• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರ ಕನ್ನಡ ಉತ್ಸವದ ಮಧುರ ಕಾಣಿಕೆ

By Prasad
|

7th World Kannada Cultural Convention, Singapore 2010
ಕನ್ನಡ ಉತ್ಸವ- ಅದು ನಿತ್ಯೋತ್ಸವ! ಕರ್ನಾಟಕದಲ್ಲಿ ಮಾತ್ರವಲ್ಲ, ಎಲ್ಲೆಲ್ಲಿ ಕನ್ನಡ ಇದೆಯೋ ಅಲ್ಲೆಲ್ಲಾ ಅದು ಬೆಳಗುತ್ತಲಿದೆ, ಮುಂದೆಯೂ ಬೆಳಗುವುದು ಎಂಬುದಕ್ಕೆ ಮತ್ತೊಂದು ಸಾಕ್ಷಿ ಇದೇ 27, 28ರಂದು ಸಿಂಗಪುರದಲ್ಲಿ ಕನ್ನಡ ಸಂಘ ಸಿಂಗಪುರ ಹಾಗೂ ಹೃದಯವಾಹಿನಿ ಪತ್ರಿಕೆ, ಮಂಗಳೂರು ಇವರ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆದ 7ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ. ಇದು ಎರಡನೇ ದಿನದ ಕಾರ್ಯಕ್ರಮಗಳ ಭೋಜನಾ ನಂತರದ ವರದಿ.

ಚಪಾತಿ, ಪುಲಾವ್, ಮೊಸರನ್ನ ಸೊಗಸಾದ ಔತಣದ ಊಟವಾಗಿತ್ತು. ಮುಂದೆ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಮನಸ್ಸು ಸಜ್ಜಾಗಿತ್ತು! ಕನ್ನಡ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ಅಭಿಲಾಷೆಯ ಕೂಸು ಮತ್ತು ಅವರ ಹೃದಯಕ್ಕೆ ಹತ್ತಿರವಾದ "ಕನ್ನಡ ಕಲಿ" ಕಾರ್ಯಕ್ರಮವನ್ನು ಸಿಂಗಪುರದಲ್ಲಿ ನಡೆಸಲು ಅಧಿಕೃತ ಚಾಲನೆ ದೊರಕಿತು ಹಾಗೂ ಈ ಸಂಬಂಧವಾಗಿ "ಕನ್ನಡ ಅಭಿವೃದ್ಧಿ ಪ್ರಾಧಿಕಾರ"ದಿಂದ ಕನ್ನಡ ಸಂಘ(ಸಿಂಗಪುರ)ಕ್ಕೆ ದೇಣಿಗೆ/ಸಹಾಯಧನದ ಚೆಕ್ಕನ್ನು ನೀಡಲಾಯಿತು.

ನೃತ್ಯ, ವೀರಗಾಸೆ, ಮಾಧ್ಯಮ ಗೋಷ್ಠಿ: ತದ ನಂತರ ನಟನೆಯ ವಿಶಾರದ-ಶಾಸ್ತ್ರೀಯ ನೃತ್ಯ ಡಿ.ಕೆ. ಷಣ್ಮುಖ ಗದರ್ ಅವರಿಂದ ಹಾಗೂ "ಎಂಥವನಿರಬೇಕವ್ವ, ನಾನು ಮೆಚ್ಚಿ ಮದುವೆಯಾಗುವ ಗಂಡ" ಎಂಬ ಜಾನಪದ ನೃತ್ಯ ಗೀತರಾಣಿ ಹಾಗೂ ನಾಗಲಕ್ಷ್ಮಿ ಅವರಿಂದ ನಡೆಯಿತು [ಚಿತ್ರಪಟ ನೋಡಿರಿ]. ಪುರುಷ ಪ್ರಧಾನವಾದ ವೀರಗಾಸೆಯ ಪರಿಚಯವನ್ನು ಬೆಂಗಳೂರಿನ ಸ್ನೇಹ ಮಹಿಳಾ ಮಂಡಲಿ ತಂಡದ ಮಹಿಳೆಯರು ನೀಡಿದರು. ನಂತರ ಹಾಸ್ಯನಾಟಕ ಶ್ರೀಕೃಷ್ಣ ಸಂಧಾನ, ಅಮಿತಾ ಆನಂದಕುಮಾರ್ ನೇತೃತ್ವದಲ್ಲಿ. ಸಿರಿಗಂಧ ಮಂಡಳಿ ಅವರಿಂದ ಹಾಗೂ ಯಕ್ಷಗಾನ "ಜಾಂಬವತಿ ಕಲ್ಯಾಣ"ದ ಪ್ರಸಂಗವನ್ನು-ಯಕ್ಷಗಾನ, ಯಕ್ಷಶಿಕ್ಷಣ ಟ್ರಸ್ಟ್ ಮಣಿಪಾಲ್ ಅವರು ರಸವತ್ತಾಗಿ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.

ಸುಮಾರು ಆರು ಸಾವಿರಕ್ಕೂ ಹೆಚ್ಚು ಸದಸ್ಯರಿರುವ ಕರ್ನಾಟಕದ ವೃತ್ತಿನಿರತ ಪತ್ರಕರ್ತರ ಸಂಘದ 75ನೇ ವಾರ್ಷಿಕೋತ್ಸವದ ಅಂಗವಾಗಿ ಮಾಧ್ಯಮ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಇದೇ ಮೊದಲ ಬಾರಿಗೆ ಕರ್ನಾಟಕದಿಂದಾಚೆ, ಕಡಲಾಚೆ ಏರ್ಪಡಿಸಿದ್ದ ಈ ಗೋಷ್ಠಿಗೆ ಕರ್ನಾಟಕದಿಂದ ಬಂದ 20ಪತ್ರಕರ್ತರು ಭಾಗವಹಿಸಿದ್ದರು. ಗೋಷ್ಠಿಯ ಅಧ್ಯಕ್ಷತೆಯನ್ನು ಸುಧೀಂದ್ರ ಕುಮಾರ್‌ರವರು ವಹಿಸಿದ್ದರು. ಗಂಗಾಧರ ಮೊದಲಿಯಾರ್ ಅವರಂತಹ ಹಿರಿಯ ಪತ್ರಕರ್ತರು, ಪ್ರಜಾವಾಣಿಯ ಸುದ್ದಿ ಸಂಪಾದಕರಾದ ಇ.ವಿ.ಸತ್ಯನಾರಾಯಣ, ಜಯಪ್ರಕಾಶ್ ರಾವ್(ಪುತ್ತೂರು) ಮತ್ತು ಮಂಜುನಾಥ್(ಪಾಂಡವಪುರ) ಅವರ ಉಪಸ್ಥಿತಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿತ್ತು.

ಶ್ರೀ ಸಾಯಿರಾಮನ್ ನೃತ್ಯ ಕಲಾಕೇಂದ್ರ, ತುಮಕೂರು ಪ್ರಸ್ತುತ ಪಡಿಸಿದ "ಕನ್ನಡವೇ ಸತ್ಯ" ನೃತ್ಯ ಮನೋರಂಜಕವಾಗಿತ್ತು. ಭರತನಾಟ್ಯ, ಜನಪದ ಹಾಗೂ ಇತರ ನಾಟ್ಯ ಸಂಗಮದೊಂದಿಗೆ ಕುವೆಂಪು ಅವರ "ಜಯ ಭಾರತ ಜನನಿಯ ತನುಜಾತೆ" ಹಾಗೂ ನಿಸಾರ್ ಅಹಮದ್ ಅವರ "ಜೋಗದ ಸಿರಿ" ಕವನಗಳನ್ನು ನೃತ್ಯದ ಮೂಲಕ ಅರ್ಪಿಸಿದರು. ಎಲ್ಲಾ ಜ್ಞಾನಪೀಠ ಪ್ರಶಸ್ತಿ ವಿಜೇತರ ಭಾವ ಚಿತ್ರಗಳೊಂದಿಗೆ ತುಂಬಿದ್ದ "ಕನ್ನಡವೇ ಸತ್ಯ, ಬಾರಿಸು ಕನ್ನಡ ಡಿಂಡಿಮವ" ಹಾಡಿಗೆ ಮಾಡಿದ ನೃತ್ಯ ಸಭಿಕರನ್ನು ಭಾವ ಲೋಕದಲ್ಲಿ, ಕವನ ಲೋಕದಲ್ಲಿ ಮುಳುಗಿಸಿತ್ತು. ಸಭಿಕರ ಕರತಾಡನ ಮುಗಿಲು ಮುಟ್ಟಿತ್ತು.

ವೈದ್ಯಕೀಯ ಗೋಷ್ಠಿ, ಹನಿಗವನ ಗೋಷ್ಠಿ: ನಂತರ ನಡೆದದ್ದು ವೈದ್ಯಕೀಯ ಗೋಷ್ಠಿ. ಈ ಗೋಷ್ಠಿಯ ಅಧ್ಯಕ್ಷರು ಡಾ. ಚಿದಾನಂದ, ಮೈಸೂರು. ಡಾ.ರವಿಶಂಕರ್ ಮತ್ತು ಡಾ.ನಂದಿನಿ, ಸಿಂಗಪುರವನ್ನು ಪ್ರತಿನಿಧಿಸಿದ್ದರು, ಡಾ.ಕೆ.ನಾರಾಯಣ್-ಕೃತಕ ಗರ್ಭಧಾರಣೆ ಬಗ್ಗೆ ಬಹಳ ಉಪಯುಕ್ತ ಮಾಹಿತಿ ಹಾಗು ಈಗ ಲಭ್ಯದಲ್ಲಿರುವ ಕೃತಕ ಗರ್ಭದಾರಣೆಯ ವಿವಿಧ ವಿಧಾನಗಳು ಮತ್ತು ಪರ್ಯಾಯ ಕ್ರಮಗಳ ದಿನಗಳ ಬಗ್ಗೆ ಅರಿವು ಮೂಡಿಸಿದರು, ಡಾ.ಚಿದಾನಂದ ಮೈಸೂರು ಅವರು ತಾವು ಬರೆದಿರುವ ಕವನಗಳನ್ನು ವಾಚಿಸುತ್ತ ಬಹಳ ಸುಂದರವಾಗಿ ಆರೋಗ್ಯ ಮತ್ತು ಸಕ್ಕರೆಯ ಕಾಯಿಲೆ ಬಗ್ಗೆ ತಿಳಿಸಿಕೊಟ್ಟರು. ಸಕ್ಕರೆ ಕಾಯಿಲೆ ಬಗ್ಗೆ ಹೇಳುತ್ತಾ "ಸಕ್ಕರೆಯ ಗೊಂಬೆ ನೀ ಪಾಲಿಸದಿದ್ದರೆ ಮಿತ ಆಹಾರ, ಮಾಡದಿದ್ದರೆ ಹಿತ ವ್ಯಾಯಾಮ ಆಗುವೆ ನೀ - ಚಟ್ಟದ ಬೊಂಬೆ" ಎಂದು ಹಾಸ್ಯದೊಂದಿಗೆ ಸಂದೇಶವನ್ನು ಕೊಟ್ಟರು. ಡಾ.ರಾಘವೇಂದ್ರ ಬಾಬು ಅವರು ಆಯುರ್ವೇದದ ಬಗ್ಗೆ ತುಂಬ ಒಳ್ಳೆಯ ಮಾಹಿತಿ ನೀಡಿದರು. ಈಗ ಆಯುರ್ವೇದದಿಂದ ಬ್ಲಡ್‌ಕಾನ್ಸರ್, ಬಹುತೇಕ ಹೆಂಗಸರನ್ನು ಕಾಡುವ ಅರೆತಲೆನೋವು(ಮೈಗ್ರೇನ್) ಇನ್ನೂ ಅನೇಕ ಕಾಯಿಲೆಗಳನ್ನು ಗುಣಪಡಿಸುವ ಆಯುರ್ವೇದದ ವೈದ್ಯಕೀಯ ಪದ್ಧತಿಯ ಬಗ್ಗೆ ಕೊಟ್ಟಂತಹ ಮಾಹಿತಿ- ಔಷಧೋಪಚಾರ ಸಲಹೆಗಳು ಬಲು ಉಪಯುಕ್ತವಾಗಿದ್ದವು.

ಹನಿಗವನ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮೊದಲ ಮಾತುಗಳನ್ನಾಡಿದವರು ಸಂಗಮೇಶ ಬಾಡಗಿ. ಮೊದಲಿಗೆ ಬಂದು "ಅಂತರ", "ಪೂರ್ವಜರು", "ಬಯಕೆ", "ಕುಡುಕರು" ಮುಂತಾದ ತಮ್ಮ ಹನಿಗವನಗಳನ್ನು ಓದಿ ಜನರನ್ನು ರಂಜಿಸಿದರು ಸಿಂಗನ್ನಡಿಗ ಗಿರೀಶ್ ಜಮದಗ್ನಿ. ವೇದಿಕೆಯ ಮೇಲಿದ್ದು ಹನಿಗವನ ವಾಚನ ಮಾಡಿದ ಇನ್ನಿತರ ಕವಿಗಳು ನಾಗೇಶ್ ಕೂಡ್ಲುಗಿ, ಬಿಂಡಿಗನವಿಲೆ ಭಗವಾನ್, ಶಿವಪುತ್ರಪ್ಪ ಅಜಮನಿ ಹಾಗೂ ಮಂಜುನಾಥ್ ಪಾಂಡವಪುರ. ಶಿವಾನಂದ ಸೋಮಪ್ಪ ಅವರು ತಾವು ಓದಿದ, ತಮ್ಮ ಮೆಚ್ಚಿನ ಹನಿಗವನಗಳ ವಾಚನ ಮಾಡಿದರು.

ಅಶ್ವಥ್ ನಮನ, ಗೀತಮಂಜರಿ, ನೃತ್ಯರೂಪಕ: ಕನ್ನಡ ನಿತ್ಯೋತ್ಸವದ "ಅಶ್ವಥ್ ನಮನ" ಕಾರ್ಯಕ್ರಮದಲ್ಲಿ ಕನ್ನಡ ಸುಗಮ ಸಂಗೀತ ಲೋಕದ ಮಾಂತ್ರಿಕ, ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಅಶ್ವಥ್ ಅವರಿಗೆ ನಮನ ಕಿಕ್ಕೇರಿ ಕೃಷ್ಣಮೂರ್ತಿ, ವೃಂದರಾವ್ ಮತ್ತು ಟಿ.ವಿ. ರಾಜು ಅವರಿಂದ. ಕನ್ನಡವೇ ಸತ್ಯ, ಶ್ರಾವಣ ಬಂತು, ರಾಯರು ಬಂದರು, ನಾವು ಭಾರತೀಯರು, ತೇನವಿನಾದ ಸುಮಧುರ ಭಾವಗೀತೆಗಳನ್ನು ಹಾಡುತ್ತಾ ನಮ್ಮೆನ್ನೆಲ್ಲ ಭಾವಲೋಕದಲ್ಲಿ ತೇಲಾಡಿಸಿದರು. "ಕೋಡಗನ ಕೋಳಿ ನುಂಗಿತ್ತಾ" ಗಾನಕ್ಕೆ ಕಿಕ್ಕೇರಿ ಕೃಷ್ಣಮೂರ್ತಿಯವರ ಜೊತೆ ಪ್ರೊ. ಕೃಷ್ಣೇಗೌಡರು ದನಿಗೂಡಿಸಿದ್ದು ವಿಶೇಷವಾಗಿತ್ತು. ಈ ಹಾಡುಗಳನ್ನು ಕೇಳಿದಾಗ ಸ್ವರ ಮಾಂತ್ರಿಕ ಅಶ್ವಥ್ ಅವರ ನೆನಪು ಕಾಡಿದ್ದಂತೂ ನಿಜ.

ಚಿನ್ಮಯಿ ಮತ್ತು ಬಳಗದವರಿಂದ ಮೂಡಿ ಬಂದ "ಗೀತ ಮಂಜರಿ" ಕರುನಾಡ ತಾಯಿ, ಸದಾ ಚಿನ್ಮಯಿ, ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಹಾಡಿ ಪ್ರೇಕ್ಷಕರನ್ನು ಅವರೊಂದಿಗೆ ದನಿಗೂಡಿಸುವಂತೆ ಮಾಡಿತು. ಕಿಕ್ಕೇರಿ ಅವರೊಂದಿಗೆ "ತರವಲ್ಲ ತಗಿ ನಿನ್ನ ತಂಬೂರಿ ಸ್ವರ.." ಹಾಡಿಗೆ ಪ್ರೇಕ್ಷಕರೆಲ್ಲಾ ಡ್ಯಾನ್ಸ್ ಮಾಡುತ್ತಿದ್ದ ದೃಶ್ಯ ಕಂಡಾಗ ಸ್ವರಮಾಂತ್ರಿಕ ಮರೆಯಲ್ಲಿ ನಿಂತು ಇದನ್ನು ತಾನೂ ಆನಂದಿಸುತ್ತಿರುವನೇನೋ ಎನಿಸಿದಂತೂ ನಿಜ. ಚಿನ್ಮಯಿ ಕೆಲವು ಹಾಡುಗಳನ್ನು ಪ್ರೇಕ್ಷಕರೂ ಕೂಡ ದನಿಗೂಡುವಂತೆ ಮಾಡಿ, ತಾನೊಬ್ಬ ಒಳ್ಳೆಯ ಹಾಡುಗಾರ ಮಾತ್ರವಲ್ಲದೆ ಮನೋರಂಜನಕಾರನೆಂಬುದನ್ನು ನಿದರ್ಶಿಸಿದರು.

ಅಶ್ವಥ್ ಗುಂಗಿನಲ್ಲಿ ಮುಳುಗಿದ್ದ ಸಭಿಕರನ್ನು ಚಿರಂತನ ದಾವಣಗೆರೆ ಮತ್ತು ಭರತಾಂಜಲಿ ಮೈಸೂರು ಅವರು ರಾಮಾಯಣದ "ಮಂಥರೆ ಪ್ರಸಂಗ"ವನ್ನು ನೃತ್ಯರೂಪದಲ್ಲಿ ಪ್ರದರ್ಶಿಸಿದರು. ನಂತರ ರಾಜರಾಜೇಶ್ವರಿ ನೃತ್ಯ ಕಲಾಕೇಂದ್ರ ತುಮಕೂರು ಅವರು ನಡೆಸಿಕೊಟ್ಟ ಡಿ.ವಿ.ಜಿ ಅವರ "ಅಂತಃಪುರ ಗೀತೆಗಳು" ಬೇಲೂರು ಶಿಲಾಬಾಲಿಕೆಯರು ಜೀವಂತವಾಗಿ ಸಿಂಗಪುರದ ವೇದಿಕೆಯ ಮೇಲೆ ಬಂದರೇನೋ ಎಂಬ ಭ್ರಾಂತಿ ಮೂಡಿಸಿತು.

ಪ್ರವೀಣ್ ಗೋಡ್ಖಿಂಡಿ ಅವರ ವೇಣುವಾದನ: ಕೊಳಲು ಸುರಮಣಿ ಪ್ರವೀಣ್ ಗೋಡ್ಖಿಂಡಿ ಅವರು ಸಿಂಗನ್ನಡಿಗರಿಗೆ ತಮ್ಮ ಕೊಳಲುವಾದನದ ಭೂರಿ ಭೋಜನವನ್ನು ಉಣಬಡಿಸಿದರು. ಮೊದಲು ರಾಗ ಭೂಪಾಲಿಯಲ್ಲಿ ಕೆಲವು ಸುಂದರವಾದ ಬಂದಿಶ್‌ಗಳನ್ನು ನುಡಿಸಿದ ಪ್ರವೀಣ್ ನಂತರ ತಮ್ಮ ಅತ್ಯಂತ ಜನಪ್ರಿಯ "ಕೃಷ್ಣಾ" ರಚನೆಯನ್ನು ನುಡಿಸಿ ಜನರೆಲ್ಲರನ್ನು ಭಾವೋತ್ತುಂಗಕ್ಕೆ ಕರೆದೊಯ್ದರು. "ಕೃಷ್ಣ" ರಚನೆಯನ್ನು ನುಡಿಸುತ್ತಲೇ ಜನರೆಲ್ಲನ್ನು ತಮ್ಮೊಂದಿಗೆ ಸೇರಿಸಿಕೊಂಡು ಕೃಷ್ಣನಾಮದ ಪಠಣವನ್ನು ಮಾಡಿಸಿದರು. ಓಂಕಾರದಿ, ನಾವಾಡುವ ನುಡಿಯೇ ಕನ್ನಡ ನುಡಿ-ನುಡಿಸಿದಾಗ ಕರತಾಡನ ಮುಗಿಲು ಮುಟ್ಟಿತು. ಒನ್ಸ್ ಮೋರ್, ಒನ್ಸ್ ಮೋರ್ ಕೂಗಿಗೆ ಮತ್ತೆ ಮಿಶ್ರ ಪಹಾಡಿ ರಾಗದಲ್ಲಿ ಮತ್ತು ಜನಪದ ಶೈಲಿಯ "ಮೂಡಲ ಮನೆಯ", ದೋಣಿಸಾಗಲಿ ವೇಣುಗಾನಕ್ಕೆ. ಕೃಷ್ಣನೇ ಮರುಳಾಗಿ ಅವರ ಕೊಳಲಲ್ಲಿ ಕುಳಿತಿರುವನೇನೋ ಎನಿಸಿತು! ಕಾರ್ಯಕ್ರಮದ ಕೊನೆಗೆ ಪಕ್ಕ ವಾದ್ಯ ನುಡಿಸಿದ ಅರುಣ್ ಅವರೊಂದಿಗೆ ನಡೆದ ಅದ್ಭುತ ಜುಗಲ್‌ಬಂದಿ ಕಾರ್ಯಕ್ರಮ ಜನರನ್ನು ಮಂತ್ರ ಮುಗ್ಧರನ್ನಾಗಿಸಿತು.

ಪ್ರಶಸ್ತಿ ಪ್ರದಾನ: ಜೀನೋಂಗಳ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆಯನ್ನು ನಡೆಸಿ ಪ್ರಖ್ಯಾತವಾಗಿರುವ ಪ್ರೊ. ವೆಂಕಟೇಶ್ ಬೈರಪ್ಪ ಹಾಗೂ ಕಾರ್ಪೋರೇಟ್ ಮತ್ತು ಸಮಾಜ ಸೇವಾ ರಂಗಗಳಲ್ಲಿ ಸೇವೆ ಸಲ್ಲಿಸಿದ ಜಗದೀಶ್ ಅವರಿಗೆ 27ರಂದು ಈ ಸಮ್ಮೇಳನದಲ್ಲಿ 2010ನೇ ಸಾಲಿನ ಸಿಂಗಾರ ಆಜೀವ ಸಾಧನ ಪುರಸ್ಕಾರ"ವನ್ನು ನೀಡಿ ಗೌರವಿಸಲಾಯಿತು. ನವೆಂಬರ್ 28ರ ಮಧ್ಯಾಹ್ನ "ಇನ್ನೂ ಆ ಕೊಳಲಿನ ಮಧುರಗಾನದ ತರಂಗಗಳ ಅಲೆಯಲ್ಲಿ ತೇಲುತ್ತಿದ್ದ ಸಭಿಕರನ್ನು ವಾಸ್ತವ ಲೋಕದತ್ತ ಬರುವಂತೆ ಮಾಡಿತು ಪ್ರಶಸ್ತಿ ಪ್ರದಾನ ಸಮಾರಂಭದ ಕರೆ. 7ನೇ ವಿಶ್ವಕನ್ನಡ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾದ ಸಾಹಿತಿ-ಡಾ.ಬರಗೂರು ರಾಮಚಂದ್ರಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಹೃದಯವಾಹಿನಿ ಪತ್ರಿಕೆಯ ಸಂಪಾದಕ ಮಂಜುನಾಥ ಸಾಗರ್ ಹಾಗೂ ಕನ್ನಡ ಸಂಘ ಸಿಂಗಪುರದ ಅಧ್ಯಕ್ಷರಾದ ಡಾ.ವಿಜಯಕುಮಾರ್ ಅವರಿಂದ ವಿವಿಧ ಕ್ಷೇತ್ರಗಳಲ್ಲಿ ಶ್ರಮವಹಿಸಿ ಸೇವೆ ಸಲ್ಲಿಸಿದ ಕನ್ನಡಿಗರಿಗೆ "ವಿಶ್ವಮಾನ್ಯ" ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಶ್ವಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮನಾನಿ ಅವರಿಗೆ ನೀಡಿ ಸನ್ಮಾನಿಸಲಾಯಿತು. ಇದಲ್ಲದೇ ಅವರ 100ನೇ ಚಿತ್ರ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರ ಆಜೀವ ಸಾಧನೆಯ ನೆನಪಿನ ಕುರುಹಾಗಿ "ಸಿಂಗಾರ ಕಲಾ ಪುರುಷೋತ್ತಮ" ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ದೈಹಿಕ ನ್ಯೂನತೆ ಇದ್ದ ವ್ಯಕ್ತಿ ಕೂಡ ಮನದ ಶಕ್ತಿ, ಸಾಧಿಸುವ ಛಲ, ಗುರಿ ಇದ್ದಲ್ಲಿ ಏನೆಲ್ಲಾ ಸಾಧಿಸಬಲ್ಲ ಎಂಬುದನ್ನು ತೋರಿಸಿದ, "ಈಸಬೇಕು ಇದ್ದು ಜಯಿಸಬೇಕು" ಎಂಬ ಮಂತ್ರವನ್ನು ನಂಬಿದ, ವೀಲ್‌ಚೇರ್‌ನಲ್ಲಿ ಮ್ಯಾರಥಾನ್ ಓಡಿದ, ಅನೇಕ ಬುದ್ಧಿಮಾಂದ್ಯ, ಅಂಗವೈಕಲ್ಯತೆಯಿರುವ ಮಕ್ಕಳಿಗೆ ಹಣ ಸಂಗ್ರಹಿಸುವ ಸೇವಾಕಾರ್ಯದೊಂದಿಗೆ ಸ್ಪೂರ್ತಿ, ಧೈರ್ಯ, ಸ್ಥೈರ್ಯದ ಚೈತನ್ಯ ಚಿಲುಮೆಯಾದ ನ್ಯೂರೋ ಸರ್ಜನ್ ಹಾಗೂ ಮೆಡಿಕಲ್ ಸೈಂಟಿಸ್ಟ್, ಸಿಂಗಪುರದ ಡಾ.ವಿಲಿಯಮ್ ಟಾನ್ ಕಿಯಾನ್ ಮೆಂಗ್; ಪದ್ಮಶ್ರೀ ಕದ್ರಿ ಗೋಪಾಲನಾಥ್; ಇಸ್ಕಾನ್-ಅಕ್ಷಯಪಾತ್ರೆ-ಶ್ರೀಯುತ ಚಂಚಲಪತಿದಾಸ್ ಹಾಗೂ ಗಾನಗಾರುಡಿಗ, ಡಾ.ರಾಜ್ ಶಾರೀರ, ಸುಮಧುರ ಚಿತ್ರಗೀತೆಗಳ ಮಾಂತ್ರಿಕ "ಡಾ.ಪಿ.ಬಿ.ಶ್ರೀನಿವಾಸ್" ಅವರುಗಳಿಗೆ ವಿಶ್ವಮಾನ್ಯ ಸುವರ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ.ಪಿ.ಬಿ.ಎಸ್. ಅವರು "ನನ್ನ ಕನ್ನಡ ಪ್ರೀತಿಯ ಬಂಧುಗಳೇ, ರಸಿಕತೆಯೇ ಕಲೆಯ ಬೆಲೆ. ನನಗೆ ಕನ್ನಡನಾಡಿನಲ್ಲಿ ಸಿಕ್ಕ ಪ್ರೋತ್ಸಾಹ, ಆದರ, ಅಭಿಮಾನ ಇನ್ನೆಲ್ಲೂ ಇಲ್ಲ. ಡಾ.ರಾಜ್ ಎಂತಹ ಮೇರುನಟ! ಮಹಾನುಭಾವ ರಾಜ್‌ಕುಮಾರನಿಗೆ ಹಾಡಿದ ಸುಯೋಗ ನನ್ನದು, ಕನ್ನಡನಾಡಿಗೆ ನಾನು ಚಿರಋಣಿ" ಎಂದಾಗ ನೆರೆದಿದ್ದ ಸಾವಿರಾರು ಸಭಿಕರು ಎದ್ದು ನಿಂತು, ಚಪ್ಪಾಳೆ, ನಮಸ್ಕಾರ, ಆನಂದ ಭಾಷ್ಪಗಳ ಮೂಲಕ ಡಾ.ಪಿ.ಬಿ.ಶ್ರೀನಿವಾಸ್ ಅವರಿಗೆ ಗೌರವ ತೋರಿದರು. ಡಾ.ಪಿ.ಬಿ.ಎಸ್. ಶಿವಣ್ಣನನ್ನು ಅಪ್ಪಿ, ಮುತ್ತಿಟ್ಟು ಆಶೀರ್ವದಿಸಿದ ರೀತಿ ಕಂಡಾಗ ಡಾ.ರಾಜ್ ಮೇಲಿನ ಅವರ ಪ್ರೀತಿ, ಗೌರವ, ಮಮತೆ, ಅತ್ಮೀಯತೆಗಳ ಸಂಗಮದ ನೈಜ ದರ್ಶನವಾಗಿ ಮನ ತುಂಬಿತ್ತು.

ಸಮಾರೋಪ : ನಂತರ ಸಂಭ್ರಮದ ಸಮಾರಂಭಕ್ಕೆ ತೆರೆ ಎಳೆಯುತ್ತಾ "ಸಮಾರೋಪ" ಭಾಷಣದ ಕರೆ ನೀಡಿದವರು ಸಮ್ಮೇಳನದ ಅಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ. ತಮ್ಮ ಭಾಷಣದಲ್ಲಿ "ಸಿಂಗಪುರದಲ್ಲಿ ನಡೆದ ಈ ಸಮಾರಂಭ ವಿಶಿಷ್ಟ ಅನುಭವ ನೀಡಿದೆ. ಇಷ್ಟೊಂದು ಕನ್ನಡಿಗರನ್ನು ಒಂದುಗೂಡಿಸುವ ಈ ಪ್ರಯತ್ನ ರಚನಾತ್ಮಕವಾದ ವಿಸ್ಮಯಕರ ಘಟನೆ. ಎಲ್ಲಾ ಕಾರ್ಯಕ್ರಮಗಳಿಗೆ ಸ್ಪಂದಿಸಿದ್ದೀರಿ, ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣ ವೇದಿಕೆಯ ಮೇಲೆ ಇದ್ದವರು ಮಾತ್ರ ಅಲ್ಲ, ವೇದಿಕೆಯ ಎದುರಿಗೆ ಕುಳಿತು ಪ್ರೋತ್ಸಾಹ, ಪೋಷಣೆ, ಸಹಾಯ ನೀಡಿದ ನಿಮ್ಮೆಲ್ಲರಿಗೂ ಸಲ್ಲುತ್ತದೆ" ಎಂದರು. ಕೊನೆಯದಾಗಿ ವಂದನಾರ್ಪಣೆಯನ್ನು ಕನ್ನಡ ಸಂಘದ ಅಧ್ಯಕ್ಷರಾದ ಡಾ. ವಿಜಯ್‌ಕುಮಾರ್ ಅವರು ಚೊಕ್ಕವಾಗಿ ನಡೆಸಿಕೊಟ್ಟರು.

ಎರಡು ದಿನಗಳ ಈ ಉತ್ಸವದಲ್ಲಿ ಪಾಲ್ಗೊಂಡ ಸಭಿಕರ ಮನದಲ್ಲಿ ಈ ಕನ್ನಡೋತ್ಸವದ "ನೆನಪೊಂದೇ ಮಧುರ ಕಾಣಿಕೆ"ಯ ಅನುಭವ, ತುಂಬು ಮನದ ಭಾವ ಮೂಡಿಸಿದ್ದಲ್ಲಿ ಸಂಶಯವೇ ಇಲ್ಲ. ಇಂತಹ ಮಧುರ ಕಾಣಿಕೆಗಳು ನಮ್ಮ ನೆನಪಿನ ಅಂಗಳದಲ್ಲಿ ಮತ್ತೆ ಹೊಸತೊಂದು ರೀತಿಯಲಿ, ಮತ್ತೊಂದು ಉತ್ಸವದಲಿ ಹೀಗೆಯೇ ಸೊಗಸಾಗಿ ಮೂಡುತಿರಲ್ಲಿ, ನೆನಪಿನ ಅಂಗಳದಲಿ ಮನೆ ಮಾಡುತಿರಲಿ ಎಂಬ ಹಾರೈಕೆ ಹಾಗೂ "ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು" ಮಂತ್ರವನು ಅಕ್ಷರಶಃ ಗೌರವಿಸಿ, ಪಾಲಿಸಿದ ಸಂತೃಪ್ತ ಭಾವವೂ ತುಂಬಿತ್ತು.

ವರದಿ: ಸುದ್ಧಿವಾಹಿನಿ ತಂಡ (ಗಿರೀಶ್ ಜಮದಗ್ನಿ, ವೆಂಕಟ್, ಸುರೇಶ್, ವಸಂತ ಕುಲಕರ್ಣಿ ಹಾಗೂ ವಾಣಿ ರಾಮದಾಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
7th World Kannada Cultural Convention, Singapore was a memorable event for singapore kannadigas. Venkatesh Bhyrappa and Jagadish were awarded Singara life time achievement award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more