ಮಹಾರಾಷ್ಟ್ರದಲ್ಲಿ ₹6 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡುವುದಾಗಿ ಪ್ರಣವ್ ಅದಾನಿ ಘೋಷಣೆ

ಮಹಾರಾಷ್ಟ್ರದಲ್ಲಿ ಅದಾನಿ ಹೂಡಿಕೆ ಪ್ರಮಾಣದಲ್ಲಿ ಭಾರಿ ಏರಿಕೆಯಾಗಲಿದ್ದು, ಅದಾನಿ ಸಮೂಹವು ರಾಜ್ಯದಲ್ಲಿ 6 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಅದಾನಿ ಗ್ರೂಪ್‌ನ ಪ್ರಣವ್ ಅದಾನಿ ಘೋಷಿಸಿದ್ದಾರೆ.

ಗುರುವಾರ ಮುಂಬೈನಲ್ಲಿ ನಡೆದ ಇನ್ವೆಸ್ಟ್ ಮಹಾರಾಷ್ಟ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ 2.6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಲ್ಲಿ ಕೆಲವು ಪೂರ್ಣಗೊಂಡಿವೆ. ಹಾಗೆ ಇನ್ನೊಂದಿಷ್ಟು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.

Pranav Adani Commits Over Rs 6 Lakh Crore To Maharashtra At The Invest Maharashtra Launch Event

ಈ ಕಾರ್ಯಕ್ರಮವು ಮಹಾರಾಷ್ಟ್ರ ರಾಜ್ಯದ ನೋಡಲ್ ಹೂಡಿಕೆ ಉತ್ತೇಜನಾ ಸಂಸ್ಥೆಯ ಅಧಿಕೃತ ಉದ್ಘಾಟನೆಗೆ ಸಾಕ್ಷಿಯಾಯಿತು. ಈ ಸಂಸ್ಥೆಯನ್ನ "ವಿಕಸಿತ ಮಹಾರಾಷ್ಟ್ರದ ದೃಷ್ಟಿಕೋನವನ್ನ ವಾಸ್ತವವಾಗಿ ಕಾರ್ಯಗತಗೊಳಿಸಲು ವಿನ್ಯಾಸಗೊಳಿಸಲಾದ ಎಂಜಿನ್" ಎಂದು ಪ್ರಣವ್ ಅದಾನಿ ಬಣ್ಣಿಸಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿ ಸುನೇತ್ರಾ ಅಜಿತ್ ಪವಾರ್, ರಾಜ್ಯ ಸಚಿವ ಸಂಪುಟದ ಸದಸ್ಯರು, ಹಿರಿಯ ಅಧಿಕಾರಿಗಳು ಹಾಗೂ ಕೈಗಾರಿಕಾ ರಂಗದ ಪ್ರಮುಖರು ಉಪಸ್ಥಿತರಿದ್ದರು.

ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಮಹಾರಾಷ್ಟ್ರವು ಕೇವಲ ಭಾಗವಹಿಸುತ್ತಿಲ್ಲ, ಬದಲಾಗಿ ಅದಕ್ಕೆ ಹಣಕಾಸು ಒದಗಿಸುತ್ತಿದೆ, ಅದನ್ನು ನಿರ್ಮಿಸುತ್ತಿದೆ ಮತ್ತು ಮರು ವ್ಯಾಖ್ಯಾನಿಸುತ್ತಿದೆ ಎಂದು ಅದಾನಿ ಶ್ಲಾಘಿಸಿದರು. "ಭಾರತವು ಒಂದು ರಾಕೆಟ್ ಆಗಿದ್ದರೆ, ಮಹಾರಾಷ್ಟ್ರವು ಅದರ ಉಡಾವಣಾ ಕೇಂದ್ರವಾಗಿದೆ (ಲಾಂಚ್‌ಪ್ಯಾಡ್). ಮತ್ತು ಮಹಾರಾಷ್ಟ್ರವು ಲಾಂಚ್‌ಪ್ಯಾಡ್ ಆಗಿದ್ದರೆ, ಮುಂಬೈ ಅದರ ಆರ್ಥಿಕ ಇಂಧನವಾಗಿದೆ" ಎಂದು ಅವರು ಅತ್ಯಂತ ಮಾರ್ಮಿಕವಾಗಿ ಹೇಳಿದರು.

2030ರ ವೇಳೆಗೆ ರಾಜ್ಯವು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯನ್ನು ಹೊಂದಿದೆ. ಇದರಲ್ಲಿ ಮುಂಬೈ ಮಹಾನಗರ ಪ್ರದೇಶ ಮುಖ್ಯ ಪಾತ್ರ ವಹಿಸಲಿದೆ ಎಂದ ಅವರು, ರಾಜ್ಯದೊಂದಿಗಿನ ಅದಾನಿ ಸಮೂಹದ ಪಾಲುದಾರಿಕೆ ದಶಕಗಳಷ್ಟು ಹಳೆಯದು ಎಂಬುದನ್ನು ಸ್ಮರಿಸಿದರು.

ಇಂಧನ ಮತ್ತು ವಿಮಾನಯಾನ ವಲಯದಲ್ಲಿ ಅದಾನಿ ಗ್ರೂಪ್ ಹೂಡಿಕೆ

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಹಾಗೂ ರಾಜ್ಯದೊಂದಿಗಿನ ಒಪ್ಪಂದಗಳ ಮೂಲಕ ಅದಾನಿ ಸಮೂಹವು ಇಂಧನ, ವಿಮಾನಯಾನ, ನಗರಾಭಿವೃದ್ಧಿ, ಡೇಟಾ ಕೇಂದ್ರಗಳು ಮತ್ತು ಕಲ್ಲಿದ್ದಲು ಅನಿಲೀಕರಣ ಕ್ಷೇತ್ರಗಳಲ್ಲಿ ಬೃಹತ್ ಹೂಡಿಕೆಗೆ ಬದ್ಧವಾಗಿದೆ ಎಂದು ಪ್ರಣವ್ ಅದಾನಿ ವಿವರಿಸಿದರು.

ವಿಮಾನಯಾನ (Aviation): ಅದಾನಿ ಸಮೂಹವು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿದೆ. ಜೊತೆಗೆ, ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಹ ನಿರ್ಮಿಸುತ್ತಿದ್ದು, ಇದು ಪೂರ್ಣಗೊಂಡ ಬಳಿಕ ವಾರ್ಷಿಕವಾಗಿ 9 ಕೋಟಿಗೂ ಹೆಚ್ಚು ಪ್ರಯಾಣಿಕರನ್ನು ನಿಭಾಯಿಸುವ ನಿರೀಕ್ಷೆಯಿದೆ. ಈ ಎರಡೂ ವಿಮಾನ ನಿಲ್ದಾಣಗಳ ಸುತ್ತಮುತ್ತ ಸಮಗ್ರ ಏರ್‌ಪೋರ್ಟ್ ಬ್ಯುಸಿನೆಸ್ ಮತ್ತು ಹಾಸ್ಪಿಟಾಲಿಟಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ವಿದ್ಯುತ್ (Power): ಅದಾನಿ ಎಲೆಕ್ಟ್ರಿಸಿಟಿ ಮುಂಬೈ ಲಿಮಿಟೆಡ್ ನಗರದ 30 ಲಕ್ಷಕ್ಕೂ ಹೆಚ್ಚು ಮನೆಗಳು ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ವಿದ್ಯುತ್ ಪೂರೈಸುತ್ತಿದೆ. ಇದರ ಶೇಕಡಾ 60ಕ್ಕೂ ಹೆಚ್ಚು ಪೂರೈಕೆಯು ನವೀಕರಿಸಬಹುದಾದ (ಹಸಿರು) ಮೂಲಗಳಿಂದಲೇ ಬರುತ್ತಿದೆ. 1,000 ಮೆಗಾವ್ಯಾಟ್ ಸಾಮರ್ಥ್ಯದ ಎಚ್‌ವಿಡಿಸಿ (HVDC) ಟ್ರಾನ್ಸ್‌ಮಿಷನ್ ಲಿಂಕ್ ನಗರಕ್ಕೆ ವಿದ್ಯುತ್ ತರುತ್ತಿದ್ದು, 24x7 ಹಸಿರು ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಲು ರಾಜ್ಯಾದ್ಯಂತ ಪಂಪ್ಡ್-ಸ್ಟೋರೇಜ್ ಹೈಡ್ರೋ ಯೋಜನೆಗಳನ್ನ ಜಾರಿಗೊಳಿಸಲಾಗುತ್ತಿದೆ.

ಧಾರಾವಿ ಮರು-ಅಭಿವೃದ್ಧಿ

ಬಹು ನಿರೀಕ್ಷಿತ ಧಾರಾವಿ ಮರು-ಅಭಿವೃದ್ಧಿ ಯೋಜನೆಯನ್ನ ಪ್ರಣವ್ ಅದಾನಿ ಅವರು ಜನಪರ ಯೋಜನೆ ಎಂದು ಬಣ್ಣಿಸಿದರು. ಜನರನ್ನ ಸ್ಥಳಾಂತರಿಸುವ ಮುನ್ನವೇ ಅವರಿಗೆ ಆಧುನಿಕ ವಸತಿ ಸೌಲಭ್ಯ ಕಲ್ಪಿಸುವುದು ಮತ್ತು ಧಾರಾವಿಯಲ್ಲಿರುವ ಸಾವಿರಾರು ಸಣ್ಣ ಉದ್ಯಮಗಳನ್ನ ಔಪಚಾರಿಕಗೊಳಿಸಿ, ಅವುಗಳನ್ನ ರಕ್ಷಿಸುವ ಗುರಿಯನ್ನು ಇದು ಹೊಂದಿದೆ.

ಏಷ್ಯಾದ ಅತಿದೊಡ್ಡ ಕೊಳೆಗೇರಿ ಪ್ರದೇಶವನ್ನು ಸಮಗ್ರ ಆರ್ಥಿಕ ಕೇಂದ್ರವನ್ನಾಗಿ ಪರಿವರ್ತಿಸುವ ಈ ಗುರಿಯನ್ನು ಅವರು 'ಮುಂಬೈ 3.0' ಅಭಿವೃದ್ಧಿಗೆ ಅದಾನಿ ಸಮೂಹದ ಕೊಡುಗೆ ಎಂದು ಕರೆದರು.

ರಾಜ್ಯ ನಾಯಕತ್ವಕ್ಕೆ ಪ್ರಶಂಸೆ

ರಾಜ್ಯ ಸರ್ಕಾರದ ಜನಪರ ನಿಲುವನ್ನು ಪ್ರಣವ್ ಅದಾನಿ ಮುಕ್ತಕಂಠದಿಂದ ಶ್ಲಾಘಿಸಿದರು. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಆಧುನಿಕ ಮೂಲಸೌಕರ್ಯಗಳ ರೂವಾರಿ ಎಂದು ಕರೆದ ಅವರು, ಅವರ 'ವಾರ್ ರೂಮ್' ಮಾದರಿ ಮತ್ತು ಸುಗಮ ವ್ಯಾಪಾರ ಸುಧಾರಣೆಗಳಿಂದಾಗಿ ಜಾಗತಿಕ ಬಂಡವಾಳವು ಉದ್ಯೋಗವಾಗಿ ಪರಿವರ್ತನೆಯಾಗಲು ಮತ್ತು ತ್ವರಿತಗತಿಯಲ್ಲಿ ಯೋಜನೆಗಳು ಅನುಷ್ಠಾನಗೊಳ್ಳಲು ಸಹಾಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರನ್ನ ತಳಮಟ್ಟದ ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣ ಸಬಲೀಕರಣಕ್ಕಾಗಿ ದಶಕಗಳಿಂದ ಶ್ರಮಿಸುತ್ತಿರುವ ನಾಯಕಿ ಎಂದು ಬಣ್ಣಿಸಿದರು. ಅಲ್ಲದೆ, ಅವರು ರಾಜ್ಯದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿರುವುದು ಗಮನಾರ್ಹ ಎಂದರು.

ಜಾಗತಿಕ ಮತ್ತು ದೇಶೀಯ ಉದ್ಯಮಗಳು ಮಹಾರಾಷ್ಟ್ರದಲ್ಲಿ ಉತ್ತಮ ಆಡಳಿತ, ಅತ್ಯುತ್ತಮ ಸಂಪರ್ಕ, ಕಾರ್ಯಗತಗೊಳಿಸುವ ಸಾಮರ್ಥ್ಯ ಹಾಗೂ ಮಾನವ ಸಂಪನ್ಮೂಲವನ್ನು ಕಾಣುತ್ತಿವೆ ಮತ್ತು ರಾಜ್ಯವು ಇವೆಲ್ಲವನ್ನೂ ಯಶಸ್ವಿಯಾಗಿ ಒದಗಿಸುತ್ತಿದೆ.

ಇನ್ವೆಸ್ಟ್ ಮಹಾರಾಷ್ಟ್ರವು ಹೂಡಿಕೆದಾರರ ಒಪ್ಪಂದಗಳನ್ನು ವಾಸ್ತವವಾಗಿ ಕಾರ್ಯಗತಗೊಳಿಸುವ ಒಂದು ಅತ್ಯುತ್ತಮ ವೇದಿಕೆಯನ್ನು ಸೃಷ್ಟಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಸರ್ಕಾರದೊಂದಿಗೆ ಅದಾನಿ ಸಮೂಹವು ಸದಾ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ ಎಂದು ಭರವಸೆ ನೀಡಿದ ಅವರು, ರಾಜ್ಯದ ಭವಿಷ್ಯವು 'ಕೈಗಾರಿಕಾ ಶ್ರೇಷ್ಠತೆ' ಮತ್ತು 'ಪ್ರತಿಯೊಬ್ಬ ನಾಗರಿಕನ ಘನತೆ' ಎಂಬ ಎರಡು ಪ್ರಬಲ ಎಂಜಿನ್‌ಗಳ ಮೇಲೆ ನಿಂತಿದೆ ಎಂದು ಅಭಿಪ್ರಾಯಪಟ್ಟರು. "ಮಹಾರಾಷ್ಟ್ರ ಗೆದ್ದರೆ, ಇಡೀ ಭಾರತ ಗೆದ್ದಂತೆ" ಎಂದು ಹೇಳುವ ಮೂಲಕ ಅವರು ತಮ್ಮ ಮಾತುಗಳನ್ನ ಮುಕ್ತಾಯಗೊಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+