಪ್ರವೇಶಿಸುತ್ತಾರೆ. ಆದರಿಂದು ಇಂತಹ ಗುಣಗಳಿರುವವರಿಗೆ ಪ್ರವೇಶ ಸಿಗದಂತಹ ವಾತಾವರಣ ಮೂಡಿದೆ. ಇತರರ ಬಗ್ಗೆ ದುರಾಭಿಮಾನ, ಭಿನ್ನಾಭಿಪ್ರಾಯವನ್ನು ಸಹಿಸಲಾಗದ ಮಾನಸಿಕ ದುರ್ಬಲತೆಯನ್ನು ಪ್ರಚೋದಿಸುವಂತಹ ಕ್ಷೇತ್ರ ರಾಜಕಾರಣವಾಗುತ್ತಿದೆ. ಇದರ ಪರಿಣಾಮವೇ ದರ್ಪದ ಮನೋಸ್ಥಿತಿಯ ನಿರ್ಮಾಣಕ್ಕೂ ಕಾರಣ. ಇದನ್ನೇ ಇಂದಿನ ಪೀಳಿಗೆಯು ಅನುಕರಿಸುವ ವಾತಾವರಣ ಸೃಷ್ಟಿಯಾಗುತ್ತಿರುವಂತೆ ಕಂಡುಬರುತ್ತಿದೆ.

 ಭಿನ್ನಾಭಿಪ್ರಾಯ ಬಯಸದು, ದರ್ಪ

ಭಿನ್ನಾಭಿಪ್ರಾಯ ಬಯಸದು, ದರ್ಪ

ಇತರರ ಅಭಿಪ್ರಾಯಗಳನ್ನು ಅನುಮೋದಿಸುವುದು, ಅನುಮೋದಿಸದಿರುವುದು ಸಾಮಾನ್ಯಮಟ್ಟದ ಬುದ್ಧಿಶಕ್ತಿ ಇರುವವರೆಲ್ಲರಲ್ಲಿಯೂ ಕಂಡುಬರುವ ಲಕ್ಷಣ. ಅತಿ ಸಣ್ಣ ವಯಸ್ಸಿನಿಂದಲೇ ಕಾಣಿಸಿಕೊಳ್ಳುವಂತಹ ಮಾನಸಿಕತೆ. ಇಂತಹದೊಂದು ಗುಣವಿರುವುದರಿಂದಲೇ ಮನೋವಿಕಾಸ, ವ್ಯಕ್ತಿತ್ವ ವಿಕಸನವಾಗುವುದು. ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಈ ಮಾದರಿಯ ಸಹಜ ಮನೋಧರ್ಮಕ್ಕೆ ಸಿಗುತ್ತಿರುವ ಬೆಂಬಲ ಕ್ಷೀಣವಾಗಿದೆ.

ಹತ್ತಾರು ವರ್ಷಗಳ ಕಾಲ ಸಹಚರರಾಗಿದ್ದವರು ಯಾವುದೋ ವಿಚಾರದ ಬಗ್ಗೆ ಹೊಸ ಭಾವನೆ, ನಂಬಿಕೆಯನ್ನು ರೂಢಿಸಿಕೊಂಡು ಹಿಂದಿನ ಸಂಬಂಧಗಳನ್ನು ವ್ಯಘ್ರವಾಗಿ ನೋಡುವುದು, ಮನಸಿನಲ್ಲಿ ಬಲವಾಗಿ ಕೂರಿರುವಂತಹ ಅಭಿಪ್ರಾಯ ನಿಲುವುಗಳನ್ನು ಬದಲಾಯಿಸಿಕೊಳ್ಳಲಾಗದಿರುವುದಕ್ಕೂ ಮಿದುಳಿನ ಕಾರ್ಯರೀತಿಯೂ ಕಾರಣ ಇರಬಲ್ಲದು ಎನ್ನುತ್ತವೆ ನರಮನೋವಿಜ್ಞಾನದ ಅಧ್ಯಯನಗಳು. ನರಮಂಡಲದ ನರಕೋಶಗಳಲ್ಲಿ ಸರಿಯೋ, ಸರಿಯಲ್ಲವೋ ಅಭಿಪ್ರಾಯವೊಂದು ಊರಿಕೊಂಡಿದ್ದ ಮೇಲೆ ಅದನ್ನು ಅಲ್ಲಾಡಿಸುವುದು ಅಷ್ಟೇನು ಸುಲಭವಲ್ಲ. ಸೌಜನ್ಯದ ಭಾವಗಳನ್ನು ಗುರುತಿಸಿ ಸ್ವೀಕರಿಸುವ ಉದಾತ್ತ ಅನುಕರಣೆಯ ಬದಲಿಗೆ ದರ್ಪಪ್ರವೃತ್ತಿಯೇ ಹೆಚ್ಚು ಆಕರ್ಷಕವಾದ ಪಕ್ಷದಲ್ಲಿ ವಿಚಾರದ ಬಲ ಕುಸಿದ ವಿಕಾರದ ಬಲ ಹೆಚ್ಚುತ್ತದೆ.

English summary
Neuropsychological studies have shown that those who have been companions for decades may be responsible for a new feeling about something, forming a belief, viewing past relationships, and not being able to change mind-set and posture. Here is article on Religion - hauteur and Political Psychology by Dr A Sridhara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X