ಬರ್ರೀ ಅಟ್ಲಾಂಟಕ್ಕ, ಅಕ್ಕನ ಸಡಗರ ನೋಡಲಿಕ್ಕ..

By: ಶ್ರೀವತ್ಸ ಜೋಶಿ, ವರ್ಜೀನಿಯಾ
Subscribe to Oneindia Kannada
Explore Atlanta rediscover Karnataka
ಡೆಲ್ಟಾ ಏರ್‌ಲೈನ್ಸ್ ವಿಮಾನದಲ್ಲಿ ನೀವು ಪ್ರಯಾಣಿಸುತ್ತ ಇದ್ದೀರಿ. ಅದು ಅಮೆರಿಕದಲ್ಲಷ್ಟೇ ಅಲ್ಲ, ಇಡೀ ಪ್ರಪಂಚದಲ್ಲೇ ಅತಿದೊಡ್ಡ ಏರ್‌ಲೈನ್ಸ್ ಸಂಸ್ಥೆ. ಅಂಟಾರ್ಕಟಿಕಾ ಒಂದನ್ನು ಬಿಟ್ಟು ಮಿಕ್ಕೆಲ್ಲ ಖಂಡಗಳಲ್ಲೂ ಹಾರಾಡ್ತದೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ನಿಮ್ಮ ವಿಮಾನ ಲ್ಯಾಂಡಿಂಗ್. ಇನ್ನೂ ಆಗಸದಲ್ಲಿರುತ್ತಲೇ ದೊಡ್ಡದೊಡ್ಡ ಕಟ್ಟಡಗಳು ಕಾಣಿಸುತ್ತಿವೆ. ಅದೋ ಅಲ್ಲಿ CNN ಸೆಂಟರ್. ಅಲ್ಲೇ ಇನ್ನೊಂದು ಬಿಲ್ಡಿಂಗ್ ಕಾಣಿಸ್ತಿದೆಯಲ್ಲ, ಅದು ವರ್ಲ್ಡ್ ಆಫ್ ಕೊಕಾ-ಕೊಲಾ. ಕೋಕ್ ಕಂಪನಿಯ ವರ್ಲ್ಡ್ ಹೆಡ್‌ಕ್ವಾರ್ಟರ್ಸ್. ಮತ್ತೊಂದು ಪಕ್ಕದಲ್ಲಿ UPS- ಅಮೆರಿಕದ ನಂ.1 ಪಾರ್ಸೆಲ್ ಕಂಪನಿಯ ಹೆಡ್‌ಕ್ವಾರ್ಟರ್ಸ್.

ನಿಮ್ಮ ವಿಮಾನ ಇಳಿಯಲಿರುವುದು ಹಾರ್ಟ್ಸ್‌ಫೀಲ್ಡ್ ಜಾಕ್ಸನ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ. ಅದು ಪ್ರಪಂಚದಲ್ಲೇ ಅತ್ಯಂತ ಗಜಿಬಿಜಿಯ ಏರ್‌ಪೋರ್ಟ್. ಸುಮಾರು 45 ಫುಟ್‌ಬಾಲ್ ಫೀಲ್ಡ್‌ಗಳನ್ನು ಒಂದರ ಪಕ್ಕ ಒಂದು ಜೋಡಿಸಿದರೆ ಎಷ್ಟಾಗಬಹುದೋ ಅಷ್ಟು ದೊಡ್ಡ ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್ ಈ ವಿಮಾನನಿಲ್ದಾಣದ್ದು, ಅಂದಮೇಲೆ ಒಟ್ಟು ನಿಲ್ದಾಣ ಎಷ್ಟು ದೊಡ್ಡದಿರಬಹುದು ನೀವೇ ಊಹಿಸಿ. ಬೆಂಗ್ಳೂರಲ್ಲಿ ಮೆಜೆಸ್ಟಿಕ್‌ನಲ್ಲಿ ಬಸ್ಸುಗಳ ರಾಶಿ ಕಾಣಿಸುವಂತೆ ಅಲ್ಲಿ ವಿಮಾನಗಳದು. ನಿಮ್ಮ ವಿಮಾನ ರನ್‌ವೇ ಮುಟ್ಟಿದ ಕ್ಷಣದಿಂದ ಟರ್ಮಿನಲ್ ತಲುಪುವುದರೊಳಗೆ ಕನಿಷ್ಠ ಇಪ್ಪತ್ತೈದು ವಿಮಾನಗಳು ಆ ನಿಲ್ದಾಣದಿಂದ ಟೇಕ್‌ಆಫ್ ಆಗ್ತವೆ. ಹೆಚ್ಚೂಕಡಿಮೆ ಅಷ್ಟೇ ವಿಮಾನಗಳು ಲ್ಯಾಂಡಿಂಗ್ ಮಾಡ್ತವೆ. ಬಹುಪಾಲು ಡೆಲ್ಟಾ ಏರ್‌ಲೈನ್ಸ್‌ನವೇ. ಅದು ಆ ವಿಮಾನಸಂಸ್ಥೆಯ ಹೆಡ್‌ಕ್ವಾರ್ಟರ್ಸ್ ಕೂಡ. ಅಮೆರಿಕದ ಸುಮಾರು 85ಪ್ರತಿಶತ ನಗರಗಳನ್ನು ಅಲ್ಲಿಂದ ಎರಡು-ಎರಡುವರೆ ತಾಸಿನೊಳಗೆ ವಿಮಾನದಲ್ಲಿ ತಲುಪಬಹುದು. ಏರ್‌‍ಪೋರ್ಟ್ ಬಿಜಿಯೆಸ್ಟ್ ಅನಿಸಲಿಕ್ಕೆ ಅದೂ ಒಂದು ಕಾರಣ.

ನೀವೀಗ ಬಂದಿರುವುದು ಅಟ್ಲಾಂಟ ನಗರಕ್ಕೆ! ಇಲ್ಲಿನ ಏರ್‌ಪೋರ್ಟೇನೋ world's busiest ನಿಜ, ಆದರೆ ನಗರವೇನೂ ಅಷ್ಟು ದೊಡ್ಡದಿಲ್ಲ ಬಿಡಿ. ಅಮೆರಿಕದ ಟಾಪ್-50 ಸಿಟಿಗಳ ಪಟ್ಟಿ ಮಾಡಿದರೆ 40ನೆಯದು. ಜಾರ್ಜಿಯಾ ಸಂಸ್ಥಾನದ ರಾಜಧಾನಿ ಮತ್ತು ಆ ಸಂಸ್ಥಾನದ ಮಟ್ಟಿಗೆ ಅತಿದೊಡ್ಡ ನಗರ.

ಬಿಜಿ ಏರ್‌ಪೋರ್ಟ್‌ನಿಂದ ಹೊರಬರುವಾಗ ತುಸು ಹೆಚ್ಚೇ ಬಿಸಿ ಇದೆ ಅನಿಸುವಂಥ ಹವಾಮಾನ. ನಮ್ಮ ಬಳ್ಳಾರಿ ರಾಯಚೂರುಗಳಷ್ಟು ಅಲ್ಲದಿದ್ದರೂ ಬಿಸಿಲ ಝಳ ಇಲ್ಲೂ ಹೆಚ್ಚು. ಅದಕ್ಕೇ Hotlanta ಎಂದು ಈ ನಗರದ ನಿಕ್‌ನೇಮ್. ಆದರೆ ಅಟ್ಲಾಂಟಾ ಮಂದಿ ಏನಂತಾರೆ ಗೊತ್ತೇ? ತಾಪಮಾನದಿಂದಾಗಿ ಅಲ್ಲ ಆ ನಿಕ್‍ನೇಮ್ ಬಂದಿರೋದು, ನಮ್ಮ ನಗರದಲ್ಲಿನ hot attractionಗಳಿಂದ ಅಂತ. 1996ರಲ್ಲಿ ಒಲಿಂಪಿಕ್ಸ್ ನಡೆದದ್ದು ಇದೇ ಹಾಟ್ ಹಾಟ್ ಅಟ್ಲಾಂಟದಲ್ಲಿ. ಶತಮಾನದ ಹಿಂದೆ ಯುದ್ಧದ ವೇಳೆ ಬೆಂಕಿಗಾಹುತಿಯಾಗಿ ‘ಅಗ್ನಿಯಿಂದೆದ್ದ ಅಟ್ಲಾಂಟ'ಕ್ಕೆ ಮತ್ತೊಮ್ಮೆ ಕಾಯಕಲ್ಪ ಸಿಕ್ಕಿದ್ದು ಈ ಒಲಿಂಪಿಕ್ಸ್‌ನಿಂದಾಗಿಯೇ.

ಬಿಸಿಲ ಝಳ ಇದ್ದರೇನಂತೆ ಹಸಿರ ಸಿರಿಯೂ ಇಲ್ಲಿ ಬೇಕಾದಷ್ಟಿದೆ. ನಗರದಲ್ಲೆಲ್ಲ ಉದ್ಯಾನಗಳು. ಪೈಡ್‍ಮಾಂಟ್ ಪಾರ್ಕ್ ಎಂಬ ಉದ್ಯಾನವಂತೂ ಸುಮಾರು 180 ಹೆಕ್ಟೇರ್‌ನಷ್ಟು ವಿಶಾಲ. ಭೌಗೋಳಿಕವಾಗಿ ಅಟ್ಲಾಂಟ ಬಗ್ಗೆ ಇನ್ನೂ ಒಂದು ಅಂಶವನ್ನು ಹೇಳಬೇಕು. ಕೊಲರಾಡೋ ಸಂಸ್ಥಾನದ ಡೆನ್ವರ್ ಬಿಟ್ಟರೆ ಅಮೆರಿಕದಲ್ಲಿ ಅತ್ಯಂತ ಎತ್ತರದಲ್ಲಿರುವ ನಗರವೆಂದರೆ ಅಪಲೇಷಿಯನ್ ಪರ್ವತಗಳ ತಪ್ಪಲಲ್ಲಿರುವ ಇದೇ ಅಟ್ಲಾಂಟ! ಇಂಟರ್‌ಸ್ಟೇಟ್ ಹೈವೇ-285 ಅಟ್ಲಾಂಟದ ರಿಂಗ್‌ರೋಡ್. ವಾಷಿಂಗ್ಟನ್‌ನಂಥ ನಗರಗಳಲ್ಲಿ ರಿಂಗ್‌ರೋಡ್‌ಗೆ ‘ಬೆಲ್ಟ್ ವೇ' ಎನ್ನುವುದಾದರೆ ಅಟ್ಲಾಂಟದಲ್ಲಿ ಅದಕ್ಕೆ ‘ಪೆರಿಮೀಟರ್' ಎಂಬ ಹೆಸರು. ಯಾರಾದ್ರೂ ಅಟ್ಲಾಂಟಿಗರ ಹತ್ತಿರ ಡೈರೆಕ್ಷನ್ಸ್ ಕೇಳಿನೋಡಿ, ಪೆರಿಮಿಟರ್ ಎಂಬ ಪದ ಅವರ ಬಾಯಿಂದ ಬಂದೇಬರುತ್ತೆ.

ಇನ್ನೊಂದು ಪದ ಅಟ್ಲಾಂಟಿಗರ ಬಾಯಿಯಲ್ಲಿ ಬರಲೇಬೇಕಾದ್ದು ‘ಪೀಚ್ ಟ್ರೀ ಸ್ಟ್ರೀಟ್'. ಅಟ್ಲಾಂಟಾದ ಮುಖ್ಯರಸ್ತೆಯ ಹೆಸರೇ ಪೀಚ್ ಟ್ರೀ ಸ್ಟ್ರೀಟ್. ಅದೊಂದೇ ಅಲ್ಲದೆ 60ಕ್ಕೂ ಹೆಚ್ಚು ಬೇರೆ ರಸ್ತೆಗಳಿಗೂ ‘ಪೀಚ್'ನಿಂದ ಶುರುವಾಗುವ ಹೆಸರು. ಪೀಚ್ ಹಣ್ಣು ಜಾರ್ಜಿಯಾ ಸಂಸ್ಥಾನದ ಸಮೃದ್ಧ ಬೆಳೆ. ಜಾರ್ಜಿಯಾ ಸಂಸ್ಥಾನದಲ್ಲಿ ವಾಹನಗಳ ನಂಬರ್‌‍ಪ್ಲೇಟ್ ಮೇಲೂ ಪೀಚ್ ಹಣ್ಣಿನ ಚಿತ್ರ ಕಂಪಲ್ಸರಿ. ಅಟ್ಲಾಂಟದವರ ಮತ್ತೊಂದು ಹೆಮ್ಮೆಯೆಂದರೆ ಇಬ್ಬರು ನೊಬೆಲ್ ಪ್ರಶಸ್ತಿ ವಿಜೇತರ ಏಕೈಕ ನಗರವೆಂಬ ಖ್ಯಾತಿ. 1964ರಲ್ಲಿ ಶಾಂತಿಪ್ರಶಸ್ತಿ ಪಡೆದ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಮತ್ತು 2002ರಲ್ಲಿ ಶಾಂತಿಪ್ರಶಸ್ತಿ ಪಡೆದ ಅಮೆರಿಕಾಧ್ಯಕ್ಷ ಜಿಮ್ಮಿ ಕಾರ್ಟರ್ - ಇಬ್ಬರೂ ಅಟ್ಲಾಂಟದವರೇ.

ಅಟ್ಲಾಂಟಾ ನಗರದಲ್ಲಿ ನಿಮಗೆ ‘ಬಾರ್ ಬಾರ್ ದೇಖೋ ಹಜಾರ್ ಬಾರ್ ದೇಖೋ...' ಎಂದು ಹಾಡುವ ಮನಸ್ಸಾದರೆ ನೀವು ಅಲ್ಲಿನ ಬಕ್‌ಹೆಡ್ ಪ್ರದೇಶದಲ್ಲಿದ್ದೀರಿ ಅಂತರ್ಥ. ಅಲ್ಲಿನ ಗಲ್ಲಿಗಲ್ಲಿಯಲ್ಲೂ ಮಾರ್ಟಿನಿ ಬಾರ್‌ಗಳು, ಐರಿಷ್ ಪಬ್ಬುಗಳು, ಡ್ಯಾನ್ಸ್‌ಕ್ಲಬ್ಬುಗಳು... ಈಕಡೆ ಫಿಪ್ಸ್ ಪ್ಲಾಜಾ ಮತ್ತು ಲೆನಕ್ಸ್ ಸ್ಕ್ವೇರ್‌ಗೆ ಬಂದರೆ ಬಾರ್ಗೈನ್ ಶಾಪಿಂಗ್‌ನ ಮೆಕ್ಕಾ ಅದು! ಡಿಸೈನರ್ ಸರಂಜಾಮುಗಳ ಸಾಲುಸಾಲು ಅಂಗಡಿಗಳು. ದೊಡ್ಡದೊಡ್ಡ ಸೆಲೆಬ್ರಿಟಿಗಳು, ಹಾಲಿವುಡ್ ಸ್ಟಾರ್‌ಗಳು ವೇಷ ಮರೆಸಿಕೊಂಡು ಶಾಪಿಂಗ್ ಮಾಡುವುದು ಅಲ್ಲೇ.

ಇಂತಿರುವ ಅಟ್ಲಾಂಟ ನಗರದಲ್ಲಿ ಈ ವಾರಾಂತ್ಯದಲ್ಲಿ (ಆಗಸ್ಟ್ 31 - ಸೆಪ್ಟೆಂಬರ್ 2) ‘ಅಕ್ಕ' ವಿಶ್ವ ಕನ್ನಡ ಸಮ್ಮೇಳನ. ದಟ್ಸ್‌ಕನ್ನಡದಲ್ಲಿ ಎಂದಿನಂತೆ ಮೂಡಿ ಬರಲಿದೆ ಸಚಿತ್ರ ಸುದ್ದಿ ಸಿಂಚನ.

ನೀವೂ ಬರ್ರೀ ಅಟ್ಲಾಂಟಕ್ಕ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Atlanta is a destination to discover. Explore Hotlanta city and enjoy! The city boasts of hosting 7th AKKA World Kannada Conference in Georgia International Convention Center 31 Aug - 2 Sept 2012. Srivathsa Joshi presents an aerial view for Sight seeing in Atlanta GA : CNN Studios Tour, World of Coca-Cola, Underground Atlanta, Martin Luther King, Jr. Historic District, Fernbank Museum of Natural History, Michael C. Carlos Museum, Georgia's Stone Mountain Park, Your DeKalb Farmer's Market, the busiest Airport and a long walk on one of your favorite Peach streets!
Please Wait while comments are loading...