ಗುರುದೇವ್ ಶ್ರೀ ಶ್ರೀ ರವಿಶಂಕರ್ ರವರು ಹೊಸ ಲಾಂಛನವನ್ನು ಅನಾವರಣಗೊಳಿಸಿದ್ದಾರೆ
ಬೆಂಗಳೂರು, ಮೇ 14: ಕೂ ತನ್ನ ಹೊಸ ಲಾಂಛನವನ್ನು ಅನಾವರಣಗೊಳಿಸಿದೆ. ಹೊಸ ಲಾಂಛನ ಹಳದಿ ಹಕ್ಕಿಯ ಮುಂದುವರಿಕೆಯಾಗಿದ್ದು ಹೊಸ ರೂಪದಲ್ಲಿ ಅನಾವರಣಗೊಂಡಿದೆ, ಈ ಹೊಸ ಲಾಂಛನವನ್ನು ಶ್ರೀ ಶ್ರೀ ರವಿಶಂಕರ್ ರವರ 65 ನೇ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಅನಾವರಣಗೊಳಿಸಲಾಯಿತು.
ಕೂ ಭಾರತೀಯ ಮೈಕ್ರೋ ಬ್ಲಾಗ್ ವೇದಿಕೆಯಾಗಿದ್ದು, ವಿವಿಧ ಭಾರತೀಯ ಭಾಷೆಗಳಲ್ಲಿ ಜನರ ಮುಕ್ತ ಅಭಿವ್ಯಕ್ತಿಗೆ ಅನುವು ಮಾಡಿಕೊಡುತ್ತದೆ. ಇದು ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡುತ್ತಿದ್ದು, ಇಲ್ಲಿ ಭಾರತದ 90% ಜನರು ಯಾವುದೇ ಅಡೆತಡೆಗಳಿಲ್ಲದಂತೆ ಸುಲಭವಾಗಿ ತಮ್ಮ ಮನದಾಳವನ್ನು ವ್ಯಕ್ತಪಡಿಸಬಹುದಾಗಿದೆ. ಈ ಅಪ್ಲಿಕೇಶನನ್ನು ಮಾರ್ಚ್ 2020 ರಲ್ಲಿ ಪ್ರಾರಂಭಿಸಲಾಯಿತು ಅಂದಿನಿಂದ ಇಂದಿನ ವರೆಗೆ ಕೂ ವೇದಿಕೆ 6 ಮಿಲಿಯನ್ ಬಳಕೆದಾರರನ್ನು ಗಳಿಸಿದೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು ಮಾತನಾಡಿ, "ಸಾಮಾಜಿಕ ಸಂಪರ್ಕ ಮತ್ತು ಮಾಹಿತಿಯ ಹರಿವು ಸುಸಂಸ್ಕೃತ ಸಮಾಜದ ಚಿಹ್ನೆಗಳಲ್ಲಿ ಒಂದಾಗಿದೆ. ಕೂ ಆ್ಯಪ್ ದೇಶ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಸಂಪರ್ಕ ಕಲ್ಪಿಸುತ್ತಿದೆ, ಕೂ ಅಪ್ಲಿಕೇಶನ್‌ನ ಹೊಸ ಲಾಂಛನವನ್ನು ಪ್ರಾರಂಭಿಸಲು ನನಗೆ ಸಂತೋಷವಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಇಂತಹ ಅದ್ಭುತ ಸಾಮಾಜಿಕ ಜಾಲತಾಣ ಅಪ್ಲಿಕೇಶನ್‌ನೊಂದಿಗೆ ಬಂದಿರುವುದಕ್ಕಾಗಿ, ಅಪ್ರಮೇಯ ಮತ್ತು ಅವರ ತಂಡಕ್ಕೆ ನನ್ನ ಅಭಿನಂದನೆಗಳು. "

ಕೂ ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರು ಮಾತನಾಡಿ, "ನಮ್ಮ ಹೊಸ ಲಾಂಛನವನ್ನು ಅನಾವರಣಗೊಳಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಈ ಹೊಸ ನೋಟ ಅಂಬೆಗಾಲಿಡುತ್ತಿದ್ದ ನಮ್ಮ ಪುಟ್ಟ ಹಳದಿ ಹಕ್ಕಿ ಬೆಳೆದು ತಾರುಣ್ಯದೆಡೆಗೆ ಹೆಜ್ಜೆ ಹಾಕುತ್ತಿರುವ ಗುರುತಾಗಿದೆ. ನಮ್ಮ ಈ ಲಾಂಛನ ಜನರನ್ನು ಜೀವನದ ವಿವಿಧ ಆಯಾಮಗಳ ಬಗ್ಗೆ ಅತ್ಯಂತ ಸಕಾರಾತ್ಮಕ ರೀತಿಯಲ್ಲಿ ಮಾತನಾಡಲು ಪ್ರೇರೇಪಿಸುತ್ತದೆ. ಈ ಪುಟ್ಟ ಹಕ್ಕಿ ಹಾರಲು ಸಿದ್ಧವಾಗಿದೆ. ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರು ತಮ್ಮ 65 ನೇ ಹುಟ್ಟುಹಬ್ಬದ ಶುಭ ದಿನದಂದು ನಮ್ಮ ಹೊಸ ಲಾಂಛನವನ್ನು ಉದ್ಘಾಟಿಸಿದ್ದಕ್ಕಾಗಿ ನಾವು ಆಭಾರಿಯಾಗಿದ್ದೇವೆ."
ಕೂ ಸಹ ಸಂಸ್ಥಾಪಕ ಮಯಾಂಕ್ ಬಿಡಾವತ್ಕಾ ಅವರು ಮಾತನಾಡಿ, "ಬಳಕೆದಾರರು ನಮ್ಮ ಹೊಸ ಲಾಂಛನವನ್ನು ನಿಜಕ್ಕೂ ಇಷ್ಟಪಡುತ್ತಿದ್ದಾರೆ. ಈ ಹಳದಿ ಹಕ್ಕಿ ಎಲ್ಲರಿಗೂ ಪ್ರೀತಿಪಾತ್ರವಾಗಿದ್ದು ನಮ್ಮ ವೇದಿಕೆಯ ಪ್ರಮುಖ ಧನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ. ಜನರು ವಿವಿಧ ವಿಷಯಗಳನ್ನು ಚರ್ಚಿಸಲು ಮತ್ತು ಪರಸ್ಪರರ ಶ್ರೇಯಾಭಿವೃದ್ಧಿಗಾಗಿ ಶ್ರಮಿಸಲು ನಾವು ಕೂವನ್ನು ರಚಿಸಿದ್ದೇವೆ. ಜನರ ಜೀವನ ಮೌಲ್ಯವನ್ನು ಸುಧಾರಿಸುವ ಯಾವುದನ್ನಾದರೂ ಜನರು ಸ್ವೀಕರಿಸಲು ಬಯಸುತ್ತಾರೆ. ನಮ್ಮ ಹೊಸ ಹಕ್ಕಿ ಈ ವೇದಿಕೆಯು ಜನರ ಜೀವನಕ್ಕೆ ತರುವಂತಹ ಸಕಾರಾತ್ಮಕತೆಯ ಸಂಕೇತವಾಗಿದೆ. ಪರಸ್ಪರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ವಿಷಯಗಳನ್ನು ಹುಡುಕಲು ಲಕ್ಷಾಂತರ ಬಳಕೆದಾರರು ಕೂ ಬಳಸುತ್ತಾರೆ. ಪುಟ್ಟ ಹಳದಿ ಹಕ್ಕಿ ಈಗ ಒಂದು ಶತಕೋಟಿ ಭಾರತೀಯರಿಗೆ ಸಂದೇಶವಾಹಕನಾಗಲು ಸಿದ್ಧವಾಗಿದೆ! "
Recommended Video
ಕೂ ಬಗ್ಗೆ: ಕೂ ಮಾರ್ಚ್ 2020 ರಲ್ಲಿ ಭಾರತೀಯ ಭಾಷೆಗಳನ್ನೊಳಗೊಂಡ ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿ ಸ್ಥಾಪಿತವಾಯಿತು, ಇಲ್ಲಿ ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿಯೇ ತಮ್ಮ ಮನದಾಳವನ್ನು ವ್ಯಕ್ತಪಡಿಸಿಕೊಳ್ಳಬಹುದು. ಕೇವಲ 10% ಜನರು ಇಂಗ್ಲಿಷ್ ಮಾತನಾಡುವ ಭಾರತ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ಮನಮುಟ್ಟುವಂತೆ ಭಾಷಾ ಅನುಭವಗಳನ್ನು ತಲುಪಿಸಬಲ್ಲ ಮತ್ತು ಪರಸ್ಪರ ಸಂಪರ್ಕ ಸಾಧಿಸಲು ಸಹಾಯ ಮಾಡುವ ಸಾಮಾಜಿಕ ಜಾಲತಾಣ ವೇದಿಕೆ ಅತ್ಯವಶ್ಯವಾಗಿದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ ಕೂ ಒಂದು ವೇದಿಕೆಯನ್ನು ಒದಗಿಸುತ್ತದೆ.(ಪ್ರತಿಕಾ ಪ್ರಕಟಣೆ)












Click it and Unblock the Notifications